ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಇಡೀ ದೇಶದಲ್ಲಿ 111 ನಗರಗಳ ಪೈಕಿ ಗುಣಮಟ್ಟದ ಜೀವನ ನಡೆಸುವ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಆದರೆ, ನಗರದ ಜನತೆಗೆ ಅಗತ್ಯ ಆಡಳಿತ, ಸೇವೆ, ಹಣಕಾಸು, ಯೋಜನೆ ರೂಪಿಸುವಿಕೆ, ತಂತ್ರಙ್ಞನ ಅಳವಡಿಸುವಿಕೆಯ ಮಾನದಂಡ ಆಧಾರದ ಮುನ್ಸಿಪಲ್ ಪರ್ಫಾಮೆನ್ಸ್ ಇಂಡೆಕ್ಸ್ ವಿಭಾಗದಲ್ಲಿ 51 ನಗರಗಳ ಪೈಕಿ ಬೆಂಗಳೂರು ನಗರ 31ನೇ ಸ್ಥಾನ ಪಡೆದುಕೊಂಡಿದೆ.
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ “ಈಸ್ ಆಫ್ ಲಿವಿಂಗ್ ಮತ್ತು ಮುನ್ಸಿಪಲ್ ಪರ್ಫಾರ್ಮೆನ್ಸ್ ಇಂಡಿಸಿಸ್-2020” ವರ್ಚ್ಯುಯಲ್ ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ ದೀಪ್ ಸಿಂಗ್ ಪುರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ವರ್ಚುವಲ್ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್,
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರತಿವರ್ಷವೂ ಈಸ್ ಆಫ್ ಲಿವಿಂಗ್ ಮತ್ತು ಮುನ್ಸಿಪಲ್ ಪರ್ಫಾಮೆನ್ಸ್ ಇಂಡಿಸಿಸ್ ನ ಸೂಚ್ಯಂಕ ಬಿಡುಗಡೆ ಮಾಡುತ್ತದೆ. ಆ ಸೂಚ್ಯಂಕದಲ್ಲಿ ಗುಣಮಟ್ಟದ ಜೀವನ ನಡೆಸಲು(ಈಸ್ ಆಫ್ ಲಿವಿಂಗ್) 111 ನಗರಗಳ ಪೈಕಿ ಬೆಂಗಳೂರು ಮೊದಲನೇ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.
ಈಸ್ ಆಫ್ ಲಿವಿಂಗ್ ನಲ್ಲಿ ಮುಖ್ಯವಾಗಿ ಮೂರು ಮಾನದಂಡಗಳ ಆಧಾರದ ಮೇಲೆ ಗುಣಮಟ್ಟದ ಜೀವನವನ್ನು ಅಳೆಯಲಾಗುತ್ತದೆ. ಮೊದಲನೆಯದಾಗಿ ನಗರದಲ್ಲಿ ವಾಸಿಸುತ್ತಿರುವ ಜನರ ಜೀವನಮಟ್ಟ, ಗುಣಮಟ್ಟದಲ್ಲಿ ಜೀವನ ನಡೆಸಲು ಬೇಕಾದ ಸೌಕರ್ಯಗಳು, ಶಿಕ್ಷಣ, ಆರೋಗ್ಯ, ಸುರಕ್ಷತೆ, ಘನತ್ಯಾಜ್ಯ ನಿರ್ವಹಣೆ ಸೌಲಭ್ಯಗಳು ಒಳಗೊಂಡಿರುತ್ತದೆ.
ಎರಡನೆಯದಾಗಿ ಜನರ ಆರ್ಥಿಕ ಅಭಿವೃದ್ಧಿಗಾಗಿ ನಗರ ಎಷ್ಟು ಸಹಕಾರಿಯಾಗಿದೆ, ಅವಕಾಶಗಳೇನಿದೆ ಎಂಬುದಾಗಿದೆ. ಹಾಗೂ ಮೂರನೆಯದಾಗಿ ನಗರದ ಪರಿಸರ ಯಾವ ಗುಣಮಟ್ಟದಲ್ಲಿದೆ ಅನ್ನೋದನ್ನು ಸೂಚ್ಯಂಕದಲ್ಲಿ ಅಂಕ ನೀಡಲು ಪರಿಗಣಿಸಲಾಗುತ್ತದೆ.
ಇದರ ಆಧಾರದ ಮೇಲೆ ಕೇಂದ್ರ ಸರ್ಕಾರವು ನಗರದಾದ್ಯಂತ ಜನರ ಅಭಿಪ್ರಾಯ ಪಡೆದು, ಸಮೀಕ್ಷೆ ನಡೆಸಿ ಅಂಕ ನೀಡಲಿದೆ. 100 ಅಂಕಗಳಲ್ಲಿ, ಶೇ. 30 ಅಂಕಗಳು ಜನರು ನೀಡುವ ಅಭಿಪ್ರಾಯಗಳು ಸೇರಿರುತ್ತದೆ ಎಂದು ತಿಳಿಸಿದರು.
ಇಡೀ ದೇಶದಲ್ಲಿ ನಗರಗಳನ್ನು ಎರಡು ವಿಭಾಗ ಮಾಡಿ, 10 ಲಕ್ಷಕ್ಕಿಂತ ಕಡಿಮೆಯಿರುವ ನಗರಗಳು ಹಾಗೂ 10 ಲಕ್ಷಕ್ಕಿಂತ ಹೆಚ್ಚಿರುವ ಜನಸಂಖ್ಯೆಯ ನಗರಗಳಾಗಿ ವಿಂಗಡಿಸಲಾಗಿದೆ. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ನಗರಗಳನ್ನು ತೆಗೆದುಕೊಂಡಾಗ ಉತ್ತಮ ಜೀವನ ನಡೆಸಲು ಬೆಂಗಳೂರು ಉತ್ತಮ ನಗರವೆಂದು ಮೊದಲ ರ‍್ಯಾಂಕ್ ಪಡೆದುಕೊಂಡಿದೆ.
ಮೊದಲ 49 ನಗರಗಳನ್ನು ತೆಗೆದುಕೊಂಡಾಗ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಈ ಗೌರವ ಕೇವಲ ಬಿಬಿಎಂಪಿಗಷ್ಟೇ ಅಲ್ಲ ಜಲಮಂಡಳಿ, ಬಿಡಿಎ, ಬೆಸ್ಕಾಂ, ಮೆಟ್ರೋ, ಬಿಎಂಟಿಸಿಗೂ ಸೇರಿದಂತೆ ಇಲ್ಲಿನ ಸಂಘ-ಸಂಸ್ಥೆಗಳು ಹಾಗೂ ನಗರದ ಸಾರ್ವಜನಿಕರಿಗೂ ಸೇರಿದೆ ಎಂದರು.
ಮೊದಲ ಸ್ಥಾನ ಪಡೆಯುವುದು ಮುಖ್ಯವಲ್ಲ ಅದನ್ನು ಮುಂದೆಯೂ ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ. ಆದ್ದರಿಂದ ಅದೇ ಸ್ಥಾನವನ್ನು ಉಳಿಸಿಕೊಂಡು ಹೋಗಲು ಬೆಂಗಳೂರು ನಗರವನ್ನು ಅತ್ಯಂತ ಸುಂದರ ಮತ್ತು ಒಳ್ಳೆಯ ನಗರವನ್ನಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮುನ್ಸಿಪಲ್ ಪರ್ಫಾಮೆನ್ಸ್ ಇಂಡಿಸಿಸ್ ಅನ್ನು ಐದು ವಿಭಾಗಗಳಲ್ಲಿ ಗುರುತಿಸಲಿದ್ದು, ಬಿಬಿಎಂಪಿಗೆ ಕಡಿಮೆ ಅಂಕಗಳು ಬಂದಿದೆ. ಈ ಪೈಕಿ ಎಲ್ಲೆಲ್ಲಿ ತಪ್ಪಾಗಿದೆ, ಎಲ್ಲೆಲ್ಲಿ ಎಡವಿದ್ದೇವೆ ಎಂಬುದನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಅಂಕ ಪಡೆಯಲು ಪ್ರಯತ್ನಿಸುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
10 ಲಕ್ಷಕ್ಕಿಂತ ಹೆಚ್ಚಿಗೆ ಜನಸಂಖ್ಯೆಯಿರುವ 51 ನಗರಗಳ ಪೈಕಿ ಇಂದೋರ್ 66.08 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಆದರೆ ಬೆಂಗಳೂರು 45.02 ಅಂಕ ಪಡೆದು 31ನೇ ಸ್ಥಾನ ಪಡೆದುಕೊಂಡು ಕಳಪೆ ಸಾಧನೆ ಮಾಡಿದೆ.
ಸಂಸದ ಪಿ.ಸಿ.ಮೋಹನ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ರಾಜೇಂದ್ರ ಚೋಳನ್ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ನಗರಗಳಿಗೆ ಅಂಕ ಘೋಷಿಸಿರುವ ಲಿಂಕ್ ಗಾಗಿ https://eol.smartcities.gov.in/dashboard ಗೆ ಭೇಟಿ ನೀಡಿ ಯಾವ ನಗರಕ್ಕೆ ಯಾವ ಸ್ಥಾನ ಸಿಕ್ಕಿದೆ ಎಂಬುದನ್ನು ನೋಡಬಹುದಾಗಿದೆ.