ಬೆಂಗಳೂರು : ಕೆಲಸದ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪವಿದೆ ಎನ್ನಲಾದ ಸಿಡಿ ಸ್ಪೋಟದ ಹಿನ್ನಲೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬುಧವಾರ ತಮ್ಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ.
ತಮ್ಮ ತಮ್ಮ ಬಾಲಚಂದ್ರ ಜಾರಕಿಹೊಳಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, “ನನ್ನ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಇದರ ಬಗ್ಗೆ ಶೀಘ್ರದಲ್ಲೇ ತನಿಖೆ ಆಗಬೇಕು. ನಾನು ನಿರ್ದೋಷಿಯಾಗುವ ವಿಶ್ವಾಸವಿದ್ದರೂ ನೈತಿಕ ಹೊಣೆ ಹೊತ್ತು, ನಾನು ನನ್ನ ಸಚಿವ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ. ದಯವಿಟ್ಟು ಇದನ್ನು ಅಂಗೀಕರಿಸಬೇಕೆಂದು ತಮ್ಮನ್ನು ವಿನಂತಿಸುತ್ತೇನೆ” ಎಂದು ನಾಲ್ಕು ಸಾಲುಗಳ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ರಮೇಶ್ ಜಾರಕಿಹೊಳಿ ಸಹೋದರ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಪತ್ರ ಸ್ವೀಕರಿಸಿ ಅದಕ್ಕೆ ಸಹಿ ಹಾಕಿ ರಾಜ್ಯಪಾಲರ ಕಚೇರಿಗೆ ಕಳುಹಿಸಿಕೊಟ್ಟರು. ಆ ರಾಜೀನಾಮೆ ಪತ್ರವನ್ನು ರಾಜ್ಯಪಾಲ ವಜೂಭಾಯಿ ವಾಲಾ ಅಂಗೀಕರಿಸಿದ್ದಾರೆ. ಈ ರಾಜೀನಾಮೆ ಅಂಗೀಕರಿಸುವ ಕುರಿತ ರಾಜ್ಯಪತ್ರವೂ ಅಧಿಕೃತವಾಗಿ ಪ್ರಕಟಗೊಂಡಿದೆ. ಇದರೊಂದಿಗೆ ರಮೇಶ್ ಜಾರಿಕಿಹೊಳಿ ಕಳೆದ ವರ್ಷ ಫೆಬ್ರವರಿ 6 ರಂದು ಅಧಿಕಾರ ಸ್ವೀಕರಿಸಿದ 1 ತಿಂಗಳು 26 ದಿನಕ್ಕೆ ಸಂಪುಟದಿಂದ ಔಟ್ ಆದಂತಾಗಿದೆ.
ರಷ್ಯಾದಿಂದ ಯೂಟ್ಯೂಬ್ ಗೆ ಅಪಲೋಡ್ ಆಗಿತ್ತಾ ವಿಡಿಯೋ ?
ಸಚಿವ ರಮೇಶ್ ಜಾರಕಿಹೊಳಿ ಹಾಗೂ ಯುವತಿಯೊಬ್ಬಳು ಏಕಾಂತದಲ್ಲಿದ್ದಾರೆಂದು ಹೇಳಲಾಗುತ್ತಿರುವ ಅಶ್ಲೀಲ ದೃಶ್ಯಾವಳಿಗಳು ರಷ್ಯಾದಿಂದ ಯೂಟ್ಯೂಬ್ ನಲ್ಲಿ ಅಪಲೋಡ್ ಆಗಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಮಾರ್ಚ್ 3ರ ಬುಧವಾರ ಮಧ್ಯಾಹ್ನ 2.20ರ ಸಮಯದಲ್ಲಿ ರಷ್ಯಾದಿಂದ ಆ ವಿಡಿಯೋ ಅಪಲೋಡ್ ಆಗಿದ್ದು, ಯಾವ ಅಕೌಂಟ್ ನಿಂದ ಯಾರು ಅಪಲೋಡ್ ಮಾಡಿದರೆಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡುವ ಮುನ್ನವೇ ಈ ವಿಡಿಯೋ ಅಪಲೋಡ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಸಂತ್ರಸ್ಥೆ ಪರವಾಗಿ ದೂರು ನೀಡಿದ ದಿನೇಶ್ ಕಲ್ಲಹಳ್ಳಿ ವಿಚಾರಣೆಗೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದಾರೆ.
ದಿನೇಶ್ ಕಲ್ಲಹಳ್ಳಿ ವಿರುದ್ಧ 100 ಕೋಟಿ ರೂ. ಮಾನಹಾನಿ ಕೇಸ್ ಗೆ ಸಿದ್ಧತೆ
ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡಿದ್ದಾರೆಂಬ ಕಾರಣಕ್ಕೆ ಅವರ ವಿರುದ್ಧ ಬರೋಬ್ಬರಿ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಲು ಸಹೋದರ ಬಾಲಚಂದ್ರ ಜಾರಕಿಹೊಳಿ ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅವರ ಕುಟುಂಬದವರೇ ಆದ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕೆಂಬ ಬಗ್ಗೆ ಚರ್ಚೆಯೂ ಆರಂಭವಾಗಿದೆ.
ಉಪಚುನಾವಣೆ ಘೋಷಣೆಗೆ ಮುಂಚೆ ಬಾಲಚಂದ್ರರಿಗೆ ಸಚಿವ ಸ್ಥಾನ ಸಿಕ್ಕಿದ್ರೆ ಸಿಕ್ಕಿದಂತೆ
ಮಾರ್ಚ್ 4 ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಗುರುವಾರ ಅಥವಾ ಶುಕ್ರವಾರದ ಒಳಗೆ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿ ಸ್ಥಾನ ಸಿಕ್ಕಿದರೆ ಸಿಕ್ಕೀತು. ಆನಂತರ ಸಚಿವ ಸ್ಥಾನ ದೊರಕುವುದು ಅಸಾಧ್ಯ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿದೆ. ಯಾವುದೇ ಕ್ಷಣದಲ್ಲಿ ಬೆಳಗಾವಿಯ ಸುರೇಶ್ ಅಂಗಡಿಯವರ ನಿಧನದಿಂದ ತೆರವಾದ ಒಂದು ಲೋಕಸಭಾ ಸ್ಥಾನ ಹಾಗೂ ಸಿಂಧಗಿ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾದರೆ ಪಕ್ಷದ ಮುಖಂಡರು ಇತ್ತ ಗಮನ ಹರಿಸೋದು ಅನುಮಾನ ಎನ್ನಲಾಗುತ್ತಿದೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆ, ರಾಜ್ಯದಲ್ಲಿ ಅಧಿವೇಶನ, ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕಾಗಬಹುದಾದ ಡ್ಯಾಮೇಜ್ ಕಂಟ್ರೋಲ್ ಮಾಡುವ ಹಿನ್ನಲೆಯಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಕರಣದಲ್ಲಿ ಕೇಸ್ ಗೆದ್ದು ಬಂದರೆ ಮತ್ತೆ ಮಿನಿಸ್ಟರ್ ಮಾಡೋಣ ಎಂಬುದಾಗಿಯೂ ಹೈಕಮಾಂಡ್ ತಿಳಿಸಿದ್ದಾರೆಂದು ಗೊತ್ತಾಗಿದೆ. ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರ್ಕಾರದಿಂದ ಬಂಡಾಯವೆದ್ದು ಹೊರಬಂದು ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ರಮೇಶ್ ಜಾರಕಿಹೊಳಿ ಅಂತಿಮವಾಗಿ ಸಿಡಿ ಸ್ಪೋಟದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.
ಮಾರ್ಚ್ 2 ರ ಸಂಜೆ ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವು ಪ್ರಮುಖ ಸಚಿವರನ್ನು ತಮ್ಮ ಗೃಹ ಕಚೇರಿ ಕೃಷ್ಣಾಗೆ ಕರೆಯಿಸಿಕೊಂಡು ಚರ್ಚಿಸಿದರು. ಅಲ್ಲದೆ ಈ ವಿಚಾರವನ್ನು ಖುದ್ದು ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹೈಕಮಾಂಡ್ ಗಮನಕ್ಕೆ ತಂದರು. ಇದಾದ ಬಳಿಕ ಇಂದು ಬೆಳಗ್ಗೆ ದೆಹಲಿಯಲ್ಲಿ ಸಭೆಯ ಮೇಲೆ ಸಭೆ ನಡೆಸಿದ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಂತಿಮವಾಗಿ ರಮೇಶ್ ಜಾರಕಿಹೊಳಿಯಿಂದ ರಾಜೀನಾಮೆ ಪಡೆಯುವಂತೆ ಸ್ಪಷ್ಟ ಸೂಚನೆ ರವಾನಿಸಿದರು.
ಇತ್ತ ರಮೇಶ್ ಜಾರಕಿಹೊಳಿ ರಾಜೀನಾಮೆ ಸ್ವೀಕೃತವಾಗುತ್ತಿದ್ದಂತೆ ಬೆಳಗಾವಿಯಲ್ಲಿ ಅವರ ಬೆಂಬಲಿಗರು ಬಲವಂತವಾಗಿ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು.
ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನಿನ್ನೆ ಸಂಜೆ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿಯ ಪರವಾಗಿ ದೂರು ನೀಡಿದ್ದರು. ಸಚಿವರು ಯುವತಿಯ ಜೊತೆ ಏಕಾಂತದಲ್ಲಿ ಇರುವ ವಿಡಿಯೋ ತುಣುಕುಗಳು, ಇಬ್ಬರ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೋ ತುಣಕುಗಳ ಸಿ.ಡಿ.ಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಬಯಲಿಗೆ ಬರುತ್ತಿದ್ದಂತೆ “ನಾನು ಯಾವುದೇ ತಪ್ಪು ಮಾಡಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಸಮಗ್ರ ತನಿಖೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ” ಎಂದು ರಮೇಶ್ ಜಾರಕಿಹೊಳಿ ನಿನ್ನೆ ರಾತ್ರಿಯಷ್ಟೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಅದಾದ ಬಳಿಕ ನಿರಂತರವಾಗಿ ಹೈಕಮಾಂಡ್ ಅನ್ನು ಸಂಪರ್ಕಿಸಿ ತಮ್ಮ ವಿರುದ್ಧದ ಆರೋಪದ ಬಗ್ಗೆ ಸಮರ್ಥನೆ ನೀಡಲು ಯತ್ನಿಸಿದರಾದರೂ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಹೈಕಮಾಂಡ್ ಅಂತಿಮವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಟ್ಟಪ್ಪಣೆ ನೀಡಿತು.