ಬೆಂಗಳೂರು : ರಾಜಧಾನಿ ಬೆಂಗಳೂರು ಮಗ್ಗುಲಿನಲ್ಲೇ ಇರುವ ಮುದ್ದಯನಪಾಳ್ಯದಲ್ಲಿ ಕಲ್ಲು ಬಂಡೆ ಬ್ಲಾಸ್ಟ್ ಆಗಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಅನಾಥಾಶ್ರಮ ಕಟ್ಟಡ ಜಖಂಗೊಂಡ ಘಟನೆ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಈ ಘಟನೆಯಲ್ಲಿ ಶ್ರೀ ಸಿದ್ದೇಶ್ವರ ಸೇವಾ ಆಶ್ರಮದ ವ್ಯವಸ್ಥಾಪಕ ನವೀನ್ ತಲೆಗೆ ತೀವ್ರ ಪೆಟ್ಟಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ದೊಡ್ಡದೊಡ್ಡ ಕಲ್ಲು ಬಂಡೆ ಸ್ಫೋಟದಿಂದಾಗಿ ಆಶ್ರಮದ ಕಟ್ಟಡ ಹಾಗೂ ಮೇಲ್ಛಾವಣಿಯ ಸಿಮೆಂಟ್ ಶೀಟ್ ಜಖಂಗೊಂಡಿದೆ. ಘಟನೆ ಸಂಬಂಧ ನವೀನ್ ಎಂಬುವರು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
“ಬುಧವಾರ ಬೆಳಗ್ಗೆ ಶ್ರೀ ಸಿದ್ದೇಶ್ವರ ಸೇವಾಶ್ರಮದಲ್ಲಿ ಬೆಳಗ್ಗೆ ಲೆಕ್ಕದ ವಿವರ ಬರೆಯುತ್ತಿದ್ದಾಗ ಆಶ್ರಮದಿಂದ 150 ಮೀಟರ್ ದೂರದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಆರ್ ಸಿಸಿಎಲ್ ಕಂಪನಿಯವರು ವಸತಿ ಸಮುಚ್ಛಯ ನಿರ್ಮಾಣಕ್ಕಾಗಿ ಬಂಡೆ ಸ್ಪೋಟಿಸುವ ಕಾಮಗಾರಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬಂಡೆಯ ಚೂರೊಂದು ಆಶ್ರಮದ ಮೇಲ್ಛಾವಣಿ ಒಡೆದು ಆಫೀಸ್ ನಲ್ಲಿ ಕೂತಿದ್ದ ತಮ್ಮ ತಲೆಯ ಮೇಲೆ ಬಿದ್ದು ತಲೆಗೆ ಗಾಯವಾಯ್ತು. ಆನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಸಂಬಂಧ ಘಟನೆಗೆ ಕಾರಣರಾದ ಆರ್ ಸಿಸಿಎಲ್ ಕಂಪನಿ ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಬ್ಲಾಸ್ಟಿಂಗ್ ಕಾಂಟ್ರಾಕ್ಟರ್ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ನವೀನ್ ತಾವರೆಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ತನಿಖೆ ನಡೆಸಿರುವ ಪೊಲೀಸರು ಐಪಿಸಿ ಸೆಕ್ಷನ್ 1860 ಹಾಗೂ ಸ್ಪೋಟಕ ಕಾಯ್ದೆ 1884ರ ವಿವಿಧ ಕಲಂಗಳ ಅನ್ವಯ ಎಫ್ ಐಆರ್ ದಾಖಲಿಸಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರಕೆರೆ ಹೋಬಳಿಯ ಮುದ್ದಯ್ಯನಪಾಳ್ಯ ಗ್ರಾಮದಲ್ಲಿ ಕರ್ನಾಟಕ ವಸತಿ ನಿಗಮದಿಂದ 12 ಸಾವಿರ ಘಟಕಗಳ ವಸತಿ ಸಮುಚ್ಛಯ ನಿರ್ಮಾಣಕ್ಕಾಗಿ ಸಿದ್ದರಾಮೇಶ್ವರ ಬೆಟ್ಟದ ಸುತ್ತಲೂ ಬಂಡೆ ಒಡೆಯುವ ಕೆಲಸ ನಡೆಯುತ್ತಿದೆ. ಕಳೆದ ಎಂಟು ತಿಂಗಳಿನಿಂದಲೂ ವಸತಿ ಸಮುಚ್ಛಯ ನಿರ್ಮಾಣಕ್ಕೆ ಮುನ್ನ ಸಿದ್ದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ಪೋಟಕಗಳನ್ನು ಬಳಸಿ ಬಂಡೆಗಳನ್ನು ಒಡೆಯುವ ಕೆಲಸ ನಿತ್ಯ ನಿರಂತವಾಗಿ ನಡೆಯುತ್ತಿದೆ. ರಾಮಲಿಂಗಮ್ ಕನ್ಸಸ್ಟ್ರಕ್ಷನ್ ಕಂಪನಿಯವರು ಈ ಸ್ಥಳದಲ್ಲಿ ವಸತಿ ಸಮುಚ್ಛಯ ನಿರ್ಮಾಣದ ಗುತ್ತಿಗೆ ಪಡೆದಿದ್ದಾರೆ.
ಸಮಯ ಸಂದರ್ಭವಿಲ್ಲದೆ ಸ್ಪೋಟಕಗಳನ್ನು ಬಳಸುತ್ತಿರುವುದರಿಂದ ಹೊಲಗಳಲ್ಲಿ ಕೆಲಸ ಮಾಡುವವರು, ದನ- ಕುರಿ ಮೇಯಿಸುವವರು, ಶ್ರೀ ಸಿದ್ದೇಶ್ವರ ಸೇವಾಶ್ರಮದಲ್ಲಿರುವ 15-20 ಅನಾಥ ಮಕ್ಕಳು ಜೀವ ಕೈಯಲ್ಲಿ ಹಿಡಿದೇ ಓಡಾಡುತ್ತಿದ್ದಾರೆ. ರಾಜೀವ್ ಗಾಂಧಿ ವಸತಿ ಯೋಜನೆಯ ಕಾಮಗಾರಿ ಸ್ಥಳದಲ್ಲಿನ ಬಂಡೆ ಸ್ಪೋಟದಿಂದಾಗಿ ಸುತ್ತಲೂ ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಮುದ್ದಯ್ಯನಪಾಳ್ಯ, ಗುಲಗಂಜನಹಳ್ಳಿ, ಹಾಲಬೋವಿಪಾಳ್ಯ, ಬಸವನಪಾಳ್ಯ ಗ್ರಾಮಗಳಲ್ಲಿ ಜನರಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ವಸತಿ ಸಚಿವ ವಿ.ಸೋಮಣ್ಣನವರು ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ಕೊಟ್ಟಾಗ ತಿಳಿಸಲು ಹೋದಾಗ ಆರ್ ಸಿಸಿಎಲ್ ಕಂಪನಿಯವರು ಅವಕಾಶ ಮಾಡಿಕೊಟ್ಟಿಲ್ಲ ಎಂದು ಬೆಂಗಳೂರು ವೈರ್ ನೊಂದಿಗೆ ಸ್ಥಳೀಯ ಗ್ರಾಮಸ್ಥರಾದ ನಾಗರಾಜ್ ಅಳಲು ತೋಡಿಕೊಂಡಿದ್ದಾರೆ.
ಮುದ್ದಯ್ಯನಪಾಳ್ಯ ಸರ್ವೆ ನಂಬರ್ 28ರಲ್ಲಿ 400 ವರ್ಷಗಳ ಇತಿಹಾಸದ ಸಿದ್ದೇಶ್ವರ ಸ್ವಾಮಿ ಬೆಟ್ಟವಿದೆ. ವ್ಯಾಪಕವಾಗಿ ಬಂಡೆ ಸಿಡಿಸಿ ಕಾಮಗಾರಿ ನಡೆಸುತ್ತಿರುವುದರಿಂದ ಈ ದೇವಸ್ಥಾನಕ್ಕೆ ಹೋಗಲು ಆಗುತ್ತಿಲ್ಲ. ಜೊತೆಗೆ ದೇವಸ್ಥಾನದ ಗೋಡೆಗಳು ಬಂಡೆ ಸ್ಪೋಟದ ಸಮಯದಲ್ಲಿ ನಡುಗುತ್ತಿದೆ. ಬೆಟ್ಟದ ಕೆಳಗೆ ಪಂಚಮುಖಿ ದೇವಸ್ಥಾನಕ್ಕೂ ಬಂಡೆ ಸ್ಪೋಟ ಕಾಮಗಾರಿಯಿಂದ ತೊಂದರೆಯಾಗಿದೆ. ದೇವಸ್ಥಾನ ಸೇರಿದಂತೆ 5 ಎಕರೆ ಪ್ರದೇಶ ಹೊರತುಪಡಿಸಿ ಉಳಿದ ಸ್ಥಳದಲ್ಲಿ ಸುತ್ತಲೂ ಬಂಡೆಗಳನ್ನು ಬ್ಲಾಸ್ಟ್ ಮಾಡಲಾಗುತ್ತಿದೆ. ಇವುಗಳ ಬಗ್ಗೆ ಪ್ರಶ್ನಿಸಿದರೆ ಕಂಪನಿ ಸಿಬ್ಬಂದಿ ನಮಗೆ ಧಮಕಿ ಹಾಕುತ್ತಾರೆ ಎಂದು ನಾಗರಾಜ್ ಆರೋಪಿಸಿದ್ದಾರೆ. ಈ ಬಗ್ಗೆ ವಸತಿ ಸಚಿವ ವಿ.ಸೋಮಣ್ಣ ನವರ ಪ್ರತಿಕ್ರಿಯೆ ಪಡೆಯಲು ಬೆಂಗಳೂರು ವೈರ್ ಪ್ರಯತ್ನಿಸಿದಾಗ ಅವರಿಂದ ಘಟನೆ ಸಂಬಂಧ ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಿಲ್ಲ.
ಗ್ರಾಮಗಳ ಮಧ್ಯೆ ಬೃಹತ್ ವಸತಿ ಸಮುಚ್ಛಯ ಯೋಜನೆಯನ್ನು ಕೈಗೊಳ್ಳುವಾಗ ರಾಜೀವ್ ಗಾಂಧಿ ವಸತಿ ಯೋಜನೆಯ ಗುತ್ತಿಗೆ ಪಡೆದ ಕಂಪನಿ ಸೂಕ್ತ ಮುಂಜಾಗ್ರತೆ ಕೈಗೊಳ್ಳದೆ ಬಂಡೆ ಸ್ಪೋಟದಂತಹ ವಿಷಯದಲ್ಲಿ ಎಡವಿದ್ದೇ ಇಂತಹ ಘಟನೆಗಳಿಗೆ ಕಾರಣವಾಯ್ತಾ ಎಂಬ ಪ್ರಶ್ನೆಗೆ ಕೂಲಂಕುಷ ತನಿಖೆಯಿಂದ ಮಾತ್ರ ಉತ್ತರ ಸಿಗಲಿದೆ.