ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ತುರಹಳ್ಳಿ ಟ್ರೀ ಪಾರ್ಕ್ ಯೋಜನೆ ಜಾರಿಗೆ ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ ಫಲ ಸಿಕ್ಕಿದೆ.
ತುರಹಳ್ಳಿ ಅರಣ್ಯದ ಜಾಗದಲ್ಲಿ ಟ್ರೀ ಪಾರ್ಕ್ ಮಾಡುವ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ತುರಹಳ್ಳಿ ಟ್ರೀ ಪಾರ್ಕ್ ಬಗ್ಗೆ ಸಾರ್ವಜನಿಕರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರ ಜೊತೆ ತುರಹಳ್ಳಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದರು.
ಇದೇ ವೇಳೆ ಸ್ಥಳಕ್ಕೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಹ ಕರೆದೊಯ್ದಿದ್ದ ಸಚಿವರು ಸಾರ್ವಜನಿಕರ ಜೊತೆ ಸಂವಾದ ನಡೆಸಿ ಅವರ ಅಭಿಪ್ರಾಯ ಪಡೆದರು. ನಂತರ ಸಚಿವ ಅರವಿಂದ ಲಿಂಬಾವಳಿ ಈ ನಿರ್ಧಾರ ಪ್ರಕಟಿಸಿದರು.
ಈಗ ಸದ್ಯಕ್ಕೆ ಅರಣ್ಯ ಪ್ರದೇಶದಲ್ಲಿ ಯೋಜನೆಯನ್ನು ಸ್ಥಗಿತಗೊಳಿಸುತ್ತೇವೆ. ಆದರೆ ಈ ಹಿಂದೆ 2012ರಲ್ಲಿ ಯೋಜನೆಗಾಗಿ ನಿಗದಿಪಡಿಸಿದ್ದ ಸ್ಥಳದಲ್ಲಿ ವೃಕ್ಷೋದ್ಯಾನ ಯೋಜನೆಯ ಅನುಷ್ಠಾನ ಮಾಡುವ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಅರಣ್ಯ ರಕ್ಷಣೆಗಾಗಿ ಈ ಪ್ರದೇಶದ ಸುತ್ತಲೂ ಬೇಲಿ ಹಾಕಿ ಭದ್ರ ಪಡಿಸಲಾಗುತ್ತದೆ ಎಂದು ಅವರು ಹೇಳಿದರು.
ಕಾಡು ಉಳಿಸಬೇಕು ಎಂಬ ಸಾರ್ವಜನಿಕರ ಕಳಕಳಿ ನಿಜಕ್ಕೂ ಮೆಚ್ಚುವಂಥದ್ದು. ನಿಮ್ಮನ್ನು ಅದಕ್ಕಾಗಿ ಅಭಿನಂದಿಸುತ್ತೇನೆ ಎಂದು ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಸಚಿವರು ಹೇಳಿದರು.
ನಮ್ಮ ಯೋಜನೆಯ ಅಂತಿಮ ಉದ್ದೇಶ ಅರಣ್ಯದ ರಕ್ಷಣೆಯೇ ಆಗಿದೆ, ಆದರೆ ಅದನ್ನು ಪ್ರಾಕೃತಿಕವಾಗಿ ಬಿಡಬೇಕು ಎಂಬ ನಿಮ್ಮ ಸಲಹೆಯನ್ನು ಸಹ ನಾನು ಗೌರವಿಸುತ್ತೇನೆ. ಮುಂದೆ ಇದರ ಬಗ್ಗೆ ಇನ್ನೂ ಹೆಚ್ಚಿನ ವಿಚಾರ ವಿನಿಮಯ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.