ಬೆಂಗಳೂರು : ರಾಜ್ಯದ ಸರ್ಕಾರಿ ಭ್ರಷ್ಟ ನೌಕರರು ಎಲ್ಲೆಡೆ ಸಾಕಷ್ಟು ಸಂಖ್ಯೆಯಲ್ಲಿದ್ದು ತಮ್ಮ ಕೆಲಸಕ್ಕೆ ಲಂಚ ಪಡೆಯೋ ಪ್ರಕರಣ ಎಲ್ಲೆಡೆ ಎಗ್ಗಿಲ್ಲದೆ ಸಾಗುತ್ತಿದೆ. ಆದರೆ ಅಂತಹ ಭ್ರಷ್ಟರ ವಿರುದ್ಧ ದೂರು ನೀಡೋ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರು ಹಿಂದೇಟು ಹಾಕುತ್ತಿರೋ ವಿಚಾರ ಬೆಳಕಿಗೆ ಬಂದಿದೆ.
ಸರ್ಕಾರಿ ನೌಕರರು ಲಂಚ ಸ್ವೀಕರಿಸೋವಾಗ ಭ್ರಷ್ಟರನ್ನು ಸಾಕ್ಷಿ ಸಮೇತ ಹಿಡಿಯುವ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದ ಪೊಲೀಸರು ಸಿದ್ದರಿದ್ದಾರೆ. ಆದರೆ ದೂರು ಕೊಡೋಕೆ ಸಾರ್ವಜನಿಕರು ಹಿಂಜರಿಕೆ ತೋರುತ್ತಿದ್ದಾರೆ.
ಸಾಮಾಜಿಕ ಹೋರಾಟಗಾರ ಸಾಯಿದತ್ತ ಸಲ್ಲಿಸಿದ ಆರ್ ಟಿಐ ಅರ್ಜಿಗೆ ಎಸಿಬಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸರು ನೀಡಿರುವ ಉತ್ತರದಲ್ಲಿ ಈ ಅಂಶ ಬಹಿರಂಗಗೊಂಡಿದೆ.
2017 ರಿಂದ 2021 ಜನವರಿ ತನಕ ಕೇವಲ 32 ದಾಳಿ ಪ್ರಕರಣ ಗಳು ದಾಖಲಾಗಿದೆ. 18 ಪ್ರಕರಣಗಳಲ್ಲಿ ಮಾತ್ರವೇ ತನಿಖೆ ಪೂರ್ಣಗೊಂಡು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆದರೆ ಉಳಿದ 14 ಟ್ರಾಪ್ ಪ್ರಕರಣಗಳಲ್ಲಿ ಈತನಕವೂ ತನಿಖೆ ಪೂರ್ಣಗೊಂಡಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಹೋರಾಟಗಾರ ಸಾಯಿದತ್ತಾ, ಎಸಿಬಿ ಟ್ರಾಪ್ ಪ್ರಕರಣದಲ್ಲಿ ಆದಷ್ಟು ಶೀಘ್ರವಾಗಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕು. ತನಿಖೆ ನಿಧಾನಗತಿಯಾದಲ್ಲಿ ಸಾಕ್ಷಿಗಳು ಸಾಕ್ಷಿ ನುಡಿಯಲು ಹಿಂದೇಟು ಹಾಕಬಹುದು. ಎಸಿಬಿಗೆ ದೂರುನೀಡುವ ಉದ್ದೇಶ ಸಫಲವಾಗಬೇಕಾದರೆ ತ್ವರಿತವಾಗಿವಾಗಿ ತನಿಖೆ ಪೂರ್ಣವಾಗಿ ಭ್ರಷ್ಟರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭ್ರಷ್ಟರ ವಿರುದ್ಧ ದೂರು ನೀಡುವವರ ಪ್ರಮಾಣ ಕಡಿಮೆಯಾಗಿದೆ. ಭ್ರಷ್ಟರ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ದೂರು ಕೊಡಲು ಮುಲಾಜಿಲ್ಲದೆ ಮುಂದೆ ಬರಬೇಕು ಎಂದು ಸಾಯಿದತ್ತ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಎಸಿಬಿ ಪಡೆ ಬಲಯುತ ಆಗಬೇಕಾದರೆ ನಾಗರೀಕರ ಸಹಕಾರ ಅಗತ್ಯವಾಗಿದೆ.