ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಳವಾರದಿಂದ ಎರಡನೇ ಹಂತದ ಲಸಿಕೆ ವಿತರಣೆ ಆರಂಭವಾಗಿದೆ. ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವಗುಪ್ತ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಚಾಲನೆ ನೀಡಿದರು.
ಗೌರವ್ ಗುಪ್ತಾ ಹಾಗೂ ಬಿಬಿಎಂಪಿ ಆಯುಕ್ತರು ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್, ರಂದೀಪ್ ಸೇರಿದಂತೆ ಹಿರಿಯ ಅಧಿಕಾರಿಗಳು ಕೋವಿಡ್ ಲಸಿಕೆ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಆಡಳಿತಾಧಿಕಾರಿ ಗೌರವಗುಪ್ತಾ, ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಕೊಡುವ ಅಭಿಯಾನ ಮುಗಿದಿದೆ. ಈಗ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಕೊಡುವ ಪ್ರಕ್ರಿಯೆ ಮಂಗಳವಾರದಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಪಾಲಿಕೆ ಅಧಿಕಾರಿಗಳು, ಪೌರಕಾರ್ಮಿಕರಿಗೆ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಕೋವಿಡ್ ಲಸಿಕೆ ಬಗ್ಗೆ ಇರುವ ಅನುಮಾನಗಳನ್ನು ಹೋಗಲಾಡಿಸಲು ಜಾಗೃತಿ ಮೂಡಿಸುತ್ತಿದ್ದೇವೆ. ಇದಕ್ಕಾಗಿ ನಾವೇ ಅಧಿಕಾರಿಗಳು ಲಸಿಕೆಗಳನ್ನು ಪಡೆಯುತ್ತಿದ್ದೇವೆ. ಈ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಲಸಿಕೆ ಪಡೆಯುವವರು ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಆಹಾರ ಮತ್ತು ಮದ್ಯಪಾನ ಮಾಡದಂತೆ ಎಲ್ಲೂ ಹೇಳಿಲ್ಲ. ಗರ್ಭಿಣಿ ಸ್ತ್ರೀಯರು ಹಾಗೂ ಹಾಲುಣಿಸುವ ಸ್ತ್ರೀಯರು ಲಸಿಕೆ ಪಡೆಯುವ ಅವಶ್ಯಕತೆಯಿಲ್ಲ.
ಶೇ.70 ರಷ್ಟು ಜನ ಲಸಿಕೆ ತಗೊಂಡರೆ ಮಾತ್ರ ಸೋಂಕು ವಿರುದ್ಧ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಉತ್ಪಾದನೆಯಾಗುತ್ತದೆ. 141 ಪ್ರಾಥಮಿಕ ಕೇಂದ್ರಗಳಲ್ಲಿ ನಗರದಲ್ಲಿರುವ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ 33,000 ಜನರು ಹಾಗೂ ನಗರದ 27,000 ಪೊಲೀಸರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 60 ಸಾವಿರ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯಲು ನೋಂದಣಿ ಮಾಡಿದ್ದಾರೆ ಎಂದು ಆಯುಕ್ತರು ಹೇಳಿದ್ದಾರೆ.
ಮೊದಲ ಹಂತದಲ್ಲಿ ಹೆಲ್ತ್ ಕೇರ್ ವರ್ಕರ್ಸ್ ನಲ್ಲಿ 1ಲಕ್ಷದ 80 ಸಾವಿರ ಜನರನ್ನು ಗುರುತಿಸಲಾಗಿತ್ತು. ಇದರಲ್ಲಿ 80 ಸಾವಿರ ಜನ ಲಸಿಕೆ ಪಡೆದಿದ್ದಾರೆ. ನಿನ್ನೆ 1435 ಜನ ಮುಂಚೂಣಿ ಕಾರ್ಯಕರ್ತರು ಬಿಬಿಎಂಪಿ ಯಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ ಎಂದರು.
ವ್ಯಾಕ್ಸಿನ್ ಪಡೆದುಕೊಳ್ಳುವುದಕ್ಕೆ
ಯಾವುದೇ ಕಡ್ಡಾಯ ಆದೇಶ ಇಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.