ಬೆಂಗಳೂರು : ಲಂಚ ಪಡೆಯುತ್ತಿದ್ದಾಗ ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳದಿಂದ ಸಿಕ್ಕಿಬಿದ್ದಿದ್ದ ಬಿಬಿಎಂಪಿ ಟೌನ್ ಪ್ಲಾನಿಂಗ್ ಎಡಿಟಪಿ ದೇವೇಂದ್ರಪ್ಪ ಬಳಿ ಪಾಲಿಕೆಗೆ ಸೇರಿದ 480ಕ್ಕೂ ಹೆಚ್ಚು ಕಡತಗಳು ಪತ್ತೆಯಾಗಿದೆ….!
ಇದಲ್ಲದೆ ಬಿಬಿಎಂಪಿಯ ನಗರ ಯೋಜನೆ ವಿಭಾಗದ ಹಿರಿಯ ಅಧಿಕಾರಿಗಳಿಗೆ ಸೇರಿದ ಸೀಲು, ಕಚೇರಿ ಸೀಲುಗಳು ಪತ್ತೆಯಾಗಿದೆ.
ಎಸಿಬಿ ದಾಳಿ ಬಳಿಕ ತನಿಖೆ ಮುಂದುವರೆಸಿ ದೇವೇಂದ್ರಪ್ಪನ ಮನೆ ಶೋಧ ನಡೆಸಿದಾಗ ಫೈಲ್, ಕಚೇರಿ ಮೊಹರುಗಳಲ್ಲದೆ 120 ಲೀಟರ್ ಬೆಲೆಬಾಳುವ ಮದ್ಯ, ದುಬಾರಿ ಕಾರು, ಆಭರಣ, ಬ್ಯಾಂಕ್ ನಿಶ್ಚಿತ ಠೇವಣಿ, ನಗದುಗಳು ಕಂಡುಬಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿ ಸ್ವತ್ತಿನಲ್ಲಿ ಸಿಗ್ಮೀಸ್ ಬ್ರಿವರಿಸ್ ಘಟಕ ಪ್ರಾರಂಭಿಸಲು ಪೂರ್ಣಗೊಂಡ ಕಟ್ಟಡಕ್ಕೆ ಸ್ವಾಧೀನ ಪ್ರಮಾಣಪತ್ರ (ಒಸಿ) ಕ್ಕಾಗಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಒಸಿ ನೀಡಲು ದೇವೇಂದ್ರಪ್ಪ 40 ಲಕ್ಷ ರೂಪಾಯಿ ಲಂಚ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಕೊನೆಗೆ 20 ಲಕ್ಷ ಹಣಕ್ಕೆ ಒಪ್ಪಂದವಾಗಿತ್ತು. ಈ ಬಗ್ಗೆ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಆನಂತರ ಲಂಚ ಪಡೆಯುವಾಗ ದೇವೇಂದ್ರಪ್ಪ ಹಣದ ಸಮೇತ ಮೆಜಿಸ್ಟಿಕ್ ಬಳಿ ಎಸಿಬಿ ಪೊಲೀಸರಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದರು. ಆಗ ಅವರ ಕಾರಿನಲ್ಲಿ ಟೌನ್ ಪ್ಲಾನಿಂಗ್ ವಿಭಾಗದ 50 ಕಡತಗಳು ಹಾಗೂ ಲೆಕ್ಕಕ್ಕೆ ಸಿಗದ 7.5 ಲಕ್ಷ ರೂಪಾಯಿ ಹಣ ಪತ್ತೆಯಾಗಿತ್ತು.
ಆನಂತರ ಎಸಿಬಿ ಅಧಿಕಾರಿಗಳು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದಾಗ ಬಿಬಿಎಂಪಿ ನಗರ ಯೋಜನೆ ವಿಭಾಗಕ್ಕೆ ಸೇರಿದ 430 ಫೈಲ್ ಗಳು, ಕಚೇರಿ- ಹಿರಿಯ ಅಧಿಕಾರಿಗಳ ಮೊಹರು ಪತ್ತೆಯಾಗಿದೆ.
ಈ ಬಗ್ಗೆ ಪ್ರತ್ಯೇಕವಾಗಿ ಪ್ರತ್ಯೇಕವಾಗಿ ತನಿಖೆ ಕೈಗೊಳ್ಳಲಾಗಿದೆ. ದೇವೇಂದ್ರಪ್ಪನ ಮನೆಯಲ್ಲಿ ಸಿಕ್ಕ 120 ಲೀಟರ್ ಮದ್ಯದ ಬಗ್ಗೆ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳೇಕೆ ಗಪ್ ಚುಪ್?
ಎಸಿಬಿ ದಾಳಿ ವೇಳೆ ದೇವೇಂದ್ರಪ್ಪ ಸಾಕ್ಷಿ ಸಮೇತ ಸಿಕ್ಕಿಬಿದ್ದು 4 ದಿನಗಳು ಕಳೆಯುತ್ತಾ ಬಂದರೂ ಬಿಬಿಎಂಪಿ ಹಿರಿಯ ಅಧಿಕಾರಿಗಳು ಈ ತನಕ ಆತನನ್ನು ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಿಲ್ಲ. ಸಾಕಷ್ಟು ಪ್ರಭಾವಿ ಎನ್ನಲಾದ ದೇವೇಂದ್ರಪ್ಪ ವಿರುದ್ಧ ಹಲವರಿಗೆ ನಕಲಿ ಒಸಿ ನೀಡಿದ್ದರ ಬಗ್ಗೆ ಈ ಹಿಂದೆ ಸಾಕಷ್ಟು ಆರೋಪಗಳು ಕೇಳಿಬಂದಿದೆ.