ಬೆಂಗಳೂರು : ಬೊಮ್ಮನಹಳ್ಳಿ ವಲಯದ ನಗರಯೋಜನೆ ವಿಭಾಗದ ಸಹಾಯಕ ನಿರ್ದೇಶಕ (ಎಡಿಟಿಪಿ) ದೇವೇಂದ್ರಪ್ಪ ಕೊನೆಗೂ ಅಮಾನತಾಗಿದ್ದಾರೆ.
ಈ ಬಗ್ಗೆ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಲಂಚ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದ ಬಿಬಿಎಂಪಿ ಎಡಿಟಿಪಿ ದೇವೇಂದ್ರಪ್ಪ ವಿರುದ್ಧ 4 ದಿನವಾದರೂ ಕ್ರಮ ಕೈಗೊಳ್ಳದೆ ಬಿಬಿಎಂಪಿ ಗಪ್ ಚುಪ್ ಆಗಿತ್ತು ಎಂದು ಬೆಂಗಳೂರು ವೈರ್ ನಲ್ಲಿ ಸೋಮವಾರ ಸಂಜೆಯಷ್ಟೇ ವರದಿ ಮಾಡಲಾಗಿತ್ತು.
ಈ ವರದಿಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಆಡಳಿತ ವರ್ಗ ರಾತ್ರಿ ವೇಳೆಗೆ, ಭ್ರಷ್ಟ ಅಧಿಕಾರಿ ದೇವೇಂದ್ರಪ್ಪ ಬಂಧಿತರಾದ ಫೆಬ್ರವರಿ 5 ರಂದು ಸಂಜೆ 6 ಗಂಟೆಯಿಂದ ಪೂರ್ವಾನ್ವಯವಾಗುವಂತೆ ಎಸಿಬಿ ಅಥವಾ ಬಿಬಿಎಂಪಿಯ ಇಲಾಖಾ ವಿಚಾರಣೆ ನಿರೀಕ್ಷಿಸಿ ಸಸ್ಪೆಂಡ್ ಮಾಡಿದೆ.
ಅಮಾನತು ಅವಧಿಯಲ್ಲಿ ಕೇಂದ್ರ ಸ್ಥಾನ ತೊರೆಯದಂತೆ ಆದೇಶಿಸಿದ್ದಾರೆ. ಇದು ಬೆಂಗಳೂರು ವೈರ್ ವರದಿ ಪರಿಣಾಮ….!
ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ಯೋಜನೆ ಕಾರ್ಯನಿರ್ವಾಹಕ ಎಂಜನಿಯರ್ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ 2020 ರ ಜೂನ್ 1ರಿಂದ ಹೆಚ್ಚುವರಿಯಾಗಿ ಬೊಮ್ಮನಹಳ್ಳಿ ನಗರ ಯೋಜನೆ ವಿಭಾಗದಲ್ಲಿ ಪ್ರಭಾರಿ ಎಡಿಟಿಪಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳದಿಂದ ಸಿಕ್ಕಿಬಿದ್ದಿದ್ದ ಬಿಬಿಎಂಪಿ ಟೌನ್ ಪ್ಲಾನಿಂಗ್ ಎಡಿಟಪಿ ದೇವೇಂದ್ರಪ್ಪ ಬಳಿ ಪಾಲಿಕೆಗೆ ಸೇರಿದ 480ಕ್ಕೂ ಹೆಚ್ಚು ಕಡತಗಳು ಪತ್ತೆಯಾಗಿದೆ….! ಇದಲ್ಲದೆ ಬಿಬಿಎಂಪಿಯ ನಗರ ಯೋಜನೆ ವಿಭಾಗದ ಹಿರಿಯ ಅಧಿಕಾರಿಗಳಿಗೆ ಸೇರಿದ ಸೀಲು, ಕಚೇರಿ ಸೀಲುಗಳು, ನಗದು, ಬ್ಯಾಂಕ್ ಠೇವಣಿ, 120 ಲೀಟರ್ ದುಬಾರಿ ಮದ್ಯ, ಐಷಾರಾಮಿ ಕಾರು ಇರುವುದು ಪತ್ತೆಯಾಗಿತ್ತು.
ಎಸಿಬಿ ಅಧಿಕಾರಿಗಳು ಈ ಬಗ್ಗೆಯೂ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.