ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಶನಿವಾರ ಬೆಂಗಳೂರು ಮಿಷನ್-2022 ಕಾರ್ಯಕ್ರಮದಡಿ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಅಭಿವೃದ್ದಿ ಕಾಮಾಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.
ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರುಗಳ ತಂಡದೊಂದಿಗೆ ಬಹಳ ದಿನಗಳ ಬಳಿಕ ಬಿ.ಎಮ್.ಟಿ.ಸಿ. ಬಸ್ ನಲ್ಲಿ ಪ್ರಯಾಣಿಸಿ ನಗರ ಪ್ರದಕ್ಷಿಣೆ ಮಾಡಿದರು.
ರೇಸ್ ಕೋರ್ಸ್ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ, ಹೇಯ್ನ್ ಸ್ ರಸ್ತೆ, ಹುಡ್ ಸ್ಟ್ರೀಟ್, ಟಾಟಾ ಲೇನ್ , ಕ್ಯಾಪಿಟಲ್ ಹೋಟೆಲ್-ರಾಜಭವನ ಜಂಕ್ಷನ್ ಮತ್ತು ಪ್ಲಾನೆಟೇರಿಯಂ ರಸ್ತೆಗಳ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಈ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟದ ಕಾಮಗಾರಿಯನ್ನು ಖಾತರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಂಗಳೂರಿನಲ್ಲಿ 37 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ರಸ್ತೆ ಅಭಿವೃದ್ಧಿ, ಕೋವಿಡ್ ಆಸ್ಪತ್ರೆಗಳಿಗೆ ನೆರವು, ಐಟಿ-ಯೋಜನೆಗಳು, ಕಟ್ಟಡ ನಿರ್ಮಾಣ ಮತ್ತು ಇತರ ಕಾಮಗಾರಿಗಳು ಸೇರಿವೆ. ಇದರ ಅಂದಾಜು ವೆಚ್ಚ 930 ಕೋಟಿ ರೂ.ಗಳು.
ಈವರೆಗೆ 4 ಕಾಮಗಾರಿಗಳು ಪೂರ್ಣಗೊಂಡಿವೆ. 29 ಕಾಮಗಾರಿಗಳು ಪ್ರಗತಿಯಲ್ಲಿವೆ. 4 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ವರೆಗೆ 103 ಕೋಟಿ ರೂ. ವೆಚ್ಚವಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದರು.