ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020ರ ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ನಗರದ ವಾರ್ಡ್ ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಹೆಚ್ಚಿಸಿ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಜ.11 ರಿಂದಷ್ಟೇ ಬಿಬಿಎಂಪಿ 2020 ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬಂದಿತ್ತು. ಅದಾದ 19 ದಿನಗಳ ಬಳಿಕ ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಈ ಅಧಿಸೂಚನೆ ಹೊರಡಿಸಿದೆ. 243 ವಾರ್ಡ್ ಪುನರ್ ವಿಂಗಡಣೆಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಾಲ್ವರ ವಾರ್ಡ್ ಪುನರ್ ವಿಂಗಡಣಾ ಸಮಿತಿಯನ್ನು 6 ತಿಂಗಳ ಅವಧಿಗೆ ರಚಿಸಲಾಗಿದೆ.
ಬಿಜೆಪಿ ನೇತೃತ್ವದ ಸರ್ಕಾರ ಬಿಬಿಎಂಪಿಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲು ಹಾಗೂ ವಾರ್ಡ್ ಹೆಚ್ಚಳ ಹಾಗೂ ಪುನರ್ ವಿಂಗಡಣೆ ನೆಪದಲ್ಲಿ ಪರೋಕ್ಷವಾಗಿ ಬೆಂಗಳೂರಿನ ಬಿಜೆಪಿ ಶಾಸಕರು ಕೌನ್ಸಿಲರ್ ಗಳಿಲ್ಲದೆ ಅಧಿಕಾರ ನಡೆಸಲು ವಾರ್ಡ್ ಸಂಖ್ಯೆ ಹೆಚ್ಚಳಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ 225 ವಾರ್ಡ್ ಮಾಡಲು ಬಿಜೆಪಿ ಸರ್ಕಾರ ಒಲವು ಹೊಂದಿದ್ದರೂ ಸಂಖ್ಯಾ ಶಾಸ್ತ್ರ ಮತ್ತಿತರ ಕಾರಣಕ್ಕೆ ಕಟ್ಟುಬಿದ್ದಿದ್ದು ಕೊನೆಗೆ 243 ವಾರ್ಡ್ ಗಳಿಗೆ ಹೆಚ್ಚಳ ಮಾಡಲು ಬಿಬಿಎಂಪಿ 2020 ಕಾಯ್ದೆಯಲ್ಲೂ ಅವಕಾಶ ಕಲ್ಪಿಸಲಾಗಿತ್ತು.
“ಬಿಜೆಪಿಯ ಬೆಂಗಳೂರಿನ ಶಾಸಕರು ಚುನಾವಣೆ ಮುಂದೂಡಲು ನಾನಾ ತಂತ್ರಗಳನ್ನು ಹೆಣೆದಿದ್ದಾರೆ. ಅದರಲ್ಲಿ ವಾರ್ಡ್ ಸಂಖ್ಯೆ ಹೆಚ್ಚಳ, ವಾರ್ಡ್ ಪುನರ್ ವಿಂಗಡಣೆಯೂ ಒಂದು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ 6 ತಿಂಗಳಾದರೂ ಬೇಕು. ಮಾರ್ಚ್ ನಲ್ಲಿ 2021 ರ ಜನಗಣತಿ ಕಾರ್ಯ ಆರಂಭವಾಗಲಿದೆ. ಹೀಗೆ ಒಂದಲ್ಲಾ ಒಂದು ಕಾರಣ ನೀಡಿ 2022ರ ಜೂನ್ ವರೆಗೆ ಬಿಬಿಎಂಪಿ ಚುನಾವಣೆ ಮುಂದೂಡಿಕೆ ಮಾಡುವ ಲೆಕ್ಕಾಚಾರವಿದೆ”. ಚುನಾವಣೆ ನಡೆಸುವುದು ಇವರಿಗೆ ಬೇಕಿಲ್ಲ ಎಂದು ಸಾಮಾಜಿಕ ಹೋರಾಟಗಾರ ಅಮರೇಶ್ ಟೀಕಿಸಿದ್ದಾರೆ.
ಈಗಾಗಲೇ ಚುನಾವಣಾ ಆಯೋಗದ ಸೂಚನೆಯಂತೆ ಕಳೆದ ವರ್ಷ 198 ವಾರ್ಡ್ ಪುನರ್ವಿಂಗಣೆ ಮಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿತ್ತು. ಅದೇ ಹೊತ್ತಿನಲ್ಲಿ ರಾಜ್ಯ ಸರ್ಕಾರ ಪಾಲಿಕೆಗೆ ಪ್ರತ್ಯೇಕ ಕಾಯ್ದೆ ರಚಿಸಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಸದಸ್ಯರನ್ನು ಒಳಗೊಂಡ ಜಂಟಿ ಸದನ ಸಮಿತಿ ರಚಿಸಿತ್ತು.
ಆ ಸಮಿತಿ ನೀಡಿದ ಶಿಫಾರಸ್ಸಿನ ಅನ್ವಯ ಎರಡೂ ಸದನಗಳಲ್ಲಿ ಮಸೂದೆ ಮಂಡನೆಯಾಗಿ ಯಶಸ್ವಿಯಾಗಿ ಒಪ್ಪಿಗೆ ಸಿಕ್ಕಿತ್ತು. ನಂತರ ಡಿ.19ರಂದು ರಾಜ್ಯಪಾಲರು ನೂತನ ಬಿಬಿಎಂಪಿ 2020 ಕಾಯ್ದೆ ಜಾರಿಗೆ ಒಪ್ಪಿಗೆ ನೀಡಿದರು. ಡಿ.21 ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡಿತ್ತು.
ಸಕಾಲಕ್ಕೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕರಾದ ಶಿವರಾಜ್, ವಾಜೀದ್ ಮತ್ತಿತರರು ಕೋರ್ಟ್ ಮೆಟ್ಟಿಲೇರಿದ್ದರು. ಫೆಬ್ರವರಿ ಮೊದಲ ವಾರದಲ್ಲಿ ಸುಪ್ರೀಂಕೋರ್ಟಿನಲ್ಲಿ ಪಾಲಿಕೆ ಚುನಾವಣೆ ವಿಚಾರಣೆ ಬರಲಿದ್ದು ಕೋರ್ಟ್ ಯಾವ ತೀರ್ಪು ನೀಡಲಿದೆ ಎಂದು ಕಾದು ನೋಡಬೇಕಿದೆ.