ಬೆಂಗಳೂರು (ಬೆಂಗಳೂರು ವೈರ್) : ಏರ್ ಶೋ-2021 ಪ್ರಾರಂಭಕ್ಕೆ ಇನ್ನು ಕೇವಲ 6 ದಿನ ಬಾಕಿಯಿದೆ. ವೈಮಾನಿಕ ಪ್ರದರ್ಶನದಲ್ಲಿ ಖುದ್ದಾಗಿ ಪಾಲ್ಗೊಳ್ಳಲು ಎಲ್ಲರಿಗೂ ಅವಕಾಶವಿಲ್ಲ. ಆದರೆ ರಕ್ಷಣಾ ಸಚಿವಾಲಯ ಆನ್ ಲೈನ್ ಮೂಲಕ ಏರ್ ಶೋ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ.
ಇದಕ್ಕಾಗಿ ಏರೊ ಇಂಡಿಯಾ ವೆಬ್ ಸೈಟ್ https://aeroindia.gov.in ಗೆ ಭೇಟಿ ನೀಡಿ ಅಲ್ಲಿ ಏರ್ ಶೋ ದ ಸಂಪೂರ್ಣ ಮಾಹಿತಿ ಒದಗಿಸುವ ಮೊಬೈಲ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಮೊಬೈಲ್ ಆಪ್ ಡೌನ್ ಲೋಡ್ ಬಳಿಕ ಆ ಆಪ್ ಅನ್ನು ಡೌನ್ ಇನ್ ಸ್ಟಾಲ್ ಮಾಡುವಾಗ ವೀಕ್ಷಕರು ನೋಂದಾಯಿತ ಇ-ಮೇಲ್ ವಿಳಾಸಕ್ಕೆ ‘ವೆರಿಫಿಕೇಶನ್ ಕೋಡ್’ ಬರುತ್ತದೆ. ಅದನ್ನು ದಾಖಲಿಸಿದ ಬಳಿಕ ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಒದಗಿಸಬೇಕು.
ಏರ್ ಶೋ ಆಪ್ ನಲ್ಲಿ ಏನೇನು ಸೌಲಭ್ಯಗಳಿರುತ್ತವೆ? :
ಖುದ್ದಾಗಿ ಏರ್ ಶೋಗೆ ಭೇಟಿ ನೀಡುವವರಿಗಾಗಿ ಕೋವಿಡ್ ವರದಿ ಅಪ್ ಲೋಡ್ ಮಾಡುವುದು, ಇ-ಟಿಕೇಟ್ ಖರೀದಿ, ಕಾರ್ಯಕ್ರಮ ಮಾಹಿತಿ, ವಿವಿಧ ಪ್ರದರ್ಶನ ಮಳಿಗೆ, ಸ್ಥಳದ ನಕ್ಷೆ, ವಾಹನ ನಿಲುಗಡೆ ಕುರಿತ ಮಾಹಿತಿ ಇರಲಿದೆ.
ಇದಲ್ಲದೆ ವರ್ಚುವಲ್ ಮೂಲಕ ವೀಕ್ಷಕರಿಗೆ, ವಿಮಾನಗಳ ಪ್ರದರ್ಶನ ವಲ್ಲದೆ, ಯುದ್ಧ ಸಾಮಗ್ರಿ ಸೇರಿದಂತೆ ರಕ್ಷಣೆಗೆ ಸಂಬಂಧಿಸಿದ ತಂತ್ರಙ್ಞನ, ಉತ್ಪನ್ನಗಳನ್ನು ಇಟ್ಟಿರುವ ಮಳಿಗೆಗಳನ್ನು ತ್ರೀಡಿ ರೂಪದಲ್ಲಿ ವೀಕ್ಷಿಸಬಹುದು. ಪ್ರದರ್ಶಕರ ಜೊತೆ ನೇರ ಸಂಭಾಷಣೆ, ಅವರ ಉತ್ಪನ್ನಗಳ ವಿಡಿಯೋ, ಫೊಟೊ, ಮಾಹಿತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ವಸ್ತುಪ್ರದರ್ಶನ, ವೈಮಾನಿಕ ಪ್ರದರ್ಶನ ನೀಡುವ ವಿಮಾನಗಳ ವಿವರ, ವಿವಿಧ ವಿಚಾರಸಂಕಿರಣಗಳ ಮಾಹಿತಿಯೂ ಈ ಏರ್ ಶೋ ಆಪ್ ನಲ್ಲಿ ಲಭ್ಯವಿರಲಿದೆ.
“ಏರೊ ಇಂಡಿಯಾ ಶೋ ಕಾರ್ಯಕ್ರಮದಲ್ಲಿ ನೇರವಾಗಿ ಪಾಲ್ಗೊಳ್ಳುವವರಿಗೆ ಆಗುವ ಅನುಭವವನ್ನು ಆನ್ ಲೈನ್ ವೀಕ್ಷಿಕರಿಗೂ ಲಭ್ಯವಾಗುವಂತೆ ಈ ಎಲ್ಲ ವ್ಯವಸ್ಥೆ ಮಾಡಲಾಗಿದೆ’ ಎಂದು ಎಚ್ ಎಎಲ್ ನ ಡಿಪಿಐಟಿ ವಿಭಾಗದ ಸಿಇಒ ರಾಜೀವ್ ಅಗರ್ವಾಲ್ ತಿಳಿಸಿದ್ದಾರೆ.
ಏರ್ ಶೋ ಖುದ್ದು ಭೇಟಿಗೆ ಒಂದು ಬಾರಿ ಕೋವಿಡ್ ಟೆಸ್ಟ್ :
ಏರ್ ಶೋ ವೀಕ್ಷಿಸಲು ಯಲಹಂಕ ವಾಯುನೆಲೆಗೆ ಬರುವವರು ಜ.31 ರಂದು ಕೋವಿಡ್ ಪರೀಕ್ಷೆ ಮಾಡಿಸಬೇಕು. ನೆಗಟಿವ್ ವರದಿಯನ್ನು ಏರ್ ಶೋ ಮೊಬೈಲ್ ಆಪ್ ಮೂಲಕ ಅಪ್ ಲೋಡ್ ಮಾಡಿದರೆ ಸಾಕು. ಏರ್ ಶೋ ಮುಗಿಯುವ ತನಕ ಮತ್ತೆ ಕೋವಿಡ್ ಟೆಸ್ಟ್ ಮಾಡಿಸುವ ಅಗತ್ಯವಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.
ನವೋದ್ಯಮಗಳಿಗೆ ಬಂಪರ್….!
ಈ ಬಾರಿಯ ಏರ್ ಶೋನಲ್ಲಿ ರಕ್ಷಣೆ, ವೈಮಾನಿಕ ಕ್ಷೇತ್ರದ ನವೋದ್ಯಮಗಳಿಗೆ ಕೇವಲ 20 ಸಾವಿರ ಶುಲ್ಕನೀಡಿ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಅಮೆರಿಕದ ವೈಮಾನಿಕ ಕಂಪನಿ ಬೋಯಿಂಗ್ 2021 ರ ಏರ್ ಶೋನಲ್ಲಿ ಮೇಕ್ ಇನ್ ಇಂಡಿಯಾ ಮೂಲಕ ಸಮರ್ಥವಾಗಿ ಈ ಕಾರ್ಯಕ್ರಮವನ್ನು ಬಳಸಿಕೊಳ್ಳಲು ಉದ್ದೇಶಿಸಿದೆ.
“ಬೋಯಿಂಗ್ ಕಂಪನಿ ಈಗಾಗಲೇ ನಗರದಲ್ಲಿ 43 ಎಕರೆಯಷ್ಟು ಕ್ಯಾಂಪಸ್ ಹೊಂದಿದೆ. ಇದರಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶಕ್ಕೆ ಒಂದು ಕಟ್ಟಡ ಮೀಸಲಿಟ್ಟಿದೆ. 2021 ರಲ್ಲಿ ಮೇಕ್ ಇಂಡಿಯಾ ಉದ್ದೇಶ ಈಡೇರಿಕೆ ನಿಟ್ಟಿನಲ್ಲಿ ಉತ್ಪನ್ನಗಳ ನಿರ್ಮಾಣದ ಗುರಿ ಹೊಂದಿದೆ” ಎಂದು ಬೋಯಿಂಗ್ ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಯಲಹಂಕ ವಾಯುನೆಲೆಯಲ್ಲಿ ಇದೇ ಫೆ.3 ರಿಂದ ಮೂರು ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಕೋವಿಡ್ ಹಿನ್ನಲೆಯಲ್ಲಿ ಅಗತ್ಯ ಮುಂಜಾಗ್ರತೆ ಹಾಗೂ ಭದ್ರತೆಗಳನ್ನು ಕೈಗೊಳ್ಳಲಾಗುತ್ತಿದೆ.
ಏರ್ ಶೋ ಪ್ರವೇಶಕ್ಕೆ ಮಿತಿ :
13ನೇ ಆವೃತ್ತಿಯಲ್ಲಿ ಏರ್ ಶೋ ಸ್ಥಿರ ಪ್ರದರ್ಶನಕ್ಕೆ ಪ್ರತಿದಿನದ ಪ್ರವೇಶ ಮಿತಿ 15,000 ಆಗಿದ್ದರೆ, ವಾಯು ಪ್ರದರ್ಶನ ಜಾಗಕ್ಕೆ ಪ್ರತಿದಿನ ಕೇವಲ 3,000 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.