ಬೆಂಗಳೂರು : ಅಕ್ರಮ ಹಣಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕಿ ಎಂ.ಕೆ.ಶಶಿಕಲಾ ನಟರಾಜನ್
ಪರಪ್ಪನ ಅಗ್ರಹಾರ ಜೈಲಿನಿಂದ ನಾಲ್ಕು ವರ್ಷಗಳ ಶಿಕ್ಷೆಯ ನಂತರ ಇಂದು ಅಧಿಕೃತವಾಗಿ ಬಿಡುಗಡೆಯಾಗಿದ್ದಾರೆ.
ಆದರೆ ಕೋವಿಡ್ ಸೋಂಕು ಹಿನ್ನಲೆಯಲ್ಲಿ ಇನ್ನು ನಾಲ್ಕೈದು ದಿನಗಳ ಕಾಲ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಜೈಲಿನಿಂದ ಅಧಿಕೃತ ಬಿಡುಗಡೆಯಾಗುತ್ತಿರುವುದರಿಂದ ಜೈಲು ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಔಪಚಾರಿಕವಾಗಿ ಶಶಿಕಲಾ ಅವರಿಂದ ಇಂದು ಸಹಿ ಪಡೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅವರ ಆರೋಗ್ಯ ಸ್ಥಿತಿಯಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. ದೇಹದಲ್ಲಿ ಆಮ್ಲಜನಕದ ಪ್ರಮಾಣ ಸಾಮಾನ್ಯ ಸ್ಥಿತಿಯಲ್ಲಿದೆ. ಕಳೆದ 12 ಗಂಟೆಗಳಿಂದ ಕೃತಕ ಉಸಿರಾಟದ ವ್ಯವಸ್ಥೆಯಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಕಾಲ ಇದೇ ದೈಹಿಕ ಸ್ಥಿತಿಯಿದ್ದಲ್ಲಿ, ಕೋವಿಡ್ ಲಕ್ಷಣಗಳು ಕಂಡುಬರದಿದ್ದಲ್ಲಿ ಅವರು ದಾಖಲಾದ 10ನೇ ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಅಧೀಕ್ಷಕರಾದ ಡಾ.ಕೆ.ರಮೇಶ್ ಕೃಷ್ಣ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಈ ಹಿಂದೆ ಸಿಟಿ ಸ್ಕ್ಯಾನ್ ನಲ್ಲಿ ಅವರಿಗೆ ಶ್ವಾಸಕೋಶದಲ್ಲಿ ಸೋಂಕಿರುವುದು ಧೃಢಪಟ್ಟಿತ್ತು.. ತೀವ್ರ ನ್ಯುಮೋನಿಯಾ, ಮಧುಮೇಹ, ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆಯಿಂದ ಶಶಿಕಲಾ ಬಳಲುತ್ತಿದ್ದರು. ವೈದ್ಯರು ನಿರಂತರವಾಗಿ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ತೀವ್ರ ನಿಗಾ ಇಟ್ಟಿದ್ದರು. ಅವರ ದೇಹ ಚಿಕಿತ್ಸೆಗೆ ಸ್ಪಂದಿಸಿದ ಪರಿಣಾಮ ಗಮನಾರ್ಹವಾಗಿ ಚೇತರಿಸಿಕೊಂಡರು.
ಈ ಹಿಂದೆ ಶಶಿಕಲಾ ಅವರಿಗೆ ಜ್ವರ ಮತ್ತು ಉಸಿರಾಟದ ಸಮಸ್ಯೆಗೆ ಜೈಲಿನಲ್ಲಿ ಚಿಕಿತ್ಸೆ ಫಲಿಸದಿದ್ದಾಗ ಮೊದಲಿಗೆ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಜ.21 ಮಧ್ಯಾಹ್ನ 2:30ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅವರ ಗಂಟಲಿನ ದ್ರವ ಪರೀಕ್ಷೆಯಿಂದ ಅವರಿಗೆ ಕೋವಿಡ್-19 ಸೋಂಕು ಇರುವುದು ಜ.22ರಂದು ರಾತ್ರಿ ಧೃಢಪಟ್ಟಿತ್ತು.
ಸದ್ಯ ಕೋವಿಡ್-19 ನಿಯಮಾವಳಿ ಅನ್ವಯ ಶಶಿಕಲಾಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲು ಶಶಿಕಲಾ ಅವರ ಸಂಬಂಧಿಗಳು ಸಮ್ಮತಿಸಿದ್ದಾರೆ. ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ದಿನ ಅವರ ಸೋದರ ಸಂಬಂಧಿ ಆದ ಶಾಸಕ ಟಿ.ವಿ.ದಿನಕರನ್ ನೇತೃತ್ವದಲ್ಲಿ ಚೆನ್ನೈಗೆ ಅದ್ಧೂರಿಯಾಗಿ ಕರೆದೊಯ್ಯಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯದಲ್ಲೆ ತಮಿಳುನಾಡಿನಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಎಎಂಕೆ ನಾಯಕಿ ಶಶಿಕಲಾ ಬಿಡುಗಡೆ ಆಗಿರುವುದು ಗಮನಾರ್ಹವಾಗಿದೆ.