ಬೆಂಗಳೂರು (ಬೆಂಗಳೂರು ವೈರ್ ) : ನಗರದಲ್ಲಿ ಈತನಕ ಕೇವಲ ಶೇ.32.65 ರಷ್ಟು ಆರೋಗ್ಯ ಕಾರ್ಯಕರ್ತರು ಮಾತ್ರ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸಂಬಂಧ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಕೋವಿಡ್ ಟಾಸ್ಕ್ ಪೋರ್ಸ್ ಸಮತಿ ಸಭೆ ನಡೆಯಿತು. ಸಭೆಯಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಮೊದಲನೇ ಹಂತದಲ್ಲಿ 1,83,567 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಆದರೆ ಇದುವರೆಗೆ 56,214 (ಶೇ.32.65) ಮಂದಿ ಲಸಿಕೆ ಪಡೆದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ 15,000 ರಿಂದ 20,000 ಫಲಾನುಭವಿಗಳಿಗೆ ಲಸಿಕೆ ನೀಡಲು ಕ್ರಮವಹಿಸಿದರೆ ಇನ್ನು 10 ರಿಂದ 15 ದಿನಗಳಲ್ಲಿ ಉಳಿದೆಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಬಹುದಾಗಿದೆ.
ಆದರೆ, ಕೆಲವರು ಹಲವು ಕಾರಣಾಂತರಗಳಿಂದ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಲಸಿಕೆ ಪಡೆಯಲು ಮುಂದೆಬಾರದವರಿಗೆ ಲಸಿಕೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕೋವಿಡ್ ಸೋಂಕು ಪ್ರಮಾಣ ಶೇ.1ಕ್ಕಿಂತ ಕಡಿಮೆ :
ನಗರದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಕಡಿಮೆಯಾಗುತ್ತಿವೆ. ಈ ಹಿಂದೆ ಪ್ರತಿನಿತ್ಯ 6,000 ಇದ್ದ ಪ್ರಕರಣಗಳು ಇದೀಗ 300 ರಿಂದ 400 ಪ್ರಕರಣಗಳು ಮಾತ್ರ ಕಂಡುಬರುತ್ತಿವೆ. ಅದರಂತೆ ಕೋವಿಡ್ ಸೋಂಕು ಧೃಢಪಟ್ಟ ಪ್ರಮಾಣ ಶೇ. 0.97, ಗುಣವಾದ ಪ್ರಮಾಣ ಶೇ. 97.80, ಸಾವಿನ ಪ್ರಮಾಣ ಶೇ. 0.70 ಇದೆ. ನಗರದಲ್ಲಿ ಪ್ರತಿನಿತ್ಯ 60,000 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.
ಮಾರ್ಚ್ ನಲ್ಲಿ ಲಸಿಕೆ ಪಡೆಯುವವರ 3ನೇ ಹಂತದ ಪಟ್ಟಿ ಸಿದ್ದ :
ಕೋವಿಡ್ ವೇಳೆ ಫ್ರಂಟ್ ಲೈನ್ ವಕರ್ಸ್ ಆಗಿ ಕೆಲಸ ಮಾಡಿದವರಿಗೆ 2ನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಪಾಲಿಕೆ ಸಿಬ್ಬಂದಿ, ಸೇರಿ ವಿವಿಧ ಇಲಾಖೆಗಳ ಸುಮಾರು 50,000 ಮಂದಿ ಫಲಾನುಭವಿಗಳಿದ್ದಾರೆ. ಈಗಾಗಲೇ ಪೋರ್ಟಲ್ನಲ್ಲಿ ಬಹುತೇಕ ನೋಂದಣಿ ಪ್ರಕ್ರಿಯೆ ಮುಗಿದಿದೆ ಎಂದರು.
ನಗರದಾದ್ಯಂತ ಸಮೀಕ್ಷೆ ನಡೆಸಿ ಮಾರ್ಚ್ ಅಂತ್ಯದ ವೇಳೆಗೆ 3ನೇ ಹಂತದಲ್ಲಿ ಲಸಿಕೆ ಪಡೆಯುವ ಸಂಪೂರ್ಣ ಪಟ್ಟಿಯನ್ನು ಸಿದ್ದಪಡಿಸಬೇಕು. ಸರ್ವೇ ಮಾಡಲು ಎನ್.ಜಿ.ಒಗಳ ಸಹಕಾರವೂ ಪಡೆದುಕೊಳ್ಳಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜ.31 ರಿಂದ ಪಲ್ಸ್ ಪೋಲಿಯೋ ಲಸಿಕೆ ಆರಂಭ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಜನವರಿ 31 ರಿಂದ ಫೆ.3ರ ತನಕ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ. ನಗರದಲ್ಲಿ 1.04 ಕೋಟಿ ಜನಸಂಖ್ಯೆಯಲ್ಲಿ 10.79 ಲಕ್ಷದಷ್ಟು 0 ರಿಂದ 5 ವರ್ಷದ ಮಕ್ಕಳಿದ್ದಾರೆ. ಈ ಪೈಕಿ 3,340 ಬೂತ್ ಗಳಲ್ಲಿ ಲಸಿಕೆ ನೀಡಲಾಗುತ್ತದೆ. 456 ಟ್ರಾನ್ಸಿಟ್ ತಂಡ ಹಾಗೂ 324 ಮೊಬೈಲ್ ತಂಡಗಳಿವೆ. ಲಸಿಕೆ ನೀಡಲು 14,922 ಲಸಿಕೆ ನೀಡುವವರು, 749 ಮೇಲ್ವಿಚಾರಕರು ಇರಲಿದ್ದಾರೆ ಎಂದು ಹೇಳಿದರು.
ಜ.31 ರಿಂದ 3ರ ತನಕ ಕೋವಿಡ್ ವ್ಯಾಕ್ಸಿನ್ ನೀಡಿಕೆಯಿಲ್ಲ :
ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯುವ ವೇಳೆ ಕೋವಿಡ್ ವ್ಯಾಕ್ಸಿನ್ ಇರುವುದಿಲ್ಲ ಎಂದು ಪಾಲಿಕೆ ಮಂಜುನಾಥ್ ಪ್ರಸಾದ್ ತಿಳಿಸಿದರು.
ಕೋವಿಡ್ ಟಾಸ್ಕ್ ಪೋರ್ಸ್ ಸಮತಿ ಸಭೆಯಲ್ಲಿ ಆರೋಗ್ಯ ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.