ಬೆಂಗಳೂರು : ಗಣರಾಜ್ಯೋತ್ಸವ ದಿನವಾದ ಇಂದು ಬೆಂಗಳೂರು ಕೇಂದ್ರಭಾಗ ಅಕ್ಷರಶಃ ರೈತರ ಹಸಿರುಶಾಲಿನ ಬಣ್ಣಗಳಿಂದ ತುಂಬಿಹೋಗಿತ್ತು. ಜನತಂತ್ರದ ಹಬ್ಬ ಮಂಗಳವಾರ ರೈತರ ಜನಗಣೋತ್ಸವವಾಗಿ ಬದಲಾಗಿತ್ತು.
ಕೇಂದ್ರ ಸರ್ಕಾರದ ಮೂರು ಕೃಷಿ ವಿರೋಧಿ ಕಾಯ್ದೆ ಹಿಂಪಡೆಯಬೇಕು. ಹಾಗೆಯೇ ರಾಜ್ಯ ಸರ್ಕಾರದ ಭೂಸುಧಾರಣಾ ಕಾಯ್ದೆ, ಭೂಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವಂತೆ ರೈತರು ಆಗ್ರಹಿಸಿ ಟ್ಯಾಕ್ಟರ್, ಕಾಲ್ನಡಿಗೆಯಲ್ಲಿ ಜಾಥಾ ನಡೆಸಿದರು.
ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ರೈತರು ಟ್ಯಾಕ್ಟರ್ ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಂದರೆ, ರಾಜ್ಯದ ಇತರ ಭಾಗಗಳಲ್ಲಿನ ರೈತರು ಬಸ್, ಟೆಂಪೋ, ಕಾರು ಮತ್ತಿತರ ಖಾಸಗಿ ವಾಹನಗಳಲ್ಲಿ ಆಗಮಿಸಿದರು. ರಾಜಧಾನಿ ಬೆಂಗಳೂರಿನಲ್ಲಿ 125 ಟ್ಯಾಕ್ಟರ್ ಗಳಿಗೆ ಸೀಮಿತವಾಗಿ ಪೊಲೀಸರು ಅನುಮತಿ ನೀಡಿದ್ದರು. ಆದರೂ ರೈತರು ನೂರಾರು ಟ್ಯಾಕ್ಟರ್ ಗಳಲ್ಲಿ ನಗರಕ್ಕೆ ಆಗಮಿಸಿದ್ದರು.
ನಗರದ 6 ಭಾಗಗಳಿಂದ ಫ್ರೀಡಂಪಾರ್ಕ್ ಕಡೆಗೆ ಪರೇಡ್ :
ಸಾವಿರಾರು ರೈತರು ತುಮಕೂರು ರಸ್ತೆ, ನೈಸ್ ರೋಡ್ ಜಂಕ್ಷನ್, ದೇವನಹಳ್ಳಿ ನಂದಿಕ್ರಾಸ್, ಹೊಸಕೋಟೆ ಟೋಲ್ ಜಂಕ್ಷನ್, ಸುಮನಹಳ್ಳಿ ಗೇಟ್, ಮೆಜಿಸ್ಟಿಕ್ ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಹೀಗೆ ವಿವಿಧ ಭಾಗಗಳಿಂದ ನಗರದ ಕೇಂದ್ರ ಭಾಗಕ್ಕೆ ಬಂದಿದ್ದರು. ಫ್ರೀಡಮ್ ಪಾರ್ಕ್ ವರೆಗೆ ಪರೇಡ್ ನಡೆಸಿ ತದನಂತರ ಬೃಹತ್ ಸಮಾವೇಶದಲ್ಲಿ ನೂತನ ಕೃಷಿ ಕಾಯ್ದೆ ಹಿಂಪಡೆಯುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.
ದೆಹಲಿಯಲ್ಲಿ ಹಾಗೂ ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಸರ್ಕಾರದ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ಪೂರ್ಣಗೊಳಿಸಿದ ನಂತರ ರೈತರು ಧ್ವಜಾರೋಹಣ ನೆರವೇರಿಸಿದರು. ಆ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಗಳಿಗೆ ಸಂದೇಶ ರವಾನಿಸಿದರು.
ರೈತರೊಬ್ಬರು ತ್ರಿವರ್ಣ ಧ್ವಜ ಹಿಡಿದು, ಸೈಕಲ್ ಮೂಲಕ ಜನಗಣಪೆರೇಡ್ ನಲ್ಲಿ ಭಾಗವಹಿಸಿದರು.
ನಗರದ ಕೆಲವು ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ತ :
ಕೆಲವು ಕಡೆಗಳಲ್ಲಿ ಟ್ಯಾಕ್ಟರ್ ಗಳಲ್ಲಿ ಆಗಮಿಸಿದ ರಸ್ತೆತಡೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮಗಳ ವಿರುದ್ಧ ರೈತರು ಘೋಷಣೆ ಕೂಗಿ ರಸ್ತೆತಡೆ ನಡೆಸಿದರು. ಹೀಗಾಗಿ ನಗರದ ಕೆಲ ಭಾಗಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಪ್ರತಿರೋಧಿಸಿದರೆ ಹೋರಾಟ ತೀವ್ರ :
ರೈತರ ಜನಗಣೋತ್ಸವ ಪರೇಡ್ ನಲ್ಲಿ ಮಾತನಾಡಿದ ರಾಜ್ಯ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೃಷಿಕರಿಗೆ ಮಾರಕವಾಗಿರುವ ಕಾಯ್ದೆಯನ್ನು ಹಿಂಪಡೆಯಬೇಕೆಂದು ದೆಹಲಿಯಲ್ಲಿ ರೈತರು ಕಳೆದ ಎರಡು ತಿಂಗಳಿನಿಂದ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರನ್ನು ಬೆಂಬಲಿಸಿ ಇಂದು ಜನಗಣ ಪರೇಡ್ ನಡೆಸುತ್ತಿರುವುದಾಗಿ ಹೇಳಿದರು.
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿ ಉಂಟುಮಾಡುವ ಉದ್ದೇಶವಿರಲಿಲ್ಲ. ಹಾಗಾಗಿ ಆ ಕಾರ್ಯಕ್ರಮ ಮುಗಿದ ಮೇಲೆ ನಾವು ಧ್ವಜಾರೋಹಣ ನಡೆಸಿ ರೈತ ವಿರೋಧಿ ಕಾಯ್ದೆ ಹಿಂಪಡೆಯುವ, ರೈತರ ಸಮಸ್ಯೆಗಳ ಬಗ್ಗೆ ಜನರಿಗೆ ಸಂದೇಶ ರವಾನಿಸಿದ್ದೇವೆ. ರೈತರು ದೆಹಲಿಯಲ್ಲಿ ಟ್ಯಾಕ್ಟರ್ ಪರೇಡ್ ಮಾಡಲು ಅಲ್ಲಿನ ಪೊಲೀಸರ ಅನುಮತಿ ಸಿಕ್ಕಿತ್ತು. ಆದರೆ ಇಲ್ಲಿ ನಡೆಸಲು ನಗರ ಪೊಲೀಸರು ಅನುಮತಿ ನೀಡಿಲ್ಲ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಪ್ರತಿಭಟನೆ ತಡೆಯುವ ಉದ್ದೇಶವಿಲ್ಲ ಎಂದಿದ್ದರು. ಆದರೆ ಪರೋಕ್ಷವಾಗಿ ಪೊಲೀಸರ ಮೂಲಕ ನಮ್ಮ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ. ನಮ್ಮ ಪ್ರತಿಭಟನೆ ಹತ್ತಿಕ್ಕಿದಷ್ಟೂ ತೀವ್ರವಾಗಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಜನಗಣ ಪರೇಡ್ ನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರೈತ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ, ಚಾಮರಸ ಪಾಟೀಲ್, ರಾಜ್ಯದ ಹಲವು ರೈತ ಮುಖಂಡರು ಪಾಲ್ಗೊಂಡಿದ್ದರು.
ಪ್ರಾಂತ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಆಲ್ ಇಂಡಿಯಾ ಡೆಮಾಕ್ರಾಟಿಕ್ ಸ್ಟೂಡೆಂಟ್ಸ್ ಅಸೋಸಿಯೇಷನ್, ಕರ್ನಾಟಕ ಜನಶಕ್ತಿ ಸೇರಿದಂತೆ ನಾನಾ ಸಂಘಟನೆಗಳ ಕಾರ್ಯಕರ್ತರು ಜನಗಣೊತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದರು.