ಬೆಂಗಳೂರು : ಬೆಂಗಳೂರು ಸೇರಿದಂತೆ ರಾಷ್ಟ್ರಾದ್ಯಂತ, ಸೋಮವಾರ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2021ಯನ್ನು ಆಚರಿಸಲಾಯ್ತು.
ಇದೇ ವೇಳೆ, ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಗೆ ನಗರದ ಟೌನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ರಾಜ್ಯ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ, ಸಾಮಾಜಿಕ ಜಾಲತಾಣದ ಮೂಲಕ ಮತದಾರರಲ್ಲಿ ಜನಜಾಗೃತಿ. ಕೋವಿಡ್ ವೇಳೆ ಯಾವುದೇ ಗೊಂದಲವಿಲ್ಲದೆ ಅತ್ಯುತ್ತಮವಾಗಿ ಉಪಚುನಾವಣೆ ನಡೆಸಿದ ಹಿನ್ನಲೆಯಲ್ಲಿ ಈ ಪ್ರಶಸ್ತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಚುನಾವಣೆಗಳ ಬಗ್ಗೆ ಭಾರತದಲ್ಲಿ ಬಹಳ ಹಗುರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆ ಇಲ್ಲಿ ಬಹಳ ಸುಲಲಿತವಾಗಿ ನಡೆಯುತ್ತೆ.
ಚುನಾವಣಾ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್
ಆದರೆ ಅಮೆರಿಕದಲ್ಲಿ ಬಹಳ ಕ್ಲಿಷ್ಟ ಪ್ರಕ್ರಿಯೆಯಿದೆ. ನಮ್ಮ ದೇಶದಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳಿಗೆ ಇಂಟರ್ ರ್ಶಿಪ್ ಕೊಡಬೇಕು. ಆಗ ಯುವ ಮತದಾರರಿಗೆ ಚುನಾವಣೆ ಪ್ರಕ್ರಿಯೆ ಬಗ್ಗೆ ತಿಳುವಳಿಕೆ ಬರುತ್ತೆ.
ನಗರದಲ್ಲಿರುವವರಿಗೆ ಮತದಾನದ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿಲ್ಲ. ಮತದಾನದ ಹಕ್ಕು ಚಲಾಯಿಸದೆ ಸರ್ಕಾರದ ಕಾರ್ಯಕ್ರಮದ ಬಗ್ಗೆ ಟೀಕಿಸುವುದು ಸರಿಯಲ್ಲ. ಚುನಾವಣಾ ಪ್ರಕ್ರಿಯೆ, ಆಡಳಿತ ಇನ್ನಿತರ ವಿಚಾರಗಳ ಬಗ್ಗೆ ಯುವಕರಿಗೆ ಅರಿವು, ಜಾಗೃತಿ ಮೂಡಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಮತದಾನದ ಪ್ರಮಾಣ ಹೆಚ್ಚಾಗುವುದಿಲ್ಲ. ಹೀಗಾದರೆ ಪ್ರಜಾಪ್ರಭುತ್ವ ಬಲಯುತ ಆಗುವುದು ಹೇಗೆ? ಎಂದು ಪ್ರಶ್ನಿಸಿದರು.
ಇವಿಎಂ ಯಂತ್ರದ ಬಗ್ಗೆ ಅನುಮಾನ ಬೇಡ :
ಕಳೆದ 20 ವರ್ಷಗಳಿಂದ ಇವಿಎಂ ಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇವಿಎಂ ಯಂತ್ರ ದೇಶದಲ್ಲಿ ಸೂಕ್ತ ರೀತಿ ಕಾರ್ಯನಿರ್ವಹಿಸುತ್ತಿದೆ. ಯಂತ್ರದಲ್ಲಿನ ಮಾಹಿತಿ ತಿರುಚಲು ಆಗದು. ಮಹಿಳೆಯರ ಚುನಾವಣೆಯಲ್ಲಿ ಮತದಾನ ಮಾಡುವ ಪ್ರಮಾಣ ಹೆಚ್ಚಾಗಿದೆ. ಇದು ಆಶಾದಾಯಕ ಬೆಳವಣಿಗೆ. ಚುನಾವಣೆ ನಡೆಯುವ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರಿದೆ ಎಂದು ನೋಡಿಕೊಂಡು ಮತದಾನ ಮಾಡಬೇಕು.
ಪದವಿ ಪಡೆದವರು ವಿಧಾನಪರಿಷತ್ ನ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಹೇಗೆ ಮತದಾನ ಮಾಡುವುದು ಎಂದು ತಮಗೂ ಸೇರಿದಂತೆ ಬಹಳ ಜನರಿಗೆ ಗೊತ್ತಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೇಳಿದರು.
ಈ ಪ್ರಶಸ್ತಿ ಬಿಬಿಎಂಪಿಗೆ ಬಂದಿರುವ ಪ್ರಶಸ್ತಿ :
ಬೆಂಗಳೂರಿನ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಪ್ರಶಸ್ತಿ ಪಡೆದು ಮಾತನಾಡುತ್ತಾ, ತನಗೆ ಸಿಕ್ಕಿರುವ ಈ ಪ್ರಶಸ್ತಿ ಬಿಬಿಎಂಪಿಗೆ ನೀಡಿರುವ ಪ್ರಶಸ್ತಿ. ಕಳೆದ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 50 ಸಾವಿರ ಸಿಬ್ಬಂದಿ ತೊಡಗಿಕೊಂಡಿದ್ದರು. ನಗರದಲ್ಲಿ 1.30 ಕೋಟಿ ಜನಸಂಖ್ಯೆಯಲ್ಲಿ 90.33 ಲಕ್ಷ ಮತದಾರರಿದ್ದಾರೆ. 8,500 ಮತದಾರರಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿದ ಪರಿಣಾಮ, ರಾಜರಾಜೇಶ್ವರಿನಗರ ವಿಧಾನಸಭೆಯ ಉಪಚುನಾವಣೆ ನಡೆಸಲು ಸಾಧ್ಯವಾಯಿತು ಎಂದು ಹೇಳಿದರು.
ಇಂದಿನಿಂದ ಮತದಾರರಿಗೆ ಡಿಜಿಟಲ್ ಇ- ಎಪಿಕ್ ಕಾರ್ಡ್ :
ಮುಖ್ಯ ಚುನಾವಣಾ ಅಧಿಕಾರಿ ಡಾ. ಸಂಜೀವ್ ಕುಮಾರ್ ಮಾತನಾಡಿ, ರಾಷ್ಟ್ರಾದ್ಯಂತ ರಾಷ್ಟ್ರ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಸೋಮವಾರದಿಂದ ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿಯ ಡಿಜಿಟಲ್ ಎಪಿಕ್ ಕಾರ್ಡ್ ಪಡೆದುಕೊಳ್ಳಬಹುದು. ಈ ಕುರಿತ ಹೊಸ ಆಪ್ ಅನ್ನು ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಾಗಿದೆ.
ಇ- ಎಪಿಕ್ ಕಾರ್ಡ್ ಡೌನ್ ಲೋಡ್ ಗಾಗಿ ಈ ಲಿಂಕ್ ಬಳಸಿ
ಮತದಾರರ ಐಡಿಕಾರ್ಡನ್ನು ಅನ್ಯ ಬಳಕೆಗೆ ಬಳಸಬಾರದು. ಮತದಾರರಲ್ಲಿ ಚುನಾವಣೆ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮತದಾರರ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈ ಬಾರಿ 5 ಲಕ್ಷ ಮತದಾರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈಗ ರಾಜ್ಯದಲ್ಲಿ ಒಟ್ಟಾರೆ 5.21 ಕೋಟಿ ಮತದಾರರಿದ್ದಾರೆ. 80 ವರ್ಷ ದಾಟಿದ ಮತದಾರರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಯಲ್ಲಿ ಹೆಚ್ಚು ಮತದಾನವಾಗಲು ರಾಜ್ಯ ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ವಿವಿಧ ಚುನಾವಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ, ಆಯೋಗದಿಂದ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಇದೇ ವೇಳೆ ಹೊಸ ಮತದಾರರಿಗೆ, ವಿಕಲ ಚೇತನರಿಗೆ ಹಾಗೂ ಇತರರಿಗೆ ಮತದಾರರ ಗುರುತಿನ ಚೀಟಿ ನೀಡಲಾಯಿತು.