ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯಾವ ಮರಗಳನ್ನು ನೋಡಿದ್ರೂ ಕಮರ್ಷಿಯಲ್ ಪೋಸ್ಟರ್, ಮೊಳೆ, ಪಿನ್ ನಿಂದಲೇ ತುಂಬಿ ಹೋಗಿವೆ.
ವಾಣಿಜ್ಯ ಹಿತಾಸಕ್ತಿಗಳಿಗೆ ಮರಗಳು ಬಲಿಯಾಗ್ತಿರೋದನ್ನು ತಪ್ಪಿಸಲು ನಗರದಲ್ಲಿ ಸದ್ದಿಲ್ಲದೆ ನಾಗರೀಕರು, ಐ-ಕೇರ್ ಬ್ರಿಗೇಡ್ ಸಾಮಾಜಿಕ ಸಂಘಟನೆ, ಇನ್ನರ್ ವೀಲ್ ಬೆಂಗಳೂರು ಸೇರಿದಂತೆ ವಿವಿಧ ಸಂಘಟನೆಗಳು “ಫ್ರೀ ದಿ ಟ್ರೀ” ಎಂಬ ಅಭಿಯಾನ ಪ್ರಾರಂಭಿಸಿವೆ.
ಫಸ್ಟ್ ರ್ಯಾಂಕ್ ಖ್ಯಾತಿಯ ನಟ ಗುರುನಂದನ್ ಈ ಅಭಿಯಾನಕ್ಕೆ ಇತ್ತೀಚೆಗೆ ಚಾಲನೆ ನೀಡಿದರು.
ದಿನೇ ದಿನೇ ಹಸಿರು ಹೊದಿಕೆ ಕಡಿಮೆ ಆಗ್ತಿದೆ. ಇರೋ ಮರಗಳಿಗೂ ಬ್ಯಾನರ್, ಪೋಸ್ಟರ್ ಹಾಕೋಕೆ ಮೊಳೆ, ಪಿನ್, ಕಬ್ಬಿಣದ ರಾಡ್ ಹೊಡೆದ ಕಾರಣ ಮರದ ಆರೋಗ್ಯಕ್ಕೂ ತೊಂದರೆ ಆಗುತ್ತಿದೆ.
ಇದು ಸಾಲದು ಅಂತ ಮರಗಳಿಗೆ ಈ ಟಿವಿ ಕೇಬಲ್ ವೈರ್ ಸುತ್ತುವುದು, ಆಪ್ಟಿಕಲ್ ಕೇಬಲ್ ವೈರ್ ಗಳನ್ನು, ಅದರ ಬೂಸ್ಟರ್ ಗಳನ್ನು ಕಟ್ಟಿಡುವ ಕೆಟ್ಟ ಪದ್ಧತಿ ಜಾರಿಗೆ ಹಲವು ವರ್ಷ ಆಯಿತು.
ಅಭಿಯಾನ ಅಂಗವಾಗಿ ಸಂಜಯನಗರದ 80 ಅಡಿ ರಸ್ತೆಯಲ್ಲಿ ಇಂತಹ ಮರಗಳಿಗೆ ಹಾಕಿರುವ ಪೋಸ್ಟರ್, ಬ್ಯಾನರ್, ಮೊಳೆ, ಪಿನ್ ಗಳನ್ನು ಮಕ್ಕಳು, ಸ್ಥಳೀಯ ನಾಗರೀಕರು, ಐ-ಕೇರ್ ಬ್ರಿಗೇಡ್ ಪೂರ್ಣಿಮಾ ಶೆಟ್ಟಿ, ಮತ್ತಿತರ ಸಾಮಾಜಿಕ ಕಾರ್ಯಕರ್ತರು ತೆರವುಗೊಳಿಸಿದರು.
ನಗರದ ಮರವೈದ್ಯ ಟ್ರೀ ವಿಜಯ್ ನಿಶಾಂತ್, ಈ ರೀತಿ ಮರಗಳಿಗೆ ಪಿನ್, ಮೊಳೆ, ಕಬ್ಬಿಣದ ರಾಡ್ ಹೊಡೆಯುವುದರಿಂದ, ಪೋಸ್ಟರ್, ಕೇಬಲ್ ಹಾಕಿ ಸುತ್ತುವುದರಿಂದ ಮರಗಳ ಆರೋಗ್ಯದ ಮೇಲೆ ಆಗುವ ಪರಿಣಾಮ ಮತ್ತು ಇಂತಹ ಮರಗಳಿಗೆ ಚಿಕಿತ್ಸೆ ನೀಡುವ ವಿಧಾನವನ್ನು ಸ್ಥಳದಲ್ಲಿಯೇ ನೆರೆದಿದ್ದವರಿಗೆ ತೋರಿಸಿಕೊಟ್ಟರು.
ಅಭಿಯಾನದಲ್ಲಿ ಪಾಲ್ಗೊಂಡವರೂ, ಹಲವು ಮರಗಳ ಟೊಂಗೆ, ಗಾಯವಾದ ಹೊರಮೈ ಭಾಗಕ್ಕೆ ಔಷಧೀಯ ದ್ರಾವಣವನ್ನು ಲೇಪಿಸಿ ಮರಗಳ ಆರೈಕೆ ಮಾಡಿದರು.
ಬಿಬಿಎಂಪಿ ಆಡಳಿತಗಾರರಾದ ಗೌರವ್ ಗುಪ್ತಾ ಕೂಡ ಇತ್ತೀಚೆಗೆ ಖಾಸಗಿ ಸರ್ಕಾರೇತರ ಸಂಘಟನೆಗಳ ಜೊತೆ ಸೇರಿ ಇದೇ ರೀತಿಯ ಅಭಿಯಾನ ಕೈಗೊಂಡಿದ್ದರು. ಆದರೆ ಪರಿಣಾಮಕಾರಿಯಾಗಿ ಈ ಅಭಿಯಾನ ಸಾಕಾರಗೊಳ್ಳಲಿಲ್ಲ.
ನಗರದಲ್ಲಿನ ಸಾವಿರಾರು ನಾಗರೀಕ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು ಸ್ವಯಂಪ್ರೇರಿತವಾಗಿ ಇಂತಹ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ಮರಗಳ ಆರೋಗ್ಯ ಮತ್ತು ಪರಿಸರವನ್ನು ಕಾಪಾಡಲು ಸಾಧ್ಯವಾಗಲಿದೆ.