ಬಳ್ಳಾರಿ : ರಾಜ್ಯ ಸರಕಾರವು ಶೀಘ್ರವೇ ಲವ್ ಜಿಹಾದ್ ವಿರುದ್ಧ ಕಾಯ್ದೆ ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯದ ಮಹಿಳೆಯರಿಗೆ ರಕ್ಷಣೆ ಒದಗಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಭಾನುವಾರ ಇಲ್ಲಿ ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವು ನುಡಿದಂತೆ ನಡೆಯುತ್ತಿದೆ. ಈಗಾಗಲೇ ಅದು ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೊಳಿಸಿದೆ. ಇದೇ ರೀತಿ ಲವ್ ಜಿಹಾದ್ ವಿರುದ್ಧ ಕಾಯ್ದೆ ಜಾರಿಗೆ ತರಲು ಬದ್ಧವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಹಿಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಮಹಿಳೆಯರಿಗೆ ಅನ್ಯಾಯ ಆಗುವುದನ್ನು ತಡೆಯುವಂತೆ ಕೋರ್ಟ್ ನೀಡಿದ್ದ ತೀರ್ಪನ್ನೇ ಅನುಷ್ಠಾನಗೊಳಿರಲಿಲ್ಲ. ಮಹಿಳೆಗೆ ಎಲ್ಲೇ ಅನ್ಯಾಯವಾದರೂ ಅದನ್ನು ತಡೆಯಬೇಕು ಎಂಬ ಚಿಂತನೆಯನ್ನು ಜಾರಿಗೊಳಿಸಲು ಕೇಂದ್ರ ಸರಕಾರವು ತ್ರಿವಳಿ ತಲಾಖ್ ರದ್ದು ಮಾಡುವ ಮಹತ್ವದ ನಿರ್ಧಾರ ಮಾಡಿದೆ.
ಕೇಂದ್ರದಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮರ್ಥ ನಾಯಕತ್ವದಲ್ಲಿ ಸರಕಾರಗಳು ಅಭಿವೃದ್ಧಿಪರವಾಗಿ ಮತ್ತು ಮಹಿಳೆಯರ ರಕ್ಷಣೆಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಪರಿವರ್ತನೆಯ ಯುಗ ಈಗಿನದು. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ವಿವರವನ್ನು ಜನರಿಗೆ ತಲುಪಿಸಬೇಕು. ಗೀತಾ ವಿವೇಕಾನಂದರ ತಂಡವು ಸಮರ್ಥವಾಗಿ ಕಾರ್ಯ ನಿರ್ವಹಿಸಿ ಪ್ರತಿ ಬೂತ್‍ನಲ್ಲಿ ಮಹಿಳಾ ಕಾರ್ಯಕರ್ತರನ್ನು ಸಂಘಟಿಸಬೇಕು ಎಂದು ಕಿವಿಮಾತು ಹೇಳಿದರು.
ನೀರು, ಭೂಮಿ, ಆಕಾಶ ಸೇರಿದಂತೆ ಎಲ್ಲಡೆ ಹಗರಣಗಳಿದ್ದ ಕಾಂಗ್ರೆಸ್- ಯುಪಿಎ 10 ವರ್ಷಗಳ ಆಡಳಿತದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಹಗರಣಗಳದ್ದು ನಿರಂತರ ಸುದ್ದಿಯಾಗುತ್ತಿತ್ತು. ವಂಶಾಡಳಿತ, ಜಾತಿ, ಮತದ ಆಧಾರದ ರಾಜಕಾರಣಕ್ಕೆ ಜನರು ಮುಕ್ತಿ ಬಯಸಿ ಹಗರಣಮುಕ್ತ ಮತ್ತು ಅಭಿವೃದ್ಧಿ ಪರ ಸರಕಾರಕ್ಕಾಗಿ ನರೇಂದ್ರ ಮೋದಿ ಅವರ ನೇತೃತ್ವವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದಾರೆ ಎಂದು ಅವರು ವಿವರಿಸಿದರು.
ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸಿದ ಕಾಂಗ್ರೆಸ್ ಪಕ್ಷವು ತುಷ್ಟೀಕರಣದ ನೀತಿ ತನ್ನದಾಗಿಸಿಕೊಂಡಿತ್ತು. ಅಲ್ಪಸಂಖ್ಯಾತ- ಬಹುಸಂಖ್ಯಾತರ ವಿಭಜನೆ, ಗೋಹತ್ಯಾ ನಿಷೇಧದ ವಿರೋಧ, ರಾಮಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿತು. 370ನೇ ವಿಧಿ ರದ್ದತಿಯನ್ನೂ ವಿರೋಧಿಸಿತು. ಇದೆಲ್ಲಾ ಕಾರಣಕ್ಕಾಗಿ ಜನರು ಕಾಂಗ್ರೆಸ್ಸನ್ನು ತಿರಸ್ಕರಿಸಿ, ಜನಪರ- ರಾಷ್ಟ್ರವಾದದ ಪಕ್ಷವಾದ ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದರು.
ದೇಶದ ವಿಭಜನೆ ತಡೆಯಲು ಶ್ಯಾಮಪ್ರಸಾದ ಮುಖರ್ಜಿ ಅವರು ಭಾರತೀಯ ಜನಸಂಘ ಸ್ಥಾಪಿಸಿದರು. ಬಿಜೆಪಿ ನುಡಿದಂತೆ ನಡೆದ ಪಾರ್ಟಿ. ಅದು 370ನೇ ವಿಧಿ ರದ್ದು ಮಾಡಿ ಕಾಶ್ಮೀರಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ಸಮಸ್ಯೆ ಪರಿಹಾರ ಮಾಡಿದೆ. ದೇಶದೊಳಗೆ ದೇವಸ್ಥಾನವೊಂದಕ್ಕೆ ಶಿಲಾನ್ಯಾಸ ಮಾಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಪುರಂದೇಶ್ವರಿ, ಮಹಿಳಾಮೋರ್ಚಾ ರಾಜ್ಯಾಧ್ಯಕ್ಷರಾದ
ಗೀತಾ ವಿವೇಕಾನಂದ, ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ, ಸಂಸದರಾದ ದೇವೇಂದ್ರಪ್ಪ ಹಾಗೂ ಮತ್ತಿತರು ಉಪಸ್ಥಿತರಿದ್ದರು.