ನವದೆಹಲಿ, ಮಾ.19 www.bengaluruwire.com : ಭಾರತದ ಇಂಧನ ವಲಯದಲ್ಲಿ ಅಭೂತಪೂರ್ವ ಬದಲಾವಣೆ ಗಾಳಿ ಬೀಸುತ್ತಿದೆ. ಒಂದೊಮ್ಮೆ ಗಗನಕುಸುಮವಾಗಿದ್ದ ನವೀಕರಿಸಬಹುದಾದ ಇಂಧನ (Renewable Energy) ಈಗ ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿದೆ.
25 ವರ್ಷಗಳ ಹಿಂದೆ ಪ್ರತಿ ಯೂನಿಟ್ ವಿದ್ಯುತ್ ಉತ್ಪಾದಿಸಲು ₹20 ವೆಚ್ಚವಾಗುತ್ತಿದ್ದ ಕಡೆ ಈಗ ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಕೇವಲ ₹2.15ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಇಂಧನ ಕ್ಷೇತ್ರದಲ್ಲಿ ಭಾರತದ ಮೈಲುಗಲ್ಲು:
“ವಿಯೋನ್ ವರ್ಲ್ಡ್ ಪಲ್ಸ್” ಮಾಧ್ಯಮ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸೌರಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ಇಂದು ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದಾಗಿ 2030ರ ವೇಳೆಗೆ 500 ಗಿಗಾ ವ್ಯಾಟ್ ಇಂಧನ ಉತ್ಪಾದಿಸುವ ಗುರಿಯನ್ನು ಭಾರತ ವೇಗವಾಗಿ ತಲುಪುತ್ತಿದೆ ಎಂದರು.

ವೆಚ್ಚದಲ್ಲಿ ಭಾರಿ ಇಳಿಕೆ – ಗ್ರಾಹಕರಿಗೆ ಲಾಭ:
ಹಳೆಯ ಉಷ್ಣ ವಿದ್ಯುತ್ ಸ್ಥಾವರಗಳ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ನವೀಕರಿಸಬಹುದಾದ ಇಂಧನವು ಅತ್ಯಂತ ಅಗ್ಗವಾಗಿದೆ.
ಸೌರ ಮತ್ತು ಪವನ ಶಕ್ತಿ: ಪ್ರತಿ ಯೂನಿಟ್‌ಗೆ ₹2.15 ರಿಂದ ₹2.80 (ಸಂಗ್ರಹಣೆ ವೆಚ್ಚ ಸೇರಿ).
ಉಷ್ಣ ವಿದ್ಯುತ್ (Thermal Power): ಪ್ರತಿ ಯೂನಿಟ್‌ಗೆ ಸುಮಾರು ₹7-8 ವೆಚ್ಚವಾಗುತ್ತದೆ.
ಉಳಿತಾಯ: ಪರಿಸರ ಪೂರಕ ಇಂಧನ ಬಳಕೆಯಿಂದ ಪ್ರತಿ ಯೂನಿಟ್‌ಗೆ ಸರಾಸರಿ ₹2 ರಿಂದ ₹2.5 ಉಳಿತಾಯವಾಗುತ್ತಿದೆ.
ಪಿಎಂ ಸೂರ್ಯಘರ್ ಮತ್ತು ಕುಸುಮ್ ಯೋಜನೆ ಯಶಸ್ಸು:
ದೇಶದಲ್ಲಿ ಈಗಾಗಲೇ 31 ಲಕ್ಷ ಮನೆಗಳು ಸೇರಿದಂತೆ ಒಟ್ಟು 55 ಲಕ್ಷ ವಿಕೇಂದ್ರೀಕೃತ ಘಟಕಗಳಿಂದ 35 GW ಇಂಧನ ಉತ್ಪಾದನೆಯಾಗುತ್ತಿದೆ. PM ಸೂರ್ಯಘರ್ ಮತ್ತು PM ಕುಸುಮ್ ಯೋಜನೆಗಳ ಅಡಿಯಲ್ಲಿ 23 ಲಕ್ಷ ರೈತರ ನೀರಾವರಿ ಪಂಪ್‌ಗಳನ್ನು ಸೌರಶಕ್ತಿಗೆ ಪರಿವರ್ತಿಸುವ ಮೂಲಕ ಕೃಷಿ ವಲಯದಲ್ಲೂ ಕ್ರಾಂತಿ ಮಾಡಲಾಗಿದೆ.
ವಿಶ್ವದಲ್ಲೇ ಅಗ್ಗದ ಗ್ರೀನ್ ಹೈಡ್ರೋಜನ್:
ಭಾರತವು ಕೇವಲ ವಿದ್ಯುತ್ ಮಾತ್ರವಲ್ಲದೆ, ಭವಿಷ್ಯದ ಇಂಧನಗಳಾದ ಗ್ರೀನ್ ಹೈಡ್ರೋಜನ್ (₹279/kg) ಮತ್ತು ಗ್ರೀನ್ ಅಮೋನಿಯಾ (₹45.70/kg) ಉತ್ಪಾದನೆಯಲ್ಲೂ ವಿಶ್ವದಲ್ಲೇ ಅತ್ಯಂತ ಕಡಿಮೆ ದರವನ್ನು ಹೊಂದಿದೆ. ಇದು ಕೈಗಾರಿಕಾ ಬಳಕೆಗೆ ಹೊಸ ಪಥವನ್ನು ಸೃಷ್ಟಿಸಿದೆ. ರಸಗೊಬ್ಬರ ಉದ್ಯಮದಲ್ಲಿ ಶೇ. 28ರಷ್ಟು ಹಸಿರು ಅಮೋನಿಯಾ ಬಳಸುವ ಮೂಲಕ ಆಮದು ಅವಲಂಬನೆಯನ್ನು ತಗ್ಗಿಸಿ ‘ಆತ್ಮನಿರ್ಭರ ಭಾರತ’ಕ್ಕೆ ಶಕ್ತಿ ತುಂಬಲಾಗುವುದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.



















