ಬೆಂಗಳೂರು, ಮಾ.16 www.bengaluruwire.com: ರಾಜ್ಯದ ಹಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿಯ ತೀವ್ರ ಕೊರತೆ ಎದುರಾಗಿದ್ದು, ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ಹಣ ನೀಡಿ ಖಾಸಗಿ ಜಮೀನು ಖರೀದಿಸಲು ಸರ್ಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಔರಾದ್ ಶಾಸಕ ಪ್ರಭು ಚೌವ್ಹಾಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಏಳು ದಶಕಗಳಿಂದ ಭೂಮಿಯನ್ನು ವಿವಿಧ ಯೋಜನೆಗಳಿಗೆ ಮಂಜೂರು ಮಾಡಿದ್ದರಿಂದ ಇಂದು ಸ್ಮಶಾನಕ್ಕೂ ಜಾಗವಿಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಳೆದ 3 ವರ್ಷದಲ್ಲಿ ₹58 ಕೋಟಿ ಖರ್ಚು:
ಸ್ಮಶಾನ ಭೂಮಿಯ ಸಮಸ್ಯೆ ನೀಗಿಸಲು ಹೈಕೋರ್ಟ್ ಸಹ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಸ್ಮಶಾನಕ್ಕಾಗಿ ಜಮೀನು ಖರೀದಿಸಲು ಸರ್ಕಾರ ಒಟ್ಟು 58 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ಔರಾದ್ ತಾಲೂಕಿನ ಸಮಸ್ಯೆ ಬಗೆಹರಿಸಲು ಸೂಚನೆ:
ಔರಾದ್ ತಾಲೂಕಿನ 154 ವಸತಿ ಪ್ರದೇಶಗಳ ಪೈಕಿ 9 ಕಡೆ ಸ್ಮಶಾನವಿಲ್ಲ. ಇದರಲ್ಲಿ 2 ಗ್ರಾಮಗಳಿಗೆ ವಾರದೊಳಗೆ ಸರ್ಕಾರಿ ಭೂಮಿ ಕಾಯ್ದಿರಿಸಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ಉಳಿದ 7 ಗ್ರಾಮಗಳಿಗೆ ಪಕ್ಕದ ಹಳ್ಳಿಯ ಭೂಮಿ ಅಥವಾ ಖಾಸಗಿ ಜಮೀನು ಖರೀದಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಮೂಲಸೌಕರ್ಯಕ್ಕೆ ನರೇಗಾ ನೆರವು:
ಸ್ಮಶಾನಗಳಿಗೆ ಕಾಂಪೌಂಡ್ ಮತ್ತು ನೀರಿನ ವ್ಯವಸ್ಥೆಯಂತಹ ಮೂಲಭೂತ ಸೌಲಭ್ಯಗಳನ್ನು ನರೇಗಾ ಯೋಜನೆಯಡಿ ಒದಗಿಸಲು ಗ್ರಾಮ ಪಂಚಾಯತ್‌ಗಳಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.




















