ನವದೆಹಲಿ, ಮಾ.10 www.bengaluruwire.com: ದೇಶಾದ್ಯಂತ ಗೃಹ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ವಿತರಣಾ ನಿಯಮಗಳಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಂತಹ ಪರಿಸ್ಥಿತಿಯಿಂದ ಉಂಟಾಗಿರುವ ಅನಿಶ್ಚಿತತೆ ಮತ್ತು ಗ್ರಾಹಕರಲ್ಲಿ ಉಂಟಾಗಿರುವ ಆತಂಕವನ್ನು ಹೋಗಲಾಡಿಸಲು ಇನ್ನುಮುಂದೆ ಒಂದು ಸಿಲಿಂಡರ್ ಪಡೆದ 25 ದಿನಗಳ ನಂತರವಷ್ಟೇ ಮುಂದಿನ ಸಿಲಿಂಡರ್ ಬುಕ್ ಮಾಡಲು ಅವಕಾಶ ನೀಡಲಾಗಿದೆ.
ಮಾರ್ಚ್ 7 ರಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದ್ದು, ಗ್ಯಾಸ್ ಏಜೆನ್ಸಿಗಳ ಸಾಫ್ಟ್‌ವೇರ್‌ನಲ್ಲಿ ಈಗಾಗಲೇ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದೆ ಬುಕ್ಕಿಂಗ್‌ಗಳ ನಡುವೆ ಇದ್ದ 21 ದಿನಗಳ ಮಿತಿಯನ್ನು ಈಗ 25 ದಿನಗಳಿಗೆ ಏರಿಸಲಾಗಿದೆ.
ತಡೆರಹಿತ ಪೂರೈಕೆಗೆ ಆದ್ಯತೆ:

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ತೈಲ ಆಮದಿನಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕದಲ್ಲಿ ಅನೇಕ ಗ್ರಾಹಕರು ಮುಂಗಡವಾಗಿ ಸಿಲಿಂಡರ್ ಬುಕ್ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗುವುದನ್ನು ತಡೆಯಲು ತೈಲ ಮಾರುಕಟ್ಟೆ ಕಂಪನಿಗಳು (OMC) ಈ ನಿರ್ಧಾರ ತಳೆದಿವೆ. “ಗ್ರಾಹಕರು ಗಾಬರಿಯಾಗುವ ಅಗತ್ಯವಿಲ್ಲ, ದೇಶದಲ್ಲಿ ಸಾಕಷ್ಟು ಅನಿಲ ದಾಸ್ತಾನು ಇದೆ,” ಎಂದು ಪೆಟ್ರೋಲಿಯಂ ಸಚಿವಾಲಯ ಭರವಸೆ ನೀಡಿದೆ.
ವಾಣಿಜ್ಯ ಸಿಲಿಂಡರ್ ದರ ಏರಿಕೆ:
ಗೃಹ ಬಳಕೆಯ ಸಿಲಿಂಡರ್ ಬುಕ್ಕಿಂಗ್ ನಿಯಮ ಬದಲಾದರೆ, ವಾಣಿಜ್ಯ ಬಳಕೆಯ (19 ಕೆಜಿ) ಸಿಲಿಂಡರ್ ದರದಲ್ಲಿ ಏರಿಕೆಯಾಗಿದೆ. ಮಾರ್ಚ್ ತಿಂಗಳಲ್ಲಿ ಪ್ರತಿ ಸಿಲಿಂಡರ್ ಮೇಲೆ ಸುಮಾರು ₹28 ರಿಂದ ₹31 ರವರೆಗೆ ಬೆಲೆ ಏರಿಕೆಯಾಗಿದ್ದು, ಹೋಟೆಲ್ ಮತ್ತು ಸಣ್ಣ ಉದ್ದಿಮೆದಾರರ ಮೇಲೆ ಇದು ಹೊರೆಯಾಗಲಿದೆ.
ಸುರಕ್ಷತೆಗಾಗಿ ಇ-ಕೆವೈಸಿ (e-KYC) ಕಡ್ಡಾಯ:
ಹೊಸ ನಿಯಮಗಳ ಜೊತೆಗೆ, ಗ್ಯಾಸ್ ಸಿಲಿಂಡರ್ ಸುರಕ್ಷತೆ ಮತ್ತು ಪಾರದರ್ಶಕತೆಗಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಿದವರಿಗೆ ಮಾತ್ರ ವಿತರಣಾ ಕೋಡ್ (DAC) ಮೂಲಕ ಸಿಲಿಂಡರ್ ನೀಡಲಾಗುವುದು. ಅಲ್ಲದೆ, 2025ರ ಹೊಸ ಅನಿಲ ಸಿಲಿಂಡರ್ ತಿದ್ದುಪಡಿ ನಿಯಮಗಳನ್ವಯ ಬಾರ್‌ಕೋಡಿಂಗ್ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.



















