ಬೆಂಗಳೂರು, ಮಾ.10 www.bengaluruwire.com: ಕರ್ನಾಟಕ ರಾಜ್ಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿದೆ ಎಂಬ ವದಂತಿಗಳಿಗೆ ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ (AKFPT) ತೆರೆ ಎಳೆದಿದೆ. ರಾಜ್ಯದಲ್ಲಿ ಇಂಧನ ಸಂಗ್ರಹ ಸಮರ್ಪಕವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಫೆಡರೇಷನ್ ಸ್ಪಷ್ಟಪಡಿಸಿದೆ.
ಸಮರ್ಪಕ ಸಂಗ್ರಹ ಮತ್ತು ಪೂರೈಕೆ:
ಮಾರ್ಚ್ 10 ರಂದು ಪ್ರಕಟಣೆ ಹೊರಡಿಸಿರುವ AKFPT, ಸಾರ್ವಜನಿಕ ಕ್ಷೇತ್ರದ ಪ್ರಮುಖ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ತನ್ನ ಎಲ್ಲಾ ಟರ್ಮಿನಲ್ ಮತ್ತು ಡೆಪೋಗಳಲ್ಲಿ ಸಾಕಷ್ಟು ಪ್ರಮಾಣದ ಇಂಧನವನ್ನು ಹೊಂದಿವೆ ಎಂದು ತಿಳಿಸಿದೆ.
ಬಂಕ್‌ಗಳು ಎಂದಿನಂತೆ ಕಾರ್ಯನಿರ್ವಹಣೆ:

“ಕರ್ನಾಟಕದ ಎಲ್ಲಾ ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಗ್ರಾಹಕರ ದೈನಂದಿನ ಬೇಡಿಕೆಗೆ ತಕ್ಕಂತೆ ಪೆಟ್ರೋಲ್ (MS) ಮತ್ತು ಡೀಸೆಲ್ (HSD) ಲಭ್ಯವಿದೆ. ಪೂರೈಕೆ ಸರಪಳಿಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ,” ಎಂದು ಫೆಡರೇಷನ್ ಮಾಹಿತಿ ನೀಡಿದೆ.
ಎಕೆಎಫ್ ಟಿಯಿಂದ ಸಾರ್ವಜನಿಕರಿಗೆ ಮನವಿ:
ಇಂಧನ ಅಭಾವದ ವದಂತಿ ನಂಬಿ ಸಾರ್ವಜನಿಕರು ಮುಗಿಬಿದ್ದು ಇಂಧನ ಸಂಗ್ರಹಿಸುವುದು ಅಥವಾ ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಬಾರದು. ಇಂಧನ ಸರಬರಾಜು ವ್ಯವಸ್ಥೆ ಸ್ಥಿರವಾಗಿದ್ದು, ಸರಕಾರ ಮತ್ತು ತೈಲ ಕಂಪನಿಗಳೊಂದಿಗೆ ಫೆಡರೇಷನ್ ನಿರಂತರ ಸಂಪರ್ಕದಲ್ಲಿದೆ ಎಂದು ಸಂಘಟನೆ ಭರವಸೆ ನೀಡಿದೆ.


















