ಬೆಂಗಳೂರು, ಮಾ.10 www.bengaluruwire.com : ಸಿಲಿಕಾನ್ ಸಿಟಿಯ ಯಲಹಂಕದಲ್ಲಿ ನಡೆದಿದ್ದ ಭಾರಿ ಮೊತ್ತದ ಕಳವು ಪ್ರಕರಣವನ್ನು ಭೇದಿಸುವಲ್ಲಿ ಯಲಹಂಕ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನೆಗಳ ಬೀಗ ಮುರಿದು ನುಗ್ಗುತ್ತಿದ್ದ ಹೊರರಾಜ್ಯದ ಕುಖ್ಯಾತ ಕಳ್ಳನನ್ನು ರಾಜಸ್ಥಾನದಲ್ಲಿ ಬಂಧಿಸಿರುವ ಪೊಲೀಸರು, ಆತನಿಂದ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಾಳೆ ವಿವಿಧೆಡೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ರಾಜಸ್ಥಾನದಲ್ಲಿ ಸಿಕ್ಕಿಬಿದ್ದ ಖದೀಮ:
ಯಲಹಂಕ ಉಪನಗರದ ನ್ಯಾಯಾಂಗ ಬಡಾವಣೆಯ ನಿವಾಸಿಯೊಬ್ಬರ ಮನೆಯಲ್ಲಿ ಫೆಬ್ರವರಿ 15ರಂದು ಕಿಟಕಿಯ ಗ್ರಿಲ್ ಮುರಿದು ಕಳ್ಳತನವಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ತಾಂತ್ರಿಕ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಫೆಬ್ರವರಿ 18ರಂದು ರಾಜಸ್ಥಾನದ ಗಂಗಾ ನಗರ ಜಿಲ್ಲೆಯ ಸೂಯತ್‌ಘಡ್‌ನಲ್ಲಿ ಆರೋಪಿಯನ್ನು ಸೆರೆಹಿಡಿದರು. ಆತನಿಂದ 1 ಕೆ.ಜಿ 833 ಗ್ರಾಂ ತೂಕದ ವಜ್ರ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಡಿಸಿಪಿ ಮಿಥುನ್ ಕುಮಾರ್ ಹಾಗೂ ಎಸಿಪಿ ನರಸಿಂಹಮೂರ್ತಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಎಂ.ಎಲ್. ಕೃಷ್ಣಮೂರ್ತಿ ತಂಡ ನಡೆಸಿದೆ.
ನಗರದ ಹಲವೆಡೆ ಮಾ.12 ಮದ್ಯ ಮಾರಾಟ ಬಂದ್:
ಇನ್ನೊಂದೆಡೆ, ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಮಾರ್ಚ್ 12ರಂದು ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರತಿಭಟನೆಯ ವೇಳೆ ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಅಶಾಂತಿ ಎಬ್ಬಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ್ದಾರೆ.
ಎಲ್ಲೆಲ್ಲಿ ನಿಷೇಧ?:
ಪಶ್ಚಿಮ ವಿಭಾಗ: ಉಪ್ಪಾರಪೇಟೆ, ಸಿಟಿ ಮಾರ್ಕೆಟ್, ಕಾಟನ್‌ಪೇಟೆ, ಕಲಾಸಿಪಾಳ್ಯ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿ.
ಕೇಂದ್ರ ವಿಭಾಗ: ಶೇಷಾದ್ರಿಪುರಂ, ಹೈಗ್ರೌಂಡ್ಸ್ ಮತ್ತು ಹೂಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿ.ಸಮಯ: ಮಾರ್ಚ್ 12ರ ಮುಂಜಾನೆ 1 ಗಂಟೆಯಿಂದ ಮಾರ್ಚ್ 13ರ ಬೆಳಿಗ್ಗೆ 10 ಗಂಟೆಯವರೆಗೆ ಎಲ್ಲಾ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲು ಸೂಚಿಸಲಾಗಿದೆ.



















