ಬೆಂಗಳೂರು, ಜು.11 www.bengaluruwire.com : ವಾಣಿಜ್ಯ ತೆರಿಗೆ ಇಲಾಖೆಯು ನಗರದ ಸಣ್ಣಪುಟ್ಟ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಜಿಎಸ್‌ಟಿ ಪಾವತಿಸುವಂತೆ ದಿಢೀರ್ ಶೋಕಾಸ್ ನೋಟಿಸ್‌ಗಳನ್ನು ನೀಡುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಅದರಲ್ಲೂ, ಡಿಜಿಟಲ್ ವಹಿವಾಟುಗಳನ್ನು ಆಧಾರವಾಗಿಟ್ಟುಕೊಂಡು ಹೊರಡಿಸಲಾಗಿರುವ ಈ ನೋಟಿಸ್‌ಗಳು, ಕೋವಿಡ್ ಸಂಕಷ್ಟದಿಂದ ಇನ್ನೂ ಚೇತರಿಸಿಕೊಳ್ಳದ ವ್ಯಾಪಾರಿಗಳ ಮೇಲೆ ಬರೆ ಎಳೆದಿವೆ. ಈ ಬೆಳವಣಿಗೆಯನ್ನು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ರವಿಶೆಟ್ಟಿ ಅವರು ಬೆಂಗಳೂರು ವೈರ್ ಜೊತೆ ಮಾತನಾಡಿ ತೀವ್ರವಾಗಿ ಖಂಡಿಸಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ವ್ಯಾಪಾರಿಗಳ ಆತಂಕ: ಜಯರಾಮ್ ಪೂಜಾರಿ ಪ್ರಕರಣ ಒಂದು ಉದಾಹರಣೆ
ಬೆಂಗಳೂರಿನಲ್ಲಿ 60,000ಕ್ಕೂ ಹೆಚ್ಚು ಬೇಕರಿ, ಬೀಡಾ ಅಂಗಡಿ, ಕಾಂಡಿಮೆಂಟ್ಸ್ ಮತ್ತು ಇತರೆ ಸಣ್ಣ ವ್ಯಾಪಾರಿಗಳಿದ್ದಾರೆ ಎಂದು ರವಿಶೆಟ್ಟಿ ಮಾಹಿತಿ ನೀಡಿದ್ದಾರೆ. ಆ ಪೈಕಿ ಈಗಾಗಲೇ 300ಕ್ಕೂ ಹೆಚ್ಚು ಮಂದಿಗೆ ಜಿಎಸ್‌ಟಿ ನೋಟಿಸ್ ತಲುಪಿದೆ. ಇಂತಹ ನೋಟಿಸ್‌ಗಳಿಂದ ತೊಂದರೆಗೊಳಗಾದವರಲ್ಲಿ ಜಯರಾಮ್ ಪೂಜಾರಿ ಕೂಡ ಒಬ್ಬರು. 2022-23ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಅವರಿಗೆ ನೀಡಿರುವ ಶೋಕಾಸ್ ನೋಟಿಸ್‌ನಲ್ಲಿ, ₹31,99,181 ವಹಿವಾಟು ನಡೆಸಿದ್ದಾರೆಂದು ಉಲ್ಲೇಖಿಸಿ, ₹2,87,926 ಎಸ್‌ಜಿಎಸ್‌ಟಿ ಮತ್ತು ₹2,87,926 ಸಿಜಿಎಸ್‌ಟಿ ಸೇರಿ ಒಟ್ಟು ₹5,75,852 ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ.

ಇಷ್ಟೇ ಅಲ್ಲದೆ, ಶೇ 9ರ ಬಡ್ಡಿಯಂತೆ ಎಸ್‌ಜಿಎಸ್‌ಟಿ ಮತ್ತು ಸಿಜಿಎಸ್‌ಟಿಗೆ ತಲಾ ₹1,42,524 ಬಡ್ಡಿ ಹಾಗೂ ಸೆಕ್ಷನ್ 122(xi)/122(1)(XV) ಅಡಿಯಲ್ಲಿ ತಲಾ ₹2,87,926 ದಂಡವನ್ನೂ ವಿಧಿಸಲಾಗಿದೆ. ಇದರಿಂದ ಜಯರಾಮ್ ಪೂಜಾರಿ ಅವರು ಒಟ್ಟು ₹14,36,752 ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. “ರಾತ್ರಿ ಮಲಗಿದವರು ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಇಂತಹ ನೋಟಿಸ್ ನೋಡಿ ಹಾರ್ಟ್ ಅಟ್ಯಾಕ್ ಆಗಬೇಕು” ಎಂದು ರವಿಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಡಿಜಿಟಲ್ ವಹಿವಾಟು ಬಿಸಿ: 5 ಲಕ್ಷದಿಂದ 6 ಕೋಟಿ ರೂ.ವರೆಗೂ ತೆರಿಗೆ ಬೇಡಿಕೆ :

ಸಣ್ಣ ವ್ಯಾಪಾರಿಗಳು ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಡಿಜಿಟಲ್ ವೇದಿಕೆಗಳ ಮೂಲಕ ನಡೆಸಿದ ಸಣ್ಣ ಮೊತ್ತದ ವಹಿವಾಟುಗಳನ್ನು ದೊಡ್ಡದಾಗಿ ಪರಿಗಣಿಸಿ, ವಾರ್ಷಿಕ ₹20 ಲಕ್ಷ ವಹಿವಾಟು ಮೀರಿದವರಿಗೆ ಜಿಎಸ್‌ಟಿ ನೋಂದಣಿ ಇಲ್ಲದಿದ್ದರೂ ನೋಟಿಸ್ ನೀಡಲಾಗಿದೆ. ಬೇಕರಿ ವ್ಯಾಪಾರಿಗಳು, ಹಾಲು, ಹಣ್ಣು ವ್ಯಾಪಾರಿಗಳಿಗೂ ನೋಟಿಸ್ ನೀಡದೆ ಇದ್ದಂತಹ ಪರಿಸ್ಥಿತಿಯಲ್ಲಿ, ಕಳೆದ ನಾಲ್ಕು ವರ್ಷಗಳಿಂದ ಯಾವುದೇ ನೋಟಿಸ್ ನೀಡದ ಸರ್ಕಾರ, ಈಗ ಏಕಾಏಕಿ ₹5 ಲಕ್ಷದಿಂದ ₹6 ಕೋಟಿ ರೂ.ವರೆಗೆ ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ ಎಂದು ರವಿಶೆಟ್ಟಿ ಹೇಳಿದ್ದಾರೆ.
“ಡಿಜಿಟಲ್ ಇಂಡಿಯಾ ಯೋಜನೆಯಡಿ ಆನ್‌ಲೈನ್ ವಹಿವಾಟು ನಡೆಸುವಂತೆ ಪ್ರೋತ್ಸಾಹಿಸಿ, ಈಗ ಅದೇ ಎಸ್.ಬಿ. ಖಾತೆಗಳಲ್ಲಿನ ವಹಿವಾಟುಗಳನ್ನು ಆಧರಿಸಿ ಜಿಎಸ್‌ಟಿ ತೆರಿಗೆ ವಿಧಿಸುತ್ತಿರುವುದು ಸರಿಯಲ್ಲ. ಕೇವಲ ವಹಿವಾಟಿನ ಮೊತ್ತವನ್ನು ಪರಿಗಣಿಸಿ ತೆರಿಗೆ ವಿಧಿಸಲಾಗಿದೆ. ಸಿಗರೇಟು, ಬೆಂಕಿಪೊಟ್ಟಣ ಮಾರಾಟದಂತಹ ಸಣ್ಣಪುಟ್ಟ ವಹಿವಾಟುಗಳಿಂದ ಸಿಗುವ ಲಾಭಾಂಶ ಅತ್ಯಲ್ಪ. ₹50 ಲೀಟರ್ ಹಾಲು ಮಾರಿದರೆ ₹1 ಮಾತ್ರ ಲಾಭ ಸಿಗುತ್ತದೆ. ಇಷ್ಟಿದ್ದರೂ ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.
ಜಿಎಸ್‌ಟಿ ಕಾನೂನು ಮತ್ತು ಸಣ್ಣ ವ್ಯಾಪಾರಿಗಳ ಅಳಲು :

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾನೂನು 2017ರ ಜುಲೈ 1ರಿಂದ ಜಾರಿಗೆ ಬಂದಿದ್ದು, ವಾರ್ಷಿಕ ವಹಿವಾಟು ₹40 ಲಕ್ಷ ಮೀರಿ (ಕೆಲವು ವಿಶೇಷ ರಾಜ್ಯಗಳಲ್ಲಿ ₹20 ಲಕ್ಷ) ಸರಕುಗಳನ್ನು ಪೂರೈಸುವವರು ಮತ್ತು ವಾರ್ಷಿಕ ವಹಿವಾಟು ₹20 ಲಕ್ಷ ಮೀರಿ (ಕೆಲವು ವಿಶೇಷ ರಾಜ್ಯಗಳಲ್ಲಿ ₹10 ಲಕ್ಷ) ಸೇವೆಗಳನ್ನು ಒದಗಿಸುವವರು ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ₹1.5 ಕೋಟಿ ವರೆಗೆ ವಹಿವಾಟು ಹೊಂದಿರುವ ಸಣ್ಣ ವ್ಯಾಪಾರಿಗಳಿಗೆ ‘ಕಾಂಪೊಸಿಷನ್ ಸ್ಕೀಮ್’ ಲಭ್ಯವಿದ್ದು, ಇದು ಕಡಿಮೆ ತೆರಿಗೆ ದರ ಮತ್ತು ಸರಳೀಕೃತ ಕಂಪ್ಲೈಯನ್ಸ್ ಒದಗಿಸುತ್ತದೆ.
ಆದರೆ, ಈ ಯೋಜನೆಯಡಿ ಬರುವವರು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ. ತೆರಿಗೆ ಪಾವತಿಯಲ್ಲಿ ವಿಳಂಬವಾದರೆ ವಾರ್ಷಿಕ ಶೇ 18ರಷ್ಟು ಬಡ್ಡಿ ಮತ್ತು ನೋಂದಣಿ ಮಾಡಿಸದೇ ಇದ್ದರೆ ತೆರಿಗೆ ಬಾಕಿ ಮೊತ್ತದ ಶೇ 10ರಷ್ಟು ಅಥವಾ ₹10,000 ದಂಡ ವಿಧಿಸಲಾಗುತ್ತದೆ.
ಆದರೆ, ಅನೇಕ ಸಣ್ಣ ವ್ಯಾಪಾರಿಗಳು ಜಿಎಸ್‌ಟಿ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪಾಲಿಸಲು ಸಂಪನ್ಮೂಲಗಳ ಕೊರತೆ ಎದುರಿಸುತ್ತಿದ್ದಾರೆ. ಇಲಾಖೆ ನೋಟಿಸ್‌ಗಳಿಗೆ ಪ್ರತಿಕ್ರಿಯಿಸಲು ಕೇವಲ 7 ರಿಂದ 15 ದಿನಗಳ ಕಾಲಾವಕಾಶ ನೀಡಿರುವುದು ಅವೈಜ್ಞಾನಿಕ ಎಂದು ರವಿಶೆಟ್ಟಿ ದೂರಿದ್ದಾರೆ. ನಾಲ್ಕು ವರ್ಷಗಳ ಕಾಲ ಸುಮ್ಮನಿದ್ದು, ಈಗ ಏಕಾಏಕಿ ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟುವಂತೆ ಸೂಚಿಸಿರುವುದು ಚಿಕ್ಕಪುಟ್ಟ ಉದ್ದಿಮೆದಾರರ ಬದುಕನ್ನು ದುಸ್ತರವಾಗಿಸಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಭೇಟಿ, ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ :
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಈ ನೋಟಿಸ್‌ಗಳನ್ನು ಬಲವಾಗಿ ಧಿಕ್ಕರಿಸುತ್ತದೆ ಎಂದು ರವಿಶೆಟ್ಟಿ ಘೋಷಿಸಿದ್ದಾರೆ. ಈಗಾಗಲೇ ಈ ವಿಷಯದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಬಗ್ಗೆ ಅರಿವು ಮೂಡಿಸಿ, ಸಣ್ಣ ವ್ಯಾಪಾರಿಗಳಿಗೆ ವಿಧಿಸಿರುವ ಜಿಎಸ್‌ಟಿ ತೆರಿಗೆಯನ್ನು ಮನ್ನಾ ಮಾಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಒಂದು ವೇಳೆ ಸರ್ಕಾರ ತಮ್ಮ ಮನವಿಗೆ ಸ್ಪಂದಿಸದಿದ್ದರೆ, ಸುಮಾರು 50 ರಿಂದ 60 ಸಾವಿರ ಬೇಕರಿ, ಕಾಂಡಿಮೆಂಟ್ಸ್, ಬೀಡಾ ಅಂಗಡಿ ಮಾಲೀಕರು, ಅವರ ಕುಟುಂಬಸ್ಥರೊಂದಿಗೆ ಸೇರಿ ಒಂದು ಲಕ್ಷಕ್ಕೂ ಹೆಚ್ಚು ಜನ ವಿಧಾನ ಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. “ಬಡವರ ಬದುಕಿಗೆ ತೊಂದರೆ ಕೊಡಬಾರದು. ಸಿದ್ದರಾಮಯ್ಯನವರು ತಕ್ಷಣ ಇದನ್ನು ಮನ್ನಾ ಮಾಡಿ, ಮುಂದಿನ ದಿನಗಳಲ್ಲಿ ಬೇಕಿದ್ದರೆ ನಿಯಮಗಳನ್ನು ಜಾರಿಗೊಳಿಸಲಿ” ಎಂದು ಒತ್ತಾಯಿಸಿದ್ದಾರೆ. ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳು ಮತ್ತು ಸರ್ಕಾರ ಏಕಾಏಕಿ ಇಂತಹ ನೋಟಿಸ್ ನೀಡಿ, ಅನಕ್ಷರಸ್ಥರು ಮತ್ತು ಬಡ ವ್ಯಾಪಾರಿಗಳ ಮೇಲೆ ಹಿಂಸೆ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ರವಿಶೆಟ್ಟಿ ಆಗ್ರಹಿಸಿದ್ದಾರೆ.





















