ಮೈಸೂರು, ಮೇ.23 www.bengaluruwire.com : ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ, ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಚಿಕಿತ್ಸೆಯನ್ನು ಆರಂಭಿಸಲಾಗಿದೆ. 16 ಜಿಲ್ಲಾಸ್ಪತ್ರೆಗಳಲ್ಲಿ ಏಕಕಾಲಕ್ಕೆ ಕೀಮೋಥೆರಪಿ ಚಿಕಿತ್ಸೆ ಪ್ರಾರಂಭವಾಗಿದ್ದು, ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 20 ಬೆಡ್ ಗಳ ಕೀಮೋಥೆರಪಿ ಕೇಂದ್ರ ಹಾಗೂ ಉಳಿದ 15 ಜಿಲ್ಲಾಸ್ಪತ್ರೆಗಳಲ್ಲಿ 10 ಬೆಡ್ ಗಳ ಕೀಮೋಥೆರಪಿ ಕೇಂದ್ರಗಳಿಗೆ ಚಾಲನೆ ದೊರೆತಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮುಂಬರುವ ದಿನಗಳಲ್ಲಿ 16 ಜಿಲ್ಲಾಸ್ಪತ್ರೆಗಳ ಜೊತೆಗೆ ಉಳಿದ ಜಿಲ್ಲೆಗಳಲ್ಲಿಯೂ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಬಡವರಿಗು ಉತ್ತಮ ಚಿಕಿತ್ಸೆಗಳು ದೊರೆಯಬೇಕು. ಈ ಮೊದಲು ಕೀಮೋಥೆರಪಿ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದು ರೋಗಿಗಳ ಪಾಲಿಗೆ ಕಷ್ಟಸಾಧ್ಯವಾಗಿತ್ತು. ರಾಜ್ಯದಲ್ಲಿ ಪ್ರತಿವರ್ಷ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಡೇ ಕೇರ್ ಕೀಮೋಥೆರಪಿ ಕೇಂದ್ರಗಳು ಬಡವರಿಗೆ ಹೆಚ್ಚು ಅನುಕೂಲ ಕಲ್ಪಿಸಲಿವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಅನುಭವ ಮತ್ತು ಪರಿಣಿತಿಯುಳ್ಳ ವೈದ್ಯರಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಕಾಯಿಲೆ ವಾಸಿಯಾಗುತ್ತದೆ ಎಂಬ ಭಾವನೆ ನಮ್ಮ ಜನರಲ್ಲಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಚಿಕಿತ್ಸೆ ಒದಗಿಸಿಕೊಡುತ್ತಿದ್ದೇವೆ. ಇಂದು 240 ಕೇಂದ್ರಗಳಲ್ಲಿ ಡಯಾಲಿಸಿಸ್ ಆರೋಗ್ಯ ಸೇವೆ ನೀಡಲಾಗುತ್ತಿದೆ.

ಆರೋಗ್ಯಕರ ಜೀವನ ಮುಖ್ಯ. ಪ್ರತಿಯೊಬ್ಬರು ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಅನುಕೂಲವಾಗುತ್ತದೆ. ಆಗಮಾತ್ರ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಆರೋಗ್ಯ ಸದೃಢವಾಗಿದ್ದರೆ, ದೇಶದ ಅಭಿವೃದ್ಧಿಯಲ್ಲಿ ಜನರೂ ಕೊಡುಗೆ ನೀಡಬಹುದು. ಜೀವನ ಶೈಲಿ ಮತ್ತು ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಜನರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕೇಂದ್ರೀಕೃತವಾಗಿದ್ದ ಕ್ಯಾನ್ಸರ್ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಗಳ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಮೂಲಕ ವಿಕೇಂದ್ರಿಕೃತ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್ ಗೆ ತುತ್ತಾಗುತ್ತಿದ್ಧಾರೆ. ಪ್ರತಿ ವರ್ಷ 70 ಸಾವಿರ ಹೊಸ ರೋಗಿಗಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
ಬಿಪಿಎಲ್ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ :
ಚಿಕಿತ್ಸೆಗಾಗಿ ಶೇ 60 ರಷ್ಟು ಕ್ಯಾನ್ಸರ್ ಪೀಡಿತರು 100 ಕಿ.ಮೀ ಗೂ ಹೆಚ್ಚು ದೂರ ಪ್ರಯಾಣ ಮಾಡಬೇಕಿತ್ತು. ಇದರಲ್ಲಿ ಶೇ 30 ರಷ್ಟು ಬಡ ರೋಗಿಗಳು ದೂರದ ಪ್ರಯಾಣದ ವೆಚ್ಚ ಭರಿಸಲಾಗದೇ ಕೀಮೋಥೆರಪಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ. ಇದೀಗ ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ಚಿಕಿತ್ಸೆ ದೊರಯಲಿದೆ. ಬಿಪಿಎಲ್ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲಾಗಿದೆ. ಇದು ಬಡವರಿಗೆ ಹೆಚ್ಚು ಅನುಕೂಲವಾಗುವ ಯೋಜನೆಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಹಯೋಗ :
ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಉನ್ನತ ಮಟ್ಟದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಹಯೋಗದೊಂದಿಗೆ ಹಬ್ ಅಂಡ್ ಸ್ಪೋಕ್ ಮಾಡೆಲ್ ನಲ್ಲಿ ಜಾರಿಗೆ ತಂದಿದ್ದೇವೆ. 16 ಜಿಲ್ಲಾಸ್ಪತ್ರೆಗಳಲ್ಲಿ 7 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಹಯೋಗದೊಂದಿಗೆ ಕೀಮೋಥೆರಪಿ ಚಿಕಿತ್ಸೆ ಒದಗಿಸಲಾಗಿದೆ. ಕೀಮೋಥೆರಪಿ ಹೊರತಾಗಿ ಹೆಚ್ಚಿನ ಚಿಕಿತ್ಸೆಯನ್ನು ಹಬ್ ಕೇಂದ್ರಗಳಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕಲ್ಪಿಸಿಕೊಡುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.