ಬೆಂಗಳೂರು, ಮೇ.23 www.bengaluruwire.com : ವರ್ಷಂಪ್ರತಿ ಬೃಹತ್ ನೀರುಗಾಲುವೆಗೆ ಬಿಬಿಎಂಪಿ ನೂರಾರು ಕೋಟಿ ಕರ್ಚು ಮಾಡಿದರೂ ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯುತ್ತಿಲ್ಲ. ಹೂಳು-ಜೊಂಡು ತೆರವಾಗುತ್ತಿಲ್ಲ. ಇದಕ್ಕೆ ಉಲ್ಲಾಳ ವಾರ್ಡಿನ ರಾಜಕಾಲುವೆಗಳೇ ಸಾಕ್ಷಿ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೋಗಿ ಮೇ.15ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಆದ್ರೂ ಪಾಲಿಕೆ ಅಧಿಕಾರಿಗಳ ಮನಸ್ಥಿತಿಯೇನು ಬದಲಾಗಿಲ್ಲ. ಈ ಬಗ್ಗೆ ಬೆಂಗಳೂರು ವೈರ್ ಉಲ್ಲಾಳ ಕೆರೆಗೆ ಹೊಂದಿಕೊಂಡ ರಾಜಕಾಲುವೆ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದಾಗ ಬೃಹತ್ ನೀರುಗಾಲುವೆ ಅಧಿಕಾರಿಗಳ ಉದಾಸೀನತೆ, ಕೆಲಸದ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ಎರಡು ದಿನ ಬಂದ ಭಾರೀ ಮಳೆಗೆ ನಗರದಲ್ಲನ ಮೂಲಭೂತ ಸೌಕರ್ಯಗಳಲ್ಲಿನ ಕಳಪೆ ಗುಣಮಟ್ಟ ಅನಾವರಣವಾಗಿದೆ. ನಗರದಲ್ಲಿ 800 ಕಿ.ಮೀ ಗಿಂತ ಹೆಚ್ಚು ರಾಜಕಾಲುವೆ ಉದ್ದವಿದ್ದರೂ, ಅಲ್ಲಿ ಕಾಂಕ್ರಿಟ್ ತಡೆಗೋಡೆ, ನೆಲಹಾಸು ನಿರ್ಮಿಸುವ ಕಾಮಗಾರಿಯಲ್ಲಿ ಪ್ರಗತಿಯಿದ್ದರೂ, ವೈಜ್ಞಾನಿಕವಾಗಿ ಆಳ-ಅಗಲದಲ್ಲಿ ನಿರ್ಮಿಸಿಲ್ಲ. ಹೀಗಾಗಿ ರಸ್ತೆ- ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಪ್ರವಾಹ ಪರಿಸ್ಥಿತಿಗೆ ಕಾರಣ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಉಲ್ಲಾಳ ಕೆರೆಗೆ ಮೇಲ್ಭಾಗದಿಂದ ಸಂಪರ್ಕಿಸುವ ರಾಜಕಾಲುವೆಯಲ್ಲಿ ಭರಪೂರ ಹೂಳು ತುಂಬಿಕೊಂಡಿದೆ. ಇದರ ಪರಿಣಾಮ ಆ ಹೂಳು ಕೆರೆಯಿಂದ ಅಂತರ್ಗತವಾಗಿ ಸಾಗುವ ಪೈಪಲ್ಲೂ ಸೇರಿಕೊಂಡು, ಮಳೆಬಂದಾಗ ತ್ಯಾಜ್ಯ ನೀರು ಕೆರೆಯ ಒಡಲನ್ನು ಸೇರುತ್ತಿದೆ. ರಾಜಕಾಲುವೆಯ ಕೊಳಚೆ ನೀರಲ್ಲಿ ಹರಿದು ಬರುವ ಬೆಂಡು, ತ್ಯಾಜ್ಯವಸ್ತುಗಳು ಕೆರೆಯಲ್ಲಿನ ಮೇಲ್ಭಾಗದಲ್ಲಿ ಸೇರಿಕೊಂಡು ಜಲ ಪರಿಸರಕ್ಕೆ ಮಾರಕವಾಗಿದೆ. ಈ ಬಗ್ಗೆ ಕೆರೆ ವಿಭಾಗದ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.

ಬಿಬಿಎಂಪಿಯ ವ್ಯಾಪ್ತಿಯಲ್ಲಿ ಪಾಲಿಕೆಗೆ ಸೇರಿದ 189 ಕೆರೆಗಳಿದ್ದು, ಮೊನ್ನೆ ಎರಡು-ಮೂರು ದಿನ ಸುರಿದ ವ್ಯಾಪಕ ಮಳೆಯಿಂದ 73 ಕೆರೆಗಳು ತುಂಬಿವೆ. ಆದರೆ ಬಹುತೇಕ ತುಂಬಿದ ಕೆರೆಗಳಲ್ಲಿ ರಾಜಕಾಲುವೆಯಲ್ಲಿ ಕೊಳಚೆ ನೀರು, ತ್ಯಾಜ್ಯ ವಸ್ತುಗಳು ಸೇರಿಕೊಂಡಿರುವುದು ದುರ್ದೈವದ ಸಂಗತಿ.

ವನ್ಯಪ್ರಾಣಿ- ಪಕ್ಷಿಗಳ ಅವಾಸ ಸ್ಥಾನದ ಜೀವವೈವಿಧ್ಯ ತಾಣ :

ಪಾಲಿಕೆ ಕೆರೆ ವಿಭಾಗ ಹಾಗೂ ಬೃಹತ್ ನೀರುಗಾಲುವೆ ಅಧಿಕಾರಿಗಳ ಎಡವಟ್ಟಿನಿಂದ ಶುದ್ಧವಾಗಿದ್ದ 27 ಎಕರೆಯ ಉಲ್ಲಾಳ ಕೆರೆ ಕೊಳಚೆ ನೀರಿನ ಕೊಂಪೆಯಾಗಿದೆ. ನವಿಲು, ಕೊಕ್ಕರೆ, ನೀರು ಕೋಳಿ ವಿದೇಶಿ ತಳಿಯ ವಲಸೆ ಹಕ್ಕಿಗಳು ಸೇರಿದಂತೆ 25-30 ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಹಾವು, ಮುಂಗುಸಿ, ಆಮೆ, ಮೊಲ, ಅಪರೂಪದ ಕಪ್ಪೆಗಳು, ಅಳಿಲು ಹೀಗೆ ಹಲವು ವನ್ಯಪ್ರಾಣಿ, ಉಭಯ ವಾಸಿಗಳು, ಸಸ್ತನಿಗಳು ಇಲ್ಲಿ ಆಶ್ರಯ ಪಡೆದಿವೆ.
ಕೊಳಚೆ ನೀರಿನಿಂದಾಗಿ ಕೆರೆಯ ತುದಿಗೆ ಸಂಪರ್ಕ ಕಲ್ಪಿಸುಸಿರುವ ರಾಜಕಾಲುವೆಯಲ್ಲಿ ಆಳೆತ್ತರದ ಜೊಂಡು, ಕಳೆ ಬೆಳೆದಿವೆ ಮತ್ತು ಇದರ ಜೊತೆಗೆ ಹೂಳು ಸೇರ್ಪಡೆಗೊಂಡು ಸರಾಗವಾಗಿ ನೀರು ಹರಿದು ಹೋಗುತ್ತಿಲ್ಲ.
ಒಂದು ದಿನವೂ ಕೆಲಸ ಮಾಡದ STP :

ಉಲ್ಲಾಳ ಕೆರೆ ಔಗುಪ್ರದೇಶದಲ್ಲಿ ರಾಜಕಾಲುವೆಯಿಂದ ಹರಿದು ಬರುವ ಕೊಳಚೆ ನೀರು ಪ್ರತ್ಯೇಕ ದೊಡ್ಡ ಕೊಳವೆ ಮಾರ್ಗದ ಮೂಲಕ ಹೊರಹೋಗುವ ವ್ಯವಸ್ಥೆ ಮಾಡಲಾಗಿದೆ. ಅದೇ ಜಾಗದಲ್ಲಿ ಕೆರೆಯ ಜೌಗುಪ್ರದೇಶಕ್ಕೂ ಸಂಪರ್ಕ ಕಲ್ಪಿಸಲಾಗಿದೆ. ಪಕ್ಕದಲ್ಲೇ 0.350 ಎಂಎಲ್ ಡಿ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸುಮಾರು 65 ಲಕ್ಷ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣ ಮಾಡಿ ಹಲವು ವರ್ಷಗಳೇ ಕಳೆದಿವೆ.
ಆದರೆ ಒಂದು ದಿನವೂ ಸಮರ್ಪಕವಾಗಿ ಆ ಘಟಕ ಕೆಲಸ ಮಾಡಿದ ಉದಾಹರಣೆಯಿಲ್ಲ. ಆ ಘಟಕದಿಂದ ಶುದ್ಧ ನೀರು ಕೆರೆಗೆ ಹರಿದಿಲ್ಲ. ಕೇವಲ ಘಟಕ ಸ್ಥಾಪನೆಯ ಬಿಲ್ ಮಾಡಲು ಫೊಟೊ ಶೂಟ್ ಮಾಡಿದಾಗ ಅಲ್ಲಿನ ಯಂತ್ರೋಪಕರಣಗಳು ಕಾರ್ಯನಿರ್ವಹಿಸಿದ್ದು ಬಿಟ್ಟರೆ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗಿಲ್ಲ.
ಕೆರೆ ಔಗುಪ್ರದೇಶದ ಅಭಿವೃದ್ಧಿಗೆ ವಾಸ್ತವಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ಮೊತ್ತದ ಟೆಂಡರ್ :

ಇನ್ನು ಇಲ್ಲಿನ ಜೌಗುಪ್ರದೇಶದಿಂದ ಮುಖ್ಯ ಕೆರೆಗೆ ಸಂಪರ್ಕ ಕಲ್ಪಿಸಲು ಹಲವು ವರ್ಷಗಳ ಹಿಂದೆ ಬಿಡಿಎನಿಂದ ಆರು ಬಂಡ್ ಗಳನ್ನು ಸಿಮೆಂಟ್ ಕಾಂಕ್ರಿಟ್ ನಲ್ಲಿ ನಿರ್ಮಿಸಲಾಗಿತ್ತು. ಅದರಲ್ಲಿ ಒಂದು ಸಿಮೆಂಟ್ ಚಾನಲ್ ಬಂಡ್ ಅನ್ನು ಬಿಬಿಎಂಪಿ ಕೆರೆ ಸ್ವಚ್ಛತೆ ಮಾಡುವಾಗ ಜೆಸಿಬಿಯಿಂದ ಹಾಳು ಮಾಡಿತ್ತು. ಇದೇ ನೆಪದಲ್ಲಿ ಕಲ್ಲಿನಲ್ಲಿ ಮೂರ್ನಾಲ್ಕು ಬಂಡ್ ಕಟ್ಟುವ ಹಾಗೂ ವೆಟ್ ಲ್ಯಾಂಡಿನಲ್ಲಿ ಸೈಜ್ ಕಲ್ಲಿನಲ್ಲಿ ತಡೆಗೋಡೆ ನಿರ್ಮಿಸುವ, ಹೂಳೆತ್ತುವ ಯೋಜನೆ ರೂಪಿಸಲಾಗಿತ್ತು. ಆ ಕಾಮಗಾರಿಗೆ ವಾಸ್ತವ ವೆಚ್ಚಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಅಂದರೆ ಸುಮಾರು 2 ಕೋಟಿ ರೂ.ಗಿಂತಲೂ ಹೆಚ್ಚು ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿತ್ತು.
ಕಳಪೆ ಕೆಲಸದ ಬಗ್ಗೆ ತನಿಖೆಗೆ ಆಗ್ರಹ :
ಟೆಂಡರ್ ಪಡೆದ ಗುತ್ತಿಗೆದಾರ ಔಗುಪ್ರದೇಶದಲ್ಲಿ ಸ್ವಲ್ಪ ಹೂಳು ತೆಗೆದು, ಕಲ್ಲಿ ಜೋಡಿಸುವ ಮೂಲಕ ತಡೆಗೋಡೆ ಹಾಗೂ ಮೂರ್ನಾಲ್ಕು ಬಂಡ್ ನಿರ್ಮಿಸಿದ್ದೇ ಬಂತು. ಆದರೆ ಕಳೆದ ವರ್ಷ ಹೆಚ್ಚು ಮಳೆ ಬಾರದ ಕಾಲದಲ್ಲೂ ಬಂದ ಒಂದು ಸಣ್ಣ ಮಳೆಗೆ ಅಲ್ಲಿನ ಕಲ್ಲಿನ ಬಂಡ್ ಸಾರಾಸಗಟಾಗಿ ಮಳೆ ನೀರಿಗೆ ಕೊಚ್ಚಿ ಹೋಗಿತ್ತು.

ಆಗ ಇಲ್ಲಿನ ಕಳಪೆ ಕೆಲಸದ ಬಗ್ಗೆ ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಪಾಲಿಕೆ ಕೆರೆ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದಾಗ, ಔಗುಪ್ರದೇಶದ ಅಭಿವೃದ್ಧಿ ಕಾಮಗಾರಿ ಕೈಗೊಂಡ ಕಾಂಟ್ರಾಕ್ಟರ್ ನೆಪಮಾತ್ರಕ್ಕೆ ಆ ಎಲ್ಲಾ ಬಂಡ್ ಗಳ ಕಲ್ಲುಗಳನ್ನು ಕಾರ್ಮಿಕರಿಂದ ತೆಗೆಸಿ ಪುನಃ ನಿರ್ಮಸಿದರು. ಆದರೆ ಮೊದಲಿದ್ದ ಕಲ್ಲಿನ ಬಂಡ್ ಎತ್ತರ ಮೂರ್ನಾಲ್ಕು ಅಡಿ ಕಡಿಮೆಯಾಯಿತು. ಪರಿಣಾಮ ಮೊನ್ನೆ ಬಿದ್ದ ಮಳೆಗೆ ಮತ್ತೆ ಕೊಳಚೆ ನೀರು ಕೆರೆಗೆ ಸೇರುವಂತಾಗಿದೆ.
ಇಷ್ಟೆಲ್ಲಾ ಕಳಪೆ ಕೆಲಸ ಮಾಡಿದ ಆ ಗುತ್ತಿಗೆದಾರನಿಗೆ ಕಾಮಗಾರಿ ಬಿಲ್ ಹಣವನ್ನು ಪಾಲಿಕೆ ಅಧಿಕಾರಿಗಳು ಪಾವತಿಸಿದ್ದರೆ, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಪುನಃ ದಂಡ ಹಾಕಿ ವಸೂಲಿ ಮಾಡುವ ಅಗತ್ಯವಿದೆ ಎಂದು ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಬೆಂಗಳೂರು ವೈರ್ ಮೂಲಕ ಬಿಬಿಎಂಪಿ ಮತ್ತು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರತಿದಿನ ಉಲ್ಲಾಳ ಕೆರೆಗೆ ದಿನನಿತ್ಯ ಬರುವ ನಡಿಗೆದಾರರು, ವ್ಯಾಯಾಮ ಮಾಡಲೆಂದು ಬರುವ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಯ ನಾಗರೀಕರು ಕೆರೆಯಲ್ಲಿನ ಕೊಳಚೆ ನೀರಿನ ವಾಸನೆ, ಅದರಿಂದ ಉತ್ಪತ್ತಿಯಾಗುವ ಸೊಳ್ಳೆಕಾಟದಿಂದ ಬೇಸತ್ತಿದ್ದಾರೆ.
ಉಲ್ಲಾಳ ಕೆರೆಯಲ್ಲಿ ವಾಯು ವಿಹಾರಿಗಳಿಗಿಲ್ಲ ಮೂಲಸೌಕರ್ಯ :
ಕೆರೆಯಲ್ಲಿ ವಾಯುವಿಹಾರಕ್ಕೆ ಬರುವ ನಾಗರೀಕರಿಗೆ ಕೆರೆ ಏರಿ ಮೇಲಿನ ಮಾರ್ಗದಲ್ಲಿ ಹಾಕಿರುವ ಕಾಬ್ಲರ್ ಸ್ಟೋನ್ ನೆಲಹಾಲು ಸಾಕಷ್ಟು ಎದ್ದುಬಂದಿದೆ. ಹೀಗಾಗಿ ಎಷ್ಟೊ ಮಂದಿ ನಡೆಯುವಾಗ ಎಡವಿ ಬೀಳುವಂತಾಗಿದೆ. ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ, ದೀಪದ ಸೌಕರ್ಯ, ಮಹಿಳೆಯರು, ಹಿರಿಯ ನಾಗರೀಕರು, ಮಕ್ಕಳ ಭದ್ರತೆಗಾಗಿ ಅತ್ಯಗತ್ಯವಾದ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಸ್ಥಳೀಯರು ಹಲವು ಬಾರಿ ಪಾಲಿಕೆಗೆ ಮನವಿ ಮಾಡಿದರೂ ಯಾವ ಪ್ರಯೋಜನವಾಗಿಲ್ಲ.
ಉಲ್ಲಾಳ ವಾರ್ಡಿನಲ್ಲಿನ ಹೂಳು ತುಂಬಿದ ರಾಜಕಾಲುವೆ ಹಾಗೂ ಉಲ್ಲಾಳ ಕೆರೆಯಲ್ಲಿನ ಅವ್ಯವಸ್ಥೆ ಬಗ್ಗೆ ಇವುಗಳ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಾಲಿಕೆ ಬೃಹತ್ ನೀರುಗಾಲುವೆ ಹಾಗೂ ಕೆರೆ ವಿಭಾಗದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಉಲ್ಲಾಳ ಕೆರೆ ಹಾಗೂ ರಾಜಕಾಲುವೆಯ ಶುದ್ಧೀಕರಣ ಕಾರ್ಯ ತ್ವರಿತವಾಗಬೇಕಿದೆ ಎಂದು ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ.