ಬೆಂಗಳೂರು, ಮೇ.22 www.bengaluruwire.com : ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮ ನಿಯಮಿತ (KSDL – ಕೆಎಸ್‌ಡಿಎಲ್) ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ತಮ್ಮ ಉತ್ಪನ್ನಗಳ ರಾಯಭಾರಿಯಾಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿದೆ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಎರಡು ವರ್ಷಗಳ ಅವಧಿಗೆ ತಮನ್ನಾ ಅವರಿಗೆ 6.20 ಕೋಟಿ ರೂ.ಗಳ ಸಂಭಾವನೆ ನೀಡಲಿದೆ.
ಮೇ 21 ರಂದು, ಸರ್ಕಾರದ ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4G ವಿನಾಯಿತಿ ನೀಡಿ ಆದೇಶಿಸಿದ್ದಾರೆ. ಈ ಮೂಲಕ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮವು ನಟಿ ತಮನ್ನಾ ಭಾಟಿಯಾರನ್ನು 2 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಇದೀಗ ಹೊಸ ಗ್ರಾಹಕರು ಹಾಗೂ ಯುವ ಸಮೂಹವನ್ನು ಸೆಳೆಯುವ ಉದ್ದೇಶದಿಂದ ಮೈಸೂರು ಸ್ಯಾಂಡಲ್ ಸೋಪ್‌ಗೆ ಹೊಸ ರಾಯಭಾರಿಯನ್ನಾಗಿ ತಮನ್ನಾ ಅವರನ್ನು ನೇಮಿಸಿಕೊಳ್ಳಲಾಗಿದೆ.
ಮೈಸೂರು ಸ್ಯಾಂಡಲ್ ಸೋಪ್, ಶತಮಾನಗಳ ಇತಿಹಾಸವಿರುವ ಕರ್ನಾಟಕದ ಹೆಮ್ಮೆಯ ಉತ್ಪನ್ನವಾಗಿದೆ. ಇಂತಹ ಉತ್ಪನ್ನಕ್ಕೆ ಕನ್ನಡದ ನೆಲದ ಕಲಾವಿದರಾದ ಡಾ. ಶಿವರಾಜ್‌ಕುಮಾರ್, ಸುದೀಪ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ದಿಗ್ಗಜರು ಜಾಹೀರಾತು ರಾಯಭಾರಿಗಳಾಗಿದ್ದರು. ತಮನ್ನಾ ಭಾಟಿಯಾ ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್‌ನಲ್ಲಿ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಜತೆಗೆ ಗ್ಲಾಮರಸ್ ಕೂಡ ಆಗಿ ಕಾಣುತ್ತಾರೆ, ಇದನ್ನು ಗಮನಿಸಿ ಮಾರುಕಟ್ಟೆ, ಬ್ರಾಂಡಿಂಗ್ ಲೆಕ್ಕಾಚಾರ ಹಾಕಿ ಅವರನ್ನು ರಾಯಭಾರಿ ಮಾಡಿರಬಹುದು ಎಂದು ವಿಶ್ಲೇಷಿಲಾಗುತ್ತಿದೆ.
ಸರ್ಕಾರದ ಈ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನೆರೆ ರಾಜ್ಯದ ನಟಿಗೆ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ನೀಡಿ ರಾಯಭಾರಿಯನ್ನಾಗಿ ನೇಮಿಸಿರುವುದಕ್ಕೆ ಹಲವು ಕನ್ನಡಪರ ಸಂಘಟನೆಗಳು ಮತ್ತು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಅನ್ಯ ರಾಜ್ಯದ ನಟಿಯ ನೇಮಕದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
