ಕಾರವಾರ, ಮೇ.22 www.bengaluruwire.com : ಭಾರತದ ಪ್ರಾಚೀನ ಹಡಗು ನಿರ್ಮಾಣ ಪರಂಪರೆಯನ್ನು ಎತ್ತಿಹಿಡಿಯುವ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಐಎನ್‌ಎಸ್‌ವಿ ಕೌಂಡಿನ್ಯ’ ನೌಕೆಯನ್ನು ಭಾರತೀಯ ನೌಕಾಪಡೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಲಾಯಿತು. ಕರ್ನಾಟಕದ ಕಾರವಾರದ ಕದಂಬ ನೌಕಾನೆಲೆಯಲ್ಲಿ ಬುಧವಾರ ನಡೆದ ಭವ್ಯ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
‘ಐಎನ್‌ಎಸ್‌ವಿ ಕೌಂಡಿನ್ಯ’ ಮರದ ಹಲಗೆಗಳನ್ನುತೆಂಗಿನ ನಾರುಗಳ ದಾರ ಬಳಸಿ ಹೊಲಿದು ರಚಿಸಿದ ನೌಕೆಯಾಗಿದೆ. ಇದು ಪ್ರಾಚೀನ ಕಾಲದ ಮಾದರಿಯಲ್ಲೇ ನಿರ್ಮಿಸಲಾದ ನೌಕೆಯಾಗಿದ್ದು, 5ನೇ ಶತಮಾನದ ಅಜಂತಾ ಗುಹಾಂತರ ದೇವಾಲಯಗಳ ವರ್ಣಚಿತ್ರಗಳಲ್ಲಿ ಕಂಡುಬರುವ ಹಡಗಿನ ಪ್ರತಿಕೃತಿಯಾಗಿದೆ. ಈ ನೌಕೆಯ ನಿರ್ಮಾಣವು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ನಡೆದಿದ್ದು, ಕೇರಳದ 20ಕ್ಕೂ ಹೆಚ್ಚು ನುರಿತ ಕುಶಲಕರ್ಮಿಗಳ ತಂಡವು, ಮುಖ್ಯ ಶಿಲ್ಪಿಯಾದ ಬಾಬು ಶಂಕರನ್ ಅವರ ನೇತೃತ್ವದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ.
ಈ ನೌಕೆಯ ಮುಂಭಾಗದಲ್ಲಿ ಸಿಂಹದ ಪ್ರತಿಕೃತಿ ರಚಿಸಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಹರಪ್ಪ ಶೈಲಿಯ ಲಂಗರನ್ನು ಹೊಂದಿರುವುದು ವಿಶೇಷವಾಗಿದೆ. ಎರಡು ವರ್ಷಗಳ ಕಾಲ, ಬಾಬು ಶಂಕರನ್ ತಂಡವು ಮರದ ಹಲಗೆಗಳನ್ನು ತೆಂಗಿನ ನಾರಿನ ಹಗ್ಗ, ತೆಂಗಿನ ನಾರು ಮತ್ತು ನೈಸರ್ಗಿಕ ರಾಳವನ್ನು ಬಳಸಿ ಹಡಗಿನ ಕಾಯಕ್ಕೆ ಹೊಲಿದಿದೆ. ಈ ಅನನ್ಯ ನಿರ್ಮಾಣ ಶೈಲಿಯು ಪ್ರಾಚೀನ ಭಾರತೀಯರ ತಾಂತ್ರಿಕ ಜ್ಞಾನ ಮತ್ತು ಕರಕುಶಲತೆಯನ್ನು ಸಾರುತ್ತದೆ.

ಹಿಂದೂ ಮಹಾಸಾಗರದುದ್ದಕ್ಕೂ ಪ್ರಯಾಣ ಕೈಗೊಂಡ ಪೌರಾಣಿಕ ಭಾರತೀಯ ನಾವಿಕ ಹಾಗೂ ಸನ್ಯಾಸಿಯಾಗಿದ್ದ ಕೌಂಡಿನ್ಯ ಆ ಕಾಲದಲ್ಲಿ ನೌಕಾಯಾನದಲ್ಲಿ ಬಹಳ ಹೆಸರು ಮಾಡಿದ್ದರು. ಆದ್ದರಿಂದ ಅವರ ಹೆಸರನ್ನೇ ಈ ಐಎನ್‌ಎಸ್‌ವಿ ನೌಕೆಗೆ ಇಡಲಾಗಿದೆ. ಈ ನೌಕೆಯ ಲೋಕಾರ್ಪಣೆ ಸಮಾರಂಭವು ಭಾರತದ ಶ್ರೀಮಂತ ಸಾಗರ ಇತಿಹಾಸ ಮತ್ತು ನೌಕಾ ಪರಂಪರೆಯನ್ನು ಮತ್ತೊಮ್ಮೆ ಎತ್ತಿಹಿಡಿಯುತ್ತದೆ.

‘ಐಎನ್‌ಎಸ್‌ವಿ ಕೌಂಡಿನ್ಯ’ ಕೇವಲ ಒಂದು ನೌಕೆಯಲ್ಲ, ಬದಲಿಗೆ ಶತಮಾನಗಳಷ್ಟು ಹಳೆಯದಾದ ಭಾರತದ ಹಡಗು ನಿರ್ಮಾಣ ತಂತ್ರಜ್ಞಾನಕ್ಕೆ ಜೀವ ತುಂಬಿದ ಒಂದು ಮಹತ್ವದ ಯೋಜನೆಯಾಗಿದೆ. ಇದು ಸಮುದ್ರಯಾನದಲ್ಲಿ ಭಾರತದ ಪ್ರಾಚೀನ ಪಾತ್ರವನ್ನು ನೆನಪಿಸುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಈ ಹಡಗು ಸದ್ಯ ಕದಂಬ ನೌಕಾನೆಲೆಯಲ್ಲಿ ಇದ್ದು, ಕೆಲವು ದಿನಗಳ ನಂತರ ಒಮನ್ ದೇಶದ ಕಡೆಗೆ ಚಲಿಸಲಿದೆ ಎಂದು ನೌಕಾ ಅಧಿಕಾರಿಗಳು ತಿಳಿಸಿದ್ದಾರೆ.
