ಬೆಂಗಳೂರು, ಮೇ.21 www.bengaluruwire.com : ದೇಶದ ಪ್ರಮುಖ ಮಳೆಗಾಲದ ಅವಧಿಯಾದ ನೈರುತ್ಯ ಮುಂಗಾರು ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಈ ಬಾರಿ ನಾಲ್ಕೈದು ದಿನಗಳಲ್ಲಿ ಕೇರಳಕ್ಕೆ ಮುಂಚಿತವಾಗಿ ಪ್ರವೇಶಿಸುವ ಸಾಧ್ಯತೆ ಇದೆ.
2009ರ ನಂತರ ಇದು ಅತಿ ಬೇಗ ಮುಂಗಾರು ಪ್ರವೇಶಿಸಿದ ವರ್ಷವಾಗುವ ಸಾಧ್ಯತೆ ಇದೆ. ಈ ಅಕಾಲಿಕ ಪ್ರವೇಶವು ಕೃಷಿ ಚಟುವಟಿಕೆಗಳು ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳಕ್ಕೆ ಪ್ರವೇಶಿಸುವ ಮುಂಗಾರು, ಈ ಬಾರಿ ಇನ್ನು ನಾಲ್ಕೈದು ದಿನಗಳಲ್ಲಿ ಕಾಲಿಡಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಮತ್ತು ಬಂಗಾಳಕೊಲ್ಲಿಯಲ್ಲಿನ ಕೆಲವು ಬೆಳವಣಿಗೆಗಳು ಮುಂಗಾರು ಬೇಗನೆ ಪ್ರಾರಂಭವಾಗಲು ಕಾರಣವಾಗಿವೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಕರ್ನಾಟಕಕ್ಕೆ ನಂತರ ಪ್ರವೇಶ:

ಕೇರಳಕ್ಕೆ ಸಾಮಾನ್ಯ ಜೂ.1 ರಂದು ಕೇರಳಕ್ಕೆ ಸಾಮಾನ್ಯವಾಗಿ ಪ್ರವೇಶಿಸಿದರೆ, ಜು.8ರ ಒಳಗಾಗಿ ಇಡೀ ದೇಶವನ್ನು ವ್ಯಾಪಸುವುದು ವಾಡಿಕೆ. ಅದೇ ರೀತಿ ಮುಂಗಾರು ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕರ್ನಾಟಕಕ್ಕೂ ಆಗಮಿಸುವುದು ವಾಡಿಕೆ. ಆದರೆ, ಕೇರಳದಲ್ಲಿ ಅಕಾಲಿಕವಾಗಿ ಪ್ರವೇಶಿಸಿದರೂ, ಕರ್ನಾಟಕಕ್ಕೆ ನಿಗದಿತ ಅವಧಿಯಲ್ಲೇ ಅಥವಾ ಒಂದೆರಡು ದಿನಗಳ ವಿಳಂಬವಾಗಿ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಭಾಗಗಳು ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆಯನ್ನು ಪಡೆಯುತ್ತವೆ. ಈ ಬಾರಿಯೂ ಇದೇ ಪ್ರವೃತ್ತಿ ಮುಂದುವರೆಯಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷ ಮೇ 30ರಂದು ಕೇರಳಕ್ಕೆ ಮುಂಗಾರು ಪ್ರವೇಶಿತ್ತು. ಇದನ್ನೂ ಓದಿ : ಭಾರತದ ಮೊದಲ ಬುಲೆಟ್ ರೈಲು: 300 ಕಿ.ಮೀ ಎಲಿವೇಟೆಡ್ ಮಾರ್ಗ ಪೂರ್ಣ, 2026ರ ವೇಳೆಗೆ ಮೊದಲ ಹಂತ ಕಾರ್ಯಾರಂಭ?
ಕೃಷಿ ಚಟುವಟಿಕೆಗಳಿಗೆ ಸಿದ್ಧತೆ:
ಮುಂಗಾರು ಮಳೆ ಮುಂಚಿತವಾಗಿ ಆಗಮಿಸುವ ನಿರೀಕ್ಷೆಯಿಂದ ರೈತ ಸಮುದಾಯದಲ್ಲಿ ಆಶಾಭಾವನೆ ಮೂಡಿದೆ. ಮುಂಗಾರು ಹಂಗಾಮಿನ ಬೆಳೆಗಳಾದ ಭತ್ತ, ರಾಗಿ, ಮೆಕ್ಕೆಜೋಳ ಮತ್ತಿತರ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೀಜ, ಗೊಬ್ಬರಗಳ ಸಂಗ್ರಹ ಮತ್ತು ಕೃಷಿ ಉಪಕರಣಗಳ ಸಿದ್ಧತೆಗಳು ಬಿರುಸಾಗಿ ನಡೆಯುತ್ತಿವೆ. ಕೃಷಿ ಇಲಾಖೆಯು ಸಹ ಮುಂಗಾರು ಪೂರ್ವ ಸಿದ್ಧತೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಮುಂದಾಗಿದೆ.
ಹವಾಮಾನ ತಜ್ಞರ ಅಭಿಪ್ರಾಯ:
ಹಿರಿಯ ಹವಾಮಾನ ತಜ್ಞರು, “ಮುಂಗಾರು ಅಕಾಲಿಕ ಪ್ರವೇಶವು ಕೆಲವು ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಬೇಗನೆ ಮಳೆ ಆರಂಭವಾದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಆದರೆ, ಮಳೆಯ ತೀವ್ರತೆ ಮತ್ತು ವಿತರಣೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಕಾಲಿಕ ಮಳೆಯು ಕೆಲವೊಮ್ಮೆ ಪ್ರವಾಹದಂತಹ ಪರಿಸ್ಥಿತಿಗಳನ್ನು ಸೃಷ್ಟಿಸುವ ಸಾಧ್ಯತೆಯೂ ಇರುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ, 2025ರ ಮುಂಗಾರು ಕೇರಳಕ್ಕೆ ಅಕಾಲಿಕ ಪ್ರವೇಶ ಮಾಡುವುದರಿಂದ ದೇಶದ ಒಟ್ಟಾರೆ ಮಳೆಗಾಲದ ಮೇಲೆ ಪರಿಣಾಮ ಬೀರಲಿದೆ. ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳಿಗೆ ಮುಂಗಾರು ಪ್ರವೇಶಿಸುವ ಬಗ್ಗೆ ಹವಾಮಾನ ಇಲಾಖೆಯ ಮುಂದಿನ ನವೀಕರಣಗಳನ್ನು ನಿರೀಕ್ಷಿಸಲಾಗುತ್ತಿದೆ.