ಬೆಂಗಳೂರು, ಮೇ.14, www.bengaluruwire.com : ನಗರ ಆಡಳಿತದಲ್ಲಿ ಮಹತ್ವದ ಬದಲಾವಣೆಯೊಂದಿಗೆ, ರಾಜ್ಯ ಸರ್ಕಾರವು 2024 ರ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (GBGA) ಯನ್ನು ಮೇ 15 ರಿಂದ ಜಾರಿಗೆ ಬರಲಿದೆ. ಇದರೊಂದಿಗೆ ಪ್ರಸ್ತುತ ಇರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕೃತವಾಗಿ ರದ್ದಾಗಿ ಇತಿಹಾಸದ ಪುಟ ಸೇರಲಿದೆ. ಹೊಸದಾಗಿ ರಚನೆಯಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಸ್ತಿತ್ವಕ್ಕೆ ಬರಲಿದೆ.
ಕಳೆದ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆಯನ್ನು ಮೇ 15ರಿಂದ ಜಾರಿಗೊಳಿಸಲು ಒಪ್ಪಿಗೆ ನೀಡಿತ್ತು. ಅದರಂತೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024ರ ಕಲಂ 1(2)ರಂತೆ, ಗ್ರೇಟರ್ ಬೆಂಗಳೂರು ಪ್ರದೇಶವನ್ನು ಅಧಿಸೂಚಿಸಲು ಹಾಗೂ ಕಲಂ 1(3)ರಂತೆ ಕಾಯ್ದೆಯನ್ನು ಜಾರಿಗೊಳಿಸಲು ಮತ್ತು ಕಲಂ 131ರಂತೆ ನಗರ ಪಾಲಿಕೆಗೆ ಆಡಳಿತಾಧಿಕಾರಿ ನೇಮಕ ಮಾಡಲು ಅಗತ್ಯವಿರುವ ಅಧಿಸೂಚನೆ ಮೇ 14 ರಂದು ಹೊರಬಿದ್ದಿದೆ. ನರಗಾಭಿವೃದ್ಧಿ ಇಲಾಖೆ ಈ ಸಂಬಂಧ ಇಂದು ಅಧಿಸೂಚನೆ ಹೊರಡಿಸಿದೆ.

ಬಿಬಿಎಂಪಿ ವಿಸರ್ಜನೆಯಾಗುವುದರಿಂದ ‘ಗ್ರೇಟರ್ ಬೆಂಗಳೂರು ಪ್ರದೇಶ’ಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲಾಗುತ್ತದೆ. ಬಿಬಿಎಂಪಿ ಆಡಳಿತ ಮೇ 15 ರಿಂದ ‘ಗ್ರೇಟರ್ ಬೆಂಗಳೂರು ಪ್ರದೇಶ’ವಾಗಲಿದ್ದು, ಆಡಳಿತಾಧಿಕಾರಿ ಮೂಲಕ ಸರ್ಕಾರವೇ ಎಲ್ಲಾ ಕಾರ್ಯವನ್ನು ನಿಯಂತ್ರಿಸಲಿದೆ. ಆಡಳಿತಾಧಿಕಾರಿ ನೇಮಕವಾದ ಮೇಲೆ ಕಾಯ್ದೆಗೆ ಅನುಗುಣವಾಗಿ ನಗರ ಪಾಲಿಕೆಗಳ ನಿಯಮಗಳು, ಕಾನೂನಿನ ಉಪಬಂಧಗಳನ್ನು ರಚಿಸಲಾಗುತ್ತದೆ.
ಜಿಬಿಎ ಸಮಿತಿ ರಚನೆ ಹೇಗಿರುತ್ತೆ?:
ಪ್ರಾಧಿಕಾರದಲ್ಲಿ ಮುಖ್ಯಮಂತ್ರಿಯವರು ಅಧ್ಯಕ್ಷರಾದರೆ, ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಶಾಸಕರು– ಸಚಿವರು, ನಗರಾಭಿವೃದ್ಧಿ ಸಚಿವರು, ಪಾಲಿಕೆಗಳ ಮೇಯರ್‌ಗಳು, ಬಿಡಿಎ ಆಯುಕ್ತ, ಬೆಂಗಳೂರು ಜಲಮಂಡಳಿ ಅಧ್ಯಕ್ಷ, ಬಿಎಂಟಿಸಿ, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಕಂದಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ಕಮಿಷನರ್, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತ ಸದಸ್ಯರಾಗಿರುತ್ತಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಮೇ 15 ರಂದು ಏನಾಗುತ್ತದೆ? :
* ಬಿಬಿಎಂಪಿ ರದ್ದು, ಜಿಬಿಎ ಅಸ್ಥಿತ್ವಕ್ಕೆ : ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 ರ ಪ್ರಕಾರ ಬಿಬಿಎಂಪಿ ಕಾಯ್ದೆ, 2021 ರದ್ದಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಿಬಿಎ ಬೆಂಗಳೂರಿನ ಉನ್ನತ ಮಟ್ಟದ ಯೋಜನೆ ಮತ್ತು ಆಡಳಿತಾತ್ಮಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.
* ಪ್ರದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ: ಹೊಸ ಜಿಬಿಎ ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯ 709 ಚದರ ಕಿಲೋಮೀಟರ್ ಪ್ರದೇಶದೊಳಗೇ ಕಾರ್ಯನಿರ್ವಹಿಸಲಿದೆ. ಸದ್ಯಕ್ಕೆ ನಗರದ ಅಧಿಕೃತ ಗಡಿಗಳನ್ನು ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ. ಆದರೆ, ಭವಿಷ್ಯದಲ್ಲಿ ಆನೇಕಲ್, ಪ್ರದೇಶಗಳನ್ನು ಸೇರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

* ಬಹು ನಗರ ಪಾಲಿಕೆಗಳು: ಈ ಕಾಯ್ದೆಯು ಗ್ರೇಟರ್ ಬೆಂಗಳೂರು ಪ್ರದೇಶದೊಳಗೆ ಗರಿಷ್ಠ ಏಳು ನಗರ ಪಾಲಿಕೆಗಳನ್ನು ರಚಿಸಲು ಅವಕಾಶ ನೀಡುತ್ತದೆ. ಪ್ರತಿಯೊಂದು ಪಾಲಿಕೆಗೂ ತನ್ನದೇ ಆದ ಮೇಯರ್ ಮತ್ತು ಕೌನ್ಸಿಲ್ ಇರುತ್ತದೆ. ಇದು ಏಕ-ಮೇಯರ್ ವ್ಯವಸ್ಥೆಯನ್ನು ಬದಲಾಯಿಸಲಿದ್ದು, ಉತ್ತಮ ಸ್ಥಳೀಯ ಆಡಳಿತಕ್ಕಾಗಿ ನಾಗರಿಕ ಆಡಳಿತವನ್ನು ವಿಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ 25,000 ಜನಸಂಖ್ಯೆಗೆ ಒಂದು ವಾರ್ಡ್ ನಂತೆ ತಲಾ 125 ವಾರ್ಡ್ ಗಳಿಗೊಂದರಂತೆ ಬೆಂಗಳೂರು ಉತ್ತರ, ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ನಗರಪಾಲಿಕೆಗಳೆಂದು ಮೂರು ನಗರ ಪಾಲಿಕೆಗಳನ್ನು ಸೃಜಿಸಲು ಒಲವು ತೋರಿದೆ ಎಂದು ಮೂಲಗಳು ತಿಳಿಸಿವೆ.
ಕಾಯ್ದೆಯಲ್ಲೇ ಇರುವಂತೆ ಎಲ್ಲ ನಗರ ಪಾಲಿಕೆಗಳ ಹೆಸರು ‘ಬೆಂಗಳೂರು’ ಎಂದೇ ಆರಂಭವಾಗಬೇಕಿದೆ. 28 ವಿಧಾನಸಭಾ ಕ್ಷೇತ್ರಗಳು ಮೂರು ಪಾಲಿಕೆಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗಲಿದ್ದು, ಬಹುತೇಕ ಹೀಗಿರಲಿದೆ ಜಿಬಿಎನಲ್ಲಿ ವಿಧಾನಸಭಾ ಕ್ಷೇತ್ರಗಳ ಹಂಚಿಕೆ :
ಬೆಂಗಳೂರು ಉತ್ತರ ನಗರ ಪಾಲಿಕೆ :
ದಾಸರಹಳ್ಳಿ, ಆರ್ ಆರ್ ನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಯಲಹಂಕ, ಹೆಬ್ಬಾಳ, ಯಶವಂತಪುರ.
ಬೆಂಗಳೂರು ಕೇಂದ್ರ ನಗರ ಪಾಲಿಕೆ :
ಕೆ.ಆರ್ ಪುರಂ, ಮಹಾದೇವಪುರ, ಸಿ.ವಿ ರಾಮನ್ ನಗರ, ಗಾಂಧೀನಗರ, ರಾಜಾಜಿನಗರ, ಶಿವಾಜಿನಗರ, ಮಲ್ಲೆಶ್ವರಂ, ಸರ್ವಙ್ಞನಗರ, ಪುಲಕೇಶಿನಗರ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ :
ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಪದ್ಮನಾಭನಗರ, ಶಾಂತಿನಗರ, ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್, ಚಾಮರಾಜಪೇಟೆ, ವಿಜಯನಗರ, ಗೋವಿಂದರಾಜನಗರ, ಚಿಕ್ಕಪೇಟೆ, ಹೀಗೆ ವಿಧಾನಸಭಾ ಕ್ಷೇತ್ರಗಳು ಮೂರು ಪಾಲಿಕೆಗಳಲ್ಲಿ ಹಂಚಿಕೆಯಾಗುತ್ತದೆ ಎನ್ನಲಾಗಿದೆ.
ಗ್ರೇಟರ್ ಬೆಂಗಳೂರು ಪ್ರದೇಶದ ಗಡಿ :
ನಗರದ ಸುತ್ತಲಿರುವ ಕೈಗಾರಿಕಾ ಪ್ರದೇಶಗಳನ್ನೂ ಒಳಗೊಂಡಂತೆ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ ಹಾಗೂ ಹಾರೋಹಳ್ಳಿಯನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.
* ಆಡಳಿತದಲ್ಲಿ ಪರಿವರ್ತನೆ : ಆಡಳಿತಗಾರರೊಬ್ಬರು ವಿಭಜನೆ ಮತ್ತು ಪುನರ್ರಚನೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಪ್ರಸ್ತುತ ಬಿಬಿಎಂಪಿ ಮುಖ್ಯ ಆಯುಕ್ತರು ಈ ಪರಿವರ್ತನಾ ಅವಧಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯ ಪ್ರಮುಖ ಲಕ್ಷಣಗಳು
* ವಿಕೇಂದ್ರೀಕೃತ ಆಡಳಿತ: ನಗರವನ್ನು ಚಿಕ್ಕದಾದ, ಸುಲಭವಾಗಿ ನಿರ್ವಹಿಸಬಹುದಾದ ಪಾಲಿಕೆಗಳಾಗಿ ವಿಂಗಡಿಸಲಾಗುವುದು. ಪ್ರತಿಯೊಂದು ಪಾಲಿಕೆಗೂ ತೆರಿಗೆ ವಿಧಿಸುವ ಮತ್ತು ಸ್ಥಳೀಯ ವ್ಯವಹಾರಗಳನ್ನು ನಿರ್ವಹಿಸುವ ಅಧಿಕಾರವಿರುತ್ತದೆ. ಜಿಬಿಎ ನಗರದಾದ್ಯಂತ ಯೋಜನೆ, ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಗಳನ್ನು ಸಮನ್ವಯಗೊಳಿಸುತ್ತದೆ.
* ವಾರ್ಡ್ ಸಮಿತಿಗಳು ಮತ್ತು ಏರಿಯಾ ಸಭೆಗಳು:
ಈ ಕಾಯ್ದೆಯು ವಾರ್ಡ್ ಸಮಿತಿಗಳು ಮತ್ತು ಏರಿಯಾ ಸಭೆಗಳನ್ನು ಬಲಪಡಿಸುವ ಮೂಲಕ ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಇದು ನಾಗರಿಕರಿಗೆ ತಮ್ಮ ನೆರೆಹೊರೆಯ ಮಟ್ಟದ ನಿರ್ಧಾರಗಳಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುತ್ತದೆ.
* ಏಕೀಕೃತ ನಗರ ಯೋಜನೆ: ಜಿಬಿಎ ಪ್ರಮುಖ ಮೂಲಸೌಕರ್ಯ ಯೋಜನೆಗಳು, ನಗರ ಸಾರಿಗೆ ಯೋಜನೆಗಳು ಮತ್ತು ಸಾರ್ವಜನಿಕ ಉಪಯುಕ್ತತೆಗಳನ್ನು ಪರಸ್ಪರ ಸಮನ್ವಯಗೊಳಿಸುತ್ತದೆ. ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ, ಬಿಎಂಟಿಸಿ ಮತ್ತು ಬೆಸ್ಕಾಂನಂತಹ ಸಂಸ್ಥೆಗಳನ್ನು ಏಕೀಕೃತ ಕಾರ್ಯತಂತ್ರದ ಅಡಿಯಲ್ಲಿ ತರಲಿದೆ.
* ಹಣಕಾಸು ಸುಧಾರಣೆಗಳು: ಹೊಸ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿಧಿ ಮತ್ತು ಹಣಕಾಸು ಸಲಹಾ ಸಮಿತಿಯು ಸಂಪನ್ಮೂಲ ವಿತರಣೆ ಮತ್ತು ಮೂಲಸೌಕರ್ಯ ಹೂಡಿಕೆಗಳ ಕುರಿತು ಮೇಲ್ವಿಚಾರಣೆ ಮಾಡುತ್ತದೆ.
* ಪಾರಂಪರಿಕ ಕಟ್ಟಡಗಳ ಸಂರಕ್ಷಣೆ: ಈ ಕಾಯ್ದೆಯು ಪಾರಂಪರಿಕ ಕಟ್ಟಡಗಳಿಗಾಗಿ ಹೊಸ ನಿಯಮಗಳನ್ನು ಪರಿಚಯಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಣೆಗಾಗಿ ಮೂರು ಶ್ರೇಣಿಗಳಾಗಿ ವರ್ಗೀಕರಿಸುತ್ತದೆ.
ರಾಜಕೀಯ ಮತ್ತು ನಾಗರಿಕ ಪ್ರತಿಕ್ರಿಯೆಗಳು
* ಬೆಂಬಲ ಮತ್ತು ವಿರೋಧ: ಕಾಂಗ್ರೆಸ್ ಸರ್ಕಾರವು ಬಿಬಿಎಂಪಿಯನ್ನು ವಿಭಜಿಸುವುದರಿಂದ ಹೆಚ್ಚು ಪರಿಣಾಮಕಾರಿ ನಾಗರಿಕ ಸೇವೆಗಳನ್ನು ಒದಗಿಸಲು ಮತ್ತು ಸ್ಥಳೀಯ ನಾಯಕತ್ವವನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ವಾದಿಸಿದೆ. ಆದಾಗ್ಯೂ, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ಕಾಯ್ದೆಯು ರಾಜ್ಯ ಸರ್ಕಾರದೊಂದಿಗೆ ಅಧಿಕಾರವನ್ನು ಕೇಂದ್ರೀಕರಿಸುತ್ತದೆ ಮತ್ತು ಇದು 74 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿವೆ. 74ನೇ ತಿದ್ದುಪಡಿಯು ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರವನ್ನು ವಿಕೇಂದ್ರೀಕರಿಸಲು ಆದೇಶಿಸುತ್ತದೆ.
* ಕಾನೂನು ಸವಾಲು: ನಾಗರಿಕ ಹೋರಾಟ ಗುಂಪುಗಳು ಸ್ಥಳೀಯ ಸ್ವಯಂ ಆಡಳಿತದ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿವೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿಗೆ ಮುಂದೇನು?
ತಕ್ಷಣದ ಕ್ರಮಗಳು: ಮೇ 15 ರ ಅಧಿಸೂಚನೆಯ ನಂತರ, ಸರ್ಕಾರವು ಹೊಸ ಪಾಲಿಕೆಗಳ ಗಡಿಗಳನ್ನು ಗುರುತಿಸುವ ಮತ್ತು ಹೊಸ ಆಡಳಿತಾತ್ಮಕ ರಚನೆಗಳನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.
ತಕ್ಷಣದ ಜೆಬಿಎ ಪ್ರದೇಶ ವಿಸ್ತರಣೆ ಇಲ್ಲ: ಜಿಬಿಎಯ ಅಧಿಕಾರ ವ್ಯಾಪ್ತಿಯು ಪ್ರಸ್ತುತ 709 ಚದರ ಕಿಲೋಮೀಟರ್‌ಗಿಂತ ಹೆಚ್ಚಿರುವುದಿಲ್ಲ. ಆದರೆ, ಭವಿಷ್ಯದಲ್ಲಿ ಆನೇಕಲ್‌ನಂತಹ ಹೊರವಲಯದ ಪ್ರದೇಶಗಳನ್ನು ಸೇರಿಸುವ ಬಗ್ಗೆ ಪರಿಗಣನೆ ಮುಂದುವರಿಯುತ್ತದೆ.
ನೆನೆಗುದಿಗೆ ಬಿದ್ದಿರುವ ಕೌನ್ಸಿಲ್ ಚುನಾವಣೆಗಳು: 2020ರ ಇಸವಿಯಿಂದ ನಗರದಲ್ಲಿ ಕೌನ್ಸಿಲ್ ಚುನಾವಣೆಗಳು ನಡೆದಿಲ್ಲ. ಹೊಸ ರಚನೆಯು ದೀರ್ಘಕಾಲದಿಂದ ಬಾಕಿ ಉಳಿದಿರುವ ಸ್ಥಳೀಯ ಚುನಾವಣೆಗಳಿಗೆ ಮತ್ತು ಹೆಚ್ಚು ಹೊಣೆಗಾರಿಕೆಯ ಆಡಳಿತಕ್ಕೆ ದಾರಿ ಮಾಡಿಕೊಡಬಹುದು.
ಬೆಂಗಳೂರು ನಗರ ಆಡಳಿತದ ಹೊಸ ಹಂತ ಪ್ರವೇಶ :
“ಬಹು ನಗರಪಾಲಿಕೆಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಜಿಬಿಎ ಅಸ್ಥಿತ್ವಕ್ಕೆ ಬರಲಿದೆ. ಇದರಿಂದಾಗಿ ಬೆಂಗಳೂರು ನಗರ ಆಡಳಿತದ ಹೊಸ ಹಂತವನ್ನು ಪ್ರವೇಶಿಸುತ್ತಿದೆ. ಇದನ್ನು ನಾನು “ಮಹಾನಗರ ಆಡಳಿತ ಮಾದರಿ” ಎಂದು ಕರೆಯುತ್ತೇನೆ. ಇದು ಎರಡು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುತ್ತದೆ. ಒಂದನೆಯದಾಗಿ, ವಿವಿಧ ನಾಗರೀಕ ಸಂಸ್ಥೆಗಳ ನಡುವೆ ಸಮನ್ವಯತೆ, ಪ್ರಸ್ತುತ ಬಿಬಿಎಂಪಿ ಕೇಂದ್ರೀಯವಾಗಿ ನಿರ್ವಹಿಸಲು ತುಂಬಾ ದೊಡ್ಡದಾಗಿದೆ ಮತ್ತು ವಾರ್ಡ್ ಗಾತ್ರಗಳು ತುಂಬಾ ದೊಡ್ಡದಾಗಿದೆ. ಜಿಬಿಎ ಅದಕ್ಕೆ ಪರಿಹಾರ ಒದಗಿಸಲಿದೆ” ಎಂದು ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಅಲವಿಲ್ಲಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಮುಖ್ಯಮಂತ್ರಿ ನೇತೃತ್ವದ ಪ್ರಾಧಿಕಾರದ ಆಡಳಿತದ ಬಗ್ಗೆ ನ್ಯಾಯಾಲಯಗಳ ಮೆಟ್ಡಿಲೇರುವ ಸಂಭವ ಇದೆ. ಇದರ ಬಗ್ಗೆ ನಾವು ಕಾದು ನೋಡಬೇಕಾಗಿದೆ. ಸಣ್ಣ ನಗರಪಾಲಿಕೆಗಳು ಶೀಘ್ರದಲ್ಲೇ ಬರಬೇಕು ಮತ್ತು ಚುನಾವಣೆಗಳನ್ನು ಆದಷ್ಟು ಬೇಗ ನಡೆಸಬೇಕು. ಇಲ್ಲದಿದ್ದಲ್ಲಿ ಸರ್ಕಾರ, ಬಿಬಿಎಂಪಿಯನ್ನು ಜೆಬಿಎ ಎಂದು ಮರುನಾಮಕರಣ ಮಾಡಿದಕ್ಕೆ ಯಾವುದೇ ವ್ಯತ್ಯಾಸವಿರುವುದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ ಮೇ 15 ರಿಂದ ಬೆಂಗಳೂರಿನ ನಾಗರಿಕ ಸ್ವರೂಪವು ಮೂಲಭೂತವಾಗಿ ಬದಲಾಗಲಿದೆ. ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದ್ದು, ಆಡಳಿತವು ಪ್ರಸ್ತುತ ನಗರದ ಮಿತಿಯೊಳಗೆ ಮುಂದುವರಿಯುತ್ತದೆ. ಆದರೆ, ವೇಗವಾಗಿ ಬೆಳೆಯುತ್ತಿರುವ ಮಹಾನಗರದ ಬೇಡಿಕೆಗಳನ್ನು ಪೂರೈಸಲು ಬಹು-ಪಾಲಿಕೆ, ವಿಕೇಂದ್ರೀಕೃತ ಮಾದರಿಯತ್ತ ಸಾಗಲಿದೆ.