ನವದೆಹಲಿ, ಮೇ.09 www.bengaluruwire.com : ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇ-ಕಾಮರ್ಸ್ ವೇದಿಕೆಗಳಲ್ಲಿ ಅನಧಿಕೃತ ವಾಕಿ-ಟಾಕಿ ಸಾಧನಗಳ ಮಾರಾಟದ ವಿರುದ್ಧ ಸರ್ಕಾರಿ ಕಾವಲು ಸಂಸ್ಥೆಯಾದ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (Central Consumer Protection Authority – CCPA) ಜಾರಿ ಕ್ರಮಗಳನ್ನು ಆರಂಭಿಸಿದೆ.
“ಅನುಸರಣೆಯಿಲ್ಲದ (non-compliant) ವೈರ್‌ಲೆಸ್ ಸಾಧನಗಳ ಮಾರಾಟವು ಶಾಸನಬದ್ಧ ಬಾಧ್ಯತೆಗಳನ್ನು ಉಲ್ಲಂಘಿಸುವುದಲ್ಲದೆ, ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆಗಳಿಗೆ ಗಮನಾರ್ಹ ಅಪಾಯಗಳನ್ನುಂಟುಮಾಡಬಹುದು” ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸಿಸಿಪಿಎ ಈ ಕ್ರಮವನ್ನು ಪ್ರಾರಂಭಿಸಿದ್ದು, ಸರಿಯಾದ ಕಾರ್ಯಾಚರಣೆಯ ಆವರ್ತನ ಮಾಹಿತಿ, ಪರವಾನಗಿ ವಿವರಗಳು ಮತ್ತು ಸಲಕರಣೆ ಪ್ರಕಾರದ ಅನುಮೋದನೆ (ETA) ಪ್ರಮಾಣೀಕರಣದ ಕೊರತೆಯಿರುವ ಪಟ್ಟಿಗಳ ಮೇಲೆ ಈ ಕ್ರಮವು ಕೇಂದ್ರೀಕರಿಸುತ್ತದೆ.
ಈ ಉಲ್ಲಂಘನೆಗಳು ಗ್ರಾಹಕ ಸಂರಕ್ಷಣಾ ಕಾಯ್ದೆ, ಭಾರತೀಯ ಟೆಲಿಗ್ರಾಫ್ ಕಾಯ್ದೆ ಮತ್ತು ವೈರ್‌ಲೆಸ್ ಟೆಲಿಗ್ರಾಫಿ ಕಾಯ್ದೆ ಸೇರಿದಂತೆ ಹಲವು ಕಾನೂನು ಚೌಕಟ್ಟುಗಳನ್ನು ಉಲ್ಲಂಘಿಸುತ್ತವೆ ಎಂದು ಅವರು ಹೇಳಿದರು.

ಡಿಜಿಟಲ್ ಮಾರುಕಟ್ಟೆಗಳಲ್ಲಿ ಅನುಸರಣೆ ಮತ್ತು ಗ್ರಾಹಕರ ಸುರಕ್ಷತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಸೆಕ್ಷನ್ 18(2)(l) ಅಡಿಯಲ್ಲಿ ಸಿಸಿಪಿಎ ಔಪಚಾರಿಕ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ ಎಂದು ಸಚಿವರು ಹೇಳಿದರು.

ಕಾನೂನು ಬಾಹಿರ ವ್ಯಾಪಾರ ಹತ್ತಿಕ್ಕಲು ಕ್ರಮ :
ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಕಾನೂನುಬಾಹಿರ ವ್ಯಾಪಾರ ಪದ್ಧತಿಗಳನ್ನು ತಡೆಯಲು ಮಾರಾಟಗಾರರು ಎಲ್ಲಾ ಅನ್ವಯವಾಗುವ ನಿಯಂತ್ರಕ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಗ್ರಾಹಕರ ಹಿತಾಸಕ್ತಿ ಮತ್ತು ದೇಶದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಿಸಿಪಿಎ, 13 ಪ್ರಮುಖ ಇ-ಕಾಮರ್ಸ್ ವೇದಿಕೆಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ವೇದಿಕೆಗಳು ಪರವಾನಗಿ ಇಲ್ಲದ ವೈರ್‌ಲೆಸ್ ಉಪಕರಣಗಳಾದ ವಾಕಿ-ಟಾಕಿಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಉಪಕರಣಗಳ ಮಾರಾಟವು ಗ್ರಾಹಕ ಹಿತಾಸಕ್ತಿ ಕಾಯ್ದೆ 2019 ಅನ್ನು ಉಲ್ಲಂಘಿಸುತ್ತದೆ.
ಅಮೆಜಾನ್, ಫ್ಲಿಪ್‌ಕಾರ್ಟ್, ಮೀಶೋ, ಓಎಲ್‌ಎಕ್ಸ್, ಟ್ರೇಡ್‌ಇಂಡಿಯಾ, ಫೇಸ್‌ಬುಕ್, ಇಂಡಿಯಾಮಾರ್ಟ್, ವರ್ಧನ್ ಮಾರ್ಟ್, ಜಿಯೋಮಾರ್ಟ್, ಕೃಷ್ಣಮಾರ್ಟ್, ಚಿಮಿಯಾ, ಟಾಕ್ ಪ್ರೊ ವಾಕಿ ಟಾಕಿ ಮತ್ತು ಮಾಸ್ಕ್‌ಮ್ಯಾನ್ ಟಾಯ್ಸ್ ಮುಂತಾದ ವೇದಿಕೆಗಳಿಗೆ ಈ ನೋಟಿಸ್‌ಗಳನ್ನು ನೀಡಲಾಗಿದೆ.
ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಅಮೆಜಾನ್‌ನಲ್ಲಿ ಸುಮಾರು 467, ಫ್ಲಿಪ್‌ಕಾರ್ಟ್‌ನಲ್ಲಿ 314, ಮೀಶೋದಲ್ಲಿ 489 ಮತ್ತು ಟ್ರೇಡ್‌ಇಂಡಿಯಾದಲ್ಲಿ 423 ವಾಕಿ-ಟಾಕಿ ಉತ್ಪನ್ನಗಳು ಮಾರಾಟಕ್ಕಿರುವುದು ಬೆಳಕಿಗೆ ಬಂದಿದೆ.
ಸಿಸಿಪಿಎ ಇ-ಕಾಮರ್ಸ್ ವೇದಿಕೆಗಳಿಂದ ಈ ಮಾಹಿತಿಗಳನ್ನು ಕೇಳಿದೆ:
* ಪ್ರತಿ ಮಾರಾಟಗಾರರ ಹೆಸರು ಮತ್ತು ಸಂಪರ್ಕ ವಿವರಗಳು,
* ವಾಕಿ-ಟಾಕಿ ಉಪಕರಣಗಳ ಉತ್ಪನ್ನ ಯುಆರ್‌ಎಲ್ ಮತ್ತು ಲಿಸ್ಟಿಂಗ್ ಐಡಿಗಳು,
* ಫ್ರೀಕ್ವೆನ್ಸಿ ವಿವರಣೆಗಳು ಮತ್ತು ಲಿಸ್ಟಿಂಗ್‌ನಲ್ಲಿ ನಮೂದಿಸಲಾದ ಪರವಾನಗಿ ಮಾಹಿತಿ,
* ಇಟಿಎ/ಡಬ್ಲ್ಯೂಪಿಸಿ ಪ್ರಮಾಣೀಕರಣ ವಿವರಗಳನ್ನು ಸಂಗ್ರಹಿಸಲಾಗಿದೆಯೇ ಅಥವಾ ಪರಿಶೀಲಿಸಲಾಗಿದೆಯೇ ಎಂಬ ಮಾಹಿತಿ,
* ಮತ್ತು ಜನವರಿ 2023 ರಿಂದ ಇಲ್ಲಿಯವರೆಗೆ ಪ್ರತಿ ಲಿಸ್ಟಿಂಗ್‌ನಲ್ಲಿ ಮಾರಾಟವಾದ ಯುನಿಟ್‌ಗಳ ಸಂಖ್ಯೆಯ ಮಾಹಿತಿ ನೀಡುವಂತೆ ಸಿಸಿಪಿಎ ಇ-ಕಾಮರ್ಸ್ ಸಂಸ್ಥೆಗಳಿಗೆ ತಿಳಿಸಿದೆ.