ನವದೆಹಲಿ, ಮೇ.08 www.bengaluruwire.com : ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ಬುಧವಾರ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ಭಯೋತ್ಪಾದಕರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಿದ್ದಕ್ಕಾಗಿ ಭಾರತ ಗುರುವಾರ ಪಾಕಿಸ್ತಾನದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.
ಇಸ್ಲಾಮಾಬಾದ್ ಅನ್ನು ಈ ವಿಚಾರದಲ್ಲಿ ತೀವ್ರವಾಗಿ ಟೀಕಿಸಿದ್ದು, ಭಯೋತ್ಪಾದಕರಿಗೆ ಸರ್ಕಾರಿ ಅಂತ್ಯಕ್ರಿಯೆಗಳನ್ನು ನೀಡುವುದು ಪಾಕಿಸ್ತಾನದಲ್ಲಿ ಅಭ್ಯಾಸವಾಗಿರಬಹುದು ಎಂಬುದಾಗಿ ಅರ್ಥ ಮಾಡಿಕೊಳ್ಳಬಹುದು ಎಂದಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಗುರುವಾರ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಯನ್ನು, ಸಮವಸ್ತ್ರ ಧರಿಸಿದ ಪಾಕಿಸ್ತಾನಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿ, ಹತ್ಯೆಗೀಡಾದ ಭಯೋತ್ಪಾದಕರ ಶವಪೆಟ್ಟಿಗೆಯ ಹಿಂದೆ ಪ್ರಾರ್ಥನೆ ಸಲ್ಲಿಸುತ್ತಿರುವ ಛಾಯಾಚಿತ್ರವನ್ನು ತೋರಿಸಿದ್ದಾರೆ. ಈ ಚಿತ್ರವು ಜಗತ್ತಿಗೆ ಯಾವ ಸಂದೇಶವನ್ನು ನೀಡುತ್ತದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಭಯೋತ್ಪಾದಕರಿಗೆ ಸರ್ಕಾರಿ ಅಂತ್ಯಕ್ರಿಯೆ ; ಪಾಕಿಸ್ತಾನದ ಅಭ್ಯಾಸ :

“ಈ ದಾಳಿಗಳಲ್ಲಿ ಕೇವಲ ನಾಗರಿಕರು ಮಾತ್ರ ಸಾವನ್ನಪ್ಪಿದ್ದರೆ, ಈ ಚಿತ್ರವು ನಿಮಗೆಲ್ಲರಿಗೂ ಯಾವ ಸಂದೇಶವನ್ನು ರವಾನಿಸುತ್ತದೆ ಎಂದು ನಾನು ಅಚ್ಚರಿ ಪಡುತ್ತೇನೆ. ಇದು ಕೇಳಬೇಕಾದ ಪ್ರಶ್ನೆ. ನಾಗರಿಕರ ಅಂತ್ಯಕ್ರಿಯೆಗಳಲ್ಲಿ ಶವಪೆಟ್ಟಿಗೆಯನ್ನು ಪಾಕಿಸ್ತಾನಿ ಧ್ವಜಗಳಿಂದ ಹೊದಿಸಿ ಸರ್ಕಾರಿ ಗೌರವಗಳನ್ನು ಸಲ್ಲಿಸುವುದು ವಿಚಿತ್ರವಾಗಿದೆ” ಎಂದು ಅವರು ಹೇಳಿದರು.

ನಾಗರಿಕ ಸಾವುನೋವುಗಳ ಹೇಳಿಕೆಗಳನ್ನು ಬಲವಾಗಿ ತಿರಸ್ಕರಿಸಿದ ವಿದೇಶಾಂಗ ಕಾರ್ಯದರ್ಶಿ, “ನಮ್ಮ ಮಟ್ಟಿಗೆ, ಈ ಸೌಲಭ್ಯಗಳಲ್ಲಿ ಕೊಲ್ಲಲ್ಪಟ್ಟ ವ್ಯಕ್ತಿಗಳು ಭಯೋತ್ಪಾದಕರು. ಭಯೋತ್ಪಾದಕರಿಗೆ ಸರ್ಕಾರಿ ಅಂತ್ಯಕ್ರಿಯೆಗಳನ್ನು ನೀಡುವುದು ಪಾಕಿಸ್ತಾನದಲ್ಲಿ ಒಂದು ಅಭ್ಯಾಸವಾಗಿರಬಹುದು, ಆದರೆ ಅದು ನಮಗೆ ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತಿಲ್ಲ” ಎಂದು ಒತ್ತಿ ಹೇಳಿದರು.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದು, ಇದು ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಆರಂಭಿಕ ಉಲ್ಬಣವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಹೇಳಿದ್ದಾರೆ. ಈ ದಾಳಿಗೆ ಭಾರತ ಆಪರೇಷನ್ ಸಿಂಧೂರ ಮೂಲಕ ಉತ್ತರ ನೀಡಿದೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪಹಲ್ಗಾಮ್ ದಾಳಿಯ ಕುರಿತು ಮಾತುಕತೆ ನಡೆಯುತ್ತಿರುವಾಗ, ಪಾಕಿಸ್ತಾನವು ಟಿಆರ್‌ಎಫ್ (ದಿ ರೆಸಿಸ್ಟೆನ್ಸ್ ಫ್ರಂಟ್) ಪಾತ್ರವನ್ನು ವಿರೋಧಿಸಿತು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಟಿಆರ್‌ಎಫ್ ಒಮ್ಮೆ ಅಲ್ಲ, ಎರಡು ಬಾರಿ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು ಎಂದರು.
ಗುರುದ್ವಾರದ ಮೇಲೆ ಪಾಕ್ ದಾಳಿ:
ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಸಿಖ್ ಸಮುದಾಯದ ಮೇಲೆ ಗುರಿಯಿಟ್ಟು ದಾಳಿ ನಡೆಸಿತು, ಪೂಂಚ್‌ನಲ್ಲಿ ಗುರುದ್ವಾರದ ಮೇಲೆ ದಾಳಿ ನಡೆಸಿದೆ. ಸಿಖ್ ಸಮುದಾಯದ ಸದಸ್ಯರ ಮೇಲೆ ದಾಳಿ ಮಾಡಿತು. ದಾಳಿಯಲ್ಲಿ ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು, ಪೂಂಚ್‌ನಲ್ಲಿ ಒಟ್ಟು 16 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಸೇನಾ ನೆಲೆಗಳ ಟಾರ್ಗೆಟ್ ಮಾಡಿದ್ದ ಪಾಕಿಸ್ತಾನ: ಪಾಕಿಸ್ತಾನವು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಗುರಿಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಲು ಪ್ರಯತ್ನ ಮಾಡಿತ್ತು ಎಂದು ಸರ್ಕಾರ ತಿಳಿಸಿದೆ.
“ಇವುಗಳನ್ನು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಿಂದ ತಟಸ್ಥಗೊಳಿಸಲಾಗಿದೆ. ಈ ದಾಳಿಯ ಅವಶೇಷಗಳನ್ನು ಈಗ ಪಾಕಿಸ್ತಾನದ ದಾಳಿಯನ್ನು ಸಾಬೀತುಪಡಿಸುವ ಹಲವಾರು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗುತ್ತಿದೆ” ಎಂದು ಕರ್ನಲ್ ಸೋಫಿಯಾ ಖುರೇಷಿ ದೆಹಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ, ವಿಕ್ರಮ್ ಮಿಸ್ತ್ರಿ ಅವರು, ಲಾಹೋರ್ ನಲ್ಲಿದ್ದ ಏರ್ ಡಿಫೆನ್ಸ್ ಸಿಸ್ಟಂ ನಾಶ ಮಾಡಿದ್ದೇವೆ. ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ಚಾಪ್ಟರ್-2 ಮುಂದುವರೆದಿದೆ ಎಂದರು.
ಪಾಕ್ ಮೂಲದ OTT ಕಂಟೆಂಟ್ ಪ್ರಸಾರಕ್ಕೆ ತಡೆ :
ಪಾಕಿಸ್ತಾನ ಮೂಲದ ವೆಬ್-ಸರಣಿ, ಚಲನಚಿತ್ರ, ಪಾಡ್‌ಕಾಸ್ಟ್ ಸೇರಿದಂತೆ ಎಲ್ಲ ರೀತಿಯ ಕಂಟೆಂಟ್‌ಗಳನ್ನು ತಕ್ಷಣವೇ ನಿಲ್ಲಿಸುವಂತೆ ಒಟಿಟಿ ವೇದಿಕೆಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಒಟಿಟಿ ವೇದಿಕೆಗಳು, ಮಾಧ್ಯಮ ಸ್ಟ್ರೀಮಿಂಗ್ ವೇದಿಕೆಗಳು, ಮಧ್ಯವರ್ತಿಗಳ ವೆಬ್-ಸಿರೀಸ್, ಚಲನಚಿತ್ರ, ಹಾಡುಗಳು, ಪಾಡ್‌ಕಾಸ್ಟ್‌ಗಳು ಮತ್ತು ಇತರೆ ಸ್ಟ್ರೀಮಿಂಗ್ ಮಾಧ್ಯಮಗಳು ಪಾಕ್ ಮೂಲದ ವಿಷಯಗಳ ಪ್ರಸಾರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
ಭಾರತದಲ್ಲಿ 27 ವಿಮಾನ ನಿಲ್ದಾಣಗಳು ಸದ್ಯ ಬಂದ್ ಆಗಿವೆ. ಮುಂದಿನ 3 ದಿನ ಮೇ 10ರ ಮುಂಜಾನೆ 5:30 ರವರೆಗೂ 27 ವಿಮಾನ ನಿಲ್ದಾಣಗಳು ಬಂದ್ ಇರಲಿವೆ ಎನ್ನಲಾಗಿದೆ.ಇದರ ಜೊತೆಗೆ ಇಂದು ಒಂದೇ ದಿನ 430 ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.