ಬೆಂಗಳೂರು, ಮೇ.06 www.bengaluruwire.com : ರಾಜಧಾನಿಯ ರಸ್ತೆ ರಸ್ತೆಗಳಲ್ಲಿ ಅನಧಿಕೃತ ಒಎಫ್ ಸಿ ಅಳವಡಿಕೆಯಿಂದ ನೂರಾರು ಕೋಟಿ ರೂ. ನಷ್ಟ ಅನುಭವಿಸುತ್ತಿರುವ ಬಿಬಿಎಂಪಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ನಿರ್ಧಾರ ದೊಡ್ಡ ಶಾಕ್ ನೀಡಿದೆ.
ಬೆಸ್ಕಾಂ ಸಂಸ್ಥೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಭೂಮಿಯ ಮೇಲ್ಮಟ್ಟದ ವಿದ್ಯುತ್ ತಂತಿ ಮತ್ತು ಕೇಬಲ್‌ಗಳನ್ನು ಭೂಗತವಾಗಿ ಸ್ಥಳಾಂತರಿಸುವ ಯೋಜನೆಯಲ್ಲಿ ಈಗಾಗಲೇ ವಿದ್ಯುತ್ ಸರಬರಾಜು ಕಂಪನಿಯು ಬಿಎಂಎಜೆಡ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಒಎಫ್ ಸಿ ಡಕ್ಟ್ ಅಳವಡಿಸಿದೆ.
ಈ ಡಕ್ಟ್ ನಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ (Optical fibre cable – OFC) ಅಳವಡಿಕೆ ಮಾಡಲು ಟೆಲಿಕಾಮ್ ಕಂಪನಿ ಹಾಗೂ ಸಂವಹನ ಸಂಸ್ಥೆಗಳಿಗೆ ಆ ಮಾರ್ಗಗಳನ್ನು ಭೋಗ್ಯಕ್ಕೆ ನೀಡಲು ನಿರ್ಧರಿಸಿದೆ. ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ 2025ರ ಏ.3 ರಂದು ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬಂದಿದೆ. ಇದರಿಂದಾಗಿ ಬಿಬಿಎಂಪಿ ಒಎಫ್ ಸಿ ಆದಾಯಕ್ಕೆ ಬೆಸ್ಕಾಂ ದೊಡ್ಡ ಪೆಟ್ಟು ಕೊಟ್ಟಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಗಳ ಒಡೆತನ ಮತ್ತು ನಿರ್ವಹಣೆಯ ಸಂಪೂರ್ಣ ಹಕ್ಕು ಬಿಬಿಎಂಪಿಗೆ ಇದೆ. ಯಾವುದೇ ಸಂಸ್ಥೆಯು ಭೂಗತ ಅಥವಾ ಮೇಲ್ಮಟ್ಟದ ಮೂಲಸೌಕರ್ಯ ಅಳವಡಿಸಲು ಬಿಬಿಎಂಪಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ನಿಯಮವನ್ನು ಉಲ್ಲಂಘಿಸಿ ಬೆಸ್ಕಾಂ ಒಎಫ್‌ಸಿ ಅಳವಡಿಕೆಗೆ ಮುಂದಾಗಿರುವುದು ಬಿಬಿಎಂಪಿಯ ಕೆಂಗಣ್ಣಿಗೆ ಗುರಿಯಾಗಿದೆ.

ಬಿಬಿಎಂಪಿಯ ವಾದವೇನು? :

ಬಿಬಿಎಂಪಿ ಮುಖ್ಯ ಆಯುಕ್ತರು ಇದೇ ಏ.28ರಂದು ಬೆಸ್ಕಾಂ ಕೇಂದ್ರ ಕಚೇರಿಗೆ ಬರೆದಿರುವ ಪತ್ರದಲ್ಲಿ, ಬೆಸ್ಕಾಂ ಒಎಫ್‌ಸಿ ಅಳವಡಿಸುವ ಮೊದಲು ಬಿಬಿಎಂಪಿಗೆ ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕು. ಈ ಶುಲ್ಕವು ಬಿಬಿಎಂಪಿಯ ಆದಾಯದ ಪ್ರಮುಖ ಭಾಗವಾಗಿದ್ದು, ವಾರ್ಷಿಕವಾಗಿ ರೂ.125 ರಿಂದ ರೂ.250 ಕೋಟಿಗಳವರೆಗೆ ಸಂಗ್ರಹವಾಗುತ್ತದೆ. ಬೆಸ್ಕಾಂ ಶುಲ್ಕ ಪಾವತಿಸದೆ ಒಎಫ್‌ಸಿ ಅಳವಡಿಸಿದರೆ, 2018ರ ಡಿಸೆಂಬರ್ 10ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಅನ್ವಯ, ಲೆಕ್ಕಪರಿಶೋಧನೆಯಲ್ಲಿ ಆಕ್ಷೇಪಣೆ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಬೆಸ್ಕಾಂ ನಡೆಯಿಂದ ಬಿಬಿಎಂಪಿಗೆ ನಷ್ಟ :
ಬೆಸ್ಕಾಂನ ಈ ನಡೆಯಿಂದ ಬಿಬಿಎಂಪಿಗೆ ಬರಬೇಕಾದ ಆದಾಯಕ್ಕೆ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಸಾರ್ವಜನಿಕ ರಸ್ತೆಗಳಲ್ಲಿ ಕೇಬಲ್ ಅಳವಡಿಕೆಯಿಂದ ನಗರದ ಸೌಂದರ್ಯ ಹಾಳಾಗಿದ್ದು, ಇದೀಗ ಬೆಸ್ಕಾಂನ ಈ ನಡೆ ವಿವಾದಕ್ಕೆ ಕಾರಣವಾಗಿದೆ.
2019-20 ಮತ್ತು 2021-22 ರ ನಡುವೆ ಪಾಲಿಕೆಗೆ ₹87 ಕೋಟಿ ನಷ್ಟ :
ಬಿಬಿಎಂಪಿಯ ಲೆಕ್ಕಪರಿಶೋಧಕರು ಇತ್ತೀಚೆಗೆ, ಟೆಲಿಕಾಂ ಸೇವಾ ಕಂಪನಿಗಳಿಂದ ಆಪ್ಟಿಕಲ್ ಫೈಬರ್ ಕೇಬಲ್‌ಗಳ (OFC) ಅಳವಡಿಕೆಗೆ ಶುಲ್ಕ ಸಂಗ್ರಹಿಸುವಲ್ಲಿ ಅಕ್ರಮಗಳನ್ನು ಬಹಿರಂಗಪಡಿಸಿದ್ದರು. ಇದರಿಂದಾಗಿ 2019-20 ಮತ್ತು 2021-22 ರ ನಡುವೆ ಪಾಲಿಕೆಗೆ ಸುಮಾರು 87 ಕೋಟಿ ರೂ.ಗಳಷ್ಟು ಗಣನೀಯ ನಷ್ಟವಾಗಿದೆ ಎಂಬುದನ್ನು ಎತ್ತಿ ತೋರಿಸಿದ್ದರು.
OFC ಕೇಬಲ್ ಗಳನ್ನು ಹಾಕುವಾಗ ಸಾರ್ವಜನಿಕ ಭೂಮಿಯನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಎತ್ತಿ ತೋರಿಸಿದ್ದಾರೆ. ಮೀಟರ್‌ಗೆ 1,500 ರೂ.ಗಳ ನಿಗದಿತ ಶುಲ್ಕಕ್ಕಿಂತ ಕಡಿಮೆ ಬೆಲೆಗೆ ಒಎಫ್ ಸಿ ಗಳನ್ನು ಹಾಕಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಟೆಲಿಕಾಂ ಸೇವಾ ಕಂಪನಿಗಳೊಂದಿಗೆ ಶಾಮೀಲಾಗಿ ಅನಧಿಕೃತ ಸಂಸ್ಥೆಗಳು ತಮ್ಮ ನೆಟ್‌ವರ್ಕ್‌ಗಳನ್ನು ಹಾಕಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಗಮನಾರ್ಹ ಆರ್ಥಿಕ ನಷ್ಟವಾಗಿದೆ. “ಒಎಫ್ ಸಿ ಮಾಫಿಯಾ ಜಾಲದಿಂದ ಈ ಕಾನೂನುಬಾಹಿರ ಚಟುವಟಿಕೆಯು ಸಾವಿರಾರು ಕೋಟಿ ಆದಾಯ ನಷ್ಟಕ್ಕೆ ಕಾರಣವಾಗಿದೆ” ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಟೆಂಡರ್‌ಶ್ಯೂರ್ ರಸ್ತೆಗಳಲ್ಲಿ ಯುಟಿಲಿಟಿ ಡಕ್ಟ್‌ಗಳಿಗೆ ಬೈಪಾಸ್ :
ಬಿಬಿಎಂಪಿ ಅಭಿವೃದ್ಧಿಪಡಿಸಿದ ಟೆಂಡರ್‌ಶ್ಯೂರ್ ರಸ್ತೆಗಳಲ್ಲಿ ಕೇಬಲ್ ಅಳವಡಿಕೆಗಾಗಿ ಯುಟಿಲಿಟಿ ಡಕ್ಟ್‌ಗಳು ಅಸ್ತಿತ್ವದಲ್ಲಿದ್ದರೂ, ಪಾಲಿಕೆಗೆ ಶುಲ್ಕವನ್ನು ಪಾವತಿಸುವುದನ್ನು ತಪ್ಪಿಸಲು ಟೆಲಿಕಾಂ ಕಂಪನಿಗಳು ಆಗಾಗ್ಗೆ ಅವುಗಳನ್ನು ಬೈಪಾಸ್ ಮಾಡುತ್ತವೆ. ಸಿಕ್ಕ ಸಿಕ್ಕ ಮರಗಳು, ವಿದ್ಯುತ್ ಕಂಬಗಳು, ಕಟ್ಟಡಗಳು ಮತ್ತು ಟ್ರಾಫಿಕ್ ಸಿಗ್ನಲ್ ಕಂಬಗಳ ಮೇಲೆ ಕೇಬಲ್‌ಗಳನ್ನು ಪಾದಚಾರಿ ಮಾರ್ಗಕ್ಕೆ ತೊಡಕಾಗುವಂತೆ ಕಟ್ಟಲಾಗುತ್ತದೆ.
ಇದು ನಗರದ ಸೌಂದರ್ಯವನ್ನು ಹಾನಿಗೊಳಿಸುತ್ತದೆ ಮತ್ತು ವಾಹನ ಚಾಲಕರು ಮತ್ತು ಪಾದಚಾರಿಗಳಿಗೆ ಅಪಾಯವನ್ನು ಉಂಟು ಮಾಡುತ್ತಿದೆ. ಒಎಫ್ ಸಿ ಅಳವಡಿಸುವ ಅನುಮತಿಗಳಿಗೆ ಸಂಬಂಧಿಸಿದ ಫೈಲ್‌ಗಳ ಇತ್ತೀಚಿನ ಪರಿಶೀಲನೆಯ ಸಮಯದಲ್ಲಿ ಈ ಅಕ್ರಮಗಳು ಬೆಳಕಿಗೆ ಬಂದಿವೆ.
ನಿಗದಿಪಡಿಸಿದಕ್ಕಿಂತ ಕಡಿಮೆ ಶುಲ್ಕ ವಿಧಿಸಿ ಭ್ರಷ್ಟಾಚಾರ :
“2019ರಲ್ಲಿ ಆಗಿನ ಪಾಲಿಕೆ ಕಮಿಷನರ್ ನವೆಂಬರ್ 29, ರಂದು ಆದೇಶ ಹೊರಡಿಸಿದ್ದರೂ, ಟೆಲಿಕಾಂ ಕಂಪನಿಗಳಿಗೆ ಮೀಟರ್‌ಗೆ 850 ರೂ. ಶುಲ್ಕವನ್ನು ನಿಗದಿಪಡಿಸಿದಕ್ಕಿಂತ ಕಡಿಮೆ ಶುಲ್ಕ ವಿಧಿಸಲಾಗಿದೆ. ಇದು ಕಂಪನಿಗಳು ಮತ್ತು ಭ್ರಷ್ಟ ಅಧಿಕಾರಿಗಳಿಗೆ ಲಾಭ ತಂದಿತು. ಇದರಿಂದಾಗಿ ಮೂರು ವರ್ಷಗಳಲ್ಲಿ 86.6 ಕೋಟಿ ರೂ. ನಷ್ಟ ಉಂಟಾಗಿದೆ” ಎಂದು ಲೆಕ್ಕ ಪರಿಶೋಧನಾ ವರದಿ ಹೇಳುತ್ತದೆ. “ಕಮಿಷನರ್ ಆದೇಶಗಳನ್ನು ಪಾಲಿಸದಿದ್ದಕ್ಕಾಗಿ OFC ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಯಾವುದೇ ವಿವರಣೆಯನ್ನು ನೀಡಲು ವಿಫಲರಾಗಿದ್ದಾರೆ” ಎಂದು ಹೇಳಲಾಗಿದೆ.
ತಾಂತ್ರಿಕ ಸಿಬ್ಬಂದಿ ಕೊರತೆಯಿಂದಾಗಿ, ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ಅಕ್ರಮಗಳನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ವರದಿ ಹೇಳುತ್ತದೆ. ಅನಧಿಕೃತ OFC ಗಳನ್ನು ತೆರವುಗೊಳಿಸುವ ಪ್ರಯತ್ನಗಳಿಗೆ ದೂರಸಂಪರ್ಕ ಸೇವಾ ಪೂರೈಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಇರುತ್ತದೆ. ಇದೆಲ್ಲ ಸಂಘಟಿತ ಮಾಫಿಯಾ ಜಾಲ ಎಂಬ ಬಗ್ಗೆ ಸಾಕಷ್ಟು ಆರೋಪಗಳಿವೆ.
ಒಟ್ಟಾರೆಯಾಗಿ, ಒಂದೆಡೆ ಅನಧಿಕೃತ ಒಎಫ್ ಸಿ ಅಳವಡಿಕೆ ಲಂಗು ಲಗಾಮಿಲ್ಲದೆ ಮುಂದುವರೆಯುತ್ತಿದೆ. ಮತ್ತೊಂದೆಡೆ ಬೆಸ್ಕಾಂನ ಒಎಫ್‌ಸಿ ಅಳವಡಿಕೆ ಯೋಜನೆಯು ಬಿಬಿಎಂಪಿ ಮತ್ತು ಬೆಸ್ಕಾಂ ನಡುವಿನ ಭಿನ್ನಾಭಿಪ್ರಾಯಕ್ಕೆ ಹಾಗೂ ಪಾಲಿಕೆ ಆದಾಯ ನಷ್ಟಕ್ಕೆ ಕಾರಣವಾಗಲಿದ್ದು, ಈ ವಿವಾದವನ್ನು ಬಿಬಿಎಂಪಿ ಹೇಗೆ ಬಗೆಹರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.