ಶ್ರೀನಗರ, ಏ.27 www.bengaluruwire.com : ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಏ.22 ರಂದು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ನಾಗರೀಕರು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಇಲಾಖೆಯು ರಾಷ್ಟ್ರೀಯ ತನಖಾ ದಳ(National Investigation Agency- NIA)ಗೆ ವಹಿಸಿದೆ.
ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ತಂಡ ಇದೀಗ ಅಧಿಕೃತವಾಗಿ ತನಿಖೆಗೆ ಇಳಿದಿದೆ. ಈ ಬಗ್ಗೆ ಎನ್ಐಎ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.
ತನಿಖೆಗೆ ನಿಯೋಜಿಲ್ಪಟ್ಟ ಎನ್ಐಎ ತಂಡ ಈಗಾಗಲೇ ಪಹಲ್ಗಾಮ್ ತಲುಪಿದೆ. ದಾಳಿ ನಡೆದ ಸ್ಥಳವನ್ನು, ದುರ್ಘಟನೆ ನಡೆದ ಸಂದರ್ಭದ ಬಗ್ಗೆ ಸೂಕ್ಷ್ಮವಾಗಿ ಹಾಗೂ ವಿಸ್ತ್ರತವಾಗಿ ಪರಿಶೀಲನೆ ಆರಂಭಿಸಿದೆ. ಜೊತೆಗೆ ತನಿಖಾ ಏಜೆನ್ಸಿಯ ವಿಧಿವಿಜ್ಞಾನ ಪ್ರಯೋಗಾಲಯ ತಂಡವು ಸ್ಥಳದಲ್ಲಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ.
ಮತ್ತೊಂದೆಡೆ ಸ್ಥಳೀಯ ಪೊಲೀಸರಿಂದ ಪ್ರಕರಣದ ಡೈರಿ, ಎಫ್ಐಆರ್ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಇತರ ಪ್ರಮುಖ ದಾಖಲೆಗಳನ್ನ ಸುಪರ್ಧಿಗೆ ಪಡೆದುಕೊಳ್ಳಲು ಎನ್ಐಎ ಮುಂದಾಗಿದೆ.

ಈಗಾಗಲೇ ವಿಶ್ವಮಟ್ಟದಲ್ಲಿ ಚರ್ಚೆಯಾಗಿರುವ ಭಯೋತ್ಪಾದಕರ ಪೈಶಾಚಿಕ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಯೋಧರು ಪಹಲ್ಗಾಮ್ ಪ್ರಕರಣ ಪ್ರಮುಖ ಆರೋಪಿಗಳಾದ ಭಾರತೀಯ ಸೇನೆಯು ಲಷ್ಕರ್ ಎ ತೊಯ್ಯಬಾ ಉಗ್ರರರಾದ ಆದಿಲ್ ಹುಸೇನ್ ತೋಕರ್ ಹಾಗೂ ಆಸಿಫ್ ಶೇಖ್ ಅವರ ಮನೆಗಳನ್ನು ಸ್ಪೋಟಿಸಿ ಧ್ವಂಸ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ಪಹಲ್ಗಾಮ್ ದಾಳಿ ಬಗ್ಗೆ ಹೇಳಿದ್ದೇನು?:
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅಪರಾಧಿಗಳು ಮತ್ತು ಸಂಚುಕೋರರಿಗೆ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಭಾಷಣ ‘ಮನ್ ಕಿ ಬಾತ್’ ನಲ್ಲಿ ಹೇಳಿದರು. ತೀವ್ರ ದುಃಖ ವ್ಯಕ್ತಪಡಿಸಿದ ಅವರು, ಈ ಘಟನೆ ದೇಶದ ಪ್ರತಿಯೊಬ್ಬ ನಾಗರಿಕನನ್ನೂ ನೋಯಿಸಿದೆ ಎಂದು ಹೇಳಿದರು. ಈ ದಾಳಿಯು ಭಯೋತ್ಪಾದನೆಯ ಪೋಷಕರ ಹತಾಶೆಯನ್ನು ತೋರಿಸಿದೆ ಮತ್ತು ಅವರ ಹೇಡಿತನವನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿದರು. ಕಾಶ್ಮೀರದಲ್ಲಿ ಶಾಂತಿ ಮರಳುತ್ತಿರುವ ಸಮಯದಲ್ಲಿ ಇದು ನಡೆದಿದೆ ಎಂದು ಅವರು ಹೇಳಿದರು.
ಭಾರತದಿಂದ ತೆರಳಲು ಪಾಕ್ ಪ್ರಜೆಗಳಿಗೆ ನೀಡಿದ ಗಡುವು ಇಂದು ಅಂತ್ಯ :
ನೆರೆಯ ರಾಷ್ಟ್ರದ 12 ವರ್ಗದ ಅಲ್ಪಾವಧಿ ವೀಸಾ ಹೊಂದಿರುವವರಿಗೆ ನೀಡಲಾಗಿದ್ದ ಗಡುವು ಭಾನುವಾರ (ಏಪ್ರಿಲ್ 27, 2025) ಕೊನೆಗೊಳ್ಳಲಿದ್ದು, ಕಳೆದ ಎರಡು ದಿನಗಳಲ್ಲಿ ಭಾರತದಿಂದ 272 ಮಂದಿ ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದು, ಇನ್ನೂ ನೂರಾರು ಜನರು ನಿರ್ಗಮಿಸುವ ನಿರೀಕ್ಷೆಯಿದೆ. ಕಳೆದ ಏ.24 ರಿಂದ 27ರ ಅವಧಿಯಲ್ಲಿ ಒಟ್ಟು 537 ಪಾಕ್ ಪ್ರಜೆಗಳು ನಿರ್ಗಮಿಸಿದ್ರೆ, 850 ಮಂದಿ ಭಾರತೀಯರು ಅಲ್ಲಿಂದ ಇಲ್ಲಿಗೆ ವಾಪಸ್ಸಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು 237 ಪಾಕ್ ಪ್ರಜೆಗಳು ತಮ್ಮ ದೇಶಕ್ಕೆ ಹೊರಟಿದ್ದಾರೆ, 116 ಭಾರತೀಯ ಪ್ರಜೆಗಳು ಹಿಂತಿರುಗಿದ್ದಾರೆ ಎಂದು ಅಟ್ಟಾರಿ ಗಡಿಯಲ್ಲಿರುವ ಶಿಷ್ಟಾಚಾರ ಅಧಿಕಾರಿ ಅರುಣ್ ಮಹಲ್ ಹೇಳಿದ್ದಾರೆ.
13 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ 629 ಭಾರತೀಯರು ಪಂಜಾಬ್ನಲ್ಲಿರುವ ಅಂತರರಾಷ್ಟ್ರೀಯ ಗಡಿ ದಾಟುವಿಕೆಯ ಮೂಲಕ ಪಾಕಿಸ್ತಾನದಿಂದ ಸ್ವದೇಶಕ್ಕೆ ಮರಳಿದ್ದಾರೆ.