ಬೆಂಗಳೂರು, ಏ.27 www.bengaluruwire.com : ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕವನ್ನು ಕಾನೂನುಬಾಹಿರವಾಗಿ ವಿಧಿಸುತ್ತಿದೆ’ ಎಂದು ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ. ಈ ಸಂಬಂಧ ಪಾಲಿಕೆ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಅವರು ಈ ಕೂಡಲೇ ಈ ಸುತ್ತೋಲೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
‘ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರ 2025ರ ಮಾ.4ರ ಪತ್ರದ ಆಧಾರದ ಮೇಲೆ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ ವಿಧಿಸಲು ಹೊರಡಿಸಿರುವ ಏಪ್ರಿಲ್ 5ರ ಸುತ್ತೋಲೆಯಲ್ಲಿ ನಗರದ ನಾಗರಿಕರು ಆಸ್ತಿ ತೆರಿಗೆ ಜೊತೆಯಲ್ಲಿ ಈ ಶುಲ್ಕವನ್ನು ಪಾವತಿಸುವಂತೆ ಆದೇಶಿಸಿರುವುದು ಕಾನೂನುಬಾಹಿರ’ ಎಂದು ರೆಡ್ಡಿ ವಾದಿಸಿದ್ದಾರೆ.
ಮುಖ್ಯ ಆಯುಕ್ತರು ಹೊರಡಿಸಿರುವ ಸುತ್ತೋಲೆಯು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನ ಆದೇಶಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ, ಯಾರಾದರೂ ನ್ಯಾಯಾಲಯಕ್ಕೆ ಹೋಗಿ ಈ ಆದೇಶವನ್ನು ರದ್ದುಪಡಿಸುವ ಮುನ್ನ, ಪಾಲಿಕೆಯು ತನ್ನ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೇಶದ ಯಾವುದೇ ನಗರದಲ್ಲಿ ಘನತ್ಯಾಜ್ಯ ನಿರ್ವಹಣಾಸೆಸ್ ಮತ್ತು ಘನತ್ಯಾಜ್ಯ ಬಳಕೆದಾರರ ಶುಲ್ಕ ಎರಡನ್ನೂ ವಿಧಿಸಿಲ್ಲ. ಆದರೆ ಬಿಬಿಎಂಪಿಯಲ್ಲಿ ಈಗಾಗಲೇ ಆಸ್ತಿ ತೆರಿಗೆ ಜೊತೆಗೆ ಶೇ.26ರಷ್ಟು ಸೆಸ್ ಸಂಗ್ರಹಿಸಲಾಗುತ್ತಿದೆ. ಇದರ ಜೊತೆಗೆ ಬಳಕೆದಾರರ ಶುಲ್ಕ ಏಕೆ ವಿಧಿಸಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತರನ್ನು ಪ್ರಶ್ನಿಸಿದ್ದಾರೆ.

2016ರ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ, ಘನತ್ಯಾಜ್ಯ ನಿರ್ವಹಣೆ ವೆಚ್ಚವನ್ನು ಸರಿದೂಗಿಸಲು ಸ್ಥಳೀಯ ಸಂಸ್ಥೆ ವಿಧಿಸುವ ಶುಲ್ಕವನ್ನು ಬಳಕೆದಾರ ಶುಲ್ಕ ಎಂದು ಪರಿಗಣಿಸಲಾಗುತ್ತದೆ. ಆದರೆ, ಬಿಬಿಎಂಪಿಯು ಇದನ್ನು ಕಳೆದ ಐದು ವರ್ಷಗಳಿಂದ ಜಾರಿಗೆ ತಂದಿರಲಿಲ್ಲ.

ಇತ್ತೀಚೆಗೆ ಬಿಎಸ್ಡಬ್ಲ್ಯುಎಂಎಲ್ ಮಂಡಳಿಯ ನಿರ್ಣಯ ಮತ್ತು ಸರ್ಕಾರದ ಪತ್ರದ ಮೂಲಕ ಬಿಬಿಎಂಪಿಯು ಗೃಹಬಳಕೆಯ ಮನೆಗಳು, ಸಣ್ಣ ವಾಣಿಜ್ಯ ಸಂಸ್ಥೆಗಳು, ಸಣ್ಣ ಸಂಸ್ಥೆಗಳು ಮತ್ತು ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಬಳಕೆದಾರ ಶುಲ್ಕವನ್ನು ವಿಧಿಸುತ್ತಿದೆ. ಆದರೆ, ಸರ್ಕಾರಿ ಪತ್ರದಲ್ಲಿ ಸಣ್ಣ, ವಾಣಿಜ್ಯ ಮತ್ತು ಸಂಸ್ಥೆಗಳಿಗೆ ಶುಲ್ಕವನ್ನು ಬಿಬಿಎಂಪಿ ಎಸ್ಡಬ್ಲ್ಯುಎಂ ಬೈಲಾಗಳ ಪ್ರಕಾರ ವಿಧಿಸಬೇಕು. ಎಲ್ಲಾ ವಿಧದ ವಸತಿ ಕಟ್ಟಡಗಳಿಗೆ ಪ್ರತಿ ತಿಂಗಳು 200 ರೂ. ನಷ್ಟು ಘನತ್ಯಾಜ್ಯ ಬಳಕೆದಾರರ ಶುಲ್ಕ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಪಾಲಿಕೆಯು ಹೊರಡಿಸಿರುವ ಸುತ್ತೋಲೆಯಲ್ಲಿ ಇದನ್ನು ಪರಿಷ್ಕರಿಸಿ ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಎಂದು ವಿಧಿಸಲಾಗಿದೆ. ಇದಲ್ಲದೆ ಖಾಲಿ ನಿವೇಶನ, ವಸತಿಯೇತರ ಕಟ್ಟಡ, ಹೋಟೆಲ್ ಗಳಿಗೂ ದರ ನಿಗದಿಮಾಡಲಾಗಿದೆ. ಶೇ.20 ರಿಂದ 200ರಷ್ಟು ಹೆಚ್ಚಾಗಿದ್ದು ಈ ಕ್ರಮ ಅವೈಜ್ಞಾನಿಕವಾಗಿದೆ. ಈ ಮೂಲಕ ಅತಿಯಾದ ದರಗಳನ್ನು ವಿಧಿಸಲಾಗಿದೆ ಎಂದು ರೆಡ್ಡಿ ಟೀಕಿಸಿದ್ದಾರೆ.
ಈ ಸುತ್ತೋಲೆಯಲ್ಲಿ ಸೂಚಿಸಲಾದ ದರಗಳು ಸರ್ಕಾರಿ ಪತ್ರಕ್ಕೆ ವಿರುದ್ಧವಾಗಿದ್ದು, ಕಾನೂನು ಉಲ್ಲಂಘನೆಯಾಗಿದೆ. ಅಲ್ಲದೆ, ಅಪಾರ್ಟ್ಮೆಂಟ್ಗಳು, ಗೇಟೆಡ್ ಕಮ್ಯೂನಿಟಿಗಳು ಮತ್ತು ಸ್ವಯಂ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ವಾಣಿಜ್ಯ ಕಟ್ಟಡಗಳಿಗೂ ಶುಲ್ಕ ವಿಧಿಸಿರುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಸಣ್ಣ ನಿವೇಶನಗಳಲ್ಲಿ ಇರುವ ವಾಣಿಜ್ಯ ಕಟ್ಟಡಗಳ ಕಚೇರಿ, ಬ್ಯಾಂಕ್ ಗಳಿಗೆ ತ್ಯಾಜ್ಯ ನಿರ್ವಹಣೆಯನ್ನು ಆಸ್ತಿ ತೆರಿಗೆ ಪೋರ್ಟಲ್ ನಲ್ಲಿ ಘನತ್ಯಾಜ್ಯ ನಿರ್ವಹಣೆ ಬೈಲಾ ಪ್ರಕಾರ ಘೋಷಿಸಿಕೊಳ್ಳಲು ಅವಕಾಶ ಕಲ್ಪಿಸಿಲ್ಲ. ಇದರಿಂದಾಗಿ ಪ್ರತಿದಿನ ಎರಡು-ಮೂರು ಕೆಜಿ ತ್ಯಾಜ್ಯ ಉತ್ಪಾದಿಸುವ ಸಾವಿರಾರು ಕಟ್ಟಡಗಳು ಲಕ್ಷಾಂತರ ರೂ. ಘನತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಸುವಂತಾಗಿದೆ ಎಂದು ಮುಖ್ಯ ಆಯುಕ್ತರಿಗೆ ವಿಸ್ತ್ರತವಾಗಿ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಈ ಕಾನೂನುಬಾಹಿರ ಹಾಗೂ ಅಧಿಕವಾಗಿ ಶುಲ್ಕ ವಿಧಿಸುವಿಕೆಯಿಂದಾಗಿ ನಗರದ ನಾಗರಿಕರು ಆತಂಕಗೊಂಡಿದ್ದಾರೆ. ಇದರಿಂದಾಗಿ ಬಾಡಿಗೆ ಮನೆಗಳು, ಅಂಗಡಿಗಳು, ವಾಣಿಜ್ಯ ಕಟ್ಟಡಗಳು, ಶಾಲೆಗಳು, ಕಾಲೇಜುಗಳು, ಹೋಟೆಲ್ಗಳು, ಕಲ್ಯಾಣ ಮಂಟಪಗಳು ಮತ್ತು ಆಸ್ಪತ್ರೆಗಳ ವೆಚ್ಚ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ ನಗರದ ಸಾರ್ವಜನಿಕರು ಬಳಕೆದಾರರ ಶುಲ್ಕ ಸೃಷ್ಟಿಸುವ ವೆಚ್ಚ ಹೆಚ್ಚಳದಿಂದ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ ಎಂದು ಬಿಬಿಎಂಪಿಯ ಹಿರಿಯ ಮಾಜಿ ಸದಸ್ಯ ಪದ್ಮನಾಭ ರೆಡ್ಡಿ ಎಚ್ಚರಿಸಿದ್ದಾರೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಬಿಬಿಎಂಪಿಯು ತಕ್ಷಣವೇ ಈ ಕಾನೂನುಬಾಹಿರ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಪದ್ಮನಾಭ ರೆಡ್ಡಿ ಒತ್ತಾಯಿಸಿದ್ದಾರೆ.