ಬೆಂಗಳೂರು, ಏ.26 www.bengaluruwire.com : ದೇಶದ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಮತ್ತು ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಮುನ್ನಡೆ ಸಾಧಿಸುವ ನಿಟ್ಟಿನಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಶ್ರೀ ಚಿತ್ರ ತಿರುಣಾಲ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (SCTIMST – ಎಸ್ಸಿಟಿಐಎಂಎಸ್ಟಿ) ಬಾಹ್ಯಾಕಾಶ ಔಷಧದ ಕುರಿತು ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST – ಡಿಎಸ್ಟಿ) ಅಡಿಯಲ್ಲಿ ಬರುವ ಈ ಸಂಸ್ಥೆಗಳ ಪಾಲುದಾರಿಕೆಯು, ದೇಶದ ಬಾಹ್ಯಾಕಾಶ ಮತ್ತು ವೈದ್ಯಕೀಯ ಸಂಶೋಧನಾ ವಲಯಗಳಿಗೆ ಹೊಸ ಆಯಾಮವನ್ನು ನೀಡಲಿದೆ. ಏ.25, ರಂದು ನಡೆದ ಈ ಒಪ್ಪಂದವು, ಬಾಹ್ಯಾಕಾಶ ಔಷಧ ಮತ್ತು ಅದರ ಅನ್ವಯಿಕೆಗಳ ಪ್ರಗತಿಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.
ಈ ಸಹಯೋಗವು ಇಸ್ರೋದ ಮಹತ್ವಾಕಾಂಕ್ಷೆಯ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಯೋಜನೆಯಾದ ಗಗನ್ಯಾನ್ಗೆ ನಿರ್ಣಾಯಕ ಬೆಂಬಲವನ್ನು ನೀಡಲಿದೆ. ಮಾನವ ಆರೋಗ್ಯ ಸಂಶೋಧನೆ, ಸೂಕ್ಷ್ಮ ಗುರುತ್ವಾಕರ್ಷಣೆಯ ಅಧ್ಯಯನಗಳು, ಬಾಹ್ಯಾಕಾಶ ಜೀವಶಾಸ್ತ್ರ ಮತ್ತು ಬಯೋಮೆಡಿಕಲ್ ನಾವೀನ್ಯತೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಈ ಪಾಲುದಾರಿಕೆಯು ಗಮನಹರಿಸಲಿದೆ.
ಸ್ಪೇಸ್ ಮೆಡಿಸಿನ್ ಒಪ್ಪಂದದ ಉದ್ದೇಶವೇನು?:

ಇದು ಕೇವಲ ರಾಷ್ಟ್ರೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಮಾತ್ರವಲ್ಲದೆ, ಭೂಮಿಯ ಮೇಲಿನ ಆರೋಗ್ಯ ರಕ್ಷಣೆಯ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಮಾನವ ಶರೀರಶಾಸ್ತ್ರ ಮತ್ತು ನಡವಳಿಕೆಯ ಆರೋಗ್ಯ ಅಧ್ಯಯನಗಳು, ವೈದ್ಯಕೀಯ ಸಾಧನಗಳ ಅಭಿವೃದ್ಧಿ, ವಿಕಿರಣ ಜೀವಶಾಸ್ತ್ರ, ಬಾಹ್ಯಾಕಾಶ ಟೆಲಿಮೆಡಿಸಿನ್ ಮತ್ತು ಗಗನಯಾತ್ರಿಗಳ ಆರೋಗ್ಯ ಕಾಪಾಡುವ ಉಪಕ್ರಮಗಳಂತಹ ವಿಷಯಗಳ ಮೇಲೆ ಈ ಸಹಯೋಗವು ಮುಖ್ಯವಾಗಿ ಕಾರ್ಯನಿರ್ವಹಿಸಲಿದೆ.

ಇಸ್ರೋ ಅಧ್ಯಕ್ಷ ಡಾ. ವಿ ನಾರಾಯಣನ್ ಅವರು, ದೀರ್ಘಕಾಲದ ಬಾಹ್ಯಾಕಾಶ ಯಾತ್ರೆಗಳಲ್ಲಿ ಗಗನಯಾತ್ರಿಗಳ ಆರೋಗ್ಯವನ್ನು ಕಾಪಾಡುವ ಪ್ರಾಮುಖ್ಯತೆಯನ್ನು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು. ಈ ಒಪ್ಪಂದದ ಪಾಲುದಾರಿಕೆಯು ಮಾನವ ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ರಾಷ್ಟ್ರೀಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಎಸ್ಸಿಟಿಐಎಂಎಸ್ಟಿ ಅಧ್ಯಕ್ಷ ಡಾ.ಕ್ರಿಸ್ ಗೋಪಾಲಕೃಷ್ಣನ್ ಅವರು, ಈ ಸಹಯೋಗವು ವೈದ್ಯಕೀಯ ಸಾಧನಗಳ ಅಭಿವೃದ್ಧಿಯಲ್ಲಿ ಬಲವಾದ ಶೈಕ್ಷಣಿಕ-ಉದ್ಯಮ ಸಹಯೋಗವನ್ನು ಬೆಳೆಸುತ್ತದೆ ಎಂದು ಆಶಿಸಿದರು.
ಭಾರತವು ಗಗನ್ಯಾನ್ ಕಾರ್ಯಾಚರಣೆಗೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ, ಬಾಹ್ಯಾಕಾಶ ಔಷಧ ಅಭಿವೃದ್ಧಿಪಡಿಸುವ ಸಹಕಾರ ಒಪ್ಪಂದವು ಮಾನವ ಬಾಹ್ಯಾಕಾಶ ಹಾರಾಟಕ್ಕೆ ಅಗತ್ಯವಾದ ತಾಂತ್ರಿಕ ಪ್ರಗತಿಗಳ ಸಂಶೋಧನೆಯನ್ನು ತ್ವರಿತಗೊಳಿಸುವ ನಿರೀಕ್ಷೆಯಿದೆ.
ಈ ಸಹಯೋಗವು ಭಾರತವನ್ನು ಬಾಹ್ಯಾಕಾಶ ವೈದ್ಯಕೀಯ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿ ಇರಿಸುತ್ತದೆ. ಜೊತೆಗೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಮತ್ತು ಗಗನಯಾತ್ರಿಗಳು ಹಾಗೂ ಇಲ್ಲಿನ ಜನರಿಗೆ ಪ್ರಯೋಜನವಾಗುವಂತಹ ಹೊಸ ಅವಿಷ್ಕಾರಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.