ಬೆಂಗಳೂರು, ಏ.26 www.bengaluruwire.com : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೇ 20ರಂದು ಎರಡು ವರ್ಷ ತುಂಬಲಿದೆ. ಈ ಹಿನ್ನಲೆಯಲ್ಲಿ ಅಂದು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರಗಳನ್ನು ವಿತರಣೆಗೆ ಕಂದಾಯ ಇಲಾಖೆ ಭಾರೀ ಸಿದ್ಧತೆ ನಡೆಸುತ್ತಿದೆ.
ವಿಕಾಸಸೌಧದಲ್ಲಿ ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ”ರಾಜ್ಯ ಸರ್ಕಾರದ ಜನಪರ ಆಡಳಿತಕ್ಕೆ ಸಾಕ್ಷಿಯಾಗಿ ಹಟ್ಟಿ, ತಾಂಡಾ, ಹಾಡಿ ಮತ್ತಿತರ ಜನವಸತಿ ಪ್ರದೇಶಗಳ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ,” ಎಂದು ಹೇಳಿದರು.
‘ರಾಜ್ಯದ ಉದ್ದಗಲಕ್ಕೂ ಹಾಡಿ, ಹಟ್ಟಿಗಳು ಕಂದಾಯ ಗ್ರಾಮಗಳಲ್ಲದ ಕಾರಣ ಅಲ್ಲಿನ ನಿವಾಸಿಗಳು ಸರಕಾರಿ ಸೌಲಭ್ಯ ಗಳಿಂದ ವಂಚಿತರಾಗಿದ್ದಾರೆ. ಇಂತಹ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳ ಸ್ಥಾನಮಾನ ನೀಡಿ ಲಕ್ಷಾಂತರ ಕುಟುಂಬಗಳಿಗೆ ಶಾಶ್ವತ ನೆಮ್ಮದಿ ನೀಡುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ” ಎಂದು ತಿಳಿಸಿದರು.
‘ನಾನಾ ಕಾರಣಗಳಿಂದ ಬಿಟ್ಟು ಹೋಗಿರುವ ಉಳಿದ ಜನವಸತಿ ಪ್ರದೇಶಗಳನ್ನೂ ಗುರ್ತಿಸಿ ಈ ವರ್ಷಾಂತ್ಯದೊಳಗೆ ಕನಿಷ್ಠ 2 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮೂಲಕ ಎಲ್ಲಾ ಸರಕಾರಿ ಸೌಲಭ್ಯಗಳನ್ನು ತಲುಪಿಸುವ ಉದ್ದೇಶವಿದೆ. ಮೂಲ ದಾಖಲೆ ಕಳೆದುಹೋಗುವ ಅಥವಾ ದಾಖಲೆಗಳನ್ನು ತಿದ್ದುವುದನ್ನು ತಡೆಯಲು ಡಿಜಿಟಲ್ ಹಕ್ಕು ಪತ್ರಗಳನ್ನು ನೀಡಲಾಗುವುದು. ಜತೆಗೆ, ಫಲಾನುಭವಿ ಹೆಸರಿಗೆ ಸರಕಾರವೇ ಕ್ರಯಪತ್ರದ ಮೂಲಕ ನೋಂದಣಿ ಮಾಡಿಸಿ, ಸ್ಥಳೀಯ ಸಂಸ್ಥೆಯಿಂದ ಖಾತೆ ಕೊಡಿಸಲಿದೆ. ಹಾಗಾಗಿ, ಫಲಾನುಭವಿಗಳು ಮತ್ತೆ ಸರಕಾರಿ ಕಚೇರಿಗಳಿಗೆ ಅಲೆಯುವುದೂ ತಪ್ಪಲಿದೆ” ಎಂದು ಅವರು ವಿವರಿಸಿದರು.

ಪೋಡಿ ಅಭಿಯಾನದ ಮೂಲಕ ದುರಸ್ತಿ :

”ದಶಕಗಳ ಹಿಂದೆ ಸರಕಾರದಿಂದ ಭೂಮಿ ಮಂಜೂರಾಗಿದ್ದರೂ ರೈತರು ಅನುಭೋಗದಲ್ಲಿದ್ದಾರೆ ಮತ್ತು ಪಹಣಿಯಲ್ಲಿ ಹೆಸರಿದೆ ಎಂಬುದನ್ನು ಬಿಟ್ಟರೆ ಬೇರಾವ ದಾಖಲೆಗಳೂ ಇಲ್ಲ. ಪಕ್ಕಾ ದಾಖಲೆಗಳಿಲ್ಲದೆ ಪರಿತಪಿಸುತ್ತಿದ್ದ ರೈತರಿಗೆ ವರ್ಷಾಂತ್ಯದೊಳಗೆ ಪೋಡಿ ದುರಸ್ತಿ ಮಾಡಿಕೊಡಲಾಗುವುದು. ಪಕ್ಕಾ ದಾಖಲೆಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಸಿಎಂ ಸೂಚನೆಯಂತೆ ರಾಜ್ಯಾದ್ಯಂತ ಕಳೆದ ಜನವರಿ ತಿಂಗಳಿಂದ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ,” ಎಂದು ಹೇಳಿದರು.
“ಕಂದಾಯ ಮತ್ತು ಸರ್ವೆ ಇಲಾಖೆ ಒಟ್ಟಾಗಿ ಪೋಡಿ ದುರಸ್ತಿಗೆ ಸರಳೀಕೃತ ನಿಯಮ ರಚಿಸಿವೆ. ಕಳೆದ ಜನವರಿಯಿಂದ ಈನಕ ಒಟ್ಟು 88,886 ಭೂಮಂಜೂರಾತಿ ಪಡೆದವರಿಗೆ 1 – 5 ದಾಖಲೆ ಸಿದ್ಧಪಡಿಸಿ, ಸರ್ವೆ ಇಲಾಖೆಯಿಂದ ಅಳತೆ ಕೆಲಸವನ್ನೂ ಕೈಗೆತ್ತಿಕೊಂಡಿದ್ದೇವೆ. ಪ್ರತಿ ತಿಂಗಳೂ 5 ಸಾವಿರ ಪ್ರಕರಣಗಳಲ್ಲಿ ಸರ್ವೆ ಕೆಲಸದ ಗುರಿ ಹೊಂದಲಾಗಿದೆ” ಎಂದು ಸಚಿವರು ತಿಳಿಸಿದರು.
ವರ್ಷಾಂತ್ಯಕ್ಕೆ ತಹಸೀಲ್ದಾರ್ ಕಚೇರಿ ದಾಖಲೆ ಡಿಜಿಟಲೀಕರಣ :
“ಭೂ ಸುರಕ್ಷಾ ಯೋಜನೆಯಡಿ ವರ್ಷಾಂತ್ಯದೊಳಗೆ ತಹಸೀಲ್ದಾರ್ ಕಚೇರಿಗಳಲ್ಲಿರುವ ಎಲ್ಲ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗುವುದು” ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ರೈತರಿಗೆ ಭೂ ಸುರಕ್ಷಾ ಯೋಜನೆ ಮೂಲಕ ಮುಕ್ತಿ :
”ರೈತರು ತಹಸೀಲ್ದಾರ್ ಕಚೇರಿಗಳಲ್ಲಿ ತಮ್ಮ ಭೂಮಿ ದಾಖಲೆ ಪಡೆಯಲು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಎಷ್ಟೋ ದಾಖಲೆ ಕಳೆದುಹೋಗಿದ್ದರೆ, ಮತ್ತಷ್ಟು ದಾಖಲೆಗಳನ್ನು ಕಾನೂನುಬಾಹಿರವಾಗಿ ತಿದ್ದುವ ಮೂಲಕ ರೈತರನ್ನು ಕೋರ್ಟ್, ಕಚೇರಿಗಳಿಗೆ ಅಲೆದಾಡುವಂತೆ ಮಾಡಲಾಗಿದೆ. ರೈತರಿಗೆ ಈ ಎಲ್ಲ ಶೋಷಣೆಗಳಿಂದ ಭೂ ಸುರಕ್ಷಾ ಯೋಜನೆ ಮುಕ್ತಿ ನೀಡಲಿದೆ. ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ದಾಖಲೆ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ,” ಎಂದು ಸಚಿವರು ಹೇಳಿದರು.