ಬೆಂಗಳೂರು, ಏ.25 www.bengaluruwire.com : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಪದ್ಮಭೂಷಣ ಡಾ.ಕೆ.ಕಸ್ತೂರಿರಂಗನ್ (Dr. K. Kasturirangan) ಇಂದು ಬೆಳಗ್ಗೆ 10.43ಕ್ಕೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಅವರಿಗೆ 84 ವಯಸ್ಸಾಗಿತ್ತು.
ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಭಾನುವಾರ (ಏ.27) ರ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು 1940 ಅಕ್ಟೋಬರ್ 24 ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದರು. ಬಾಂಬೆ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. 1971 ರಲ್ಲಿ ಅಹಮದಾಬಾದ್ನಲ್ಲಿ ಖಗೋಳಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು.
ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು 1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿದ್ದರು. ಕೆ.ಕೃಷ್ಣಸ್ವಾಮಿ ಅವರು ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ 9 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಡಾ. ಕಸ್ತೂರಿರಂಗನ್ ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ, ಅದಕ್ಕೂ ಮೊದಲು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿ ಆಧುನಿಕ ಯುಗದ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪಗ್ರಹ (ಇನ್ಸಾಟ್-2) ಮತ್ತು ಭಾರತೀಯ ದೂರಗ್ರಾಹಿ ಉಪಗ್ರಹಗಳು (ಐಆರ್ಎಸ್-1ಎ ಮತ್ತು 1ಬಿ) ಜೊತೆಗೆ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ದಿಯ ಮೇಲ್ವಿಚಾರಣೆ ಕೈಗೊಂಡರು.

ಇವರು ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-I ಮತ್ತು II ರ ಯೋಜನಾ ನಿರ್ದೇಶಕರಾಗಿದ್ದರು. ಕಸ್ತೂರಿರಂಗನ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿತ್ತು.

ಅಲ್ಲದೆ ಖಗೋಳಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ಬಾಹ್ಯಾಕಾಶ ಅನ್ವಯಿಕೆಗಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರೆದ 200 ಕ್ಕೂ ಹೆಚ್ಚು ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇದಲ್ಲದೆ ಡಾ.ಕೆ.ಕಸ್ತೂರಿರಂಗನ್ 6 ಪುಸ್ತಕಗಳನ್ನು ಬರೆದಿದ್ದಾರೆ. ಇವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿವೆ.
ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರಾಗಿ ಮತ್ತು ಯೋಜನಾ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಕರಡು ಸಮಿತಿಯ ಅಧ್ಯಕ್ಷತೆ ವಹಿಸಿದ್ದರು. ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊಂದಿರುವ 12 ಸದಸ್ಯರ ಸ್ಟೀರಿಂಗ್ ಸಮಿತಿಯ ನೇತೃತ್ವ ವಹಿಸಿದ್ದರು.
ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿತು. ಅವರು ಆಗಸ್ಟ್ 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಈ ವರದಿ ತೀವ್ರ ಟೀಕೆಗೆ ಒಳಗಾಯಿತು. ಈ ವರದಿಯಲ್ಲಿ ಶೇ.94 ರಿಂದ 97ರಷ್ಟು ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (Eco Sensitive Area – ಇಎಸ್ ಎ)ವೆಂದು ಪರಿಗಣಿಸಬೇಕೆಂದೂ ಮತ್ತು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬಾರದೆಂದೂ ಈ ಸಮಿತಿಯು ಹೇಳಿತ್ತು. ಇದನ್ನು ಪಶ್ಚಿಮ ಘಟ್ಟಗಳ ಜನತೆ ಸಾಕಷ್ಟು ವಿರೋಧಿಸಿದರು.
ಆಗ ಸರ್ಕಾರ ಗಾಡ್ಗೀಳ್ ಸಮಿತಿ ವರದಿಯ ಕುಂದು ಕೊರತೆಯನ್ನು ನೀಗಿಸಲು ಕಸ್ತೂರಿರಂಗನ್ ಸಮಿತಿಯನ್ನು ನೇಮಿಸಿತು. ಕಸ್ತೂರಿರಂಗನ್ ಸಮಿತಿ ತನ್ನ ವರದಿಯನ್ನು 2013ರ ಏಪ್ರಿಲ್ 15ರಂದು ಸಲ್ಲಿಸಿತು. ಈ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಇದೂ ಕೂಡ ವಿವಾದಕ್ಕೆ ಒಳಗಾಯಿತು. ಇವರ ನೇತೃತ್ವದ ಪಶ್ಚಿಮ ಘಟ್ಟಗಳ ಕಸ್ತೂರಿರಂಗನ್ ಸಮಿತಿ ಪಶ್ಚಿಮ ಘಟ್ಟಗಳ 59,940 ಚ.ಕಿ.ಮೀ ಪ್ರದೇಶವನ್ನು 2013 ರಲ್ಲಿ ಪರಿಸರ ಸೂಕ್ಷ್ಮ ಎಂದು ಗುರುತಿಸಿತ್ತು.
ಕಸ್ತೂರಿ ರಂಗನ್ ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಚ.ಕಿ.ಮೀ. ವ್ಯಾಪ್ತಿಯ ಪ್ರದೇಶ (36.49%) ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಟ್ಟು ನಿರ್ಬಂಧಿತವಾಗುತ್ತದೆ. ಎಲ್ಲಾ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷದೊಳಗೆ ಸ್ಥಗಿತಗೊಳಿಸಬೇಕು. 20,000 ಚ.ಮೀ.ಗಿಂತ, ದೊಡ್ಡ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್ಎನಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಹೀಗಾಗಿ ಈ ವರದಿ ಅನುಷ್ಠಾನಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.
ಕಸ್ತೂರಿರಂಗನ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2004ರ ಎಪ್ರಿಲ್ನಿಂದ 2009ರವರೆಗೆ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿದ್ದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.