ಬೆಂಗಳೂರು, ಏ.10, www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ನಿವೇಶನ (B Khata Property)ದಲ್ಲಿ ಕಟ್ಟಡ ಕಟ್ಟುವ ಮಾಲೀಕರಿಗೆ, ಪಾಲಿಕೆ ನಗರ ಯೋಜನೆ ವಿಭಾಗದಲ್ಲಿ ವಲಯ ನಿಯಮಾವಳಿ (Zoning regulations) ಹಾಗೂ ಕಟ್ಟಡ ಉಪವಿಧಿ (Building By-law) ಅನ್ವಯ ತಯಾರಿಸಿದ ನಕ್ಷೆಯನ್ನು ದಾಖಲು ಮಾಡಿಕೊಂಡು ಸ್ವೀಕೃತಿ ಪತ್ರ ಪಡೆಯುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪಾಲಿಕೆಯು ಪ್ರಸ್ತಾವನೆ ಸಲ್ಲಿಸಿ ನಾಲ್ಕು ತಿಂಗಳಾದರೂ ಇನ್ನೂ ಸೂಕ್ತ ಅನುಮೋದನೆ ದೊರೆತಿಲ್ಲ.
ನಗರದಲ್ಲಿ ಬಿ ಖಾತಾ ನಿವೇಶನದಲ್ಲಿ ವಲಯ ನಿಯಮಾವಳಿ ಉಲ್ಲಂಘಿಸಿ, ಅನಧಿಕೃತವಾಗಿ ಕಟ್ಟಡ ಕಟ್ಟಿ ಅವುಗಳಿಂದ ಆಗುತ್ತಿರುವ ದುರಂತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ಎ ಮತ್ತು ಬಿ ಖಾತೆ ಸೇರಿದಂತೆ ಒಟ್ಟು 6 ಪ್ರಸ್ತಾವನೆಗೆ ಅನುಮೋದನೆಗಾಗಿ ಬಿಬಿಎಂಪಿಯು ಕಳೆದ ಜನವರಿ 10 ರಂದು ನಗರಾಭಿವೃದ್ಧಿ ಇಲಾಖೆ (Urban Development Department)ಗೆ ಪತ್ರ ಬರೆದಿತ್ತು. ಆ ಪ್ರಸ್ತಾವನೆಗಳ ಪೈಕಿ ಬಿ-ಖಾತಾ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಕಾನೂನು ರೀತ್ಯ ಅನುಗುಣವಾದ ನಕ್ಷೆಯನ್ನು ಪಾಲಿಕೆಯಲ್ಲಿ ದಾಖಲು ಮಾಡಿಕೊಳ್ಳಲು ಅನುವಾಗುವಂತೆ ಸೂಕ್ತ ನಿಯಮಾವಳಿ ರೂಪಿಸಲು ಒಪ್ಪಿಗೆ ಸೂಚಿಸುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು. ಆದರೆ ಈ ಯಾವ ಪ್ರಸ್ತಾವನೆಗಳಿಗೂ ಇನ್ನು ಸರ್ಕಾರದ ಅನುಮೋದನೆ ದೊರೆತಿಲ್ಲ ಎಂದು ವಿಶ್ವಸನೀಯ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ.
“ವಾಸ್ತವವಾಗಿ ‘ಬಿ’ ಖಾತಾ ಸ್ವತ್ತುಗಳಿಗೆ ಪಾಲಿಕೆಯಿಂದ ನಕ್ಷೆ ಮಂಜೂರಾತಿಯನ್ನು ನೀಡಲಾಗುತ್ತಿಲ್ಲ. ಆದ ಕಾರಣ ‘ಬಿ’ ಖಾತಾ ಸ್ವತ್ತಿನ ಮಾಲೀಕರು ಯಾವುದೇ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಹಲವಾರು ಕಡೆಗಳಲ್ಲಿ ಕಂಡು ಬಂದಿರುವ ಹಿನ್ನಲೆಯಲ್ಲಿ ‘ಬಿ’ ಖಾತಾ ಸ್ವತ್ತಿಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಕಟ್ಟಡದ ವಿವರಗಳನ್ನು ದಾಖಲಿಸಿಕೊಳ್ಳಲು ಅನ್‌ಲೈನ್ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸುವುದು ಸೂಕ್ತವಾಗಿದೆ.”
“ರೆವೆನ್ಯು ನಿವೇಶನದಾರರು ಬಿಬಿಎಂಪಿ ನಗರ ಯೋಜನೆ ವಿಭಾಗಕ್ಕೆ ತಮ್ಮ ಕಂದಾಯ ನಿವೇಶನದಲ್ಲಿ ವಲಯ ನಿಯಮಗಳ ಅನ್ವಯ ಕಟ್ಟಡ ಕಟ್ಟುವ ಬಗ್ಗೆ ಕಂದಾಯ ದಾಖಲಾತಿಗಳು, ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ನೊಂದಾಯಿತ ವಾಸ್ತುಶಿಲ್ಪಿಯಿಂದ ನಿಯಾಮವಳಿ ಮತ್ತು ಕಟ್ಟಡ ಉಪವಿಧಿಯನ್ವಯ ತಯಾರಿಸಲಾಗುವ ನಕ್ಷೆ ಹಾಗೂ ಇನ್ನಿತರೆ ಸುರಕ್ಷತೆಯ ಅಂಶಗಳಿಗೆ ಬದ್ಧರಿರುವುದರ ಬಗ್ಗೆ ಮಾಲೀಕರು ಅಥವಾ ಕಟ್ಟಡ ನಿರ್ಮಾಣದಾರರಿಂದ ಮುಚ್ಚಳಿಕೆ ಪ್ರಮಾಣ ಪತ್ರ ಪಡೆಯುವುದು. ಹಾಗೆಯೇ ಇಂಜಿನಿಯರ್/ವಾಸ್ತುಶಿಲ್ಪಿಗಳು ಮತ್ತು ಸ್ಪಕ್ಟರಲ್ ಇಂಜಿನಿಯರ್ ರವರಿಂದ ಸೂಕ್ತ ಪ್ರಮಾಣ ಪತ್ರ /ದೃಢೀಕರಣ ಪತ್ರವನ್ನು ಪಡೆದು ದಾಖಲಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಕಟ್ಟಡ ನಿರ್ಮಾಣ ಸಂಬಂಧ ವಲಯ ನಿಯಮಾವಳಿಯನುಸಾರ ಅವಕಾಶ ಮಾಡಿಕೊಡುವುದು.”

“ಈ ರೀತಿ ಅರ್ಜಿದಾರರು ನೀಡುವ ನಕ್ಷೆಗಳು, ಮನವಿ ಇವುಗಳನ್ನು ಪಾಲಿಕೆಯಲ್ಲಿ ದಾಖಲಿಸಿಕೊಳ್ಳುವುದು ಹಾಗೂ ತದನಂತರ ನಕ್ಷೆ ಉಲ್ಲಂಘನೆ ಕಂಡುಬಂದಲ್ಲಿ ಬಿಬಿಎಂಪಿ ಕಾಯ್ದೆ-2020 ಮತ್ತು ಕೆಟಿಸಿಪಿ ಕಾಯ್ದೆ-1961ರ ಅವಕಾಶಗಳಂತೆ ಕ್ರಮ ಜರುಗಿಸುವುದು ಸೂಕ್ತವಾಗಿರುತ್ತದೆ” ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು.

“ಈ ಸಂಬಂಧ ಪಡೆಯಬೇಕಾದ ಪ್ರಮಾಣ ಪತ್ರ ಮತ್ತು ಪಾಲಿಸಬೇಕಾಗಿರುವ ನೀತಿ ನಿಯಮಗಳ ಬಗ್ಗೆ 2024ರ ನ.20 ರ ಸಭೆಯಲ್ಲಿ ವಿವರಿಸಲಾಗಿದ್ದು, ಈ ನಡಾವಳಿಯನ್ನು ಸರ್ಕಾರದ ಅವಗಾಹನೆಗೆ ಸಲ್ಲಿಸುತ್ತಾ, ಈ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಕಾರ್ಯವಿಧಾನವನ್ನು ಪಾಲಿಕೆಯಲ್ಲಿ ಅಳವಡಿಸಿಕೊಂಡು ಕ್ರಮ ವಹಿಸಲು ಸರ್ಕಾರದ ಮಂಜೂರಾತಿ ಕೋರಿದೆ” ಎಂದು ಜ.10 ರಂದು ಮುಖ್ಯ ಆಯುಕ್ತರು ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪರೋಕ್ಷವಾಗಿ ನಕ್ಷೆ ಮಂಜೂರಾತಿ ನೀಡಿ- ಅಕ್ರಮ ತಡಿಯುವ ಆಲೋಚನೆ :
ಬಿಬಿಎಂಪಿಯ ಈ ಪ್ರಸ್ತಾವನೆ ಬಗ್ಗೆ ಸರ್ಕಾರದಿಂದ ಅನುಮೋದನೆ ದೊರೆತರೆ, ಈ ತನಕ ಬಿ-ಖಾತಾ ಸ್ವತ್ತಿನಲ್ಲಿ ಕಟ್ಟುವ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ದೊರೆಯುತ್ತಿರಲಿಲ್ಲ. ಆದರೆ ಹೊಸ ಪ್ರಸ್ತಾವನೆಯಂತೆ ನಿಯಮಾನುಸಾರ ತಯಾರಿಸಿದ ನಕ್ಷೆಯಂತೆ ಕಟ್ಟಡ ಕಟ್ಟಿ ಅದನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಅಲ್ಲದೆ ಕಾನೂನು ಕ್ರಮಕ್ಕೆ ಹೆದರಿ ಸ್ವತ್ತಿನ ಮಾಲೀಕರು ನಿಯಮಾನುಸಾರ ಕಟ್ಟಡ ಕಟ್ಟುತ್ತಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಇದರಿಂದ ನಾಳೆ ಅಕ್ರಮ ಸಕ್ರಮ ಯೋಜನೆ ಜಾರಿಯಾದರೆ, ನಗರ ವ್ಯಾಪ್ತಿಯಲ್ಲಿನ ಕಂದಾಯ ನಿವೇಶನಗಳಲ್ಲಿ ಕಟ್ಟಿದ ಕಟ್ಟಡಗಳು ಸಕ್ರಮಗೊಳಿಸಲು ಅನುಕೂಲವಾಗಲಿದೆ. ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ವಿಚಾರ ಹಲವು ವರ್ಷಗಳಿಂದ ಕೋರ್ಟ್ ನಲ್ಲಿದೆ. ಇನ್ನೂ ಪ್ರಕರಣ ಬಗೆಹರಿದಿಲ್ಲ. ಹೀಗಾಗಿ ಕಂದಾಯ ನಿವೇಶನಗಳಿಗೆ ಸದ್ಯಕ್ಕೆ ಎ ಖಾತಾ ಸ್ವತ್ತಿಗೆ ನೀಡುವಂತೆ ಅಧಿಕೃತವಾಗಿ ಕಟ್ಟಡ ನಕ್ಷೆ ಮಂಜೂರಾತಿ ಕೊಡುವ ಪ್ರಶ್ನೆ ಬರಲ್ಲ ಎಂದು ಅವರು ಹೇಳಿದ್ದಾರೆ.
ಆದರೆ ಕಾನೂನು ನಿಯಮಾವಳಿ ಅನ್ವಯದ ನಕ್ಷೆ ದಾಖಲು ಮಾಡಿಕೊಂಡು ಕಟ್ಟಡ ಕಟ್ಟಲು ಅವಕಾಶ ಕಲ್ಪಿಸುವ ಈ ಪ್ರಸ್ತಾವನೆ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ ಅಂತಿಮ ನಿರ್ಧಾರ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳ ನಿರ್ಮಾಣದಿಂದ ಸಾರ್ವಜನಿಕರ ಪ್ರಾಣಕ್ಕೆ, ಆಸ್ತಿ-ಪಾಸ್ತಿಗಳಿಗೆ ಹಾನಿಯಾಗದಂತೆ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ನಿಯಂತ್ರಿಸುವುದು ತುರ್ತು ಆವಶ್ಯಕವಿರುವುದಾಗಿ ಕಂದಾಯ ಇಲಾಖೆ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ 2024ರ ನ.20 ಹಾಗೂ ಡಿ.13ರಂದು ನಡೆದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಅಲ್ಲದೆ ಹೊಸ ಖಾತೆ, ನಿಯಮಬದ್ಧ ಹಾಗೂ ಸುರಕ್ಷಿತ ಕಟ್ಟಡಗಳ ನಿರ್ಮಾಣಗಳ ಬಗ್ಗೆ ಸಮಗ್ರ ನೀತಿ ರೂಪಿಸಲು ನಿರ್ಧರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪಾಲಿಕೆಯ ಏಳು ಹಿರಿಯ ಅಧಿಕಾರಿಗಳ ಸಮಿತಿಯು ಕಾನೂನಿನಲ್ಲಿನ ಅವಕಾಶಗಳು ಹಾಗೂ ಪ್ರಸ್ತಾಪಿಸಬಹುದಾದ ಅವಕಾಶಗಳ ಬಗ್ಗೆ ಚರ್ಚಿಸಿ 6 ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.