ಬೆಂಗಳೂರು, ಮಾ.29 www.bengaluruwire.com : ಸಿಲಿಕಾನ್ ಸಿಟಿಯ ಸ್ಥಳೀಯ ಆಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2025-26ನೇ ಸಾಲಿನ ಬಜೆಟ್ ಅನ್ನು ಮಂಡಿಸಿದೆ. ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಅವರು ₹19,927.08 ಕೋಟಿ ಮೊತ್ತದ ಬೃಹತ್ ಬಜೆಟ್ ಅನ್ನು ಮಂಡಿಸಿದ್ದು, ನಗರದ ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇದಕ್ಕೂ ಮುನ್ನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ, ಲಕ್ಷ್ಮಿದೇವಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಹಣಕಾಸು ವಿಶೇಷ ಆಯುಕ್ತರು ನೇರವಾಗಿ ಪುರಭವನ (Townhall)ಕ್ಕೆ ಆಗಮಿಸಿದರು.
ಬಳಿಕ ಆಡಳಿತಾಧಿಕಾರಿ ಉಮಾಶಂಕರ್ ನೇತೃತ್ವದಲ್ಲಿ ಡಾ.ಹರೀಶ್ ಕುಮಾರ್ ಆಯವ್ಯಯ ಅಂದಾಜು ಮಂಡನೆ ಮಾಡಿದರು. 2025-26ನೇ ಸಾಲಿನಲ್ಲಿ ಒಟ್ಟಾರೆ ಸ್ವೀಕೃತಿ 19,930.64 ಕೋಟಿ ರೂ.ಗಳಾಗಲಿದ್ದು, ಒಟ್ಟು ಖರ್ಚು 19,927.08 ಕೋಟಿ ರೂ.ಗಳಾಗಿದ್ದು, ಒಟ್ಟು 3.56 ಕೋಟಿ ರೂ. ಮಿಗತೆ ಬಜೆಟ್ ಇದಾಗಿದೆ ಎಂದು ಹರಿಶ್ ಕುಮಾರ್ ಹೇಳಿದರು.

ಪಾಲಿಕೆ ಕಂದಾಯ ಇಲಾಖೆಯಲ್ಲಿ 2024-25ನೇ ಸಾಲಿನಲ್ಲಿ 4,900 ಕೋಟಿ ರೂ.ಸಂಗ್ರಹಿಸವುದರೊಂದಿಗೆ ದೇಶದಲ್ಲಿಯೇ ಅತಿಹೆಚ್ಚು ಆಸ್ತಿತೆರಿಗೆ ಸಂಗ್ರಹಿಸಿದೆ. 2025-26ರಲ್ಲಿ 5716 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಪಾಲಿಕೆಯಲ್ಲಿ 25 ಲಕ್ಷ ಇ-ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಬಿಬಿಎಂಪಿಯ ಎಲ್ಲಾ ಆಸ್ತಿಗಳಿಗೆ ಜಿಪಿಎಸ್ ಸ್ಥಳಾಧಾರಿತ ಐಡಿ ನೀಡಲಾಗುತ್ತಿದೆ. ಉಳಿದ ಖಾಸಗಿ ಆಸ್ತಿಗಳಿಗೆ ಜಿಐಎಸ್ ಇ-ಖಾತಾ ಆಸ್ತಿ ತೆರಿಗೆ ವ್ಯವಸ್ಥೆ ಮಾಡಲಾಗುವುದು. ಇದರಿಂದ 1000 ಕೋಟಿ ರೂ. ಹೆಚ್ಚುವರಿ ಆಸ್ತಿ ತೆರಿಗೆ ಆದಾಯ ಬರುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಡಾ.ಹರೀಶ್ ಕುಮಾರ್ ಸುಧೀರ್ಘ ಒಂದು ಗಂಟೆಗಳ ಕಾಲ ಬಿಬಿಎಂಪಿಯ 71 ಪುಟಗಳ ಬಜೆಟ್ ಭಾಷಣವನ್ನು ನಿರರ್ಗಳವಾಗಿ ಓದಿ ಮುಗಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಂ.ಗೋಪಾಲಕೃಷ್ಣ ಅಡಿಗರ “ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು” ಎಂಬ ಹಾಡಿನ ಸಾಲನ್ನು ಬಳಸಿದರು. ಅಲ್ಲದೇ “ಮಣಿಯದಿಹ ಮನವೊಂದು, ಸಾಧಿಸುವ ಹಠವೊಂದು…ನಿಜದ ನೇರಕೆ ನಡೆವ ನಿಶ್ಚಲತೆಯೊಂದು” ಎಂಬ ಕವಿವಾಣಿಯನ್ನು, ಬದ್ಧತೆಯಿದ್ದಲ್ಲಿ ಏನನ್ನೂ ಸಾಧಿಸಬಹುದೆಂಬ ನಂಬಿಕೆಯೊಂದಿಗೆ ಈ ಆಯವ್ಯಯದ ಪ್ರಸ್ತುತಿಯನ್ನು ಮುಕ್ತಾಯಗೊಳಿಸುತ್ತಿದ್ದೇನೆ” ಎಂದು ತಮ್ಮ ಚೊಚ್ಚಲ ಬಿಬಿಎಂಪಿ ಬಜೆಟ್ ಭಾಷಣವನ್ನು ಪೂರ್ಣಗೊಳಿಸಿದರು.

ಈ ಬಾರಿಯ ಒಟ್ಟಾರೆ ಬಜೆಟ್ ನಲ್ಲಿ ಶೇ.65ರಷ್ಟು ಅಂದರೆ 12,952 ಕೋಟಿ ರೂ.ಗಳನ್ನು ಬಂಡವಾಳ ವೆಚ್ಚ ಅಥವಾ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ವೆಚ್ಚ ಮಾಡಲಾಗುತ್ತಿದೆ. ವಿಶ್ವಬ್ಯಾಂಕ್ ಬಾಹ್ಯ ನೆರವಿನ ಯೋಜನೆ, ಕೇಂದ್ರ ಸರ್ಕಾರದ ಅನುದಾನ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ, ರಾಜ್ಯ ಸರ್ಕಾರದ ರಾಜಸ್ವ ಅನುದಾನ, ಬಂಡವಾಳ ಅನುದಾನ, ಹೆಚ್ಚುವರಿ ಅನುದಾನ ಸೇರಿ 8,778.94 ಕೋಟಿ ರೂ.ಗಳು 2025-26ನೇ ಸಾಲಿನಲ್ಲಿ ಪಾಲಿಕೆಗೆ ಲಭ್ಯವಾಗಲಿದೆ ಎಂದು ಆಯವ್ಯಯದಲ್ಲಿ ತಿಳಿಸಲಾಗಿದೆ ಎಂದು ಬಜೆಟ್ ಬಳಿಕ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹಣಕಾಸು ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಜೊತೆ ನಡೆಸಿದ ಜಂಟಿಗೋಷ್ಠಿಯಲ್ಲಿ ಆಡಳಿತಾಧಿಕಾರಿಗಳಾದ ಉಮಾಶಂಕರ್ ತಿಳಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸು ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಯಡಿ 2025-26ನೇ ವರ್ಷದಲ್ಲಿ 700 ಕೋಟಿ ರೂ. ಅನುದಾನವನ್ನು ಈ ಆಯವ್ಯಯದಲ್ಲಿ ಒದಗಿಸಲಾಗುತ್ತಿದ್ದು, ಈ ಯೋಜನೆ ಕಾರ್ಯಗತ ಮಾಡಲು ಎಸ್ಕ್ರೋ ಖಾತೆಗೆ ಹಣವನ್ನು ವರ್ಗಾಯಿಸಲಾಗುತ್ತದೆ. 2024-25ನೇ ಸಾಲಿನ ಬಜೆಟ್ ವಿಚಾರದಲ್ಲಿ ಶೇ.80ರಷ್ಟು ಅನುಷ್ಠಾನವಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬಜೆಟ್ ಮುಖ್ಯಾಂಶಗಳು:
* ಒಟ್ಟು ಸ್ವೀಕೃತಿ: ₹19,930.64 ಕೋಟಿ
* ಒಟ್ಟು ಖರ್ಚು: ₹19,927.08 ಕೋಟಿ
* ಮಿಗತೆ ಬಜೆಟ್: ₹3.56 ಕೋಟಿ
* ಆಸ್ತಿ ತೆರಿಗೆ ಸಂಗ್ರಹ: ₹5716 ಕೋಟಿ ಆದಾಯ ನಿರೀಕ್ಷೆ
* ಇ-ಖಾತಾ ವ್ಯವಸ್ಥೆ: 25 ಲಕ್ಷ ಖಾತೆಗಳ ಡಿಜಿಟಲೀಕರಣ
* ಜಿಪಿಎಸ್ ಸ್ಥಳಾಧಾರಿತ ಐಡಿ: ಬಿಬಿಎಂಪಿಯ ಎಲ್ಲಾ ಆಸ್ತಿಗಳಿಗೆ
ಪ್ರಮುಖ ಯೋಜನೆಗಳು:
* ಬ್ರ್ಯಾಂಡ್ ಬೆಂಗಳೂರು ಯೋಜನೆ: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು, ಮೂಲಸೌಕರ್ಯ ಅಭಿವೃದ್ಧಿಪಡಿಸಲು ₹73,600 ಕೋಟಿ ಮೊತ್ತದ ಯೋಜನೆ.
* ನಗರ ಸುರಂಗ ಮಾರ್ಗಗಳ ನಿರ್ಮಾಣ: ₹42,000 ಕೋಟಿ
* ಎಲಿವೇಟೆಡ್ ಕಾರಿಡಾರ್/ಗ್ರೇಡ್ ಸೆಪರೇಟರ್‌ಗಳ ನಿರ್ಮಾಣ: ₹13,200 ಕೋಟಿ
* ಸಂಯುಕ್ತ ಮೆಟ್ರೋ-ರಸ್ತೆ ಮೇಲ್ಸೇತುವೆ ಯೋಜನೆ: ₹9,000 ಕೋಟಿ
* ರಸ್ತೆಗಳ ವೈಟ್‌ಟಾಪಿಂಗ್: ₹6,000 ಕೋಟಿ
* ಸ್ಕೈ-ಡೆಕ್ ನಿರ್ಮಾಣ: ₹400 ಕೋಟಿ
* ಸ್ವಚ್ಛ ಬೆಂಗಳೂರು ಯೋಜನೆ: ಸಮಗ್ರ ತ್ಯಾಜ್ಯ ನಿರ್ವಹಣೆಗೆ ಒತ್ತು, ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ.
* ಬಯೋ ಸಿ.ಎನ್.ಜಿ. ಘಟಕಗಳ ಪ್ರಾರಂಭ
* ಒಣತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ: ₹104 ಕೋಟಿ
* ಪ್ಲಾಸ್ಟಿಕ್ ಹಾಗೂ ಇ-ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ: ₹6 ಕೋಟಿ
* ಘನತ್ಯಾಜ್ಯ ನಿರ್ವಹಣೆ ಮೇಲ್ವಿಚಾರಣೆಗೆ ಕಮಾಂಡ್ ಕಂಟ್ರೋಲ್ ರೂಂ ಸ್ಥಾಪನೆ
* ಹಸಿರು ಬೆಂಗಳೂರು ಯೋಜನೆ: ನಗರದ ಹಸಿರು ಹೊದಿಕೆ ಹೆಚ್ಚಿಸಲು 5 ಲಕ್ಷ ಸಸಿಗಳನ್ನು ನೆಡುವ ಅಭಿಯಾನ.
* ಹೊಸ ಉದ್ಯಾನವನಗಳ ಅಭಿವೃದ್ಧಿ
* ಒಳಚರಂಡಿ ನೀರು ಸಂಸ್ಕರಣಾ ಘಟಕದ ನೀರನ್ನು ಉದ್ಯಾನವನಕ್ಕೆ ಬಳಕೆ.
* ಹವಾಮಾನ ಕ್ರಿಯಾಕೋಶದ ಸ್ಥಾಪನೆ: ₹28 ಕೋಟಿ
* ಮರಗಳ ಗಣತಿ ಕಾರ್ಯ ಪೂರ್ಣಗೊಳಿಸುವಿಕೆ.
* ಆರೋಗ್ಯಕರ ಬೆಂಗಳೂರು ಯೋಜನೆ: ನಗರದ ಬಡವರಿಗೆ, ವಲಸಿಗರಿಗೆ, ಕೊಳೆಗೇರಿ ನಿವಾಸಿಗಳ ಮಕ್ಕಳಿಗೆ ಉಚಿತ ಆರೋಗ್ಯ ಸೇವೆಗಳು.
*ಆಸ್ಪತ್ರೆಗಳ ಹಾಸಿಗೆಗಳ ಸಂಖ್ಯೆ ಹೆಚ್ಚಳ: ₹413 ಕೋಟಿ
* ರೋಗ ಪತ್ತೆಹಚ್ಚುವ ಸೌಲಭ್ಯಗಳ ಹೆಚ್ಚಳ.
* ತುರ್ತು ಆರೈಕೆಗಾಗಿ ಆಂಬ್ಯುಲೆನ್ಸ್ ಗಳ ಒದಗಿಸುವಿಕೆ.
* ವಿಶೇಷ ಚೇತನ ಮಕ್ಕಳಿಗೆ ಫಿಸಿಯೋಥೆರಪಿ ಸೇವೆಗಳ ಒದಗಿಸುವಿಕೆ.
* ತಾಯಿ ಮತ್ತು ಮಕ್ಕಳ ಆರೈಕೆ ವೇದಿಕೆಯ ಸ್ಥಾಪನೆ.
ಶಿಕ್ಷಣ ಬೆಂಗಳೂರು ಯೋಜನೆ:
* ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ, ಕಾಲೇಜು ಅಭಿವೃದ್ಧಿ ಸಮಿತಿಗಳ ಮೂಲಕ ಆಯ್ಕೆಯಾಗಿರುವ ಪಾಲಿಕೆಯ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ವೇತನವನ್ನು ಮಾಹೆಯಾನ ₹2000 ಹೆಚ್ಚಳ ಮಾಡಲಾಗುವುದು.
* 2025-26ನೇ ಸಾಲಿಗೆ ಪಾಲಿಕೆಯ ಶಾಲಾ ಕಟ್ಟಡಗಳ ನಿರ್ವಹಣೆಗಾಗಿ ₹23.34 ಕೋಟಿ, ಆಟದ ಮೈದಾನ ಅಭಿವೃದ್ಧಿಗಾಗಿ ₹30 ಕೋಟಿ, ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ₹120.35 ಕೋಟಿ, ಬ್ರಾಂಡ್ ಬೆಂಗಳೂರು ಶಿಕ್ಷಣ ಬೆಂಗಳೂರು ಕಾರ್ಯಕ್ರಮಕ್ಕಾಗಿ ₹10ಕೋಟಿ ಅನುದಾನ ಮೀಸಲಿರಿಸಿದೆ.
ಜಲ ಸುರಕ್ಷತೆ ಬೆಂಗಳೂರು ಯೋಜನೆ:
* ಕೆರೆಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹210 ಕೋಟಿಗಳನ್ನು ನಿಗಧಿಪಡಿಸಲಾಗಿದೆ.
* ಬೆಂಗಳೂರು ನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರಗಳನ್ನು ಕೈಗೆತ್ತಿಕೊಳ್ಳಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈ ಸಾಲಿನಲ್ಲಿ ₹247.25 ಕೋಟಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಟೆಕ್ ಬೆಂಗಳೂರು ಯೋಜನೆ:
* ಈ ಎಲ್ಲಾ ಯೋಜನೆಗಳಿಗಾಗಿ ಬ್ಯಾಂಡ್ ಬೆಂಗಳೂರು-ಟೆಕ್ ಬೆಂಗಳೂರು ಅಡಿಯಲ್ಲಿ ₹40ಕೋಟಿ ಮೀಸಲಿರಿಸಿದೆ.
ರೋಮಾಂಚಕ ಬೆಂಗಳೂರು ಯೋಜನೆ:
* 2024-25ನೇ ಸಾಲಿನಲ್ಲಿ ಬೆಂಗಳೂರು ನಗರವನ್ನು ಸುಂದರೀಕರಿಸಲು ಮತ್ತು ಆಕರ್ಷಣೀಯಗೊಳಿಸುವ ಉದ್ದೇಶದಿಂದ ಅಲಂಕಾರಿಕ ದೀಪಗಳನ್ನು ಅಳವಡಿಸಲು ₹50 ಕೋಟಿ, ಜಂಕ್ಷನ್ ಸುಧಾರಣೆ ಮತ್ತು ಸಾರ್ವಜನಿಕ ಸ್ಥಳಗಳ ಸುಂದರೀಕರಣಕ್ಕಾಗಿ ₹25 ಕೋಟಿ, ಸೈ-ಡೆಕ್ ನಿರ್ಮಾಣಕ್ಕಾಗಿ ₹50 ಕೋಟಿ, ಆಲಂಕಾರಿಕ ದೀಪಗಳನ್ನು ಅಳವಡಿಸಲು ₹50 ಕೋಟಿ, ಜಂಕ್ಷನ್ ಸುಧಾರಣೆ ಮತ್ತು ಸಾರ್ವಜನಿಕ ಸ್ಥಳಗಳ ಸುಂದರೀಕರಣಕ್ಕಾಗಿ ₹25 ಕೋಟಿಗಳನ್ನು ಮೀಸಲಿರಿಸಲಾಗಿದ್ದು, ಪ್ರಗತಿಯಲ್ಲಿರುತ್ತವೆ.
ಎಲ್ಲಾ ಕಾಮಗಾರಿಗಳು ಪ್ರವಾಸೋದ್ಯಮ ಉತ್ತೇಜಿಸಲು, ಬೆಂಗಳೂರು ನಗರದ ವೀಕ್ಷಣೆ, ಉದ್ಯೋಗ ಸೃಷ್ಟಿಸಲು, ಆದಾಯ ಹೆಚ್ಚಿಸಲು, ನಗರದ ಆಧುನಿಕತೆಯನ್ನು ಸಂಭ್ರಮಿಸುವುದಕ್ಕಾಗಿ ನಗರವನ್ನು ಆಕರ್ಷಣೀಯ ಕೇಂದ್ರವನ್ನಾಗಿ ಮಾಡಲು ಆಕಾಶ ಗೋಪುರವನ್ನು (ಸೈ-ಡೆಕ್) ನಿರ್ಮಿಸಲು ಉದ್ದೇಶಿಸಲಾಗಿತ್ತು.
ಇತರೆ ಯೋಜನೆಗಳು:
* ಪೌರಕಾರ್ಮಿಕರ ಕಲ್ಯಾಣಕ್ಕೆ ₹500 ಕೋಟಿ ಅನುದಾನ.
* ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳ ಕಲ್ಯಾಣಕ್ಕೆ ಯೋಜನೆಗಳು.
* ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕೆ ₹10 ಕೋಟಿ ಅನುದಾನ.
* ನಿರಾಶ್ರಿತರ ರಾತ್ರಿ ತಂಗುದಾಣಗಳ ನಿರ್ವಹಣೆಗೆ ₹5 ಕೋಟಿ ಅನುದಾನ.
ನಗರದ ಅಭಿವೃದ್ಧಿಗೆ ಬಜೆಟ್ ಪೂರಕ:
ಬಿಬಿಎಂಪಿಯ ಈ ಬಜೆಟ್ ನಗರದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿರುವುದು ನಗರದ ನಾಗರಿಕರಿಗೆ ಅನುಕೂಲವಾಗಲಿದೆ. ಈ ಮೂಲಕ ಬಿಬಿಎಂಪಿ ನಗರದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದೆ.