ಬೆಂಗಳೂರು, ಫೆ.28 www.bengaluruwire.com : ಹೆಬ್ಬಾಳದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB-ಕೆಐಎಡಿಬಿ) ಸ್ವಾಧೀನಪಡಿಸಿಕೊಂಡಿರುವ 45 ಎಕರೆ ಭೂಮಿಯನ್ನು ಹಸ್ತಾಂತರಿಸುವಂತೆ ನಮ್ಮ ಮೆಟ್ರೋ ಒಂದು ವರ್ಷದ ಹಿಂದಿನಿಂದಲೂ ಮಾಡಿದ ಮನವಿಗೆ ಇಂದಿನ ಬೃಹತ್ ಕೈಗಾರಿಕಾ ಸಚಿವರು ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರ ಉನ್ನತ ಮಟ್ಟದ ಸಭೆಯಲ್ಲೂ ಯಾವುದೇ ಅಂತಿಮ ನಿರ್ಣಯಕ್ಕೆ ಬಂದಿಲ್ಲ.
ಬೆಂಗಳೂರು ನಗರಾಭಿವೃದ್ಧಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಭೆ ವಿಧಾನಸೌಧದಲ್ಲಿ ಶುಕ್ರವಾರ ನಡೆಯಿತು. ಈ ವೇಳೆ ಹೆಬ್ಬಾಳ ಜಂಕ್ಷನ್ ನಲ್ಲಿ ನಮ್ಮ ಮೆಟ್ರೋ ಡಿಪೋ, ಬಹು ವಿಧದ ಸಾರಿಗೆ ಹಬ್, ಬಹು ಹಂತದ ಕಾರ್ ನಿಲ್ದಾಣ ಸೇರಿದಂತೆ ಸಾರಿಗೆ ಸಂಪರ್ಕ ಹಬ್ ಮಾಡುವ ಕಾರಣಕ್ಕೆ ಕೆಐಎಡಿಬಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು 500 ಕೋಟಿ ರೂ. ಪರಿಹಾರ ಹಣ ನೀಡಿ ಪಡೆದುಕೊಳ್ಳಲು ಬಿಎಂಆರ್ ಸಿಎಲ್ ಸಿದ್ಧವಿದೆ. ಆದರೂ ಮೆಟ್ರೋ ಮನವಿಗೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರೂ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿದ್ದ ಉನ್ನತ ಮಟ್ಟದ ಸಭೆಯಲ್ಲೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.

ಹೆಬ್ಬಾಳದಲ್ಲಿ ನಮ್ಮ ಮೆಟ್ರೋ ನೀಲಿ, ಕೆಂಪು ಹಾಗೂ ಕಿತ್ತಳೆ ಬಣ್ಣದ ರೈಲ್ವೆ ಮಾರ್ಗ ಸಂಪರ್ಕಿಸಲು ಕೆಐಡಿಬಿ ಭೂಮಿ ಅಗತ್ಯವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗಾಗಿ ಕೆಐಎಡಿಬಿ 50 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ 2023ರ ವಿಧಾನಸಭೆ ಚುನಾವಣೆ ಮಾದರಿ ನೀತಿಸಂಹಿತೆ ಜಾರಿಗೆ ಮುನ್ನ ಆಗಿನ ಬಿಜೆಪಿ ಸರ್ಕಾರ ಇದೇ ಸ್ಥಳದಲ್ಲಿ ಐಟಿ ಪಾರ್ಕ್, ಶಾಪಿಂಗ್ ಮಾಲ್, ಹೋಟೆಲ್ ಸೇರಿದಂತೆ ಸಂಯೋಜಿತ ಟೌನ್ ಶಿಪ್ ನಿರ್ಮಾಣ ಮಾಡಲು ಒಪ್ಪಿಗೆ ನೀಡಿತ್ತು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿರುವ ಹೆಬ್ಬಾಳದಲ್ಲಿನ ಈ ಸ್ಥಳಕ್ಕೆ ರಿಯಲ್ ಎಸ್ಟೇಟ್ ಪ್ರಭಾವ, ಲಾಭಿ ಜೋರಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರು ಈ ಭೂಮಿ ಮೇಲೆ ಕಣ್ಣಿಟ್ಟಿರುವುದು ಮತ್ತೊಂದು ಕಾರಣ. ಇದೇ ಕಾರಣಕ್ಕೆ ಕೆಐಡಿಬಿ ಭೂಮಿ ಹಸ್ತಾಂತರಕ್ಕೆ ವಿಳಂಬ ಧೋರಣೆಗೆ ಕಾರಣ ಎನ್ನಲಾಗುತ್ತಿದೆ.
ಹೆಬ್ಬಾಳ ಟ್ರಾಫಿಕ್ ಜಂಜಾಟದಿಂದ ಬೇಸೆತ್ತಿದ್ದ ಸಾರ್ವಜನಿಕರು ಈ ಪ್ರಮುಖ ಸ್ಥಳವನ್ನು ಸಾರ್ವಜನಿಕ ಸಾರಿಗೆಗೆ ಬಳಸುವ ಬದಲು ಸರ್ಕಾರ ರಿಯಲ್ ಎಸ್ಟೇಟ್ ಯೋಜನೆಗೆ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದ್ದರು. ಹೆಬ್ಬಾಳದಲ್ಲಿನ ಈ ಭೂಮಿಯನ್ನು ನಮ್ಮ ಮೆಟ್ರೋ ರೈಲ್ವೇ ಯೋಜನೆಗೆ ಹಸ್ತಾಂತರಿಸುವ ಬಗ್ಗೆ ಈ ಹಿಂದೆಯೂ ಸಚಿವ ಎಂ.ಬಿ.ಪಾಟೀಲ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ನಡೆಸಿದ್ದರೂ ಫಲಪ್ರದವಾಗಿರಲಿಲ್ಲ. ಅದರ ಮುಂದುವರೆದ ಭಾಗವೇ ಇಂದಿನ ಸಭೆಯಲ್ಲೂ ವ್ಯಕ್ತವಾಯಿತು ಎಂದು ಮೂಲಗಳು ಖಚಿತಪಡಿಸಿವೆ.
ಇದಲ್ಲದೆ ಇಂದಿನ ಉನ್ನತ ಮಟ್ಟದ ಸಭೆಯಲ್ಲಿ ನಗರದಲ್ಲಿ ಎಲ್ಲೆಲ್ಲಿ ಪ್ರಸ್ತಾಪಿತ ನಮ್ಮ ಮೆಟ್ರೋ ಮಾರ್ಗ ಬರುವುದೋ ಅಲ್ಲಲ್ಲಿ ಕೆಐಡಿಬಿ ಭೂಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮೆಟ್ರೋಗೆ ಹಸ್ತಾಂತರಿಸುವ ಬಗ್ಗೆಯೂ ಬಿಎಂಆರ್ ಸಿಎಲ್ ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಿದರೂ ಅದಕ್ಕೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೊಪ್ಪು ಹಾಕಲಿಲ್ಲ.
ಕೆಐಡಿಬಿ ಗೆ ಹೆಬ್ಬಾಳದಲ್ಲಿ ಭೂಸ್ವಾಧೀನಕ್ಕೆ ಅವರು ಖರ್ಚು ಮಾಡಿದ ಹಣ ಕೊಡಲು ನಮ್ಮ ಮೆಟ್ರೋ ಅಧಿಕಾರಿಗಳು ಚರ್ಚೆ ನಡೆಸಿದರು ಎಂದು ಗೊತ್ತಾಗಿದೆ.
ಬಿಎಸ್ ಡಬ್ಲ್ಯುಎಂಎಲ್ ನಗರದ ನಾಲ್ಕು ಸಂಸ್ಕರಣಾ ಘಟಕ ಸ್ಥಾಪನೆ ಪೈಕಿ ಹಾರೋಹಳ್ಳಿ, ಮಾಲೂರು ಕಡೆಗಳಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡ ಭೂಮಿ ನೀಡುವಂತೆ ಬಿಬಿಎಂಪಿ ಪ್ರಸ್ತಾಪಿಸಿದಾಗ ಸಚಿವ ಎಂ.ಬಿ.ಪಾಟೀಲ್, ಆ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದಷ್ಟೇ ಹೇಳಿದರು ಎಂದು ಗೊತ್ತಾಗಿದೆ.
ಇಂದಿನ ಉನ್ನತ ಮಟ್ಟದ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಡಳಿತಗಾರರಾದ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಮ್ಮ ಮೆಟ್ರೋ ಎಂಡಿ ಮಹೇಶ್ವರ ರಾವ್, ಡಿಸಿಎಂ ಕಾರ್ಯದರ್ಶಿ ಹಾಗೂ ಬಿಎಂಆರ್ ಡಿಎ ಆಯುಕ್ತರಾದ ರಾಜೇಂದ್ರ ಚೋಳನ್, ಬಿಡಬ್ಲ್ಯುಎಸ್ ಎಸ್ ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಬಿಎಸ್ ಡಬ್ಲ್ಯುಎಂಎಲ್ ಸಿಇಒ ಹರೀಶ್ ಕುಮಾರ್, ಬಿಡಿಎ ಎಂಜಿನಿಯರ್ ಸದಸ್ಯ ಶಾಂತರಾಜಣ್ಣ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.