ಬೆಂಗಳೂರು, ಫೆ.23 www.bengaluruwire.com : ರಾಜಧಾನಿ ಬೆಂಗಳೂರಿನ ಇತಿಹಾಸ ಸಾರುವ ಗತಕಾಲದ 133 ವರ್ಷ ಹಳೆಯದಾದ ಪಾರಂಪರಿಕ ಕಟ್ಟಡ ಶೇಷಾದ್ರಿಪುರಂ ಪೊಲೀಸ್ ಠಾಣೆ (Sheshadripuram Police Station)ಯನ್ನು ನೆಲಸಮ ಮಾಡಿ ಆ ಸ್ಥಳದಲ್ಲಿ ಹೊಸ ಕಟ್ಟಡ ಕಟ್ಟಲಾಗುತ್ತಿದೆ. ಈ ವಿಷಯ ನಗರದ ಬಗ್ಗೆ ಪ್ರೀತಿ ಹೊಂದಿದ ಎಲ್ಲರಿಗೂ ಅಪತ್ಯವಾಗಿದೆ. ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳುವ ಬಗ್ಗೆ ಕೂಗೆದ್ದಿದೆ.
ಬೆಂಗಳೂರು ನಗರ ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, 1892ರಲ್ಲಿ ಆಗಿನ ಮೈಸೂರು ದೀವಾನರಾಗಿದ್ದ ಕೆ.ಶೇಷಾದ್ರಿ ಐಯ್ಯರ್ (Diwan Sheshadri Iyer) ಹೆಸರಿನಲ್ಲಿ ಕಟ್ಟಿಸಿದ್ದ ಶೇಷಾದ್ರಿಪುರಂ ಪೊಲೀಸ್ ಠಾಣೆ ನಗರದ ಪ್ರಮುಖ ಪಾರಂಪರಿಕ ಕಟ್ಟಡ (Heritage Building)ಗಳಲ್ಲಿ ಒಂದಾಗಿದ್ದು, ಅದನ್ನು ಯಾವುದೇ ಕಾರಣಕ್ಕೂ ನೆಲಸಮ ಮಾಡದೆ ಸಂರಕ್ಷಿಸುವಂತೆ ತಮ್ಮ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪೊಲೀಸ್ ಮಹಾ ನಿರ್ದೇಶಕರಲ್ಲಿ ಅವರು ಮನವಿ ಮಾಡಿದ್ದಾರೆ.

ಭಾಸ್ಕರ್ ರಾವ್ ತಮ್ಮ ಎಕ್ಸ್ ಖಾತೆಯಲ್ಲಿ, “ಈ ಪೊಲೀಸ್ ಠಾಣೆ ಕಟ್ಟಡವು ಮೊದಲ ಮತ್ತು ಎರಡನೇ ಮಹಾಯುದ್ಧಗಳ ಇತಿಹಾಸ, ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಬಂದೋಬಸ್ತ್ ವ್ಯವಸ್ಥೆಗಳು, ಮಹಾತ್ಮ ಗಾಂಧಿ ಹತ್ಯೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ವಾಜಪೇಯಿ, ರಾಮಕೃಷ್ಣ ಹೆಗಡೆ, ಅಡ್ವಾಣಿ ಅವರಂತಹ ಪ್ರಮುಖ ನಾಯಕರನ್ನು ಇಲ್ಲಿಗೆ ಕರೆತಂದು ಬಂಧಿಸಲಾಯಿತು”.

“ಮಾಜಿ ಪೊಲೀಸ್ ಆಯುಕ್ತರಾಗಿ ಮಾತ್ರವಲ್ಲದೆ ಬೆಂಗಳೂರಿನ ನಾಗರಿಕರಾಗಿಯೂ ನಾನು ಮುಖ್ಯಮಂತ್ರಿ, ಗೃಹ ಸಚಿವರು, ಡಿಜಿ ಮತ್ತು ಐಜಿಪಿ ಅವರನ್ನು ಪೊಲೀಸರ ಪರಂಪರೆಯನ್ನು ಉಳಿಸುವಂತೆ ಎಲ್ಲರನ್ನು ನಮ್ರತೆಯಿಂದ ಮನವಿ ಮಾಡುತ್ತೇನೆ. ನಮ್ಮಲ್ಲಿ ಫ್ರೇಸರ್ ಟೌನ್, ಭಾರತಿನಗರ, ಬಸವನಗುಡಿ, ಅಲಸೂರು ಗೇಟ್, ಕಬ್ಬನ್ ಪಾರ್ಕ್ ಮತ್ತು ಹಿಂದಿನ ಪೊಲೀಸ್ ಆಯುಕ್ತರ ಕಚೇರಿಯಂತಹ ಕೆಲವು ಐತಿಹಾಸಿಕ ಪೊಲೀಸ್ ಠಾಣೆಗಳಿವೆ. ದಯವಿಟ್ಟು ಈ ನಗರದ ಪರಂಪರೆಯನ್ನು ಉಳಿಸಿ” ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಮೊದಲ ಲಾಕಪ್ ಡೆತ್ ಪ್ರಕರಣವಾದ ಪೊಲೀಸ್ ಠಾಣೆ :
1958, ಏಪ್ರಿಲ್ 9ರಂದು ಕಳ್ಳತನ ಪ್ರಕರಣದಲ್ಲಿ ಶೇಷಾದ್ರಿಪುರಂ ಠಾಣೆ ಪೊಲೀಸರು ಮುನಿಯಮ್ಮ ಎಂಬ ಮಹಿಳೆಯನ್ನು ಬಂಧಿಸಿದ್ದರು. ಆ ಮಹಿಳೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿದ್ದರು. ಇದು ಕರ್ನಾಟಕದಲ್ಲಿನ ಮೊದಲ ಲಾಕಪ್ ಡೆತ್ (Lockup Death) ಪ್ರಕರಣ. ಆಗ ಅಧಿವೇಶನ ನಡೆಯುತ್ತಿತ್ತು. ಈ ಘಟನೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಯಿತು. ಅಲ್ಲದೆ ಸದನದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿ ಪ್ರತಿಪಕ್ಷಗಳ ಒತ್ತಡ ಹೆಚ್ಚಾಗಿತ್ತು. ಮೇ 16, 1958ರಲ್ಲಿ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಶಾಸಕರ ಅಭಿಪ್ರಾಯ ಸಂಗ್ರಹಣೆ ಮಾಡಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಸೂಚನೆ ನೀಡಿದರು. ಎಸ್. ನಿಜಲಿಂಗಪ್ಪ ರಾಜೀನಾಮೆ ನೀಡಿದ ನಂತರ. ಬಿ. ಡಿ. ಜತ್ತಿ ಸಿಎಂ ಆದರು.
ಶೇಷಾದ್ರಿಪುರಂ ಪೊಲೀಸ್ ಠಾಣೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟವನ್ನು ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಪೊಲೀಸ್ ಠಾಣೆಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಹೊಸ ಕಟ್ಟಡ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಹೆಸರಿನಲ್ಲಿ ನಿರ್ಮಾಣವಾದ ಶೇಷಾದ್ರಿಪುರಂ ಬಡಾವಣೆಯಲ್ಲಿ ಸರ್ಕಾರಿ ಕಛೇರಿಯಾಗಿದ್ದ ಕಟ್ಟಡ ಆನಂತರ ಪೊಲೀಸ್ ಠಾಣೆಯಾಗಿ ಬದಲಾಗಿತ್ತು. ಒಂದು ಕಾಲು ಶತಮಾನಕ್ಕಿಂತಲೂ ಹೆಚ್ಚಿನ ದಶಕಗಳ ಇತಿಹಾಸ ಹೊಂದಿರುವ ಈ ಕಟ್ಟಡವನ್ನು ಈಗ ನೆಲಸಮಗೊಳಿಸಲಾಗುತ್ತಿದೆ.
ಶೇಷಾದ್ರಿಪುರಂ ಪೊಲೀಸ್ ಠಾಣೆಯ ವಿಶೇಷವೊಂದಿತ್ತು. ವಾಚ್ ಇಲ್ಲದ ಸಮಯದಲ್ಲಿ ಗಸ್ತು ತಿರುಗುವ ಪೊಲೀಸರಿಗೆ ಸಹಾಯವಾಗಲು ಬೆಂಗಳೂರು ನಗರದಲ್ಲಿನ ಈ ಸ್ಟೇಷನ್‌ನಲ್ಲಿ ಮಾತ್ರ ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯ ತನಕ ಈ ಪೊಲೀಸ್ ಸ್ಟೇಷನ್‌ನಲ್ಲಿ ಗಂಟೆಗೊಮ್ಮೆ ಬೆಲ್ ಬಾರಿಸಲಾಗುತ್ತಿತ್ತು. ನಗರದ ಅತಿ ಹಳೆಯ ಈ ಕಟ್ಟಡ ಇತಿಹಾಸ ಪುಟ ಸೇರುತ್ತಿರುವುದು ದುರದೃಷ್ಟಕರ ಎಂದು ನಗರದ ನಾಗರೀಕರು ಅಭಿಪ್ರಾಯಪಟ್ಟಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.