ಬೆಂಗಳೂರು, ಫೆ.22 www.bengaluruwire.com : ದಿನಂಪ್ರತಿ ಸಾವಿರಾರು ನಾಗರೀಕರು, ಸರ್ಕಾರಿ ನೌಕರರು, ಅಧಿಕಾರಿಗಳು ಭೇಟಿ ಕೊಡುವ ಕಂದಾಯ ಭವನ ಜನರ ಪಾಲಿಗೆ “ಡೇಂಜರ್ ಕಟ್ಟಡ”, ಆಕಸ್ಮಾತ್ ಅಗ್ನಿ ಅನಾಹುತವಾದಲ್ಲಿ ಮೃತ್ಯುಕೂಪವಾಗಲಿದೆ ಎಂಬುದು ಬೆಂಗಳೂರು ವೈರ್ ನಡೆಸಿದ ರಿಯಾಲಿಟಿ ಚೆಕ್ ನಿಂದ ಬಹಿರಂಗವಾಗಿದೆ.
ಶಕ್ತಿಸೌಧ ವಿಧಾನಸೌಧದಿಂದ ಸಮೀಪವಿರುವ 12ಕ್ಕೂ ಸರ್ಕಾರಿ ಕಚೇರಿಗಳಿರುವ “ಕಂದಾಯ ಭವನ” ಬಹು ಮಹಡಿ ಕಟ್ಟಡದ ಬಗ್ಗೆ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ವಿವಿಧ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಈ ಕಟ್ಟಡವು ಅಗ್ನಿ ಸುರಕ್ಷತಾ ಮಾನದಂಡಗಳನ್ನು, ರಾಷ್ಟ್ರೀಯ ಕಟ್ಟಡ ಸಂಹಿತೆ (National Building Code- NBC)ಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.

ಸುರಕ್ಷತಾ ಪ್ರೋಟೋಕಾಲ್‌ಗಳಲ್ಲಿನ ಈ ತೀವ್ರ ಲೋಪವು ಅಕಸ್ಮಾತ್ ಅಗ್ನಿ ಅವಘಡಗಳು ಸಂಭವಿಸಿದರೆ ಈ ಕಚೇರಿಗೆ ದೈನಂದಿನ ಕೆಲಸ ಕಾರ್ಯಗಳಿಗೆಂದು ಬಂದು ಹೋಗುವ ಸಾವಿರಾರು ನಾಗರೀಕರು, ಉದ್ಯೋಗಿಗಳು ಮತ್ತು ಸಂದರ್ಶಕರ ಜೀವವನ್ನು ಅಪಾಯಕ್ಕೆ ಸಿಲುಕುತ್ತಾರೆ. ಬೆಂಗಳೂರು ವೈರ್ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದಾಗ ಎಂಟು ಅಂತಸ್ತುಗಳ ಕಂದಾಯ ಭವನ ಕಟ್ಟಡದ ಬಹುತೇಕ ಕಡೆಗಳಲ್ಲಿ ಅಗ್ನಿ ಸುರಕ್ಷತಾ ಉಪಕರಣಗಳೇ ಇಲ್ಲದಿರುವ ಹಾಗೂ ಕೆಲವೊಂದು ಉಪಕರಣಗಳು ಇದ್ದ ಕಡೆ ಕಾರ್ಯನಿರ್ವಹಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ.


ಕಟ್ಟಡವು ಕ್ರಿಯಾತ್ಮಕ ಅಗ್ನಿಶಾಮಕಗಳು, ಹೊಗೆ ಶೋಧಕಗಳು (Smoke Detectors) ಮತ್ತು ಸ್ಪ್ರಿಂಕ್ಲರ್ ವ್ಯವಸ್ಥೆ (Sprinklers System)ಗಳು ಸೇರಿದಂತೆ ಸಾಕಷ್ಟು ಅಗ್ನಿಶಾಮಕ ಉಪಕರಣಗಳ ಕೊರತೆಯನ್ನು ಹೊಂದಿದೆ. ಮೆಟ್ಟಿಲುಗಳು ಮತ್ತು ಲಿಫ್ಟ್ ಲಾಬಿಗಳು, ಬೆಂಕಿಯ ಸಂದರ್ಭದಲ್ಲಿ ನಿರ್ಣಾಯಕ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ಮಾರ್ಗಗಳು ಸಹ ಅಗ್ನಿ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಲ್ಲ.
ರಾಷ್ಟ್ರೀಯ ಕಟ್ಟಡ ಸಂಹಿತೆ-2016 ಏನು ಹೇಳುತ್ತೆ?:
ರಾಷ್ಟ್ರೀಯ ಕಟ್ಟಡ ಸಂಹಿತೆ-2016 ಪ್ರಕಾರ ಕಟ್ಟಡಗಳಲ್ಲಿ ಅಗ್ನಿಶಾಮಕ ಎಚ್ಚರಿಕೆಗಳು, ಅಗ್ನಿಶಾಮಕಗಳು ಮತ್ತು ಹೊಗೆ ಶೋಧಕಗಳ ಸ್ಥಾಪನೆ ಸೇರಿದಂತೆ ಕಟ್ಟುನಿಟ್ಟಾದ ಅಗ್ನಿ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಷರತ್ತು ವಿಧಿಸುತ್ತದೆ. ಆದಾಗ್ಯೂ, ಕಂದಾಯ ಭವನ ಕಟ್ಟಡವು ಈ ಅವಶ್ಯಕತೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಕಾಲ ಕಾಲಕ್ಕೆ ಅಗ್ನಿ ಸುರಕ್ಷತಾ ಡ್ರಿಲ್ (Fire Safty Drill)ಗಳನ್ನು ನಡೆಸಿ, ಅಗ್ನಿ ಸುರಕ್ಷತಾ ಉಪಕರಣಗಳು ಸೂಕ್ತ ರೀತಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಬಗ್ಗೆ ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು ನಿಯಮಿತ ತಪಾಸಣೆ, ಹಠಾತ್ ಪರಿಶೀಲನೆಯಂತಹ ಕೆಲಸ, ಅಗ್ನಿ ಪರಿಶೋಧನೆ (Fire Audit) ಕಾರ್ಯಗಳನ್ನು ಕೈಗೊಂಡು ಈ ಬಗ್ಗೆ ಪ್ರಮಾಣಪತ್ರವನ್ನು ನೀಡುವುದನ್ನೇ ಮರೆತು ಹೋಗಿದ್ದಾರೆ.


ನಾಟ್ ರೀಚಬಲ್ ಜಿಲ್ಲಾಡಳಿತ :
ಕಂದಾಯ ಭವನ ಉಸ್ತುವಾರಿ ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ (North Division AC) ಹಾಗೂ ಉತ್ತರ ತಾಲೂಕು ತಹಸೀಲ್ದಾರ್ ವ್ಯಾಪ್ತಿಗೆ ಬರುತ್ತಿದ್ದು, ಸೂಕ್ತ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಈ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಎಸಿಯವರನ್ನು ಪ್ರತಿಕ್ರಿಯೆಗಾಗಿ ಬೆಂಗಳೂರು ವೈರ್ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.
ಅಗ್ನಿ ಅನಾಹುತಗಳಾಗಿ ಜೀವಹಾನಿಯಾದರೆ ಯಾರು ಜವಾಬ್ದಾರಿ? :

“ಸಾವಿರಾರು ನಾಗರೀಕರು ದೈನಂದಿನ ಸರ್ಕಾರಿ ಕೆಲಸ ಕಾರ್ಯಗಳಿಗೆ ಭೇಟಿ ನೀಡುವ ಕಂದಾಯ ಭವನ ಬಹುಮಹಡಿ ಕಟ್ಟಡವಾಗಿದ್ದು, ಅಗ್ನಿ ಸುರಕ್ಷತಾ ಮಾನದಂಡಗಳ ಉಲ್ಲಂಘಸುತ್ತಿರುವುದು ಸರಿಯಲ್ಲ. ಇದೊಂದೇ ಕಟ್ಟಡವಲ್ಲ ವಿಧಾಮಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್ ಕಟ್ಟಡಗಳಲ್ಲೂ ಅಗ್ನಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಈ ಕಟ್ಟಡಗಳ ಉಸ್ತುವಾರಿ ಹೊತ್ತವರಿಗೂ, ಅಗ್ನಿಶಾಮಕ ಇಲಾಖೆಗೂ ಕಾಳಜಿಯಿಲ್ಲ. ಇಲ್ಲೆಲ್ಲಾ ಅಗ್ನಿ ಅನಾಹುತಗಳಾಗಿ ಜೀವಹಾನಿಯಾದರೆ ಯಾರು ಜವಾಬ್ದಾರಿ? ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದವರಿಗೆ ಆಗ್ರಹಿಸುತ್ತೇನೆ”
– ಭಾಸ್ಕರ್ ರಾವ್, ಬೆಂಗಳೂರು ನಗರ ಮಾಜಿ ಪೊಲೀಸ್ ಆಯುಕ್ತರು
ಕಂದಾಯ ಭವನದಲ್ಲಿನ ಪ್ರಮುಖ ಅಗ್ನಿ ಸುರಕ್ಷತಾ ಉಲ್ಲಂಘನೆಗಳು:

– ಅಸಮರ್ಪಕ ಅಗ್ನಿಶಾಮಕ ಕ್ರಮಗಳು: ಕಟ್ಟಡದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಅಗ್ನಿಶಾಮಕ, ಹೊಗೆ ಪತ್ತೆಕಾರಕಗಳು ಮತ್ತು ಸ್ಪ್ರಿಂಕ್ಲರ್ ವ್ಯವಸ್ಥೆಗಳ ಕೊರತೆಯಿದೆ.
ಮೆಟ್ಟಿಲುಗಳು ಮತ್ತು ಲಿಫ್ಟ್ ಲಾಬಿಗಳು:
ಮೆಟ್ಟಿಲುಗಳು ಮತ್ತು ಲಿಫ್ಟ್ ಲಾಬಿಗಳು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಅಗ್ನಿ ಅವಘಡ ಸಂದರ್ಭದಲ್ಲಿ ಹೊಗೆ, ಬೆಂಕಿ ವ್ಯಾಪಿಸಿದಾಗ ಕಟ್ಟಡದ ಒಳಗೆ ಸಿಲುಕಿರುವವರು ತಪ್ಪಿಸಿಕೊಳ್ಳುವ ಮಾರ್ಗಗಳ ಮಾರ್ಗಸೂಚಕಗಳನ್ನು ಕಣ್ಣಿಗೆ ಕಾಣುವಂತೆ ಅಳವಡಿಸಿಲ್ಲ.
ಬೆಂಕಿ ನಂದಿಸಲು ಪೈಪಲ್ಲಿ ನೀರು ಬರಲ್ಲ, ಫೈರ್ ಹೋಸ್ ಬಾಕ್ಸ್ ಖಾಲಿ ಖಾಲಿ:
ಕಟ್ಟಡದ ನೀರಿನ ಸಂಗ್ರಹ ಸಾಮರ್ಥ್ಯವು ಅಸಮರ್ಪಕವಾಗಿದೆ. ಕಟ್ಟಡದ ಸುತ್ತಮುತ್ತ ಬೆಂಕಿ ನಂದಿಸಲೆಂದು ನೆಪಮಾತ್ರಕ್ಕೆ ಹೋಸ್ ಬಾಕ್ಸ್ ಅಳವಡಿಸಲಾಗಿದೆ. ಆದರೆ ಆ ಬಾಕ್ಸ್ ನಲ್ಲಿ ಕಟ್ಟಡದ ಬಹುಭಾಗ ಎಳೆದೊಯ್ಯುವಂತಹ ಹೋಸ್ ರೀಲ್ (Hose Reel) ಪೈಪ್ ಗಳಿಲ್ಲ. ಅಲ್ಲದೇ ನೀರು ಬಾರದ ಪ್ರಶರ್ ಪೈಪ್ ನಲ್ಲಿ ಸೂಕ್ತ ವಾಲ್ವ್ ಗಳಿಲ್ಲ. ಆದ್ದರಿಂದ ಅಗ್ನಿ ಅನಾಹುತ ಸಂದರ್ಭದಲ್ಲಿ ಬೆಂಕಿಯನ್ನು ನಂದಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತದೆ.
ಸಾರ್ವಜನಿಕರಿಂದ ಟೀಕೆ :
ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಜಾರಿಗೊಳಿಸುವಲ್ಲಿ, ಈ ಬಹುಮಹಡಿ ಕಟ್ಟಡದಲ್ಲಿ ಆಗಾಗ ಕೈಕೊಡುವ ಲಿಫ್ಟ್ ವ್ಯವಸ್ಥೆ, ಕಟ್ಟಡ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಬೆಂಗಳೂರು ಜಿಲ್ಲಾಡಳಿತದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆ ಕಚೇರಿಗಳಿಗೆ ಬರುವ ಸಾರ್ವಜನಿಕರು ಟೀಕಿಸುತ್ತಿದ್ದಾರೆ.
ಬಿಬಿಎಂಪಿಯ ಅನಾಹುತದಿಂದ ಪಾಠ ಕಲಿಯದ ಜಿಲ್ಲಾಧಿಕಾರಿಗಳ ಕಚೇರಿ :

2023 ರಲ್ಲಿ, ರಾಷ್ಟ್ರೀಯ ಕಟ್ಟಡ ಸಂಹಿತೆ (National Building Code- NBC) ಮಾನದಂಡಗಳ ಪ್ರಕಾರ ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿರದ ಬಿಬಿಎಂಪಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಬೆಂಕಿಯು ಸುರಕ್ಷತಾ ಮಾನದಂಡಗಳಲ್ಲಿನ ಈ ಲೋಪವನ್ನು ಸ್ಪಷ್ಟವಾಗಿ ನೆನಪಿಸುತ್ತದೆ.ಈ ಘಟನೆಯಿಂದಾಗಿ ಈ ಪ್ರಯೋಗಾಲಯದ ಒಂಬತ್ತು ಸಿಬ್ಬಂದಿ ಸುಟ್ಟ ಗಾಯಗಳಿಗೆ ಒಳಗಾದರು. ಇದನ್ನೂ ಓದಿ : BBMP Fire Accident Update | ಬಿಬಿಎಂಪಿ ಗುಣನಿಯಂತ್ರಣ ಪ್ರಯೋಗಾಲಯ ಅಗ್ನಿ ಅಪಘಾತ ಇಬ್ಬರ ಸ್ಥಿತಿ ಗಂಭೀರ – 7 ಮಂದಿ ಆರೋಗ್ಯ ಸ್ಥಿತಿ ಸ್ಥಿರ
ಬಹು ಮಹಡಿಗಳನ್ನು ಹೊಂದಿರುವ ಯಾವುದೇ ದೊಡ್ಡ ಕಟ್ಟಡಗಳು, “ಬೆಂಕಿಯಿಂದ ತಪ್ಪಿಸಿಕೊಳ್ಳುವ ಮೆಟ್ಟಿಲುಗಳನ್ನು” ಹೊಂದಿರಬೇಕು ಎಂದು ಎನ್ ಬಿಸಿಯು ನಿರ್ದೇಶಿಸುತ್ತದೆ. 2023ರಲ್ಲಿ ಪಾಲಿಕೆಯ ಕೇಂದ್ರ ಕಚೇರಿಯ ಗುಣನಿಯಂತ್ರಣ ಕಚೇರಿಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಿಂದ ಜಿಲ್ಲಾಡಳಿತ ಪಾಠ ಕಲಿತಿಲ್ಲ. ತನ್ನ ಕಚೇರಿಯ ಮುಂಭಾಗದಲ್ಲೇ ಕಟ್ಟಿರುವ ಕಂದಾಯ ಭವನದ ಸುರಕ್ಷತೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಕಣ್ಣು ಹಾಯಿಸಿಲ್ಲ ಎಂದು ಸಾಮಾನ್ಯ ಜನರು ದೂರುತ್ತಿದ್ದಾರೆ.

ನಗರದ ಹಲವು ಸರ್ಕಾರಿ ಕಟ್ಟಡಗಳಲ್ಲೂ ಅಗ್ನಿ ಸುರಕ್ಷತೆಗೆ ಎಳ್ಳು ನೀರು :
ಸರ್ಕಾರಿ ಕಂದಾಯ ಭವನ ಕಚೇರಿ ಕಟ್ಟಡವೊಂದೇ ಅಲ್ಲ ನಗರದ ಹಲವಾರು ಇತರ ಸರ್ಕಾರಿ ಕಟ್ಟಡಗಳು ಸಹ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಸಾರ್ವಜನಿಕ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಹೊಣೆಗಾರಿಕೆ ಮತ್ತು ಮೇಲ್ವಿಚಾರಣೆಯ ಕೊರತೆಯ ಬಗ್ಗೆ ಇದು ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ.
ನಾಗರಿಕರು ಮತ್ತು ಸರ್ಕಾರಿ ನೌಕರರ ಸುರಕ್ಷತೆಯು ಅತ್ಯಂತ ಮುಖ್ಯವಾಗಿದೆ. ಈ ಅಗ್ನಿ ಸುರಕ್ಷತಾ ಉಲ್ಲಂಘನೆಗಳನ್ನು ಪರಿಹರಿಸಲು ಮತ್ತು ಯಾವುದೇ ಸಂಭಾವ್ಯ ವಿಪತ್ತುಗಳನ್ನು ತಡೆಗಟ್ಟಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ.
ಒಟ್ಟಾರೆಯಾಗಿ ಕಂದಾಯ ಭವನ ಸೇರಿದಂತೆ ನಗರದಲ್ಲಿರುವ ಎಲ್ಲಾ ಸಾರ್ವಜನಿಕ ಕಟ್ಟಡಗಳು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಲ್ಲಿ ನಿಯಮಿತ ಲೆಕ್ಕಪರಿಶೋಧನೆಗಳು, ತಪಾಸಣೆಗಳು ಮತ್ತು ಅನುಸರಣೆ ಮಾಡದಿದ್ದಕ್ಕಾಗಿ ದಂಡವನ್ನು ಜಾರಿಗೊಳಿಸುವುದು ಸೇರಿವೆ.