ನವದೆಹಲಿ, ನ.26 www.bengaluruwire.com : ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯು ಕರ್ನಾಟಕಕ್ಕೆ 72 ಕೋಟಿ ರೂ. ಸೇರಿದಂತೆ ವಿವಿಧ ರಾಜ್ಯಗಳಿಗೆ ವಿಪತ್ತು ತಗ್ಗಿಸುವಿಕೆ ಮತ್ತು ಸಾಮರ್ಥ್ಯ ನಿರ್ಮಾಣ ಯೋಜನೆಗಳಿಗೆ ರೂ.1115.67 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ಅನುಮೋದನೆ ನೀಡಿದೆ.
ಹಣಕಾಸು ಸಚಿವರು, ಕೃಷಿ ಸಚಿವರು ಮತ್ತು ನೀತಿ ಆಯೋಗದ ಉಪಾಧ್ಯಕ್ಷರನ್ನು ಒಳಗೊಂಡ ಸಮಿತಿಯು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (NDMF) 15 ರಾಜ್ಯಗಳಲ್ಲಿ ಭೂಕುಸಿತ ಅಪಾಯವನ್ನು ತಗ್ಗಿಸುವ ಪ್ರಸ್ತಾವನೆ ಮತ್ತು ನಾಗರಿಕ ರಕ್ಷಣಾ ಸ್ವಯಂಸೇವಕರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಮತ್ತೊಂದು ಪ್ರಸ್ತಾವನೆಯನ್ನು ಪರಿಗಣಿಸಿದೆ. ವಿಪತ್ತು ಪ್ರತಿಕ್ರಿಯೆ ನಿಧಿಯ ಅಡಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ನಿಧಿಯಿಂದ ಸನ್ನದ್ಧತೆ ಮತ್ತು ಸಾಮರ್ಥ್ಯ ನಿರ್ಮಾಣ ಕಲ್ಪಿಸಲು ಒಪ್ಪಿಗೆ ನೀಡಿದೆ.
ಉನ್ನತ ಮಟ್ಟದ ಸಮಿತಿಯು 15 ರಾಜ್ಯಗಳಲ್ಲಿ (ಅರುಣಾಚಲ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ) ರಾಷ್ಟ್ರೀಯ ಭೂಕುಸಿತ ಅಪಾಯ ತಗ್ಗಿಸುವಿಕೆ ಯೋಜನೆಗೆ ಸಮಿತಿಯು ಒಟ್ಟು 1000 ಕೋಟಿ ರೂ. ಅನುಮೋದನೆ ನೀಡಿದೆ. ಉತ್ತರಾಖಂಡಕ್ಕೆ 139 ಕೋಟಿ, ಹಿಮಾಚಲ ಪ್ರದೇಶಕ್ಕೆ 139 ಕೋಟಿ, ಎಂಟು ಈಶಾನ್ಯ ರಾಜ್ಯಗಳಿಗೆ 378 ಕೋಟಿ, ಮಹಾರಾಷ್ಟ್ರಕ್ಕೆ 100 ಕೋಟಿ, ಕರ್ನಾಟಕಕ್ಕೆ 72 ಕೋಟಿ ರೂ., ಕೇರಳಕ್ಕೆ 72 ಕೋಟಿ, ತಮಿಳುನಾಡಿಗೆ 50 ಕೋಟಿ ರೂ., ಪಶ್ಚಿಮ ಬಂಗಾಳಕ್ಕೆ 50 ಕೋಟಿ ರೂ. ನೀಡಲು ಅನುಮೋದನೆ ನೀಡಿದೆ.
ಉನ್ನತ ಮಟ್ಟದ ಸಮಿತಿಯು 115.67 ಕೋಟಿ ರೂ.ಗಳಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಗರಿಕ ರಕ್ಷಣೆಯ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಮತ್ತೊಂದು ಯೋಜನೆಯನ್ನು ಅನುಮೋದಿಸಿದೆ. ಈ ಹಿಂದೆ ಸಮಿತಿಯು ಏಳು ನಗರಗಳಲ್ಲಿ ಒಟ್ಟು ರೂ 3075.65 ಕೋಟಿ ರೂ. ವೆಚ್ಚದಲ್ಲಿ ನಗರ ಪ್ರವಾಹ ಅಪಾಯ ತಗ್ಗಿಸುವಿಕೆ ಯೋಜನೆಗಳನ್ನು ಮತ್ತು ಎನ್ಡಿಎಂಎಫ್ನಿಂದ 150 ಕೋಟಿ ರೂ. ವೆಚ್ಚದಲ್ಲಿ 4 ರಾಜ್ಯಗಳಲ್ಲಿ ಯೋಜನೆಗೆ ಒಪ್ಪಿಗೆ ಸೂಚಿಸಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಪತ್ತು ನಿರೋಧಕ ಭಾರತದ ದೃಷ್ಟಿಕೋನವನ್ನು ಈಡೇರಿಸಲು, ಗೃಹ ಸಚಿವ ಅಮಿತ್ ಶಾ ಅವರು, ದೇಶದಲ್ಲಿನ ವಿಪತ್ತುಗಳ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಭಾರತದಲ್ಲಿ ವಿಪತ್ತು ಅಪಾಯ ಕಡಿತ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ವಿಪತ್ತುಗಳ ಸಮಯದಲ್ಲಿ ಯಾವುದೇ ವ್ಯಾಪಕವಾದ ಜೀವ ಮತ್ತು ಆಸ್ತಿ ನಷ್ಟವನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಈ ವರ್ಷದಲ್ಲಿ ರಾಜ್ಯಗಳಿಗೆ 21,476 ಕೋಟಿ ರೂ.ಗೂ ಹೆಚ್ಚು ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (SDRF) 26 ರಾಜ್ಯಗಳಿಗೆ 14,878.40 ಕೋಟಿ ರೂ., ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (NDRF) 4,637.66 ಕೋಟಿ ರೂ.ಗಳನ್ನು 15 ರಾಜ್ಯಗಳಿಗೆ, ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ 1,385.45 ಕೋಟಿ ರೂ. ಹಾಗೂ ರಾಷ್ಟ್ರೀಯ ವಿಕೋಪದಿಂದ 6 ರಾಜ್ಯಗಳಿಗೆ 574.93 ಕೋಟಿ ರೂ. ಮಿಟಿಗೇಶನ್ ಫಂಡ್ ನೀಡಲಾಗಿದೆ.