ನವದೆಹಲಿ, ನ.04 www.bengaluruwire.com : ಮುಂಬೈ-ಅಹಮದಾಬಾದ್ ನಡುವಣ ದೇಶದ ಮೊತ್ತಮೊದಲ 508 ಕಿಮೀ ಉದ್ದದ ಬುಲೆಟ್ ಟ್ರೈನ್ ಕಾರಿಡಾರ್‌ಗಾಗಿ ಗುಜರಾತ್‌ನಲ್ಲಿ ನದಿಗಳ ಮೇಲೆ ಒಟ್ಟು 20 ಕಡೆಗಳಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಅವುಗಳ ಪೈಕಿ 12 ಸೇತುವೆ ನಿರ್ಮಾಣ ಪೂರ್ಣಗೊಂಡಿದೆ ಎಂದು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (National Highspeed Rail Corporation – NHSRCL) ಅಧಿಕಾರಿಗಳು ತಿಳಿಸಿದ್ದಾರೆ.
ನವಸಾರಿ ಜಿಲ್ಲೆಯ ಖರೇರಾ ನದಿಯ ಮೇಲೆ 120 ಮೀಟರ್ ಉದ್ದದ ಸೇತುವೆಯು ಗುಜರಾತ್‌ನಲ್ಲಿ ಇತ್ತೀಚೆಗೆ ಪೂರ್ಣಗೊಂಡ 12 ನೇ ಸೇತುವೆಯಾಗಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ತಿಳಿಸಿದೆ. ಬುಲೆಟ್ ರೈಲು ಯೋಜನೆಯು ಗುಜರಾತ್ ನಲ್ಲಿ 352 ಕಿಮೀ ಮತ್ತು ಮಹಾರಾಷ್ಟ್ರದಲ್ಲಿ 156 ಕಿಮೀಗಳಷ್ಟು ಉದ್ದದ ರೈಲು ಮಾರ್ಗಗಳು ಒಳಗೊಂಡಿದೆ.
ಒಟ್ಟು ಎಷ್ಟು ರೈಲು ನಿಲ್ದಾಣಗಳಿವೆ?:
ಮುಂಬೈ, ಥಾಣೆ, ವಿರಾರ್, ಬೋಯ್ಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್/ನಾಡಿಯಾಡ್, ಅಹಮದಾಬಾದ್ ಮತ್ತು ಸಬರಮತಿಯಲ್ಲಿ ಒಟ್ಟು 12 ನಿಲ್ದಾಣಗಳು ಇರಲಿವೆ.
ಎರಡು ನಗರಗಳ ನಡುವಿನ ಪ್ರಯಾಣದ ಅವಧಿ 3 ಗಂಟೆಗೆ ಇಳಿಕೆ :
ರೈಲು ಅಹಮದಾಬಾದ್ ಮತ್ತು ಮುಂಬೈ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 6 ರಿಂದ 8 ಗಂಟೆಗಳಿಂದ ಸುಮಾರು 3 ಗಂಟೆಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ. ಬುಲೆ್ ಟ್ರೈನ್ ಪ್ರತಿ ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುತ್ತದೆ.
ಬುಲೆಟ್ ಟ್ರೈನ್ ಕಾರಿಡಾರ್ ವ್ಯಾಪ್ತಿಯ ಮುಂಬೈ-ಅಹಮದಾಬಾದ್‌ನ ವಾಪಿ ಮತ್ತು ಸೂರತ್ ಬುಲೆಟ್ ರೈಲು ನಿಲ್ದಾಣಗಳ (ದಕ್ಷಿಣ ಗುಜರಾತ್‌ನಲ್ಲಿ) ನಡುವಿನ ಎಲ್ಲಾ ಒಂಬತ್ತು ನದಿ ಸೇತುವೆಗಳ ಪೂರ್ಣಗೊಳಿಸುವಿಕೆಯನ್ನು ಸೂಚಿಸುವ ನವಸಾರಿ ಜಿಲ್ಲೆಯ ಖರೇರಾ ನದಿಯ ಮೇಲಿನ ಸೇತುವೆಯು ಅಕ್ಟೋಬರ್ 29, 2024 ರಂದು ಪೂರ್ಣಗೊಂಡಿದೆ” ಎಂದು ಎನ್ ಎಚ್ ಎಸ್ ಆರ್ ಸಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಖರೇರಾ ಅಂಬಿಕಾ ನದಿಯ ಉಪನದಿಗಳಲ್ಲಿ ಒಂದಾಗಿದೆ. ಇದು ಗುಜರಾತ್ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶದ ವಂಸ್ಡಾ ತಾಲೂಕಿನ ಬೆಟ್ಟಗಳಿಂದ ಹುಟ್ಟುತ್ತದೆ. ಈ ನದಿಯು ವಾಪಿ ಬುಲೆಟ್ ರೈಲು ನಿಲ್ದಾಣದಿಂದ 45 ಕಿಮೀ ಮತ್ತು ಬಿಲಿಮೊರಾ ನಿಲ್ದಾಣದಿಂದ 6 ಕಿಮೀ ದೂರದಲ್ಲಿದೆ ಎಂದು ಅದು ಹೇಳಿದೆ.
ಖರೇರಾ ಅಲ್ಲದೆ, ವಾಪಿ ಮತ್ತು ಸೂರತ್ ನಡುವೆ ಪರ್, ಪೂರ್ಣ, ಮಿಂಧೋಲಾ, ಅಂಬಿಕಾ, ಔರಂಗ, ಕೊಲಕ್, ಕಾವೇರಿ ಮತ್ತು ವೆಂಗನಿಯಾ ನದಿಗಳ ಮೇಲೆ ಸೇತುವೆಗಳನ್ನು ನಿರ್ಮಿಸಲಾಗಿದೆ. ಪೂರ್ಣಗೊಂಡಿರುವ ಇತರ ಸೇತುವೆಗಳು ಧಾಧರ್ (ವಡೋದರಾ ಜಿಲ್ಲೆ), ಮೊಹರ್ ಮತ್ತು ವತ್ರಕ್ (ಎರಡೂ ಖೇಡಾ ಜಿಲ್ಲೆಯಲ್ಲಿ) ಇವೆ. ಅಕ್ಟೋಬರ್ 21 ರಂತೆ, ಬುಲೆಟ್ ರೈಲು ಯೋಜನೆಗೆ ಬೇಕಾದ 1,389.5 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಯೋಜನೆಗೆ ಎಲ್ಲಾ ಸಿವಿಲ್ ಮತ್ತು ಡಿಪೋ ನಿರ್ಮಾಣ ಸೇರಿದಂತೆ ಗುಜರಾತ್ ಭಾಗದ ರೈಲ್ವೆ ಮಾರ್ಗದ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ. ಎಲ್ಲ 12 ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
7 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಆರಂಭ :
7 ಕಿಮೀ ಉದ್ದದ ಸಮುದ್ರದ ಮೂಲಕ ಹಾದುಹೋಗುವ 21 ಕಿ.ಮೀ ಸುರಂಗದ ಕೆಲಸವೂ ಪ್ರಾರಂಭವಾಗಿದೆ. “ಒಂದು ಸುರಂಗದಲ್ಲಿ ಬುಲೆಟ್ ರೈಲಿನ ಯುಪಿ ಮತ್ತು ಡಿಎನ್ (ಕೆಳಗೆ) ಟ್ರ್ಯಾಕ್‌ಗಳನ್ನು ಅಳವಡಿಸಲು ಅನುವಾಗುವಂತೆ 12.1 ಮೀ ವ್ಯಾಸವನ್ನು ಹೊಂದಿರುವ ಸಮುದ್ರದೊಳಗಿನ ಸುರಂಗವು ನೆಲಮಟ್ಟದಿಂದ ಸುಮಾರು 36 ಮೀ ಆಳದಲ್ಲಿರಲಿದೆ. ಅಂತಹ ದೊಡ್ಡ ವ್ಯಾಸದ ಸುರಂಗವನ್ನು ದೇಶದಲ್ಲಿ ಮೊದಲ ಬಾರಿಗೆ ನಿರ್ಮಿಸಲಾಗುತ್ತಿದೆ” ಎಂದು ಅದು ಹೇಳಿದೆ.
ಬುಲೆಟ್ ಟ್ರೈನ್ ಒಟ್ಟು 21 ಕಿ.ಮೀ ಸುರಂಗದಲ್ಲಿ ಸಂಚರಿಸಲಿದೆ. ಈ ಪೈಕಿ 16 ಕಿ.ಮೀ ಸುರಂಗ ಮಾರ್ಗವನ್ನು ಟನಲ್ ಬೋರಿಂಗ್ ಯಂತ್ರವನ್ನು ಬಳಸಿ ಮತ್ತು ಉಳಿದ 5 ಕಿ.ಮೀ ಅನ್ನು ಹೊಸ ಆಸ್ಟ್ರಿಯನ್ ಟನೆಲಿಂಗ್ ವಿಧಾನದಿಂದ ನಿರ್ಮಿಸಲು ಯೋಜಿಸಲಾಗಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ಹೇಳಿದೆ.
2017ರಲ್ಲಿ ಆರಂಭವಾದ ಈ ಯೋಜನೆಗೆ ಒಟ್ಟು 1.08 ಲಕ್ಷ ಕೋಟಿ ರೂ. ಅಂದಾಜು ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರವು ಎನ್‌ಎಚ್‌ಎಸ್‌ಆರ್‌ಸಿಎಲ್ ನಿಗಮಕ್ಕೆ 10,000 ಕೋಟಿ ರೂ. ಅನುದಾನ ನೀಡಿದೆ. ಇನ್ನು ಗುಜರಾತ್ ಮತ್ತು ಮಹಾರಾಷ್ಟ್ರ ಸರ್ಕಾರಗಳು ತಲಾ 5,000 ಕೋಟಿ ರೂ. ಭರಿಸುತ್ತವೆ. ಉಳಿದಂತೆ ಯೋಜನೆಗೆ ಜಪಾನ್ ದೇಶದಿಂದ ಶೇ.0.1 ಬಡ್ಡಿ ದರದಲ್ಲಿ ಸಾಲ ಪಡೆಯಲಾಗುತ್ತಿದೆ ಎಂದು ನಿಗಮವು ಮಾಹಿತಿ ನೀಡಿದೆ. 2026ರ ವೇಳೆಗೆ ದೇಶದಲ್ಲಿ ಮೊತ್ತ ಮೊದಲ ಬುಲೆಟ್ ಟ್ರೈನ್ ಹಳಿಯ ಮೇಲೆ ಸಂಚರಿಸಲಿದೆ ಎಂದು ಈಗಾಗಲೇ ಕೇಂದ್ರವು ಹೇಳಿದೆ. (ಕೃಪೆ : ಪಿಟಿಐ, ಮಿಂಟ್)