ಬೆಂಗಳೂರು, ಅ.29 www.bengaluruwire.com : ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ದೀಪಾವಳಿ ಹಬ್ಬಕ್ಕೆ ನಗರದ ದೊಡ್ಡ ಕಣ್ಣಿನ ಆಸ್ಪತ್ರೆ ಮಿಂಟೊ ಹಾಗೂ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ಪಟಾಕಿ ಸಿಡಿತದಿಂದ ಮೈಕೈ ಸುಟ್ಟು ಗಾಯಗಳಾಗುವ ಅಥವಾ ದೀಪಾವಳಿಯಲ್ಲಿ ಒಂದೊಮ್ಮೆ ಅಗ್ನಿ ಅವಘಡಗಳಾದಾಗ ಚಿಕಿತ್ಸೆ ನೀಡಲೆಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದಕ್ಕಾಗಿಯೇ 15 ಬೆಡ್ ಗಳನ್ನು ಹಾಗೂ ಮಿಂಟೊ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದ ಪ್ರಕರಣದಲ್ಲಿ ಚಿಕಿತ್ಸೆ ನೀಡಲು ಪುರುಷರು (7 ಹಾಸಿಗೆ), ಮಹಿಳೆಯರು (7 ಹಾಸಿಗೆ) ಹಾಗೂ ಮಕ್ಕಳಿಗಾಗಿ (8 ಹಾಸಿಗೆ) ಸೇರಿದಂತೆ ಒಟ್ಟು 22 ಹಾಸಿಗೆಗಳನ್ನು ಮೀಸಲಿಡಲಾಗಿದೆ.
ಈ ಬಾರಿಯ ದೀಪಾವಳಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟಗಾಯಗಳ ಚಿಕಿತ್ಸೆಗೆಂದು ಮಹಾಭೋದಿ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರ ಸಜ್ಜುಗೊಳಿಸಲಾಗಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನಿಯೋಜಿಸಲು ಸೂಚಿಸಲಾಗಿದೆ. ಒಂದೊಮ್ಮೆ ಪಟಾಕಿಯಿಂದ ದೊಡ್ಡ ಅವಘಡಗಳು ಸಂಭವಿಸಿದರೆ ಪ್ರತಿ ರೋಗಿಗಳಿಗೂ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ, ಪಟಾಕಿ ಸುಟ್ಟಗಾಯಗಳ ಚಿಕಿತ್ಸೆಗೆಂದೇ ಪ್ರತ್ಯೇಕ ದಾಖಲಾತಿ ವಿಭಾಗ, ಸೂಕ್ತ ಔಷಧಿ, ಚಿಕಿತ್ಸಾ ಉಪಕರಣ, ತೀವ್ರ ಸುಟ್ಟಗಾಯಗಳ ಚಿಕಿತ್ಸೆಗೆ ಅಗತ್ಯವಾದರೆ ಪ್ಲಾಸ್ಟಿಕ್ ಸರ್ಜರಿ ಘಟಕಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ (BMIC) ಡಾ.ಕೆ.ರಮೇಶ್ ಕೃಷ್ಣ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಇನ್ನು ಮಿಂಟೊ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದವರ ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ದಿನದ 24ಗಂಟೆಯು ರೋಗಿಗಳಿಗೆ ಚಿಕಿತ್ಸೆ ಲಭ್ಯವಿದೆ. ಅಗತ್ಯ ವೈದ್ಯರು, ತಜ್ಞ ವೈದ್ಯರು ಹಾಗೂ ಸಿಬ್ಬಂದಿಗೆ ಒಂದು ವಾರ ರಜೆ ನೀಡುವುದಿಲ್ಲ. ಅಗತ್ಯ ಸಿಬ್ಬಂದಿ ದಿನಪೂರ್ತಿ ಸೇವೆ ನೀಡಲು ಸಜ್ಜಾಗಿದ್ದಾರೆ. ಹೊರ ರೋಗಿಗಳ ವಿಭಾಗದಲ್ಲಿ ಆಸ್ಪತ್ರೆಗೆ ಪಟಾಕಿ ಗಾಯಗಳಿಂದ ಬರುವ ರೋಗಿಗಳ ಪರೀಕ್ಷೆ, ಮೌಲ್ಯಮಾಪನ, ತುರ್ತು ಚಿಕಿತ್ಸೆ ಹಾಗೂ ನರ್ಸ್ ಸ್ಟೇಷನ್ ತಂಡವು ಒಂದೇ ಸ್ಥಳದಲ್ಲಿರಲಿದೆ. ಒಂದೊಮ್ಮೆ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಕಂಡುಬಂದರೆ ಆಪರೇಷನ್ ಥಿಯೇಟರ್ ಗಳನ್ನು ಅದೇ ಬ್ಲಾಕ್ ನಲ್ಲಿ ಸಿದ್ದವಾಗಿಟ್ಟಕೊಳ್ಳಲು ಸೂಚಿಸಲಾಗಿದೆ ಎಂದು ಅವರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಪಟಾಕಿ ಸಿಡಿತದಿಂದ ಗಾಯಗೊಂಡು ಮಿಂಟೊ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ಒಟ್ಟಾರೆ 22 ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡಲಾಗಿದೆ. ತುರ್ತು ಚಿಕಿತ್ಸೆ, ಆಪರೇಷನ್ ಗೂ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ವೈದ್ಯರು, ಸಿಬ್ಬಂದಿ ಕಳೆದ ವರ್ಷ ಪಟಾಕಿ ಸಿಡಿತದಿಂದ 40 ಜನರಿಗೆ ಕಣ್ಣಿನ ಚಿಕಿತ್ಸೆ ನೀಡಲಾಗಿತ್ತು. ಆ 40 ಜನರ ಪೈಕಿ 7-8 ಜನರು ದೃಷ್ಟಿ ಕಳೆದುಕೊಂಡಿದ್ದರು. ಪಟಾಕಿ ಹಚ್ಚುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕ ಡಾ.ಜಿ.ನಾಗರಾಜು ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ : Deepavali Festival | ಬೆಂಗಳೂರು : ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚುವಾಗ ಇರಲಿ ಎಚ್ಚರ ; ಅವಘಡ ಸಂದರ್ಭದಲ್ಲಿ ಏನು ಮಾಡಬೇಕು? ನಗರದ ಆಸ್ಪತ್ರೆಗಳು ಹೇಗೆ ಸಜ್ಜಾಗಿವೆ? ಇಲ್ಲಿದೆ ಪ್ರಮುಖ ಮಾಹಿತಿ
ತುರ್ತು ಸಂದರ್ಭದಲ್ಲಿ ಈ ದೂರವಾಣಿ ಸಂಪರ್ಕಿಸಿ :
ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಈ ರೀತಿ ಪಟಾಕಿ ಅವಘಡಗಳು ಸಂಭವಿಸಿದರೆ, ಕಣ್ಣಿನ ಚಿಕಿತ್ಸೆ ಹಾಗೂ ತುರ್ತ ಚಿಕಿತ್ಸೆ ಪಡೆಯಲು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಸೂಕ್ತ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ತುರ್ತು ಸಂದರ್ಭಗಳಲ್ಲಿ ಮಿಂಟೊ ಆಸ್ಪತ್ರೆಯ 9481740137 ಹಾಗೂ 080- 26707176 ಈ ಸಂಖ್ಯೆಗಳಿಗೆ ಕರೆ ಮಾಡಬಹುದು.
ಇನ್ನು ಪಟಾಕಿ ಅವಘಡದಿಂದ ಸುಟ್ಟಗಾಯಗಳಾದವರಿಗೆ ವಿಕ್ಟೋರಿಯಾ ಆಸ್ಪತ್ರೆ ಚಿಕಿತ್ಸೆಗಾಗಿ 7498809105, 9740322179, 8197969128 ತುರ್ತು ಸಂಪರ್ಕ ಸಂಖ್ಯೆ ಸಂಪರ್ಕಿಸಬಹುದು.
ದೀಪಾವಳಿ ಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿ ಇದ್ದು, ಬೆಂಗಳೂರಿನಲ್ಲಿ ಪಟಾಕಿಗಳ ಖರೀದಿ ಭರಾಟೆ ಜೋರಾಗಿದೆ. ಬೆಂಗಳೂರಿನ 456 ಮೈದಾನಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು, ಜನ ಮುಗಿಬಿದ್ದು ಪಟಾಕಿ ಖರೀದಿಗೆ ಮುಂದಾಗಿದ್ದಾರೆ.
ಪ್ರಮುಖ ಆಸ್ಪತ್ರೆ ಸಹಾಯವಾಣಿಗಳ ಸಂಪರ್ಕ ಸಂಖ್ಯೆ ಹೀಗಿದೆ :
ನಾರಾಯಣ ನೇತ್ರಾಲಯ : ರಾಜಾಜಿನಗರ ಬ್ರಾಂಚ್ – 08066121641/1643 ಅಥವಾ 9902546046.
ಶಂಕರ ಕಣ್ಣಿನ ಆಸ್ಪತ್ರೆ : (ಮಾರತ್ ಹಳ್ಳಿ) 08069038900 ಅಥವಾ 9739270477.
ನೇತ್ರಧಾಮ : (ಜಯನಗರ) 08026088000 ಅಥವಾ 9448071816.
ಮಣಿಪಾಲ್ ಆಸ್ಪತ್ರೆ : (ಹಳೇ ವಿಮಾನ ನಿಲ್ದಾಣ ರಸ್ತೆ) 080-22221111.
ಡಾ.ಎಂ.ಸಿ.ಮೋದಿ ಕಣ್ಣಿನ ಆಸ್ಪತ್ರೆ : 08023492233.
ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆ : ಬನ್ನೇರುಘಟ್ಟ ಶಾಖೆ- 08048193419, ರಾಜರಾಜೇಶ್ವರಿನಗರ ಶಾಖೆ – 918048193501.
ಶೇಖರ್ ಕಣ್ಣಿನ ಆಸ್ಪತ್ರೆ : (ಜೆ.ಪಿ.ನಗರ) 09980562020.