ನವದೆಹಲಿ, ಅ.25 www.bengaluruwire.com : ಸಾಮಾಜಿಕ ಮಾಧ್ಯಮ, ಮೊಬೈಲ್, ಆನ್ ಲೈನ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ಆಧುನಿಕ ತಂತ್ರಜ್ಞಾನದಿಂದಾಗಿ ಸೈಬರ್ ಕ್ರೈಮ್, ವಂಚನೆ ಪ್ರಕರಣಗಳು ಇತ್ತೀಚೆಗೆ ತೀರಾ ಹೆಚ್ಚಾಗಿದೆ. ಸರ್ಕಾರ ಸಾರ್ವಜನಿಕರು ಮೋಸ ಹೋಗುವುದನ್ನು ತಪ್ಪಿಸಲು ಹೊಸ ಹೊಸ ತಂತ್ರಗಳನ್ನು ಹೆಣದಂತೆ ವಂಚಕರು ಅದಕ್ಕೆ ಪ್ರತಿತಂತ್ರ ಹಾಗೂ ಸುಲಭವಾಗಿ ಜನರನ್ನು ಹಳ್ಳಕ್ಕೆ ತಳ್ಳಲು ಸ್ಕೀಮ್ ಹಾಕುತ್ತಾನೇ ಇರುತ್ತಾರೆ. ಸ್ಕ್ಯಾಮರ್ ಗಳು ಹೆಚ್ಚಾಗಿ ಜನರನ್ನು ವಂಚಿಸುವ ವಂಚನೆಗಳು ಹಾಗೂ ಅದಕ್ಕೆ ಅವರು ಅನುಸರಿಸುವ ದಾರಿಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.
ಇದನ್ನು ಅರಿತು ಮೋಸಗಾರರ ಜಾಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸಿ. ನಿಮ್ಮ ಅಮೂಲ್ಯ ಜೀವ, ದುಡಿದ ಹಣ, ಚಿನ್ನಾಭರಣಗಳು ದುಷ್ಟರ ಪಾಲಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ಈ ಮಾಹಿತಿಯನ್ನು ನಿಮಗೆ ನೀಡಲಾಗಿದೆ. ಸಾಮಾನ್ಯವಾಗಿ ವಂಚಕರು ಎಲ್ಲಾ ವಯಸ್ಸಿನ ಜನರನ್ನು ತಮ್ಮ ಬಲೆಗೆ ಬೀಳಿಸುತ್ತಾರೆ. ಆದರೆ ಹೆಚ್ಚಾಗಿ ಮಧ್ಯವಯಸ್ಕ ಮತ್ತು ವಯಸ್ಸಾದ ದುರ್ಬಲರಾದ ವ್ಯಕ್ತಿಗಳನ್ನೇ ಹೆಚ್ಚಾಗಿ ಟಾರ್ಗೇಟ್ ಮಾಡುತ್ತಾರೆ.
ಸ್ಕ್ಯಾಮರ್‌ಗಳು ಬಳಸುವ 10 ಸಾಮಾನ್ಯ ತಂತ್ರಗಳು ಮತ್ತು ಆ ಕುರಿತ ವಾಸ್ತವಾಂಶವೇನು ಎಂಬುದನ್ನು ತಿಳಿಯೋಣ :
1. ಟ್ರಾಯ್ (Telecom Regulatory Authority – TRAI) ಅಧಿಕಾರಿ ಹೆಸರಲ್ಲಿ ವಂಚನೆ : ನಿಮ್ಮ ಮೊಬೈಲ್ ಸಂಖ್ಯೆಯು ಕಾನೂನುಬಾಹಿರ ಚಟುವಟಿಕೆಗಳಿಗೆ ಲಿಂಕ್ ಆಗಿದೆ ಎಂದು ಹೇಳುವ ಮೂಲಕ ವಂಚಕರು ಟ್ರಾಯ್ ನಿಂದ ಬಂದವರು ಎಂದು ಹೇಳಿಕೊಳ್ಳುತ್ತಾರೆ ಮತ್ತು ಸೇವೆಗಳನ್ನು ಅಮಾನತುಗೊಳಿಸಲಾಗುತ್ತದೆ ಎಂದು ಹೇಳುತ್ತಾರೆ.
– ವಾಸ್ತವ: ಟ್ರಾಯ್ ನಿಮ್ಮ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸುವುದಿಲ್ಲ; ಆ ಕಾರ್ಯವನ್ನು ಅಸಲಿಗೆ ಟೆಲಿಕಾಂ ಕಂಪನಿಗಳು ಮಾಡುತ್ತವೆ.
2. ಕಸ್ಟಮ್ಸ್‌ನಲ್ಲಿ ಪಾರ್ಸೆಲ್ ಸಿಕ್ಕಿ ಹಾಕಿಕೊಂಡಿದೆ : ನಿಮಗೊಂದು ಪಾರ್ಸೆಲ್ ಬಂದಿದೆ. ಅದನ್ನು ಕಸ್ಟಮ್ಸ್ ನವರು ತಡೆಹಿಡಿದ್ದಾರೆ. ಹೀಗಾಗಿ ಅದಕ್ಕೆ ಇಂತಿಷ್ಟು ಹಣ ಕಟ್ಟಿ ಎಂದು ಕರೆ ಮಾಡಿ ಒತ್ತಾಯಿಸುತ್ತಾರೆ.
– ಅದಕ್ಕೆ ನೀವೇನು ಮಾಡಬೇಕು?: ಕೂಡಲೇ ನಿಮ್ಮ ಟೆಲಿಫೋನ್ /ಮೊಬೈಲ್ ಸಂಪರ್ಕ ಕರೆ ಕಡಿತಗೊಳಿಸಿ ಮತ್ತು ಈ ಸಂಖ್ಯೆಯ ಬಗ್ಗೆ ಸಂಬಂಧಿಸಿದವರಿಗೆ ದೂರು ನೀಡಿ.
3. ಡಿಜಿಟಲ್ ಬಂಧನ (Digital Arrest) : ನಕಲಿ ಪೊಲೀಸ್ ಅಧಿಕಾರಿಗಳು ಡಿಜಿಟಲ್ ಬಂಧನ (“ಡಿಜಿಟಲ್ ಅರೆಸ್ಟ್” ರೀತಿಯ ಮೋಸ ಮಾಡುವ ವಂಚಕರು ವಿಡಿಯೋ ಕರೆಗಳ ಮೂಲಕ ತಾವು ಕಾನೂನು ಜಾರಿ ಮಾಡುವಂತೆ ನಟಿಸುವುದು, ಹಣವನ್ನು ಸುಲಿಗೆ ಮಾಡಲು ನಕಲಿ ಬಂಧನಗಳಿಗೆ ಬೆದರಿಕೆ ಹಾಕುವುದನ್ನು ಒಳಗೊಂಡಿರುತ್ತದೆ.) ಅಥವಾ ಆನ್‌ಲೈನ್ ವಿಚಾರಣೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ.
– ವಾಸ್ತವ ಏನು?: ಪೊಲೀಸರು ಡಿಜಿಟಲ್ ಬಂಧನಗಳನ್ನು ಅಥವಾ ಆನ್‌ಲೈನ್ ವಿಚಾರಣೆಗಳನ್ನು ನಡೆಸುವುದಿಲ್ಲ.
4. ನಿಮ್ಮ ಕುಟುಂಬದ ಸದಸ್ಯರನ್ನು ಬಂಧಿಸಲಾಗಿದೆ: ನಿಮ್ಮ ಸಂಬಂಧಿಕರನ್ನು ಬಂಧಿಸಲಾಗುವುದು ಎಂದು ವಂಚಕರು ಹೇಳಿಕೊಳ್ಳುತ್ತಾರೆ ಮತ್ತು ಬಂಧಿಸಬಾರದೆಂದರೆ ಹಣ ಪಾವತಿ ಮಾಡುವಂತೆ ಒತ್ತಾಯಿಸುತ್ತಾರೆ.
– ಅದಕ್ಕೆ ನೀವೇನು ಮಾಡಬೇಕು?: ನೀವು ಈ ವಿಚಾರದಲ್ಲಿ ಮುಂದುವರೆಯುವ ಮುನ್ನ ಮೊದಲು ಕುಟುಂಬ ಸದಸ್ಯರೊಂದಿಗೆ ಈ ಬಗ್ಗೆ ಪರಿಶೀಲಿಸಿಕೊಳ್ಳಿ. ಆಗ ಸತ್ಯವೇನು ಎಂದು ತಿಳಿಯುತ್ತದೆ..
5. ತ್ವರಿತ ಟ್ರೇಡಿಂಗ್ ಮೂಲಕ ತ್ವರಿತವಾಗಿ ಶ್ರೀಮಂತರಾಗಿರಿ : ಇದು ಮತ್ತೊಂದು ರೀತಿಯ ಸ್ಕ್ಯಾಮ್. ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟಾಕ್ ಹೂಡಿಕೆಗಳ ಮೇಲೆ ಅತಿ ಹೆಚ್ಚಿನ ಆದಾಯವನ್ನು ಕಡಿಮೆ ಅವಧಿಯಲ್ಲಿ ಬರುತ್ತದೆ ಎಂದು ಭರವಸೆ ನೀಡುವ ಸಾಕಷ್ಟು ಜಾಹೀರಾತುಗಳ ಬಗ್ಗೆ ಎಚ್ಚರಿಕೆ ವಹಿಸಿ.
– ವಾಸ್ತವ ಏನು? : ಹೆಚ್ಚಿನ ಹಾಗೂ ತ್ವರಿತ ಆದಾಯದ ಯೋಜನೆಗಳು ಸಂಭವನೀಯ ವಂಚೆಯಾಗಬಹುದು. ಅಧಿಕೃತ ದಾಖಲೆ, ಮಾಹಿತಿಗಳನ್ನು ತಿಳಿದುಕೊಂಡು ಕಾನೂನು ಬೆಂಬಲಿತ ಮಾರ್ಗಗಳಲ್ಲಿ ಯೋಚಿಸಿ ಹೂಡಿಕೆ ಮಾಡಬಹುದು.
6. ದೊಡ್ಡ ರೀತಿಯ ಪ್ರತಿಫಲಗಳನ್ನು ಪಡೆಯಲು ಸುಲಭ ಕಾರ್ಯಗಳು : ಸರಳ ಕಾರ್ಯಗಳಿಗಾಗಿ ಸ್ಕ್ಯಾಮರ್‌ಗಳು ಮೊದಲು ನಿಮಗೆ ಹೆಚ್ಚಿನ ಮೊತ್ತವನ್ನು ನೀಡುವುದಾಗಿ ಪೋಸ್ ಕೊಡುತ್ತಾರೆ, ನಂತರ ಇಂತಿಷ್ಟು ಹಣ ಹೂಡಿಕೆ ಮಾಡುವಂತೆ ಕೇಳುತ್ತಾರೆ.
– ವಾಸ್ತವ ಏನು? : ಸುಲಭ ಹಣದ ಯೋಜನೆಗಳು ಹಗರಣಗಳಾಗಿವೆ ಈ ಬಗ್ಗೆ ಎಚ್ಚರಿಕೆ ಅಗತ್ಯ.
7. ನಿಮ್ಮ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ನೀಡಲಾಗಿದೆ: ಬ್ಯಾಂಕ್ ಅಧಿಕಾರಿಗಳೆಂದು ನಂಬಿಸುವ ನಕಲಿ ಅಧಿಕಾರಿಗಳು ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ನೀಡಲಾಗಿದೆ ಎಂದು ಸುಳ್ಳು ಹೇಳುತ್ತಾರೆ. .
– ಅದಕ್ಕೆ ನೀವೇನು ಮಾಡಬೇಕು?: ನಿಮ್ಮ ಖಾತೆಯಿರುವ ಬ್ಯಾಂಕ್‌ನೊಂದಿಗೆ ಈ ಬಗ್ಗೆ ಪರಿಶೀಲಿಸಿ.
8. ತಪ್ಪಾದ ಹಣ ವರ್ಗಾವಣೆ: ಸ್ಕ್ಯಾಮರ್‌ಗಳು ತಪ್ಪಾಗಿ ನಿಮ್ಮ ಬ್ಯಾಂಕಿಗೆ ಹಣ ಪಾವತಿಯಾಗಿದೆ ಎಂದು ಕ್ಲೈಮ್ ಮಾಡುತ್ತಾರೆ ಮತ್ತು ಆ ಹಣವನ್ನು ಮರುಪಾವತಿಯನ್ನು ಕೇಳುತ್ತಾರೆ. ಆಗ ನೀವು ಹಣ ಮರು ಪಾವತಿಸಲು ಹೋಗಬೇಡಿ.
– ಅದಕ್ಕೆ ನೀವೇನು ಮಾಡಬೇಕು?: ನಿಮ್ಮ ಬ್ಯಾಂಕ್‌ನೊಂದಿಗೆ ಆ ವಹಿವಾಟುಗಳ ಬಗ್ಗೆ ಪರಿಶೀಲಿಸಿ.
9. ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ- KYC) ಅವಧಿ ಮೀರಿದೆ : ಸ್ಕ್ಯಾಮರ್‌ಗಳು ನಿಮ್ಮ ಮೊಬೈಲ್ ಫೋನ್ ಅಥವಾ ಇಮೇಲ್ ಗಳಲ್ಲಿ ಲಿಂಕ್‌ಗಳ ಮೂಲಕ ಕೆವೈಸಿ ನವೀಕರಣಗಳನ್ನು ಕೇಳುತ್ತಾರೆ. ಆಗ ಆ ಲಿಂಕ್ ಒತ್ತಿ ಅದಕ್ಕೆ ಕೆವೈಸಿ ಅಪಡೇಟ್ ಮಾಡಲು ಹೋಗದಿರಿ.
– ವಾಸ್ತವ ಏನು? : ಬ್ಯಾಂಕ್‌ಗಳಿಗೆ ವೈಯಕ್ತಿಕವಾಗಿ ಕೆವೈಸಿ ಅಪ್‌ಡೇಟ್‌ಗಳ ಅಗತ್ಯವಿದೆ.
10. ತೆರಿಗೆ ಮರುಪಾವತಿ: ವಂಚಕರು ಬ್ಯಾಂಕ್ ವಿವರಗಳನ್ನು ಕೇಳುವ ತೆರಿಗೆ ಅಧಿಕಾರಿಗಳಂತೆ ಪೋಸ್ ಕೊಡುತ್ತಾರೆ. ಈ ಬಗ್ಗೆ ಜಾಗರೂಕರಾಗಿರಿ.
– ವಾಸ್ತವ ಏನು? : ತೆರಿಗೆ ಇಲಾಖೆಯು ಈಗಾಗಲೇ ನಿಮ್ಮ ಬ್ಯಾಂಕ್ ವಿವರಗಳನ್ನು ಹೊಂದಿರುತ್ತವೆ ಮತ್ತು ತೆರಿಗೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿ, ವಿವರಗಳ ಅಗತ್ಯವಿದ್ದರೆ ನೇರವಾಗಿ ಸಂವಹನ ನಡೆಸುತ್ತಾರೆ.
ಇವುಗಳ ಬಗ್ಗೆ ತಿಳುವಳಿಕೆ ಇರಲಿ :
1. ಕಾರ್ಯೋನ್ಮುಖವಾಗುವ ಮೊದಲು ಮಾಹಿತಿಯನ್ನು ಪರಿಶೀಲಿಸಿ.
2. ಅನುಮಾನಾಸ್ಪದ ಲಿಂಕ್‌ಗಳನ್ನು ಅನಗತ್ಯವಾಗಿ ಕ್ಲಿಕ್ ಮಾಡಬೇಡಿ.
3. ಬ್ಯಾಂಕ್‌ಗಳೊಂದಿಗೆ ನಡೆಸುವ ವಹಿವಾಟುಗಳನ್ನು ದೃಢೀಕರಿಸಿ.
4. ಅನುಮಾನಾಸ್ಪದ ಕರೆಗಳು/ಸಂಖ್ಯೆಗಳನ್ನು ವರದಿ ಮಾಡಿ.
5. ಹೆಚ್ಚಿನ ಆದಾಯದ ಯೋಜನೆಗಳ ಬಗ್ಗೆ ಜಾಗರೂಕರಾಗಿರಿ.
6. ಕೆವೈಸಿಯನ್ನು ವೈಯಕ್ತಿಕವಾಗಿ ನವೀಕರಿಸಿ.
7. ವೈಯಕ್ತಿಕ/ಬ್ಯಾಂಕ್ ವಿವರಗಳನ್ನು ಯಾರೊಂದಿಗೋ ಹಂಚಿಕೊಳ್ಳಬೇಡಿ.
ವಂಚನೆ ಅಥವಾ ಹಗರಣಗಳನ್ನು ವರದಿ ಮಾಡಿ :
1. ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (1800-11-4000)
2. ಸೈಬರ್ ಅಪರಾಧ ವರದಿ ಪೋರ್ಟಲ್ ( https://cybercrime.gov.in/ )
3. ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ : 1930
3. ಸ್ಥಳೀಯ ಪೊಲೀಸ್ ಠಾಣೆ
4. ನಾಗರೀಕರ ತುರ್ತು ಸಂದರ್ಭದ ಸಹಾಯವಾಣಿ : 112
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.