ದಿನೇ ದಿನೇ ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಹೀಗಾಗಿ ಕುಡಿಯುವ ನೀರಿಗೆ ಬೇಡಿಕೆ, ಒಳಚರಂಡಿಯಲ್ಲಿ ತ್ಯಾಜ್ಯ ನೀರು ಬಿಡುಗಡೆಯೂ ಹೆಚ್ಚಾಗುತ್ತಿದೆ. ಬೆಂಗಳೂರು ಜಲಮಂಡಳಿಯು (BWSSB) ತ್ಯಾಜ್ಯ ನೀರನ್ನು ಪರಿಸರ ಸ್ನೇಹಿ ರೀತಿಯಲ್ಲಿ ಸಂಸ್ಕರಿಸಿ ಮರುಬಳಕೆ ಮಾಡಲು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದೆ. ಜಲ ಸ್ನೇಹಿ ಆಪ್ ಪ್ರಾರಂಭಿಸಿದ ಮೇಲೆ ಸಂಸ್ಕರಿತ ನೀರಿನ ಪೂರೈಕೆ ಪ್ರಮಾಣವೂ ಹೆಚ್ಚಾಗಿದೆ.
ಜನವರಿಯಿಂದ ಏಪ್ರಿಲ್ ತನಕದ ನಾಲ್ಕು ತಿಂಗಳಲ್ಲಿ ಬಿಡಬ್ಲ್ಯುಎಸ್ ಎಸ್ ಬಿಯು ಒಟ್ಟಾರೆ 7,64,17,000 ಲೀ. ಸಂಸ್ಕರಿಸಿದ ನೀರನ್ನು ವಿವಿಧ ರೀತಿಯ ಗ್ರಾಹಕರಿಗೆ ಪೂರೈಕೆ ಮಾಡಿದೆ.
ಜಲ ಸ್ನೇಹಿ ಆಪ್ ಅನ್ನು ಮಾ.14ರಿಂದ ಪ್ರಾರಂಭಿಸಲಾಗಿದ್ದು, ಜಲ ಸ್ನೇಹಿ ಆಪ್‌ನಲ್ಲಿ ಸಾರ್ವಜನಿಕರು ಕೆಲವು ಡೇಟಾವನ್ನು ಭರ್ತಿ ಮಾಡುವ ಮೂಲಕ ಸಂಸ್ಕರಿಸಿದ ನೀರನ್ನು ಬುಕ್ ಮಾಡಬಹುದು. ನಂತರ ಜಲಮಂಡಳಿಯ ಅಧಿಕಾರಿಗಳು ಸಂಸ್ಕರಿಸಿದ ನೀರನ್ನು ಪೂರೈಸುತ್ತಾರೆ. ಜಲಸ್ನೇಹಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ ನಂತರ ಸಂಸ್ಕರಿಸಿದ ನೀರಿನ ಪೂರೈಕೆಯ ಹೆಚ್ಚಳವಾಗಿದೆ. ಕೆಳಗಿನ ಕೋಷ್ಟಕವು ಇದನ್ನು ಪುಷ್ಠೀಕರಿಸುತ್ತದೆ.
ಪ್ರಸ್ತುತ ಒಟ್ಟು 1348.5 ದಶಲಕ್ಷ ಲೀಟರ್ ಸಾಮರ್ಥ್ಯದ 34 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಹಾಗೂ ಹಸಿರು ನ್ಯಾಯಾಧೀಕರಣದ ಮಾನದಂಡಗಳ ಪ್ರಕಾರ ತ್ಯಾಜ್ಯ ನೀರನ್ನು ಸಂಸ್ಕರಿಸುತ್ತಿದೆ. ಬೆಂಗಳೂರು ಜಲಮಂಡಳಿಯು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು ಪ್ರಸ್ತುತ ರೈಲ್ವೇ ವೀಲ್ ಫ್ಯಾಕ್ಟರಿ, ರಾಜಭವನ, ವಿಧಾನ ಸೌಧ, ಹೈಕೋರ್ಟ್, ಗಾಲ್ಫ್ ಕೋರ್ಸ್, ಕಬ್ಬನ್ ಪಾರ್ಕ್, ನೆಹರು ಪ್ಲಾನಿಟೋರಿಯಂ, ಇಂದಿರಾಗಾಂಧಿ ಕಾರಂಜಿ ಪಾರ್ಕ್, ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್, ಯಲಹಂಕದ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕ ಮತ್ತಿತರ ದೊಡ್ಡ ದೊಡ್ಡ ಸಂಸ್ಥೆ, ಕಟ್ಟಡಗಳಿಗೆ ಸರಬರಾಜು ಮಾಡುತ್ತಿದೆ. ಅಲ್ಲದೆ ನಿರ್ಮಾಣದ ಕಾಮಗಾರಿಗಳಿಗೂ ಸಂಸ್ಕರಿತ ನೀರನ್ನು ಸರಬರಾಜು ಮಾಡುತ್ತಿದೆ.
ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಗಳಿಗೆ ಒಟ್ಟಾರೆ 350 ದ.ಲ.ಲೀ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕೆಸಿ ವ್ಯಾಲಿಯಲ್ಲಿ 308 ದ.ಲ.ಲೀ ತ್ಯಾಜ್ಯ ನೀರು ಶುದ್ದೀಕರಣ ಘಟಕದಿಂದ ಮತ್ತು ಬೆಳ್ಳಂದೂರಿನಲ್ಲಿ 90 ದ.ಲ.ಲೀ ತ್ಯಾಜ್ಯ ನೀರು ಶುದ್ದೀಕರಣ ಘಟಕದಿಂದ ಕೋಲಾರ ಜಿಲ್ಲೆಯ ಹಲವು ಕೆರೆಗಳಿಗೆ ಹರಿಸಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನಗರದ ಸಂಸ್ಕರಿತ ನೀರು ಪೂರೈಕೆ :
ರಾಜಕಾಲುವೆಯಿಂದ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ 80 ದ.ಲ.ಲೀ ತ್ಯಾಜ್ಯ ನೀರು ಶುದ್ದೀಕರಣ, ಹೊರಮಾವಿನಲ್ಲಿ 20 ದ.ಲ.ಲೀ ಶುದ್ಧೀಕರಿಸಿದ ಸಂಸ್ಕರಿತ ನೀರನ್ನು ಮತ್ತು ಹೆಬ್ಬಾಳದಲ್ಲಿ 100 ದ.ಲ.ಲೀ ತ್ಯಾಜ್ಯ ಸಂಸ್ಕರಿತ ನೀರನ್ನು ಶುದ್ದೀಕರಣ ಮಾಡಲಾಗುತ್ತಿದೆ. ಸುಮಾರು 150 ದ.ಲ.ಲೀ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಸಣ್ಣ ನೀರಾವರಿಗೆ ಸರಬರಾಜು ಮಾಡಲಾಗುತ್ತಿದೆ.
ನಗರದ 15 ಕೆರೆಗಳಿಗೆ ಸಂಸ್ಕರಿತ ನೀರು ಹರಿಸುವ ಕಾರ್ಯಕ್ಕೆ ಚಾಲನೆ :
ಕಳೆದ ವರ್ಷ ಮುಂಗಾರು ತಿಂಗಳಿನಲ್ಲಿ ಮಳೆಯ ಕೊರತೆಯಿಂದಾಗಿ, ಬೆಂಗಳೂರಿನಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿತ್ತು. ಈ ಬರದ ಪರಿಸ್ಥಿತಿಯಲ್ಲಿ ಬೆಂಗಳೂರು ಜಲಮಂಡಳಿಯು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರಿನ ಮರುಬಳಕೆಯನ್ನು ಹೆಚ್ಚಿಸಲು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಶುದ್ದೀಕರಿಸಿದ ನೀರನ್ನು ತೋಟಗಾರಿಕೆ, ರಸ್ತೆ ನಿರ್ಮಲೀಕರಣ, ಶೌಚಾಲಯಗಳಲ್ಲಿ ಫ್ಲಷಿಂಗ್ ಹಾಗೂ ಮೊದಲ ಹಂತದಲ್ಲಿ ನಗರದ 15 ಕೆರೆಗಳಿಗೆ ಸಂಸ್ಕರಿತ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರು ಜಲಮಂಡಳಿಯು ಈ ಕೆಳಕಂಡ ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸಲಾಗುತ್ತಿದ್ದು ಇದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದಾಗಿರುತ್ತದೆ. ಪ್ರಾಣಿ, ಪಕ್ಷಿಗಳಿಗೆ ತುಂಬಾ ಅನುಕೂಲವಾಗಿರುತ್ತದೆ ಹಾಗೂ ಪರಿಸರಕ್ಕೆ ಪೂರಕವಾಗಿರುತ್ತದೆ. ನಗರದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿತ ನೀರಿನ ಬಳಕೆಯನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು ಬಳಸಿಕೊಳ್ಳಬೇಕಿದೆ. ಆಗ ಕುಡಿಯುವ ನೀರಿನ ಬಳಕೆ ಅನ್ಯ ಚಟುವಟಿಕೆಗಳಿಗೆ ಬಳಕೆಯಾಗುವುದು ತಪ್ಪುತ್ತದೆ.
ಜಲಮಂಡಳಿಯ ವತಿಯಿಂದ ನಗರದಲ್ಲಿ 34 ಕ್ಕೂ ಹೆಚ್ಚು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ. ಇವುಗಳ ಮೂಲಕ ಪ್ರತಿ ದಿನ 1200 ಎಂ.ಎಲ್.ಡಿ ಯಷ್ಟು ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರು ಲಭ್ಯವಾಗುತ್ತಿದೆ. ಇದರ ಬಳಕೆಯನ್ನು ಹೆಚ್ಚಿಸುವ ಮೂಲಕ ಕಾವೇರಿ ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ.
ಸಂಸ್ಕರಿಸಿದ ನೀರಿಗೆ ಐ.ಟಿ ಕಂಪನಿಗಳಿಂದ ಹೆಚ್ಚಿನ ಬೇಡಿಕೆ :
ಭಾರತದ ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಯಾಗಿರುವಂತಹ ಐಐಎಸ್‌ಸಿ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಬೆಂಗಳೂರು ಜಲಮಂಡಳಿಯ ಇಂಜಿನಿಯರ್‌ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ “ಝೀರೋ ಬ್ಯಾಕ್ಟೀರಿಯಲ್” ಎಂಬ ದೇಶೀಯ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಇತ್ತೀಚೆಗೆ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ ಪ್ರತಿ ದಿನ ಸುಮಾರು 1 ಕೋಟಿ ಲೀಟರ್ ನಷ್ಟು ಝೀರೋ ಬ್ಯಾಕ್ಟೀರಿಯಲ್ ಸಂಸ್ಕರಿಸಿದ ನೀರು ಉತ್ಪಾದನೆಯ ಸಾಮರ್ಥ್ಯವನ್ನು ಜಲಮಂಡಳಿ ಅಳವಡಿಸಿಕೊಂಡಿದೆ.
ಇದೀಗ ನಗರದ ಅಗರ, ಕೆ.ಸಿ ವ್ಯಾಲಿ ಮತ್ತು ಬೆಳ್ಳಂದೂರು ಎಸ್.ಟಿ.ಪಿ ಗಳಲ್ಲಿ ಈ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು ಈ ನೀರಿಗೆ ಐಟಿ ಕಂಪನಿಗಳಿಂದ ಬೇಡಿಕೆ ಬಂದಿದೆ ಎಂದು ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ವಿಪ್ರೋಗೆ ಟ್ಯಾಂಕರ್ ಗಳ ಮೂಲಕ ಪ್ರತಿ ದಿನ 3 ಲಕ್ಷ ಲೀ. ಸಂಸ್ಕರಿಸಿದ ನೀರು :
ವಿಪ್ರೋ ಕಂಪನಿ ಕೆಲವು ದಿನಗಳ ಹಿಂದೆ ಸಂಸ್ಕರಿಸಿದ ನೀರು ಸರಬರಾಜು ಮಾಡುವಂತೆ ಜಲಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಐಐಎಸ್‌ಸಿ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಅಳವಡಿಸಿಕೊಳ್ಳಲಾಗಿರುವ ನೂತನ ತಂತ್ರಜ್ಞಾನದ ಮೂಲಕ ಶುದ್ದೀಕರಿಸಲಾಗುತ್ತಿರುವ “ಝೀರೋ ಬ್ಯಾಕ್ಟೀರಿಯಲ್” ಉತ್ತಮ ಗುಣಮಟ್ಟದ ಸಂಸ್ಕರಿಸಿ ಪ್ರತಿದಿನ 3 ಲಕ್ಷ ಲೀ. ಸಂಸ್ಕರಿಸಿ ನೀರಿನ ಸರಬರಾಜು ಆರಂಭಿಸಲಾಗಿದೆ. ಈಗಾಗಲೇ ಇನ್ನಿತರ ಕಂಪನಿಗಳಾದ ಹೆಚ್.ಎ.ಎಲ್, ಬ್ರೂಕ್‌ಫಿಲ್ಡ್ ಮತ್ತು ಅಡೋಬ್ ಸಿಸ್ಟಮ್ಸ್ ಕಂಪನಿಗಳ ಜೊತೆಗೆ 40 ಐಟಿ ಪಾರ್ಕ್ ಗಳು ಬೇಡಿಕೆಯಿಟ್ಟಿದ್ದು ಜಲಮಂಡಳಿ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ವಿವರಿಸಿದ್ದಾರೆ.
ಪ್ರಮುಖ ಐ.ಟಿ ಕಂಪನಿಗಳು ಸ್ವಚ್ಚತೆ ಹಾಗೂ ಏರ್ ಕಂಡಿಷನಿಂಗ್ ಸೇರಿದಂತೆ ಹಲವಾರು ಕಾರ್ಯಗಳಿಗೆ ಸಂಸ್ಕರಿಸಿದ ನೀರು ಬಳಕೆಗೆ ಮುಂದಾಗಿರುವುದು ಬಹಳ ಸಂತಸದ ವಿಷಯ. ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚು ಮಾಡುವುದರಿಂದ ಅಗತ್ಯವಿರುವ ಕಡೆಗಳಲ್ಲಿ ಕಾವೇರಿ ನೀರಿನ ಸರಬರಾಜು ಮಾಡುವುದು ಸಾಧ್ಯವಾಗಲಿದೆ. ಅಲ್ಲದೇ, ಅಂತರ್ಜಲದ ಮೇಲಿನ ಒತ್ತಡವೂ ಕಡಿಮೆ ಆಗಲಿದೆ. ಬೆಂಗಳೂರು ಜಲಮಂಡಳಿ ಐ.ಟಿ ಕಂಪನಿಗಳ ಜೊತೆಗಿದ್ದು, ಅವಶ್ಯಕತೆ ಇರುವಷ್ಟು ನೀರನ್ನ ಸರಬರಾಜು ಮಾಡಲು ಬಿಡಬ್ಲ್ಯುಎಸ್ ಎಸ್ ಬಿ ಸಿದ್ದವಿದೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಕಳೆದ 2 ತಿಂಗಳಲ್ಲಿ ಕೈಗೊಂಡ ಕಾರ್ಯಗಳಿಗೆ ಐಟಿ ಕಂಪನಿಗಳು ಹಾಗೂ ಬಲ್ಕ್ ಯೂಸರ್ಸ್‌ಗಳು ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸ್ಕರಿಸಿದ ನೀರಿನ ಬೇಡಿಕೆ 60 ಸಾವಿರ ಲೀಟರ್‌ಗಳಿಂದ 6 ಎಂ.ಎಲ್.ಡಿ ಗೆ ತಲುಪಿದೆ. ಇದನ್ನು ಇನ್ನಷ್ಟು ಹೆಚ್ಚು ಮಾಡುವ ಗುರಿಯನ್ನು ಜಲಮಂಡಳಿ ಇಟ್ಟುಕೊಂಡಿದೆ. ಭವಿಷ್ಯದ ಬೆಂಗಳೂರಿಗಾಗಿ ನೀರಿನ ಮಿತವ್ಯಯ ಹಾಗೂ ಯೋಗ್ಯ ರೀತಿಯ ಬಳಕೆ ಅತ್ಯವಶ್ಯಕವಾಗಿದೆ. ಇದಕ್ಕಾಗಿ ಸಂಸ್ಕರಿತ ನೀರಿನ ಬಳಕೆ ಹೆಚ್ಚಾದರೆ, ಅನವಶ್ಯಕವಾಗಿ ಕಾವೇರಿ ನೀರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ.