ಬೆಂಗಳೂರು ನಗರದಲ್ಲಿ ಈ ಬಾರಿ ಬೇಸಿಗೆಯಲ್ಲಿ ನೀರಿನ ಸಂಕಷ್ಟ ಏನೆಂದು ನಗರದ ಜನತೆ ಅಕ್ಷರಶಃ ಎದುರಿಸಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಯು ಅಂತರ್ಜಲ (Underground Water) ವೃದ್ಧಿಸಲು 2400 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಸ್ಥಳವನ್ನು ಹೊಂದಿರುವ ಕಟ್ಟಡದ ಪ್ರತಿಯೊಬ್ಬ ಮಾಲೀಕರು ಮಳೆನೀರು ಕೊಯ್ಲು ಪದ್ಧತಿ (Rain Water Harvesting System) ಅಳವಡಿಸಿಕೊಳ್ಳಲು ಕಡ್ಡಾಯ ಮಾಡಿದ್ದರೂ, ಜನರು ಈ ಬಗ್ಗೆ ಹೆಚ್ಚಿನ ಗಮನ ಕೊಟ್ಟಿಲ್ಲ.
ಸರ್ಕಾರದ ಆದೇಶದನ್ವಯ ಎಪ್ರಿಲ್-2024ರ ಅಂತ್ಯಕ್ಕೆ ನಗರದಲ್ಲಿ ಕೇವಲ 1,98,323 ಮನೆ ಮಾಲೀಕರು ಮಳೆ ನೀರು ಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಈ ಪದ್ಧತಿಯನ್ನು ಅಳವಡಿಸದೇ ಇರುವ 39,414 ಸಂಪರ್ಕಗಳ ಕಟ್ಟಡಗಳಿಗೆ ಜಲಮಂಡಳಿ 2.17 ಕೋಟಿ ರೂ. ದಂಡವನ್ನು ವಿಧಿಸಿದೆ.
ಬೆಂಗಳೂರು ನಗರದಲ್ಲಿರುವ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರವು 2009ರ ಆಗಸ್ಟ್ 27ರಂದೇ ಅಧಿಸೂಚನೆ ಹೊರಡಿಸಿ ಆದೇಶಿಸಿತ್ತು. ಅದರ ಪ್ರಕಾರ “ಸೆಕ್ಷನ್ 72A ರಂತೆ, ಮಳೆನೀರು ಕೊಯ್ಲು ರಚನೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ (ತಿದ್ದುಪಡಿ) ಕಾಯಿದೆ, 2009 ರ ಪ್ರಾರಂಭದ ದಿನಾಂಕದಿಂದ ಒಂಬತ್ತು ತಿಂಗಳೊಳಗೆ, 2400 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಸ್ಥಳವನ್ನು ಹೊಂದಿರುವ ಕಟ್ಟಡದ ಪ್ರತಿಯೊಬ್ಬ ಮಾಲೀಕರು ಅಥವಾ 1200 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಕಟ್ಟಡವನ್ನು ನಿರ್ಮಿಸಲು ಪ್ರಸ್ತಾಪಿಸುವ ಪ್ರತಿಯೊಬ್ಬ ಮಾಲೀಕರು ಈ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ತಿಳಿಸುತ್ತದೆ.
“ಇದಕ್ಕೆ ತಪ್ಪಿದಲ್ಲಿ ಮಂಡಳಿಯು ಅಂತಹ ಮಳೆನೀರು ಕೊಯ್ಲು ರಚನೆಯನ್ನು ಅಲ್ಲಿ ಅಳವಡಿಸಿ ಮಾಲೀಕರಿಂದ ಅಥವಾ ಅಲ್ಲಿರುವ ಸ್ವತ್ತಿನ ಸ್ವಾಧೀನದಾರರಿಂದ ವೆಚ್ಚವನ್ನು ಮರುಪಡೆಯುವುದು. ಉದಾಹರಣೆಗೆ ಭೂ ಕಂದಾಯ ಆದಾಯದ ಬಾಕಿ ಪಡೆಯುವಂತೆ ” ಎಂದು ಹೇಳಿದೆ.
ಇದಲ್ಲದೆ ಅಧಿಸೂಚನೆಯಂತೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳದ ಕಟ್ಟಡಗಳಿಗೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ (ಮಳೆ ನೀರು ಕೊಯ್ಲು) (ತಿದ್ದುಪಡಿ) ನಿಯಮಾವಳಿಗಳು 2015 ಅನ್ನು 2016ರ ಫೆಬ್ರವರಿ 25ರಂದು ರಾಜ್ಯ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.
(1) ಆಕ್ಟ್‌ನ ಸೆಕ್ಷನ್ 72A ಅಡಿಯಲ್ಲಿ ಸೂಚಿಸಲಾದ ದಿನಾಂಕದೊಳಗೆ ಕಟ್ಟಡದಲ್ಲಿ ಮಳೆ ನೀರು ಕೊಯ್ಲು ರಚನೆಯನ್ನು ಅಳವಡಿಸಲು ವಸತಿ ಕಟ್ಟಡದ ಮಾಲೀಕರು ವಿಫಲವಾದರೆ, ಮೊದಲ ಮೂರು ತಿಂಗಳವರೆಗೆ ಒಟ್ಟು ನೀರು ಮತ್ತು ನೈರ್ಮಲ್ಯ ಶುಲ್ಕದ ಇಪ್ಪತ್ತೈದು ಪ್ರತಿಶತದಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ. ಇದಾದ ನಂತರ ಒಟ್ಟು ನೀರಿನ ಐವತ್ತು ಪ್ರತಿಶತ ಹೆಚ್ಚುವರಿ ಶುಲ್ಕಗಳು ಮತ್ತು ಕಟ್ಟಡಕ್ಕೆ ಮಳೆ ನೀರು ಕೊಯ್ಲು ರಚನೆಯನ್ನು ಒದಗಿಸುವವರೆಗೆ ನೈರ್ಮಲ್ಯ ಶುಲ್ಕಗಳನ್ನು ವಿಧಿಸಬಹುದಾಗಿದೆ.
ಇನ್ನು ಅಧಿನಿಯಮದ ಸೆಕ್ಷನ್ 72A ಅಡಿಯಲ್ಲಿ ಸೂಚಿಸಲಾದ ದಿನಾಂಕದೊಳಗೆ ಕಟ್ಟಡದಲ್ಲಿ ಮಳೆ ನೀರು ಕೊಯ್ಲು ರಚನೆಯನ್ನು ಒದಗಿಸಲು ವಸತಿ ರಹಿತ ಕಟ್ಟಡದ ಮಾಲೀಕರು ವಿಫಲವಾದರೆ, ಒಟ್ಟು ನೀರಿನ ಐವತ್ತು ಪ್ರತಿಶತದಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ. ಮತ್ತು ಮೊದಲ ಮೂರು ತಿಂಗಳುಗಳ ನೈರ್ಮಲ್ಯ ಶುಲ್ಕಗಳು ಮತ್ತು ನಂತರ ಕಟ್ಟಡಕ್ಕೆ ಮಳೆ ನೀರು ಕೊಯ್ಲು ರಚನೆಯನ್ನು ಒದಗಿಸುವವರೆಗೆ ಒಟ್ಟು ನೀರಿನ ಮತ್ತು ನೈರ್ಮಲ್ಯ ಶುಲ್ಕಗಳ ನೂರು ಪ್ರತಿಶತ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲು ಜಲಮಂಡಳಿಗೆ ಅವಕಾಶವಿದೆ.
ಆದರೆ ಇಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳದ ವ್ಯಕ್ತಿಗಳಿಗೆ ಕೇಳುವ ಅವಕಾಶವನ್ನು ನೀಡದ ಹೊರತು ಮೇಲಿನಂತೆ ಯಾವುದೇ ಹೆಚ್ಚುವರಿ ನೀರು ಮತ್ತು ನೈರ್ಮಲ್ಯ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ” ಎಂದು ತಿಳಿಸಲಾಗಿದೆ.
ಮಳೆನೀರು ಕೊಯ್ದು ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಾರ್ವಜನಿಕರಿಗೆ ಎಲ್ಲಾ ಮಾಹಿತಿಯನ್ನು ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಬಿಡಬ್ಲ್ಯುಎಸ್ಎಸ್ ಬಿ 2011 ರಲ್ಲಿ ಜಯನಗರ 5 ನೇ ಬ್ಲಾಕ್‌ನಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರವನ್ನು ಹಾಗೂ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಹಾಗೂ ಈ ಕೇಂದ್ರದಲ್ಲಿ 26 ಬಗೆಯ ಮಳೆನೀರು ಕೊಯ್ದು ಪದ್ಧತಿಯ ಮಾದರಿಗಳನ್ನು ಅಳವಡಿಸಲಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ನಗರ ಪ್ರಶಸ್ತಿ ಪಡೆದುಕೊಂಡಿರುತ್ತದೆ. ಅಧಿಕಾರಿಗಳು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ನಿಯಮಿತವಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಅವರಿಗೆ ಮಳೆ ನೀರು ಕೊಯ್ಲು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳ ಅನುಕೂಲಗಳ ಕುರಿತು ಡೆಮೊಗಳನ್ನು ನೀಡಲಾಗುತ್ತಿದೆ.
ಯಾವ ಅಳತೆಯ ಕಟ್ಟಡ ನಿರ್ಮಾಣ ಅಥವಾ ಸ್ವತ್ತಿನ ಮಾಲೀಕರಿಗೆ ಈ ಪದ್ಧತಿ ಅನ್ವಯ? :
ಬೆಂಗಳೂರು ನಗರದಲ್ಲಿರುವ ಕಟ್ಟಡಗಳಿಗೆ ಮಳೆ ನೀರು ಕೊಯ್ದು ಪದ್ಧತಿ ಅಳವಡಿಸಿಕೊಳ್ಳಲು ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಬರುವ 216 ಚದರ ಮೀಟರ್ ಹಾಗೂ ಅದಕ್ಕಿಂತ ಮೇಲ್ಪಟ್ಟು ವಿಸ್ತೀರ್ಣವುಳ್ಳ ನಿವೇಶನದಲ್ಲಿ ಈಗಾಗಲೇ ಕಟ್ಟಡವನ್ನು ನಿರ್ಮಿಸಿದವರಿಗೆ ಮತ್ತು ಹೊಸದಾಗಿ ಕಟ್ಟಡವನ್ನು 108 ಚದರ ಮೀಟರ್ ಮತ್ತು ಹಾಗೂ ಅದಕ್ಕಿಂತ ಮೇಲ್ಪಟ್ಟು ವಿಸ್ತೀರ್ಣದಲ್ಲಿ ನಿರ್ಮಿಸಿದ್ದರೆ ಕಡ್ಡಾಯವಾಗಿ ಮಳೆ ನೀರು ಕೊಯ್ದು ಅಳವಡಿಸಬೇಕೆಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆ ಸೆಕ್ಷನ್ 72(ಎ) ಗೆ 2009 ರಲ್ಲಿ ತಿದ್ದುಪಡಿ ತರಲಾಗಿರುತ್ತದೆ. ಈ ಪದ್ಧತಿಯನ್ನು ಅಳವಡಿಸಿಕೊಳ್ಳದೆ ಇರುವ ಕಟ್ಟಡಗಳಿಗೆ ಪ್ರತಿ ತಿಂಗಳಿನ ಬಿಲ್ಲಿನಲ್ಲಿ ಹೆಚ್ಚುವರಿಯಾಗಿ ದಂಡವನ್ನು ವಿಧಿಸಲಾಗುತ್ತಿರುತ್ತದೆ.
ಮುಂದುವರೆದಂತೆ, ಮಳೆ ನೀರಿನ ಸಂಗ್ರಹಣೆ ಹಾಗೂ ಮರುಬಳಕೆಗಾಗಿ ಮತ್ತು ಅಂತರ್ಜಲ ವೃದ್ಧಿಸಲು ಬೆಂಗಳೂರು ಜಲಮಂಡಳಿ ನಿಯಮ 72(ಎ) ಗೆ 2020ರ ಇಸವಿಯ ಮೇ.06 ರಂದು ಈ ಕೆಳಕಂಡಂತೆ ತಿದ್ದುಪಡಿಯನ್ನು ತರಲಾಗಿದೆ :
* ಕಟ್ಟಡದ ತಾರಸಿ / ಮೇಲ್ಛಾವಣಿಯ ಮೇಲೆ ಬೀಳುವ ಮಳೆ ನೀರು ಸಂಗ್ರಹಣೆಗಾಗಿ ಹಾಗೂ ಮರು ಬಳಕೆಗಾಗಿ ನೆಲದಡಿಯ ಸಂಪ್ ಟ್ಯಾಂಕ್ ಸಾಮರ್ಥ್ಯವನ್ನು ಪ್ರತಿ ಚದರ ಮೀಟರ್ ಗೆ 20 ಲೀಟರ್‌ನಿಂದ 60 ಲೀಟರ್ ಗೆ ಹೆಚ್ಚಿಸಲಾಗಿದೆ.
* ಇನ್ನು ಅಂತರ್ಜಲ ವೃದ್ಧಿಸಲು ನಡೆದಾಡುವ ಮತ್ತು ಬಯಲು ಪ್ರದೇಶದಲ್ಲಿ ಪ್ರತಿ ಚದರ ಮೀಟರ್ ಗೆ ಮಳೆ ನೀರು ಇಂಗು ಗುಂಡಿಗಳ ನಿರ್ಮಾಣ ಸಂಗ್ರಹ ಸಾಮರ್ಥ್ಯವನ್ನು 10 ಲೀಟರ್‌ನಿಂದ 30 ಲೀಟರ್ ಗೆ ಹೆಚ್ಚಿಸಲಾಗಿದೆ.
ಬೆಂಗಳೂರು ಜಲಮಂಡಳಿಗೆ ಒಳಪಡುವ ಎಲ್ಲಾ ನೆಲಮಟ್ಟದ ಜಲಗಾರ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ, ಕಛೇರಿ ಮತ್ತು ವಸತಿ ಗೃಹಗಳಲ್ಲಿ ಮಳೆ ನೀರು ಕೊಯ್ದು ಪದ್ಧತಿಯನ್ನು ಈಗಾಗಲೇ ಅಳವಡಿಸಿಕೊಳ್ಳಲಾಗಿರುತ್ತದೆ. ಒಟ್ಟಿನಲ್ಲಿ ಭವಿಷ್ಯದ ಬೆಂಗಳೂರಿನ ನೀರಿನ ಅವಶ್ಯಕತೆಗಳಿಗಾಗಿ ನೀರಿನ ಸಂರಕ್ಷಣೆ, ಮಿತ ಬಳಕೆ ಹಾಗೂ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಆವಶ್ಯಕವಾಗಿದೆ.