ಬೆಂಗಳೂರು, ಏ.25 www.bengaluruwire.com : ರಾಜ್ಯದಲ್ಲಿ ಪೂರ್ವ ಮುಂಗಾರಿನ ಮಳೆ ಇವತ್ತಾಗುತ್ತೆ, ನಾಳೆಯಾಗುತ್ತೆ ಅಂತ ರೈತರೂ ಸೇರಿದಂತೆ ನಾಡಿನ ಜನರು ಕಾಯುತ್ತಿದ್ದಾರೆ. ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಆಗೊಮ್ಮೆ, ಈಗೊಮ್ಮೆ ಮಳೆಯಾಗುತ್ತಿದೆ. ಈ ನಡುವೆ ಏಪ್ರಿಲ್ ತಿಂಗಳಲ್ಲಿ 25ನೇ ತಾರೀಖಿನಂದು ಕಳೆದ 6 ವರ್ಷಗಳಲ್ಲೇ ಅತಿಹೆಚ್ಚು ಅಂದರೆ 44 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ. ಈ ನಡುವೆ ಕಳೆದ ವರ್ಷವೂ ಮಳೆಯಾಗದ ಕಾರಣ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವೂ ಕಡಿಮೆಯಾಗಿದೆ.
ರಾಜ್ಯದಲ್ಲಿ 2017 ರಿಂದ 2024ರ ಇಸವಿಯ ಈ ಎಂಟು ವರ್ಷಗಳಲ್ಲಿ ಏ.24ರ ಬೆಳಗ್ಗೆ 8.30ರಿಂದ ಏ.25ರ ಬೆಳಗ್ಗೆ 8.30ರ ಸಂದರ್ಭದಲ್ಲಿ ಉಷ್ಣಾಂಶವನ್ನು ಹೋಲಿಕೆ ಮಾಡಿದೆ. ಆ ಪೈಕಿ 2019 ರಿಂದ 2024ರ ನಡುವಿನ 6 ವರ್ಷಗಳಲ್ಲಿ ಇಂದು ದಾಖಲಾದ 44 ಡಿಗ್ರಿ ಉಷ್ಣಾಂಶವು ಕಳೆದ 6 ವರ್ಷಗಳಲ್ಲೇ ಈ ಅವಧಿಯಲ್ಲಿ ಗರಿಷ್ಠ ತಾಪಮಾನವಾಗಿದೆ. ಹಾಗೂ 8 ವರ್ಷಗಳಲ್ಲಿ ಎರಡನೇ ಅತ್ಯಧಿಕ ತಾಪಮಾನ ಇದಾಗಿದೆ ಎಂದು ಕೆಎಸ್ ಎನ್ ಡಿಎಂಸಿ ವಿಜ್ಞಾನಿಗಳು ತಿಳಿಸಿದ್ದಾರೆ.
2017ನೇ ಇಸವಿಯಲ್ಲಿ ಇದೇ ಅವಧಿಯಲ್ಲಿ 42.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, 2018ರಲ್ಲಿ 44.7, 2019ರಲ್ಲಿ 43.2 ಡಿಗ್ರಿ, 2020ನೇ ಇಸವಿಯಲ್ಲಿ 43.3 ಡಿಗ್ರಿ ಉಷ್ಣಾಂಶ, 2021ನೇ ಇಸವಿಯಲ್ಲಿ 41.4, 2022ರಲ್ಲಿ 41.5, 2023ರಲ್ಲಿ 43.4 ಡಿಗ್ರಿಯಷ್ಟು ಪ್ರಖರವಾದಿ ಉಷ್ಣಾಂಶವಿದ್ದಿತ್ತು. ಆದರೆ 2024ರ ಇಸವಿಯ ಏಪ್ರಿಲ್ 25ರಂದು ಬರೋಬ್ಬರಿ 44 ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಿರುವುದು ಕಂಡು ಬಂದಿದೆ ಎಂದು ಹವಾಮಾನ ವರದಿಯಲ್ಲಿ ಹೇಳಿದೆ.
ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಬಳ್ಳಾರಿ ಮೊದಲಾದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 40 ರಿಂದ 44 ಡಿಗ್ರಿಯ ಆಸುಪಾಸಿನಲ್ಲಿದೆ. ಈ ಜಿಲ್ಲೆಗಳ ಕನಿಷ್ಠ ತಾಪಮಾನವು 24ರಿಂದ 26ರ ಮಧ್ಯದಲ್ಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38.1 ಹಾಗೂ ಕನಿಷ್ಠ 23 ಡಿಗ್ರಿಯಷ್ಟು ದಾಖಲಾಗಿದೆ.
ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸೆಖೆಯಿಂದ ಜನರು ತತ್ತರಿಸಿದ್ದು, ಬೇಸಿಗೆಯ ಬಿಸಿ ಬೇಗೆ ಹಾಗೂ ಸೂರ್ಯನ ಪ್ರಖರ ಶಾಖದಿಂದ ತಪ್ಪಿಸಿಕೊಳ್ಳಲು ಕೆಲವರು ಹೊರಗೆ ಹೋಗುವಾಗ ಕೊಡೆಯ ಮೊರೆ ಹೋದರೆ, ಇನ್ನು ಕೆಲವು ಬಿಸಿಲು ಹೆಚ್ಚು ಬೀಳುವ ಸಂದರ್ಭದಲ್ಲಿ ಹೊರಗೆ ಓಡಾಡುವುದನ್ನು ಆದಷ್ಟು ತಪ್ಪಿಸಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತೀವ್ರವಾಗಿದ್ದು, ದೂರದಿಂದ ಕೊಳವೆಬಾವಿಯಿಂದ ಮತ್ತಿತರ ಮೂಲಗಳಿಂದ ನೀರನ್ನು ತರುತ್ತಿರುವುದು ಸಾಮಾನ್ಯದಂತಾಗಿದೆ.
ರಾಜ್ಯದ ಪ್ರಮುಖ ಡ್ಯಾಂಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ :
ಇನ್ನು ಏ.25ರಂದು ಕೃಷ್ಣ ನದಿ ಜಲಾಯನ ಪ್ರದೇಶಲ್ಲಿನ 6 ಜಲಾಶಯಗಳಲ್ಲಿ 24.46 ಟಿಎಂಸಿಯಷ್ಟು ನೀರು ಒಳಹರಿವು ಇದ್ದರೆ, ನದಿಗೆ 10.709 ಟಿಎಂಸಿ ಹೊರಬಿಡಲಾಗುತ್ತಿದೆ. 33.14 ಟಿಎಂಸಿಯಷ್ಟು ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ. ಒಟ್ಟಾರೆ ಈ ಜಲಾಶಯಗಳಲ್ಲಿ ಶೇ. 22.65 ರಷ್ಟು ನೀರಿನ ಸಂಗ್ರಹವಿದೆ. ಕೃಷ್ಣ ನದಿ ಜಲಾಯನ ಪ್ರದೇಶದಲ್ಲಿ ಒಟ್ಟು 6 ಜಲಾಶಯಗಳು ಬರುತ್ತದೆ. ಆಲಮಟ್ಟಿ, ಭದ್ರಾ, ಹಿಡಕಲ್ ಡ್ಯಾಮ್, ಮಲಪ್ರಭಾ, ನಾರಾಯಣಪುರ ಹಾಗೂ ತುಂಗಭದ್ರಾ ಅಣೆಕಟ್ಟುಗಳು ಬರುತ್ತದೆ.
ಹಾಗೆಯೇ ಕಾವೇರಿ ನದಿ ಜಲಾಯನ ಪ್ರದೇಶದಲ್ಲಿ ಹಾರಂಗಿ, ಹೇಮಾವತಿ, ಕೆಆರ್ ಎಸ್ ಹಾಗೂ ಕಬಿನಿ ಡ್ಯಾಮ್ ಗಳು ಬರುತ್ತದೆ. ಇಲ್ಲಿ ಒಟ್ಟಾರೆ 73.57 ಟಿಎಂಸಿಯಷ್ಟು ನೀರು ಒಳಹರಿವಿದ್ದರೆ, 46.21 ಟಿಎಂಸಿಯಷ್ಟು ನೀರು ನದಿಗಳಿಗೆ ಬಿಡುಗಡೆಯಾಗುತ್ತಿದೆ. ಇನ್ನು 23.97 ಟಿಎಂಸಿಯಷ್ಟು ನೀರು ಕಾಲುವೆಗಳಿಗೆ ಬಿಡಲಾಗುತ್ತಿದೆ. ಒಟ್ಟಾರೆ ಈ 4 ಡ್ಯಾಮ್ ಗಳಲ್ಲಿ ನೀರಿನ ಸಂಗ್ರಹವು ಶೇ.23.55 ರಷ್ಟಿದೆ ಎಂದು ಜಲಸಂಪನ್ಮೂಲ ಇಲಾಖೆಯು ತಿಳಿಸಿದೆ.
ಏಪ್ರಿಲ್ 25ರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ಬೆಳಗಾವಿಯ ಹುಕ್ಕೇರಿಯಲ್ಲಿನ ಕೇಸ್ತಿ ಎಂಬಲ್ಲಿ 97 ಮಿ.ಮೀ ಅತಿಹೆಚ್ಚಿನ ಮಳೆಯಾಗಿರುವುದು ವರದಿಯಾಗಿದೆ.