ಬೆಂಗಳೂರು , ಏ.18 www.bengaluruwire.com : ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ, ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ, ಮಾಜಿ ಮೇಯರ್ ಮಂಜುನಾಥ ರೆಡ್ಡಿ ಹಾಗೂ ಇತರರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ಗುರುವಾರ ದೂರು ನೀಡಿದೆ.
ಮತದಾರರ ಆಧಾರ್ ಕಾರ್ಡ್ ಪಡೆದು 1 ಲಕ್ಷ ರೂ. ಬಾಂಡ್ ನೀಡುವುದಾಗಿ ಆಮಿಷ ಒಡ್ಡುತ್ತಿರುವ ಕುರಿತು ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಏಜೆಂಟ್ ಎಸ್.ಗಜೇಂದ್ರ ಎಂಬುವರು ದೂರಿನಲ್ಲಿ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನ ಈ ಕೃತ್ಯ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಕೃತ್ಯಕ್ಕೆ ಸಂಬಂಧಿಸಿದ ಫೋಟೋ ಗಳನ್ನು ದೂರಿನೊಂದಿಗೆ ಲಗತ್ತಿಸಿ, ” ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ರವರು, ಮತದಾರರ ಮೇಲೆ ಪ್ರಭಾವ ಬೀರಲು ಅವರ ಆಧಾರ್ ಕಾರ್ಡ್ ಗಳನ್ನು ಪಡೆದುಕೊಂಡು ಗ್ಯಾರಂಟಿ ಕಾರ್ಡ್ ನೀಡುತ್ತಿದ್ದು, ಚುನಾವಣೆ ಆದ ನಂತರ 1 ಲಕ್ಷ ರೂ. ಬಾಂಡ್ ಒದಗಿಸುವುದಾಗಿ ಆಮಿಷ ಒಡ್ಡುತ್ತಿರುವ ಕ್ರಮ ಮಾದರಿ ನೀತಿ ಸಂಹಿತೆ ಐಪಿಸಿ 1860 (IPC 1860) ಹಾಗೂ ಜನಪ್ರತಿನಿಧಿ ಕಾಯ್ದೆ 1951 ಅನ್ವಯ ಗಂಭೀರ ಅಪರಾಧವಾಗಿದೆ” ಎಂದು ತಿಳಿಸಿದ್ದಾರೆ.
ಮುಂದುವರೆದಂತೆ, ” ಏ.17 ರಂದು ಕಾಂಗ್ರೆಸ್ ನ ಮಂಜುನಾಥ ರೆಡ್ಡಿ ಹಾಗೂ ಇತರರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ರವರ ಸೂಚನೆ ಅನ್ವಯ, ಬಿಟಿಎಂ ವಿಧಾನಸಭಾ ಕ್ಷೇತ್ರದ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಳಿ ತೆರಳಿ ಆಧಾರ್ ಕಾರ್ಡ್ ಹಾಗೂ ಇತರ ದಾಖಲೆ ಒದಗಿಸಿದರೆ ಚುನಾವಣೆ ಮುಗಿದ ನಂತರ 1 ಲಕ್ಷ ರೂ, ಬಾಂಡ್ ಗ್ಯಾರಂಟಿ ಕಾರ್ಡ್ ನೀಡುವುದಾಗಿ ಮತದಾರರ ಮೇಲೆ ಪ್ರಭಾವ ಬೀರುವ ಮೂಲಕ ಕಾನೂನನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಈ ಕುರಿತಾಗಿ ಫೋಟೋ ಮತ್ತು ವಿಡಿಯೋ ದಾಖಲೆಗಳನ್ನು ಲಗತ್ತಿಸಲಾಗಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ರೀತಿಯ ಕೃತ್ಯಗಳು, ಮಾದರಿ ನೀತಿ ಸಂಹಿತೆಯ ಕಲಂ 2.(1) ರ ಸ್ಪಷ್ಟ ಉಲ್ಲಂಘನೆ ಯಾಗಿದ್ದು, ಮತಕ್ಕೋಸ್ಕರ ಆಮಿಷ ಒಡ್ಡುತ್ತಿರುವ ಕ್ರಮ ಐಪಿಸಿ ಸೆಕ್ಷನ್ 123 ಯ ಉಲ್ಲಂಘನೆ ಕೂಡ ಆಗಿದೆ ” ಎಂದು ವಿವರಿಸಿದ್ದಾರೆ.
ಮತದಾನಕ್ಕೂ ಮುಂಚೆ ಈ ರೀತಿಯ ಸಹಿ ಮಾಡಿದ ಗ್ಯಾರಂಟಿ ಕೊಡುಗೆಗಳು, ಮತಕ್ಕಾಗಿ ಲಂಚ ವೆಂದು ಪರಿಗಣಿಸಿ, ಸಂಬಂಧಿಸಿದ ಕಾಂಗ್ರೆಸ್ ಅಭ್ಯರ್ಥಿ, ಏಜೆಂಟರು ಹಾಗೂ ಸಹಚರರ ವಿರುದ್ಧ ಎಫ್ ಐಆರ್ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಯೋಗವನ್ನು ಒತ್ತಾಯಿಸಿದ್ದಾರೆ.
ಮಾಜಿ ಮೇಯರ್ ಮಂಜುನಾಥ ರೆಡ್ಡಿಯವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿದ್ದಾಗ ಮತದಾರರ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಪಡೆದು ಗ್ಯಾರಂಟಿ ಕಾರ್ಡ್ ವಿತರಿಸುತ್ತಿರುವ ಫೊಟೋಗಳನ್ನು ಗಜೇಂದ್ರ ಅವರು ಹಂಚಿಕೊಂಡಿದ್ದಾರೆ.
ಇದೇ ತಿಂಗಳ 13ರಂದು ಜಯನಗರದಲ್ಲಿ ಚುನಾವಣಾ ಆಯೋಗವು 1.34 ಕೋಟಿ ರೂ. ವಶಪಡಿಸಿಕೊಂಡ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವೀ ಸೂರ್ಯ ರವರು, ಕಾಂಗ್ರೆಸ್ ಲಂಚ ನೀಡಿ ಚುನಾವಣಾ ಅಕ್ರಮಗಳನ್ನು ನಡೆಸುತ್ತಿದ್ದು, ದುಡ್ಡು ಸಾಗಿಸುತ್ತಿದ್ದ ವಾಹನಗಳು ಕಾಂಗ್ರೆಸ್ ನ ಮುಖಂಡರಿಗೆ ಸೇರಿದ್ದಾಗಿದೆ ಎಂದು ಆರೋಪಿಸಿದ್ದರು.